ಜಿಲ್ಲೆಯಾದ್ಯಂತ ಬಂದ್ ನೀರಸ

7
ರೈಲು ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಜಿಲ್ಲೆಯಾದ್ಯಂತ ಬಂದ್ ನೀರಸ

Published:
Updated:
ಜಿಲ್ಲೆಯಾದ್ಯಂತ ಬಂದ್ ನೀರಸ

ವಿಜಯಪುರ: ಮಹದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್‌ಗೆ ವಿಜಯಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ; ಸಂಘಟನೆಗಳಿಂದ ಸರಣಿ ಪ್ರತಿಭಟನೆ ನಡೆದವು.

ಜನಜೀವನ ಎಂದಿನಂತೆ ನಿರಾತಂಕವಾಗಿತ್ತು. ಸರ್ಕಾರಿ, ಖಾಸಗಿ ಬಸ್‌ ಸೇವೆಗೆ ಎಲ್ಲೂ ವ್ಯತ್ಯಯವಾಗಲಿಲ್ಲ. ಆಟೊ ಸಂಚಾರ, ಶಾಲಾ–ಕಾಲೇಜು, ಸರ್ಕಾರಿ, ಖಾಸಗಿ ಕಚೇರಿಗಳು, ಅಂಗಡಿಗಳು ಎಂದಿನಂತೆ ತಮ್ಮ ಕರ್ತವ್ಯ ನಿಭಾಯಿಸಿದವು.

ನಸುಕಿನಿಂದಲೇ ವಿವಿಧ ಕನ್ನಡಪರ, ಪ್ರಗತಿಪರ ಸಂಘಟನೆಗಳು ಮಹದಾಯಿ ವಿವಾದ ಇತ್ಯರ್ಥಪಡಿಸಿ, ಕರುನಾಡಿನ ರೈತರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದವು.

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಕಾರ್ಯಕರ್ತರು ರೈಲು ತಡೆ ನಡೆಸಲು ಮುಂದಾದರು. ರೈಲ್ವೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಪೊಲೀಸರು ವಶಕ್ಕೆ ಪಡೆದು, ಕೆಲ ಹೊತ್ತಿನ ಬಳಿಕ ಬಿಡುಗಡೆಗೊಳಿಸಿದರು.

ಕರ್ನಾಟಕ ನವ ನಿರ್ಮಾಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಗೋವಾ ಮುಖ್ಯಮಂತ್ರಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ–ರಾಜ್ಯ ಸರ್ಕಾರಗಳು ರೈತರ ವಿಷಯದಲ್ಲಿ ನಾಟಕವಾಡುವುದನ್ನು ಬಿಡಬೇಕು. ರೈತರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೊಳಿಸಬೇಕು. ಪರಸ್ಪರ ಕೆಸರೆರಚಾಟ ಮಾಡುವುದನ್ನು ನಿಲ್ಲಿಸಿ ಕೂಡಲೇ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಇದೇ ಸಂದರ್ಭ ಒತ್ತಾಯಿಸಿದರು.

ರೈಲು ತಡೆ ಯತ್ನ

ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆ ನಡೆಸಲು ಮುಂದಾದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ ‘ಇದು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಪ್ರಧಾನಿ ಮೋದಿ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕು, ಯಾವುದೇ ಕಾರಣಕ್ಕೂ ವಿಳಂಬ ನೀತಿ ಅನುಸರಣೆ ಮಾಡಬಾರದು’ ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಪ್ರಕಾಶ ಕುಂಬಾರ, ಸಾಯಬಣ್ಣ ಮಡಿವಾಳರ, ವಿನೋದ ದಳವಾಯಿ, ಕಲ್ಲು ಸೊನ್ನದ, ಮನೋಹರ ತಾಜವ, ರಾಜೇಂದ್ರಸಿಂಗ ಹಜೇರಿ, ದಯಾನಂದ ಸಾವಳಗಿ, ಆನಂದ ಹಡಗಲಿ, ಸತೀಶ ನರಸರಡ್ಡಿ, ಫಿದಾ ಕಲಾದಗಿ, ರಜಾಕ ಕಾಖಂಡಕಿ, ಯಾಕೂಬ್ ಕೋಪರ್, ಅನಿಸ್ ಮಣಿಯಾರ, ಮಲಕುಗೌಡ ಪಾಟೀಲ, ಧರ್ಮು ಸಿಂಧೆ, ಬಳೆನಶೀದ ಬಿರಾದಾರ, ಸಾಬು ಕಾಂಬಳೆ, ಮಹಾದೇವ ಒಡೆಯರ, ನಾಗು ಭಜಂತ್ರಿ, ವಿದ್ಯಾನಂದ ನಂದಗಾಂವ, ಪ್ರಕಾಶ ಕಟ್ಟಿಮನಿ, ಗಣೇಶ ಕಾಂಬಳೆ, ಸಮೀರ ಗುದ್ದಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಗಾಂಧಿ ವೃತ್ತದಲ್ಲಿ ಪ್ರತಿಭಟನೆ: ಮಹದಾಯಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ನವ ನಿರ್ಮಾಣ ಸೇನೆ ಸಂಘಟನೆ ವತಿಯಿಂದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಪದಾಧಿಕಾರಿಗಳು ಮಾತನಾಡಿ ‘ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ನೆರೆಯ ಗೋವಾ, ಮಹಾರಾಷ್ಟ್ರ ರಾಜ್ಯಗಳು ಪದೇ ಪದೇ ರಾಜ್ಯದ ಜತೆ ಕಾಲುಕೆದರಿ ಜಗಳಕ್ಕೆ ನಿಂತು ಮಾನವೀಯತೆ ಇಲ್ಲದ ಮೃಗಗಳ ರೀತಿಯಲ್ಲಿ ವರ್ತಿಸುತ್ತಿವೆ. ಈ ಕೂಡಲೇ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

‘ಕಾನೂನು ಬದ್ಧವಾಗಿ ಮಹ ದಾಯಿ ನೀರು ಬಳಸಿಕೊಳ್ಳಲು ರಾಜ್ಯಕ್ಕೆ ಎಲ್ಲ ಅರ್ಹತೆಯಿದೆ. ವಿನಾಃ ಕಾರಣ ಗೋವಾ ಅಡ್ಡಿಪಡಿಸಿ ನಮ್ಮ ಸ್ವಾಭಿಮಾನ ಕೇರಳಿಸುತ್ತಿದೆ. ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಮಹ ದಾಯಿಯ ನಾಲೆಗಳಾದ ಕಳಸಾ, ಬಂಡೂರಿಗಳ ಮೇಲೆ ಪ್ರಭುತ್ವ ಸಾಧಿಸುವ ಯಾವುದೇ ನೈತಿಕತೆಯಿಲ್ಲ’ ಎಂದು ಗುಡುಗಿದರು. ಮೊಹಸೀನ್ ಜಾಗೀರದಾರ, ಶಬ್ಬೀರ್ ಸಾರವಾಡ, ಚೇತನ ಗುಲೇದ, ಯಾಸೀನ ಸೌದಾ ಗಾರ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಕರವೇ ಧರಣಿ: ಕಳಸಾ ಬಂಡೂರಿ, ಮಹದಾಯಿ ಕುಡಿಯುವ ನೀರಿಗಾಗಿ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.

ಪ್ರಧಾನಿ ಕೂಡಲೇ ಮಧ್ಯ ಪ್ರವೇಶಿಸಿ 7.56 ಟಿ.ಎಂ.ಸಿ ಅಡಿ ನೀರನ್ನು ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿಸಲು ಗೋವಾ ಸರ್ಕಾರಕ್ಕೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಹನ್ನಾನ ಶೇಖ, ಸಾಗರ ಲಮಾಣಿ, ಸಾದಿಕ ಶೇಖ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry