ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಮಣಿದ ಬೆಲ್ಜಿಯಂ

ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿ
Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌, ನ್ಯೂಜಿಲೆಂಡ್: ಭಾರತ ಪುರುಷರ ಹಾಕಿ ತಂಡ ಎರಡನೇ ಹಂತದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಗುರುವಾರ ಬೆಲ್ಜಿಯಂಗೆ ಸೋಲುಣಿಸಿತು.

ಮೊದಲ ಲೆಗ್‌ನಲ್ಲಿ ಎದುರಾಗಿದ್ದ ಸೋಲಿಗೆ ಭಾರತ ತಂಡ ಸೇಡು ತೀರಿಸಿಕೊಂಡಿದೆ. 5–4 ಗೋಲುಗಳಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಬೆಲ್ಜಿಯಂ ಎದುರು ಗೆದ್ದಿದೆ.

ಭಾರತ ತಂಡದ ರೂಪಿಂದರ್‌ ಪಾಲ್‌ ಸಿಂಗ್‌ (4 ಮತ್ತು 42ನೇ ನಿ.), ಹರ್ಮನ್‌ಪ್ರೀತ್ ಸಿಂಗ್‌ (46ನೇ ನಿ.), ಲಲಿತ್ ಉಪಾಧ್ಯಾಯ (53ನೇ ನಿ.), ದಿಲ್‌ಪ್ರೀತ್ ಸಿಂಗ್‌ (59ನೇ ನಿ.) ಗೋಲು ಗಳಿಸಿದರು.

ಬೆಲ್ಜಿಯಂ ತಂಡದ ಪರ ಜಾನ್‌ ದೊಮೆನ್‌ (17ನೇ ನಿ.), ಫೆಲಿಕ್ಸ್ ಡೇನಿಯರ್‌ (37ನೇ ನಿ.), ಅಲೆಕ್ಸಾಂಡರ್‌ ಹೆನ್ರಿಕ್ಸ್ (45ನೇ ನಿ.), ಟಾಮ್‌ ಬೂನ್‌ (56ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಶಿಸ್ತಿನ ಆಟದಿಂದ ಗಮನಸೆಳೆದ ಭಾರತದ ಆಟಗಾರರು ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ವಿವೇಕ್ ಸಾಗರ್ ಪ್ರಸಾದ್ ತಂದುಕೊಟ್ಟ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತ ಶುಭಾರಂಭ ಮಾಡಿತು.

ಸೊಗಸಾದ ರೀತಿಯಲ್ಲಿ ರೂಪಿಂದರ್ ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ತೂರಿಸಿದರು. ಎರಡನೇ ಕ್ವಾರ್ಟರ್‌ನ 17ನೇ ನಿಮಿಷದಲ್ಲಿ ದೊಮೆನ್ ಸಮಬಲ ಮಾಡಿಕೊಂಡರು. ಬಳಿಕ ಶ್ರೀಜೇಶ್ ಎದುರಾಳಿ ತಂಡದ ಎರಡು ಗೋಲುಗಳನ್ನು ತಡೆದರು.  ರೂಪಿಂದರ್ ಸಿಕ್ಕ ಪೆನಾಲ್ಟಿ ಅವಕಾಶ ಕೈಚೆಲ್ಲಿದರು.

ಮೂರನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಬಲ್ಜಿಯಂ ತಂಡ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ 37ನೇ ನಿಮಿಷದಲ್ಲಿ ಗೋಲು ಗಳಿಸಿತು. ಈ ತಂಡದ ಫೆಲಿಕ್ಸ್‌ 2–1ರ ಮುನ್ನಡೆಗೆ ಕಾರಣರಾದರು.

ರೂಪಿಂದರ್ ಪಾಲ್‌ 42ನೇ ನಿಮಿಷದಲ್ಲಿ ಗೋಲು ಪಡೆದು ಮತ್ತೊಮ್ಮೆ ಸಮಬಲ ಮಾಡಿಕೊಂಡರು. ಆದರೆ ಈ ಖುಷಿ ಭಾರತದ ಪಾಳಯದಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮೂರು ನಿಮಿಷಗಳ ಅಂತರದಲ್ಲಿಯೇ ಹೆಂಡ್ರಿಕ್ಸ್‌ ಬೆಲ್ಜಿಯಂ ತಂಡದ ಮೂರನೇ ಗೋಲು ತಂದಿತ್ತರು.

ಬಳಿಕ ಭಾರತ ತಂಡ ಕೆಚ್ಚೆದೆಯ ಆಟದಿಂದ ಎರಡು ಗೋಲುಗಳನ್ನು ದಾಖಲಿಸಿತು. ಲಲಿತ್ ಹಾಗೂ ದಿಲ್‌ಪ್ರೀತ್‌ ಭಾರತದ ಮುನ್ನಡೆಗೆ ಕಾರಣರಾದರು. ಈ ನಡುವೆ ಟಾಮ್ ಬೂನ್‌ ಬೆಲ್ಜಿಯಂ ತಂಡಕ್ಕೆ ಒಂದು ಗೋಲು ತಂದಿತ್ತು ಗೆಲುವಿನ ಅಂತರವನ್ನು ತಗ್ಗಿಸಿದರು.

ಜನವರಿ 27ರಂದು ನಡೆಯುವ ಮೂರನೇ ಪಂದ್ಯದಲ್ಲಿ ಭಾರತ ತಂಡ ಜಪಾನ್ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT