ವರ್ಗಾವಣೆ ರಾಜಕೀಯ

7
ಸಮ್ಮತಿ ಕೇಳಿ ಪತ್ರ ಬರೆದ ಸರ್ಕಾರ

ವರ್ಗಾವಣೆ ರಾಜಕೀಯ

Published:
Updated:
ವರ್ಗಾವಣೆ ರಾಜಕೀಯ

ಬೆಂಗಳೂರು: ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ರಾಮನಗರ ಮತ್ತು ಹಾವೇರಿ ಜಿಲ್ಲಾಧಿಕಾರಿಗಳ ವರ್ಗಾವಣೆ ಆದೇಶ ತಡೆ ಹಿಡಿಯುವಂತೆ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ರೋಹಿಣಿ, ರಾಮನಗರದ ಬಿ.ಆರ್. ಮಮತಾ ಹಾಗೂ ಹಾವೇರಿಯ ಎಂ.ವಿ. ವೆಂಕಟೇಶ್‌ ಅವರನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿ ಇದೇ 22ರ ಸೋಮವಾರ ಸರ್ಕಾರ ಆದೇಶ ಹೊರಡಿಸಿತ್ತು. ರೋಹಿಣಿ ವರ್ಗಾವಣೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಡುವೆ ರಾಜಕೀಯ ಕಲಹಕ್ಕೆ ನಾಂದಿ ಹಾಡಿದೆ.

‘ಸದ್ಯ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಅಂತಿಮ ಪಟ್ಟಿ ಪ್ರಕಟವಾಗುವವರೆಗೆ (ಫೆಬ್ರುವರಿ 28) ಈ ಕೆಲಸದಲ್ಲಿ ನಿರತರಾದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ವಿಶೇಷ ಕಾರಣಗಳಿದ್ದರೆ ಚುನಾವಣಾ ಆಯೋಗದ ಸಮ್ಮತಿ ಪಡೆಯಬೇಕು. ಜಿಲ್ಲಾಧಿಕಾರಿಗಳನ್ನು ವರ್ಗಾವಣೆಗೆ ಮುನ್ನ ಅನುಮೋದನೆ ಪಡೆಯದೇ ಇರುವುದರಿಂದ ಆದೇಶ ತಡೆ ಹಿಡಿಯುಬೇಕು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ವರ್ಗಾವಣೆಗೆ ಆಯೋಗದ ಒಪ್ಪಿಗೆ ಪಡೆಯುವವರೆಗೆ ಜಿಲ್ಲಾಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು ಹಾಗೂ ಅಧಿಕಾರ ಹಸ್ತಾಂತರಿಸಬಾರದು’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ವರ್ಗಾವಣೆಗೆ ಮೊದಲು ಒಪ್ಪಿಗೆ ಪಡೆಯಬೇಕು ಎಂದು ಆಯೋಗ ಸೂಚಿಸಿದೆ. ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಮ್ಮತಿ ಸೂಚಿಸುವಂತೆ ಕೋರಿ ಆಯೋಗಕ್ಕೆ ಪತ್ರ ಬರೆಯಲಾಗಿದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ತಿಳಿಸಿದ್ದಾರೆ.

ರಾಜಕೀಯ ಕಲಹಕ್ಕೆ ನಾಂದಿ: ‘ಶ್ರವಣ ಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದಲ್ಲಿ ಹಣ ಲೂಟಿ ಹೊಡೆಯಲು ರೋಹಿಣಿ  ಅವಕಾಶ ನೀಡಲಿಲ್ಲ. ಉಸ್ತುವಾರಿ ಸಚಿವ ಎ.ಮಂಜು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಇಂತಹ ಪವಿತ್ರ ಕಾರ್ಯದಲ್ಲೂ ಪರ್ಸಂಟೇಜ್ ಬೇಕಾ’ ಎಂದು ಕಟುವಾಗಿ ಪ್ರಶ್ನಿಸಿರುವ ಹಾಸನ ಸಂಸದ ಎಚ್.ಡಿ. ದೇವೇಗೌಡ, ಒಬ್ಬ ಮಂತ್ರಿಯ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಯನ್ನು ವರ್ಗಾ

ವಣೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.‌

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸಿಂಧೂರಿ ವರ್ಗಾವಣೆ ಆಡಳಿತಾತ್ಮಕ ವಿಷಯ. ಇದಕ್ಕೆ ಕಾರಣ ಹೇಳಬೇಕಾದ ಅಗತ್ಯವಿಲ್ಲ. ವರ್ಗಾವಣೆ ವಿರೋಧಿಸಿ ‌ರಾಜಕೀಯ ದುರುದ್ದೇಶದಿಂದ ವಿರೋಧಿಗಳು ಪ್ರತಿಭಟನೆ ಮಾಡುತ್ತಾರೆ ಅಷ್ಟೆ ಎಂದರು.

ಮಹಾಮಸ್ತಕಾಭಿಷೇಕ ಉದ್ಘಾಟನೆಗೆ ಬಹಿಷ್ಕಾರ: ದೇವೇಗೌಡ

‘ರೋಹಿಣಿ ವರ್ಗಾವಣೆ ಖಂಡಿಸಿ ಮಹಾ ಮಸ್ತಕಾಭಿಷೇಕ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸುತ್ತೇನೆ’ ಎಂದು ಎಚ್.ಡಿ. ದೇವೇಗೌಡ ಎಚ್ಚರಿಸಿದ್ದಾರೆ.

‘ಭ್ರಷ್ಟಾಚಾರದ ವಿಷಯದಲ್ಲಿ ಜಿಲ್ಲಾಧಿಕಾರಿ ಕಠಿಣವಾಗಿದ್ದರೇ ಹೊರತು ಜೆಡಿಎಸ್ ಪರವಾಗಿರಲಿಲ್ಲ. ಮಹಾಮಸ್ತಕಾಭಿಷೇಕದ ಕೆಲಸ ಮುಗಿಯುವವರೆಗೆ ವರ್ಗಾವಣೆ ಮಾಡದಂತೆ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದೆ. ಆದರೆ, ರಾತ್ರೋರಾತ್ರಿ ವರ್ಗಾವಣೆ ಆದೇಶ ಹೊರ ಬಿದ್ದಿದೆ. ಮಾಜಿ ಪ್ರಧಾನಿ ಪ್ರತಿನಿಧಿಸುವ ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇದೆ. ಇನ್ನು ರಾಜ್ಯದ ಸ್ಥಿತಿ ಹೇಗಿರಬಹುದು’ ಎಂದೂ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಒಬ್ಬ ಮಂತ್ರಿಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿರುವ ಈ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ’ ಎಂದೂ ತಿಳಿಸಿದರು.

‘ಕಲೆಕ್ಷನ್ ಮಾಡಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ವರ್ಗಾವಣೆ ಮಾಡುತ್ತಾರೆ ಅಂದರೆ ಥೂ, ಛೆ ಎಂತ ಕೆಟ್ಟ ಪರಿಸ್ಥಿತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ಆಡಳಿತಾತ್ಮಕ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ಆಯೋಗವು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ

‌–ಸಿದ್ದರಾಮಯ್ಯ, ಮುಖ್ಯಮಂತ್ರಿ

* ಪ್ರಾಮಾಣಿಕರ ಎತ್ತಂಗಡಿ ಮಾಡಿರುವ ಮುಖ್ಯಮಂತ್ರಿಗೆ ಹಿನ್ನಡೆಯಾಗಿದೆ.

–ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* ಆಡಳಿತಾತ್ಮಕವಾಗಿ ಸರ್ಕಾರ ಇಂತಹ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ

– ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

* ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ,   ರೋಹಿಣಿ ವರ್ಗಾವಣೆ ಇದಕ್ಕೆ ಸಾಕ್ಷಿ

-ಪ್ರಕಾಶ್‌ ಜಾವಡೇಕರ್‌, ಕೇಂದ್ರ ಮಾನವ ಸಂಪನ್ಮೂಲ ಸಚಿವ

* ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನಿಷ್ಠಾವಂತ ಅಧಿಕಾರಿ. ಹಾಗಾಗಿಯೇ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. 6 ತಿಂಗಳಲ್ಲೇ ವರ್ಗಾವಣೆ ವಿಚಾರ ಬರುವುದಿಲ್ಲ.

–ರಾಮಲಿಂಗಾರೆಡ್ಡಿ, ಗೃಹ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry