ಯುವ ವಿಜ್ಞಾನಿಗಳಿಗೆ ನಾಲ್ಕು ಹೊಸ ಯೋಜನೆ

7

ಯುವ ವಿಜ್ಞಾನಿಗಳಿಗೆ ನಾಲ್ಕು ಹೊಸ ಯೋಜನೆ

Published:
Updated:
ಯುವ ವಿಜ್ಞಾನಿಗಳಿಗೆ ನಾಲ್ಕು ಹೊಸ ಯೋಜನೆ

ನವದೆಹಲಿ: ಯುವ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಉತ್ತೇಜನ ನೀಡಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌ ಅವರು ಗುರುವಾರ ನಾಲ್ಕು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಮೊದಲನೇಯದಾಗಿ ‘ಟೀಚರ್‌ ಅಸೋಸಿಯೇಟ್‌ಶಿಪ್‌ ಫಾರ್‌ ರಿಸರ್ಚ್‌ ಎಕ್ಸಲೆನ್ಸ್‌’ (ಟಿಎಆರ್‌ಇ) ಯೋಜನೆ ಅಡಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಥವಾ ರಾಷ್ಟ್ರೀಯ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನೆ ಪರಿಷತ್‌ನಂತಹ (ಸಿಎಸ್‌ಐಆರ್) ಸಂಸ್ಥೆಗಳಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಸರ್ಕಾರ ಅನುಕೂಲ ಕಲ್ಪಿಸಲಿದೆ.

ಈ ಸಂಸ್ಥೆಗಳಲ್ಲಿ ಸಂಶೋಧನೆ ಕೈಗೊಳ್ಳುವವರಿಗೆ ಪ್ರತಿ ವರ್ಷ ₹5 ಲಕ್ಷ  ಹಾಗೂ ಪ್ರತಿ ತಿಂಗಳ ವೆಚ್ಚಕ್ಕಾಗಿ ₹5ಸಾವಿರ ದೊರೆಯಲಿದೆ. ಈ ಮೊತ್ತವು ಈಗಾಗಲೇ ಸಂಸ್ಥೆ ಅಥವಾ ಸರ್ಕಾರ ನೀಡುವ ಸಂಬಳದ ಜತೆ ಹೆಚ್ಚುವರಿಯಾಗಿರುತ್ತದೆ.

ಎರಡನೇ ಯೋಜನೆಯಾದ ’ಸಾಗರೋತ್ತರ ಸಂದರ್ಶಕ ಸಂಶೋಧನಾ ಫೆಲೋಶಿಪ್‌’ ಅಡಿಯಲ್ಲಿ ವಿದೇಶದಲ್ಲಿನ ವಿಶ್ವವಿದ್ಯಾಲಯ ಅಥವಾ ಪ್ರಯೋಗಾಲಯಗಳಲ್ಲಿ ಸಂಶೋಧನೆ ಕೈಗೊಳ್ಳಲು 100 ಮಂದಿ ಪಿಎಚ್‌.ಡಿ. ಸಂಶೋಧಕರಿಗೆ ನೆರವು ದೊರೆಯಲಿದೆ. ಈ ಸಂಶೋಧಕರಿಗೆ ಪ್ರವಾಸ ಮತ್ತು ವೀಸಾ ಶುಲ್ಕದ ವೆಚ್ಚಕ್ಕೆ ಒಂದು ಬಾರಿ ₹60 ಸಾವಿರ ಹಾಗೂ ಪ್ರತಿ ತಿಂಗಳು ₹1.27 ಲಕ್ಷ (2,000 ಡಾಲರ್‌) ದೊರೆಯಲಿದೆ.

ಮೂರನೇ ಯೋಜನೆಯಾದ ’ಅತ್ಯುನ್ನತ ಸಂಶೋಧನಾ ಪ್ರಶಸ್ತಿ’ ಅಡಿಯಲ್ಲಿ ಗರಿಷ್ಠ 100 ಫೆಲೋಶಿಪ್‌ಗಳನ್ನು ಸ್ಥಾಪಿಸಲಾಗುವುದು. ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿ ಅಥವಾ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳ ಪ್ರಧಾನ ಸಂಶೋಧಕರಿಗೆ ಈ

ಫೆಲೋಶಿಪ್‌ಗಳನ್ನು ನೀಡಲಾಗುವುದು.

ಆಯ್ಕೆಯಾಗುವ 100 ಸಂಶೋಧಕರಿಗೆ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ₹15ಸಾವಿರ ಫೆಲೋಶಿಪ್‌ ದೊರೆಯಲಿದೆ. ಜತೆಗೆ ಸಂಶೋಧನೆಗೆ ಅನುದಾನ ದೊರೆಯಲಿದೆ. ಇದು ಯೋಜನೆಯ ಪ್ರಸ್ತಾವ ಸಲ್ಲಿಸಿದ ಆಧಾರದ ಮೇಲೆ ಲಭ್ಯವಾಗಲಿದೆ.

ನಾಲ್ಕನೇ ಯೋಜನೆಯು ‘ಸಂಶೋಧನಾ ಲೇಖನಗಳನ್ನು ಬರೆಯಲು ಕೌಶಲ ವೃದ್ಧಿ(ಎಡಬ್ಲ್ಯೂಎಸ್‌ಎಆರ್‌)’ ಅಡಿಯಲ್ಲಿ ವಿಜ್ಞಾನ ಲೇಖನಗಳನ್ನು ಬರೆಯಲು ಉತ್ತೇಜನ ನೀಡುವುದಾಗಿದೆ. ಸುಲಭ ಮತ್ತು ಸರಳ ವಿಧಾನದಲ್ಲಿ ಸಂಶೋಧನೆಗಳನ್ನು ಲೇಖನಗಳ ಮೂಲಕ ಪ್ರಸ್ತುತ ಪಡಿಸುವ ಮೂಲಕ  ಜನಸಾಮಾನ್ಯರಿಗೆ ತಲುಪಿಸಿ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಸುಮಾರು 20 ಸಾವಿರ ವಿಜ್ಞಾನ ಪಿಎಚ್‌.ಡಿ. ಸಂಶೋಧಕರನ್ನು ಬಳಸಿಕೊಳ್ಳುವ ಉದ್ದೇಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry