ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌–2018: ವಿದ್ಯೋದಯ ಪಬ್ಲಿಕ್‌ ಶಾಲೆಗೆ ಪ್ರಶಸ್ತಿ

Last Updated 24 ಜನವರಿ 2018, 20:21 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿಯ ವಿದ್ಯೋದಯ ಪಬ್ಲಿಕ್‌ ಶಾಲೆಯು ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌-2018’ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ರಾಣೆಬೆನ್ನೂರಿನ ನಿಟ್ಟೂರು ಸೆಂಟ್ರಲ್‌ ಶಾಲೆ ದ್ವಿತೀಯ ಮತ್ತು ಮೈಸೂರು ಮಹರ್ಷಿ ‍ಪಬ್ಲಿಕ್‌ ಶಾಲೆ ತೃತೀಯ ಸ್ಥಾನ ಪಡೆದವು.

ನಗರದ ಸೆಂಟ್ರಲ್‌ ಕಾಲೇಜು ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಮುಕ್ತಾಯವಾದ ನಾಲ್ಕನೇ ಆವೃತ್ತಿಯ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಂತ ಸವಾಲಿನಿಂದ ಕೂಡಿದ್ದ ಪ್ರಶ್ನೆಗಳಿಗೆ ವಿದ್ಯೋದಯ ಪಬ್ಲಿಕ್‌ ಶಾಲೆ 9ನೇ ತರಗತಿಯ ಧೀರೇನ್‌ ಭಂಡಾರಿ ಮತ್ತು ಚಂದನ್‌ ಪ್ರಕಾಶ್‌ ಜಾಣ್ಮೆಯಿಂದ ಉತ್ತರಿಸಿ ಪ್ರಶಸ್ತಿ ಗೆದ್ದುಕೊಂಡರು.

ಇವರಿಗೆ ನಿಕಟ ಪೈಪೋಟಿ ಒಡ್ಡಿದ ನಿಟ್ಟೂರು ಸೆಂಟ್ರಲ್‌ ಶಾಲೆಯ 9ನೇ ತರಗತಿಯ ಇಷಾ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕೆ.ಕೀರ್ತಿರಾಜ್‌ ದ್ವಿತೀಯ ಸ್ಥಾನ  ಪಡೆದರು. ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದ 20 ವಿದ್ಯಾರ್ಥಿಗಳ ಪೈಕಿ ಏಕೈಕ ವಿದ್ಯಾರ್ಥಿನಿಯಾಗಿದ್ದ ಇಷಾ ಎಲ್ಲರ ಗಮನ ಸೆಳೆದಳು.

ತೃತೀಯ ಸ್ಥಾನ ಪಡೆದ ಮೈಸೂರಿನ ಮಹರ್ಷಿ ಪಬ್ಲಿಕ್‌ ಶಾಲೆಯನ್ನು ವಸಿಷ್ಠ ಮತ್ತು ಅಭಯ್‌ ಎನ್‌.ಸ್ವಾಮಿ ಪ್ರತಿನಿಧಿಸಿದರು. ವಿಜಯಪುರದ ಸೈನಿಕ ಶಾಲೆ ನಾಲ್ಕು ಮತ್ತು ಕಲಬುರ್ಗಿ ಚಂದ್ರಕಾಂತ ಪಾಟೀಲ ಶಾಲೆ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟವು.

ವಾಲ್‌ನಟ್‌ ನಾಲೆಡ್ಜ್‌ ಸಂಸ್ಥೆಯ ರಾಘವ್‌ ಚಕ್ರವರ್ತಿ ಹಾಗೂ ಸಾರ್ಥಕ್‌ ಕುಂಟಿಯಾ ಸ್ಪರ್ಧೆಯನ್ನು ನಡೆಸಿಕೊಟ್ಟರು. ಅಂತರರಾಷ್ಟ್ರೀಯ ಈಜು ಪಟು ನಿರಂಜನ್‌ ಮುಕುಂದನ್‌ (ಪ್ಯಾರಾ ಸ್ವಿಮ್ಮರ್‌) ಹಾಗೂ ಚಿತ್ರ ನಿರ್ದೇಶಕ ಸಿಂಪಲ್‌ ಸುನಿ, ‘ದೀಕ್ಷಾ’ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್‌ ಹಾಗೂ ಪ್ರಾದೇಶಿಕ ಮುಖ್ಯಸ್ಥ ಚಂದ್ರಶೇಖರ್‌ ವಿಜೇತರಿಗೆ ಬಹುಮಾನ ವಿತರಿಸಿದರು.

ದೀಕ್ಷಾ ನೆಟ್‌ವರ್ಕ್‌, ವಾಲ್‌ನಟ್‌ ನಾಲೆಡ್ಜ್‌, ಸನ್‌ಪ್ಯೂರ್‌, ಸಿಂಡಿಕೇಟ್‌ ಬ್ಯಾಂಕ್‌, ಗ್ಲೂಕೋವಿಟಾ ಬೋಲ್ಟ್ಸ್‌ ಸಂಸ್ಥೆಗಳ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಂತಿಮ ಸುತ್ತಿನಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ, ರಾಯಚೂರು ಹಾಗೂ ದಾವಣಗೆರೆ ವಲಯ ಮಟ್ಟದಿಂದ ಆಯ್ಕೆಯಾದ 10 ತಂಡಗಳು ಭಾಗವಹಿಸಿದ್ದವು.

ಬಹುಮಾನ ವಿವರ
ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ₹50,000, ದ್ವಿತೀಯ ತಂಡಕ್ಕೆ ₹30,000, ತೃತೀಯ ₹10,000, ನಾಲ್ಕನೇ ಬಹುಮಾನ ₹6,000 ಹಾಗೂ 5ನೇ ಸ್ಥಾನ ಪಡೆದ ತಂಡಗಳಿಗೆ ₹4,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.

ಅಂಕ ವಿವರ
ವಿದ್ಯೋದಯ ಪಬ್ಲಿಕ್‌ ಸ್ಕೂಲ್‌, ಉಡುಪಿ ಪ್ರಥಮ –90
ನಿಟ್ಟೂರು ಸೆಂಟ್ರಲ್‌ ಶಾಲೆ ರಾಣೆಬೆನ್ನೂರು ದ್ವಿತೀಯ –70
ಮೈಸೂರು ಮಹರ್ಷಿ ‍ಪಬ್ಲಿಕ್‌ ಶಾಲೆ ತೃತೀಯ –60
ವಿಜಯಪುರದ ಸೈನಿಕ ಶಾಲೆ ನಾಲ್ಕು–50
ಕಲಬುರ್ಗಿ ಚಂದ್ರಕಾಂತ ಪಾಟೀಲ ಶಾಲೆ ಐದು –35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT