ಕಿಂಕಿಣಿಸುವ ಕಂಕಣ

7

ಕಿಂಕಿಣಿಸುವ ಕಂಕಣ

Published:
Updated:
ಕಿಂಕಿಣಿಸುವ ಕಂಕಣ

ಬಾಲ್ಯಕ್ಕೆ ಸಂತೋಷ ಸೂಸಿದ ಅಮ್ಮನ ತವರೂರಿಗೆ ಬರದೆ ದಶಕಗಳೇ ಕಳೆದಿದ್ದವು. ಗ್ರಾಮದೇವತೆಯ ಜಾತ್ರೆಗೆ ತಾಯಿಯ ಬಳಗವೆಲ್ಲ ಅಪರೂಪಕ್ಕೆ ಸೇರಿತ್ತು. ತಾಯಿಯ ದೊಡ್ಡಪ್ಪನ ಮಗನ ಹೆಂಡತಿಯೊಬ್ಬಳಿಗೆ 65 ವರ್ಷಗಳೇ ಸಂದರೂ, ದೂರದೂರಿನಲ್ಲಿದ್ದ ಅವಳನ್ನು ಇದುವರೆಗೆ ನೋಡುವ ಅವಕಾಶವಾಗಿರಲಿಲ್ಲ. ಮೊದಲ ಬಾರಿ ಕಂಡ ಹಿರಿಯ ಮಾಮಿಗೆ ಕಾಲು ಮುಟ್ಟಿ ನಮಸ್ಕರಿಸಿದೆ. ಪ್ರತಿಯಾಗಿ ‘ಅಯ್ಯ, ಯಾರರೆ ಇಕಿ ಕೈಗೆ ನಾಕ ಬಳಿ ಹಾಕ್ರೆವಾ’ ಎಂಬ ಅಸಹನೆಯ ಆಶೀರ್ವಾದದ ಘೋಷಣೆಯಾಯಿತು. ನಮಸ್ಕಾರಕ್ಕೆ ಪ್ರತಿಯಾಗಿ ಸಿಕ್ಕ ಈ ಆಶೀರ್ವಚನದಿಂದ ಉಕ್ಕಿ ಬಂದ ನಗೆಯನ್ನು ಒಳಗೇ ಒತ್ತಿಟ್ಟುಕೊಂಡೆ. ನಾನೆಲ್ಲೊ ಹದಿಹರೆಯದ ಹುಡುಗಿಯಾಗಿದ್ದರೆ ಈ ಹೊಸ ಮಾಮಿಯ ಮುಕ್ತಾಫಲಗಳು ಕೋಪವನ್ನೇ ಉಂಟುಮಾಡುತ್ತಿದ್ದವೇನೋ. ಬಾಲ್ಯಕಾಲದಿಂದ ನಲವತ್ತು ವರ್ಷಗಳವರೆಗೆ ಸಂಭ್ರಮಿಸಿದ ಬಳೆಗಳು ಅಂದು ಪ್ರಯಾಣದ ಜನಸಂದಣಿಯಲ್ಲಿ ಅಕಸ್ಮಾತ್ತಾಗಿ ಪುಡಿಯಾಗಿ ಹೋಗಿದ್ದವು. ಆ ಸಂಗತಿಯನ್ನು ಮನದಟ್ಟು ಮಾಡಬೇಕೆಂದು ಹೇಳಿದೆ.

‘ಇಲ್ರೀ ಮಾಮಿ, ಇವತ್ತ ಬಸ್ಸಿನ ಗದ್ದಲ್ದಾಗ ಹೆಂಗೊ ಬಳಿ ಹೆಚ್ಚಿ ಹೋಗ್ಯಾವ್ರೀ, ನನಗ ಬಳಿ ಭಾಳ ಸೇರ್ತಾವ್ರೀ, ನಾ ದಿನಾ ಒಂದೊಂದ ಥರದ ಬಳಿ ಹಕ್ಕೋತೀನ್ರಿ.’

‘ನೋಡಿದ್ರೇನ್ರೆವಾ, ದಿನಾ ಒಂದೊಂದು ಥರದ ಬಳಿ ಹಕ್ಕೋತಾಳಂತ, ದಿನಾ ಕೈಯಾಗಿನ ಬಳಿ ತಗದ ತಗದ ಹಕ್ಕೊಳ್ಳೂದು ಅವಲಕ್ಷಣಂತ ಹೇಳ್ರಿ ಅಕೀಗೆ’ ಎಂದು ಸುತ್ತಲಿದ್ದವರನ್ನುದ್ದೇಶಿಸಿ ಹೇಳುತ್ತ, ನನ್ನ ವಿರುದ್ಧ ದಿಕ್ಕಿಗೆ ಮುಖ ಹೊರಳಿಸಿ ಭಂಗಿಯನ್ನು ಬದಲಿಸಿ ಕುಳಿತುಬಿಟ್ಟರು. ಈ ಇಂಡೈರೆಕ್ಟ್‌ ಸೆಂಟೆನ್ಸು ಮತ್ತು ಅಪೊಸಿಟ್‌ ಡೈರೆಕ್ಷನ್‌ಗಳು, 400 ಕಿ.ಮೀ. ಬಸ್ಸಿನ ಪ್ರಯಾಣದಲ್ಲಿ ನುಗ್ಗಾದ ನನಗೆ, ವಿಶ್ರಾಂತಿ ಪಡೆಯುವುದು ಹೋಗಲಿ, ಕೈ ಕಾಲು ತೊಳೆದುಕೊಳ್ಳದೆ ಊರಿನಲ್ಲಿ ಸೇರಿದ ಜಾತ್ರೆಗೆ ಓಡಿ ಹೋಗಿ ಬಳೆ ಹಾಕಿಕೊಳ್ಳಬೇಕಾದ ಅವಶ್ಯಕತೆಯನ್ನು ಮನದಟ್ಟು ಮಾಡಿದವು.

ಈಗಿನಂತೆ ಆಗ ಬಯಸಿದಾಗೆಲ್ಲ ಬಳೆ ಸಿಗುತ್ತಿರಲಿಲ್ಲ. ಹಾಗೆಂದೇ ವರುಷಕ್ಕೊಮ್ಮೆ ಜರುಗುವ ಗ್ರಾಮದೇವತೆಯ ಜಾತ್ರೆಯೆಂದರೆ ಊರಿನ ಹೆಣ್ಣುಮಕ್ಕಳಿಗೆಲ್ಲ ಬಳೆ ಇಟ್ಟುಕೊಳ್ಳುವ ಸಂಭ್ರಮ. ಅದನ್ನು ಬಿಟ್ಟರೆ ಮದುವೆಯಾಗಿ ತವರನ್ನಗಲಿ ಹೋದ ಮನೆಮಗಳು ತವರಿಗೆ ಬಂದಳೆಂದರೆ ಹೊಸ ಬಳೆಗಳನ್ನಿಡಿಸುವ ಸುಂದರ ಸಂಪ್ರದಾಯ ಭಾರತದೆಲ್ಲೆಡೆಯೂ ಪ್ರಚಲಿತವಾಗಿದೆ. ತೀರ ಹಳ್ಳಿಯಲ್ಲವಾಗಿದ್ದ ನಮ್ಮೂರಲ್ಲಿ ಬಳೆಗಾರ ಚಿಂತಾಮಣಿಯ ಮನೆಗೆ ಹೋಗಿ ಬಳೆಯಿಟ್ಟುಕೊಂಡು ಬರುತ್ತಿದ್ದೆವು. ಮನೆಯ ದೊಡ್ಡ ಹಜಾರದ ಗೋಡೆಗಳನ್ನೆಲ್ಲ ಆಕ್ರಮಿಸಿಕೊಂಡು ನನ್ನ ಕಣ್ಣಲ್ಲಿ ಹೊಳೆಯುತ್ತಿದ್ದ ಗಾಜಿನ ಬಳೆಗಳು ಸಂತೋಷದ ಬದಲು ನಿರಾಶೆಯನ್ನೇ ತರುತ್ತಿದ್ದವು.

ದೊಡ್ಡವರಾದ ಅಕ್ಕಂದಿರು ತಮ ತಮಗೆ ಇಷ್ಟವಾದ ಗಾಜಿನ ಬಳೆಗಳನ್ನು ಹಾಕಿಸಿಕೊಂಡರೂ, ಚಿಕ್ಕವಳಾದ ನಾನು ಅಂಗಳದಲ್ಲಿ ಕುಣಿಯುತ್ತ ನಿತ್ಯ ಬಳೆಗಳನ್ನು ಒಡೆದುಕೊಳ್ಳುತ್ತೇನೆಂದು ಪ್ಲಾಸ್ಟಿಕ್ ಬಳೆಗಳನ್ನೇ ಹಾಕಿಕೊಳ್ಳಬೇಕಿತ್ತು. ಆದರೆ ಬೇಸಿಗೆಯ ರಜೆಯಲ್ಲಿ ಅಮ್ಮನೊಂದಿಗೆ ಅವಳ ತವರಿಗೆ ಹೋದೆವೆಂದರೆ ಬಳೆಗಾರ ರಾಚಪ್ಪ ಮನೆಯಂಗಳದಲ್ಲಿ ಪ್ರತ್ಯಕ್ಷನಾಗುತ್ತಿದ್ದ. ಆಗ ಮಾತ್ರ ನನ್ನ ಸಂತೋಷ ಹೇಳತೀರದು. ಸೋದರಮಾವನ ಮಧ್ಯಸ್ತಿಕೆಯಿಂದ ಗಾಜಿನ ಬಳೆಗಳು ನನ್ನ ಕೈಗಳನ್ನಲಂಕರಿಸುತ್ತಿದ್ದವು. ಪ್ಲಾಸ್ಟಿಕ್ ಬಳೆಗಿಂತ ಗಾಜಿನ ಬಳೆಗೆ ಡಬಲ್ ರೇಟು. ನನ್ನಮ್ಮನಿಗೋ ಅಣ್ಣನಿಗೆಲ್ಲಿ ಭಾರವಾದೀತೆಂಬ ಅಳುಕು. ಖುಷ್ಕಿ ಜಮೀನಿನಿಂದ ಸಾಗಬೇಕಾಗಿದ್ದ ಬದುಕಿನಲ್ಲಿ ಪೈಸೆ ಪೈಸೆಗೂ ಲೆಕ್ಕ ಹಾಕಬೇಕಾಗಿದ್ದ ಕಾಲ. ಚಿಕ್ಕವರಿಗೆಲ್ಲಿಯ ಹಣದ ಚಿಂತೆ? ಸುವರ್ಣವರ್ಣದ ಚಿಕ್ಕೆಗಳಿಂದ ನೀಲಿಗಾಜಿನ ಬಳೆಗಳು ನಮ್ಮ ಪುಟ್ಟ ಕೈಗಳನ್ನೇರಿದಾಗ, ಅಮವಾಸ್ಯೆಯಂದು ಥಳ ಥಳಿಸುವ ಆಕಾಶದ ತುಣುಕುಗಳೇ ಕೈಗೇರಿದಂತೆ ಸಂಭ್ರಮಿಸುತ್ತಿದ್ದೆವು.

ಅಂದು ಬಳೆ ನಾಲ್ಕಾಣೆಯ ವಸ್ತುವಾಗಿರಲಿಲ್ಲ. ಅದೊಂದು ಭಾವಲೋಕ. ಆಡಿ ಬೆಳೆದು ಬಿಟ್ಟು ಬಂದ ತವರಿನ ಬಂಧ. ಬಂಗಾರವಲ್ಲ, ಭಾರಿ ಸೀರೆಯಲ್ಲ, ಬಡ ಕೇರಿಯಲ್ಲೂ, ಸಿರಿವಂತ ಸೌಧಗಳಲ್ಲೂ ಅದೇ ಭಾವಗಳನ್ನು ಬುದ್ಬುದಿಸುವ ಬಳೆಯನ್ನು ಕೊಳ್ಳುವುದಾಗಿರಲಿಲ್ಲ, ಇಡಿಸುವುದಾಗಿತ್ತು, ಇಟ್ಟುಕೊಳ್ಳುವುದಾಗಿತ್ತು. ಕೋಟ್ಯಾಧೀಶ್ವರ ಮದುಮಗಳ ಕೈಗಳಲ್ಲೂ ಹಸಿರು ಗಾಜಿನ ಬಳೆಗಳಿಂದಲೇ ಬಂಗಾರದ ಬಳೆ ಹೊಳೆಯುವುದು, ವಜ್ರ ಮಿರುಗುವುದು. ವಸುಂಧರೆಯ ಚೈತನ್ಯ ಉಕ್ಕಿ, ಮೇದಿನಿಯನ್ನು ಸಿಂಗರಿಸಿ ಬದುಕು ನಿಲ್ಲಿಸುವ ಹಸಿರು, ಮದುಮಗಳ ಕೈಗೆ ಕಂಕಣವಾಗಿ ಶೋಭಿಸುವುದು ಎಷ್ಟು ಅರ್ಥಪೂರ್ಣ? ಹೆಣ್ಣೆಂದರೆ ಪ್ರಕೃತಿ. ಆದ್ದರಿಂದಲೇ ಒಂದು ಜೀವಕ್ಕೆ ಜನ್ಮ ನೀಡುವ ಗರ್ಭಿಣಿಗೆ ಹಸಿರುಬಳೆ ಇಡಿಸುವುದನ್ನು ಒಂದು ಸುಂದರ ಸಮಾರಂಭವನ್ನಾಗಿ ಆಚರಿಸಲಾಗುತ್ತದೆ. ಬಯಲ ತುಂಬ ಹಸಿರ ಹುಲ್ಲಿನ ಹಾಸು, ಮರ ಮರದ ತುಂಬ ಚಿಗುರು, ಹಳ್ಳ ಕೊಳ್ಳ, ತೊರೆಗಳಲ್ಲೆಲ್ಲ ಶ್ರಾವಣ ಆಗಮಿಸಿದಾಗ, ಮನೆಯ ಗ್ರಹಿಣಿ ಗೌರಿಪೂಜೆಗೆ ಅಣಿಮಾಡಿಕೊಳ್ಳುವ ಪರಿಕರಗಳಲ್ಲಿ ಹೂವು, ಹಸಿರುಗರಿಕೆ, ಕೇದಿಗೆ, ಪರ್ಣಪತ್ರಗಳೊಂದಿಗೆ ತಪ್ಪದೆ ಹಸಿರು ಬಳೆಗಳಿರುತ್ತಿದ್ದವು. ಹಾಗೆಯೇ ಮಂಗಳಗೌರಿ, ಚೈತ್ರದಲ್ಲಿ ಪೂಜಿಸುವ ಸೀಗೆ ಗೌರಿಯರೆಲ್ಲ ಹಸಿರು ಗಾಜಿನಬಳೆಗಳಿಂದ ಅಲಂಕೃತವಾದಾಗಲೇ ಪೂಜೆ ಪೂರ್ಣವಾಗುತ್ತಿತ್ತು.

ಬಿದಿರು ಕೋಲಿನಂತಿರುವ ಸ್ನೇಹಿತೆ ಅಡ್ಡೆಲುವಿನ ಕೈಗೆ ಮ್ಯಾಚಿಂಗ್ ಬಳೆ ಹಾಕಲಾಗುವುದಿಲ್ಲೆಂದು ಒದ್ದಾಡುವುದನ್ನು ಕಂಡಾಗ, ಅಂದು ಬಳೆಯೊಂದೂ ಚೂರಾಗದ‌ಂತೆ ಎಂಥ ಅಡ್ಡೆಲುವಿನ ಕೈಗೂ ಬಳೆ ಇಡಿಸುತ್ತಿದ್ದ ಬಳೆಗಾರನ ಹಸ್ತ ಕೌಶಲ ಕಣ್ಮುಂದೆ ಸುಳಿಯಿತು. ಇಂದು ಫ್ಯಾನ್ಸಿ ಸ್ಟೋರಿನ ವ್ಯಾಪಾರಿಗೆ ಇತರ ವಸ್ತುಗಳಂತೆ ಬಳೆಯೊಂದು ಮಾರಾಟದ ವಸ್ತು ಅಷ್ಟೆ. ಅಂದು ಬಳೆಪೇಟೆಯಿಂದ ಕೊಂಡು ತರುವ ವಸ್ತುವಲ್ಲ, ಬಳೆಗಾರ ಕೇವಲ ವ್ಯಾಪಾರಿಯಲ್ಲ. ಹೆಣ್ಣು ಋತುಮತಿಯಾದ ಸಂದರ್ಭವೇ ಇರಲಿ, ನಿಶ್ಚಿತಾರ್ಥವೇ ಇರಲಿ, ಮದುವೆ, ಸೀಮಂತ, ಏನೇ ಇದ್ದರೂ ಬಳೆಗಾರನಿಗೆ ಆಮಂತ್ರಣ ಹೋಗುತ್ತಿತ್ತು. ಸಮಾರಂಭದಂದು ಸೂರ್ಯ ಮನೆ ಮಂದಿರಗಳನ್ನು ಬೆಳಗುತ್ತ ಅಂಗಳದ ಕುಂಬಳ ಬಳ್ಳಿಯನ್ನು ಆವರಿಸಿದಾಗ, ಬಳೆಸರಗಳನ್ನು ಬಗಲಿಗೆ ತೂಗಾಡಿಸಿಕೊಂಡು ಬರುವ ಬಳೆಗಾರ ಮನೆಯ ಹಜಾರದಲ್ಲಿ ಪ್ರತಿಷ್ಠಾಪಿತನಾಗುತ್ತಿದ್ದ. ಮನೆಯ ಗೃಹಿಣಿ ಬೆಳಗಿನ ತಿಂಡಿಯನ್ನಿತ್ತು ಸತ್ಕರಿಸಿದ ನಂತರವೇ ಹೆಣ್ಣುಮಕ್ಕಳಿಗೆಲ್ಲ ಬಳೆ ಇಡಿಸುವ ಕೆಲಸ ಪ್ರಾರಂಭ. ಕೇವಲ ಮನೆಯ ಮಹಿಳೆಯರು ಮಾತ್ರವಲ್ಲ, ಪುಟ್ಟ ಮಕ್ಕಳು ಸಹಿತವಾಗಿ ಊರಿನೆಲ್ಲ ಹೆಂಗಸರೂ ಅಂದು ಬಳೆ ಇಡಿಸಿಕೊಳ್ಳಲೇಬೇಕು. ಏಕೆಂದರೆ ಅದು ಗ್ರಾಮದ ಸಮಾರಂಭ. ತಿಂಡಿ, ಊಟ, ಉಡಿಗೆಗಳಂತೆ ಬಳೆ ಕೂಡ ಪ್ರೀತಿಯ ಕೊಡುಕೊಳ್ಳುವಿಕೆಯಾಗಿತ್ತು. ಎರಡು ಮೂರು ಗಂಟೆಗಳವರೆಗೆ ಈ ಕೆಲಸ ಪೂರೈಸಿ ಬಿಡುವಾದ ಬಳೆಗಾರ, ಸೇರಿದ ಊರಿನವರೊಂದಿಗೆ ಮಳೆ ಬೆಳೆ, ಕಷ್ಟ ಸುಖ ಮಾತಾಡಿಕೊಳ್ಳುತ್ತ ಸಮಾರಂಭದ ಸಿಹಿಯೂಟ ಮಾಡಿಕೊಂಡು ಸಂತೋಷ ಹಂಚಿಕೊಳ್ಳುವ ಬಂಧುವಾಗಿದ್ದ.

ಬಳೆಯೊಂದು ಭಾವನೆಯೊ, ಶೃಂಗಾರವೊ, ಆಭರಣವೊ, ಸೌಭಾಗ್ಯವೊ, ಮಂಗಳಕರವೊ, ಮಾಧುರ್ಯವೊ, ಮೋಹಕತೆಯೊ, ಜನಪದದ ಸಂಸ್ಕತಿಯೊ – ಅವರವರ ಭಾವಕ್ಕೆ, ಅವರವರ ಭಕುತಿಗೆ, ಅವರವರ ತೆರನಾಗಿ, ಹಿಮಾಲಯದೆತ್ತರದಿಂದ ಕನ್ಯಾಕುಮಾರಿಯ ಕಡಲಂಚಿಗೂ ಬಳೆ ಕಿಂಕಿಣಿಸುವುದಂತೂ ನಿಜ. ಉತ್ತರದಲ್ಲದು ಚೂಡಿ, ಕಂಗನ; ದಕ್ಷಿಣದಲ್ಲಿ ಬಾಂಗಂಡಿ, ಒಳಯಲ್, ಗಾಜಲು, ಕಂಕಣ.

ಉತ್ತರದ ಬಹುತೇಕ ರಾಜ್ಯಗಳಲ್ಲಿ ದಕ್ಷಿಣದಲ್ಲಿರುವಂತೆ ಹೆಣ್ಣಿನ ಕೊರಳಲ್ಲಿ ತಾಳಿಯಿರುವುದಿಲ್ಲ. ಸಿಂಧೂರ ಮತ್ತು ಮದುಮಗಳ ಕೈಯಲ್ಲಿ ಝಂಝಣಿಸುವ ಎರಡು–ಮೂರು ಡಜನ್ ಚೂಡಿಯಾಗಳೇ ಸೌಭಾಗ್ಯದ ಸಂಕೇತ. ಉತ್ತರದಲ್ಲಂತೂ ಜನರು ತುಂಬಿದ ಮನೆಯಲ್ಲಿ ಅವಗುಂಠನದ ಮರೆಯಲ್ಲಿರುವ ಹೊಸ ವಧುವಿನ ಇರವನ್ನು ಇನಿಯನಿಗೆ ತಿಳಿಸುವ ಈ ಬಳೆಯ ನಾದದ ಮೋಹಕತೆಗೆ ಮಾತುಂಟೆ? ಕ್ಷಣ ಕ್ಷಣವೂ ಕಿಂಕಿಣಿಸುವ ಆ ಚೆಲುವಿನ ಕಂಕಣ ಬರಿ ಭಾವವಲ್ಲ; ಜಾರುವ ಸೆರಗನ್ನು ಬಂಧಿಸುತ್ತ, ತರಕಾರಿ ಹೆಚ್ಚುತ್ತ, ತಿಂಡಿ ಪೂರೈಸುತ್ತ, ಕಸಗುಡಿಸುತ್ತ, ಹಲವೆಂಟು ಅಂಗ–ಭಂಗಿಗಳಲ್ಲಿ, ಮನೆಯ ಒಳ ಹೊರಗೆಲ್ಲ ಕಣ್ಸೆಳೆವ ದೃಶ್ಯಕಾವ್ಯ. ಇತ್ತೀಚೆಗೆ ಯುವತಿಯರ ಕೈಗಳಲ್ಲಿ ಬಳೆ ಬಹಳ ಮಟ್ಟಿಗೆ ಕಾಣೆಯಾಗಿರುವುದೇನೊ ನಿಜ. ಹಾಗಂತ ಅಂಗಡಿಯಲ್ಲಿ ಥರಾವರಿ ಬಳೆಗಳು ಕಣ್ಸೆಳೆಯುವುದೇನೂ ಕಡಿಮೆಯಾಗಿಲ್ಲ. ಹಬ್ಬ–ಹುಣ್ಣಿಮೆ, ಮದುವೆ–ಆರತಕ್ಷತೆಯಂಥ ಸಮಾರಂಭಗಳಲ್ಲಿ ನಾನಾ ಬಣ್ಣದ, ನಾನಾ ರೀತಿಯ ಬಳೆಗಳು ಅದೇ ಯುವತಿಯರ ಕೈಗಳನ್ನು ಸಿಂಗರಿಸುತ್ತವೆ. ಗಂಟೆಗೊಮ್ಮೆ ಸೀರೆ ಬದಲಾಗೆಲ್ಲ ಸೀರೆಯ ಬಣ್ಣಕ್ಕೆ ಹೊಂದುವ ಬಳೆಗಳೂ ಬದಲಾಗುತ್ತವೆ.

ಮೊದಲಾದರೆ ಗಾಜು, ಬಂಗಾರ, ಬೆಳ್ಳಿಯ ಬಳೆಗಳು ಮಾತ್ರ ಕಾಣುತ್ತಿದ್ದವು. ಈಗಂತೂ ನಾನಾ ಬಣ್ಣದ, ನಾನಾ ಪ್ರಕಾರದ ಲೋಹ, ಮಣಿ, ಮುತ್ತು, ಹರಳು, ಹವಳ, ಮಣ್ಣು, ಪೇಪರ, ದಾರ, ಕಟ್ಟಿಗೆ, ಭತ್ತ, ಗೋದಿಯ ಉಮೆ ಸಹಿತ ಥರಾವರಿ ಬಳೆಗಳು! ನಾನಾ ರೀತಿಯ ಕುಸುರಿ, ನಾನಾ ರೀತಿಯ ಚಂದ! ಚಂದಕ್ಕೆ ಮರುಳಾಗದ ಮನಸ್ಸುಂಟೆ? ರಾಜಸ್ತಾನದ ಪೇಟೆಯಲ್ಲಿ ಅಡ್ಡಾಡುತ್ತಿದ್ದೆ. ಮುದುಕನೊಬ್ಬ ಬೀದಿ ಬದಿಯಲ್ಲಿ ಸರ ಸರಾ ಸುತ್ತಿ ಕೊಡುತ್ತಿದ್ದ ದಾರದ ಬಳೆಗಳು ಕಣ್ಸೆಳೆದವು. ಬೇಕಾದ ಬಣ್ಣದ ರೇಷಿಮೆ ದಾರದಿಂದ ನಿಮಿಷವೊಂದರಲ್ಲಿ ಕಡಗಗಳು ಸಿದ್ಧವಾಗುತ್ತಿದ್ದ ಆ ಚಾಕಚಕ್ಯತೆ ಅನನ್ಯವಾಗಿತ್ತು. ರೇಷಿಮೆಯಲ್ಲಿ ಲಕಲಕಿಸುವ ಆ ಬಣ್ಣಗಳೊ! ನಾಲ್ಕು ಹೆಜ್ಜೆ ಇಡುತ್ತಲೂ ಬಳೆಯ ಮತ್ತೊಂದು ಬೆರಗು ಕಣ್ಸೆಳೆಯಿತು. ಕುದಿಯುತ್ತಿರುವ ಗಾಜಿನ ರಸ ಕಡಗವಾಗಿ ಬಂಗಾರಬಣ್ಣದ ಎಳೆಗಳನ್ನೂ ಸೇರಿಸಿಕೊಂಡು ಲಲನೆಯರ ಕೈ ಸೇರುತ್ತಿದ್ದವು. ರಾಜಸ್ತಾನದ ಕೋಟೆ ಕೊತ್ತಲಗಳ ಅರಮನೆಯಿಂದ ಅಲೆಮಾರಿ ಬಂಜಾರಾಗಳ ಟೆಂಟುಗಳವರೆಗೂ ಕನ್ನಡಿಯ ಚೂರುಗಳದ್ದೇ ಸಾಮ್ರಾಜ್ಯ. ಹಾಗೆ ಕೈಯ ಕಡಗಗಳ ಕನ್ನಡಿ ಚೂರುಗಳಲ್ಲಿಯೂ ನೂರು ಮುಖ ಪ್ರತಿಫಲಿಸುತ್ತಿದ್ದವು.

ಅಣ್ಣನ ಐದು ವರ್ಷದ ಮುದ್ದು ಮೊಮ್ಮಗಳು ಆಸೆಪಟ್ಟು ಪುಟ್ಟ ಕೈಗಳಿಗೆ ನನ್ನ ದೊಡ್ಡ ಬಳೆಗಳನ್ನೇರಿಸಿಕೊಂಡು, ಕೆಳಜಾರದಂತೆ ಕೈಗಳನ್ನೆತ್ತಿಹಿಡಿದು ಕುಣಿದಾಗ, ಕಾಲ ಬದಲಾಗಿಲ್ಲ, ಮುಗ್ಧ ಮನಸ್ಸುಗಳಲ್ಲಿ ಬಳೆ ಭದ್ರವಾಗಿದೆ ಎನಿಸಿತು. ಮಗುವಿಗೆ ಹೆಸರಿಡುವ ದಿನದಂದು ಮಗುವಿನ ಕಣ್ಣಿನಂತೆ ಹೊಳೆವ ಕರಿಮಣಿಯ ಬಳೆಗಳಿಂದ ಪುಟ್ಟ ಕೈಗಳನ್ನು ಸಿಂಗರಿಸುವ ಸಂಪ್ರದಾಯ ಪ್ರಚಲಿತವಿದೆ. ಹೀಗೆ ಹುಟ್ಟಿನಿಂದಲೂ ಜೊತೆಗಿದ್ದ ಬಳೆಗಳನ್ನು ಪತಿ ಎನ್ನುವವನು ಅಗಲಿದಾಗ ಒಡೆಯುವ ಕೆಟ್ಟ ಸಂಪ್ರದಾಯವನ್ನು ಯಾರು ಯಾಕೆ ಪ್ರಾರಂಭಿಸಿದರೊ? ಬಳೆ ತೊಟ್ಟುಕೊಳ್ಳುತ್ತ ದಶಕಗಳೇ ಕಳೆದ ಮೇಲೆ ಜೊತೆಯಾಗುವ ಈ ಆಗಂತುಕ ಪತಿಯೊಂದಿಗೆ ಈ ಬಳೆಗಳೇಕೆ ಅಗಲಬೇಕು? ಈ ಸಂಪ್ರದಾಯದ ಹಿಂದಿನ ಅಸಂಗತ ಆಲೋಚನೆಗಳೇನೆ ಇರಲಿ, ಇತ್ತೀಚೆಗೆ ಈ ಸಂಪ್ರದಾಯ ಕಾಣೆಯಾಗುತ್ತಿರುವುದು ಸಮಾಧಾನದ ಸ‌ಂಗತಿ. ವಿಚಿತ್ರವೆಂದರೆ ಗಾಜಿನ ಬಳೆಗಳನ್ನು ಒಡೆದು ಹಾಕುವ ಸಮಾಜ ಬಂಗಾರದ ಬಳೆಗಳಿಗೆ ಅನುಮತಿ ಕೊಡುತ್ತಿದ್ದದ್ದು! ಸೌಭಾಗ್ಯವಂತೂ ಹೋಯಿತು, ಪ್ರತಿಷ್ಠೆಯಾದರೂ ಉಳಿಯಲೆಂದೊ, ಗಾಜಿನ ಬಳೆಯ ಕೈಗಿರುವ ಆಕರ್ಷಣೆ ಬಂಗಾರದ ಬಳೆಯ ಕೈಗಿಲ್ಲವೆಂದೊ... ಆಯಾ ಧರ್ಮಗುರುಗಳಿಗೇ ಗೊತ್ತು.

ಚಿಕ್ಕವರಿರುವಾಗ ಬಳೆಚೂರುಗಳನ್ನು ಎಸೆಯದೆ ಬಳೆಗಾರ ನಮಗಾಗಿಯೆ ತಂದು ಕೊಡುತ್ತಿದ್ದ. ದೊಡ್ಡ ದೊಡ್ಡ ಚೂರುಗಳನ್ನು ಪ್ರತ್ಯೇಕಿಸಿ ಚಿಮಣಿ ದೀಪಕ್ಕೆ ಹಿಡಿದು ಕಾಯಿಸಿ, ಎರಡೂ ತುದಿಗಳನ್ನು ಸೇರಿಸಿ ಉದ್ದವಾದೊಂದು ಸರಪಣಿಯಾಗಿ, ಮನೆಯ ಬಾಗಿಲಿಗೆ ಹೊಳೆವ ಬಳೆಗಳ ತೋರಣವಾಗುತ್ತಿತ್ತು. ಕೂರಿಸಲು ಸಾಧ್ಯವಾಗದ ಪುಟ್ಟ ಪುಟ್ಟ ಚೂರುಗಳು ಆಟಕ್ಕೆ ಮೀಸಲು. ನಾವು ಗೆಳತಿಯರು ಅಂಗಳದಲ್ಲಿ ಸಾಲಾಗಿ ಏಳು ಕುಣಿ ತೋಡಿ ಒಂದರಲ್ಲಿ ಬಳೆ ಚೂರುಗಳನ್ನಡಗಿಸಿ ಅಷ್ಟನ್ನೂ ಮಣ್ಣಿನಿಂದ ಮುಚ್ಚುತ್ತಿದ್ದೆವು. ಆಯ್ದುಕೊಂಡ ಕುಣಿಯಲ್ಲಿ ಬಳೆ ಚೂರಿದ್ದಲ್ಲಿ ಅದು ಅವರ ಸೊತ್ತು. ಮುಟ್ಟಿದ ಕುಣಿಯ ಮಣ್ಣು ತೆಗೆದಾಗ ಹೊಳೆವ ಆ ಬಳೆಚೂರು! ಪ್ರಪಂಚವನ್ನೇ ಗೆದ್ದ ಬೆಳಕು ಮುಗ್ಧ ಕಣ್ಣುಗಳಲ್ಲಿ. ದೊಡ್ಡವರ ಪಾಲಿಗೆ ತಿಪ್ಪೆ ಸೇರಬೇಕಾದ ಆ ಗಾಜಿನ ಚೂರುಗಳು ಬಾಲ್ಯದ ಅಮೂಲ್ಯ ಸಂಪತ್ತು. ಎಂಥ ಅಮಾಯಕ ಪ್ರಪಂಚವದು? ಪ್ರತಿಷ್ಠೆ, ಅಂತಸ್ತು, ಮೇಲು ಕೀಳು, ವರ್ಗ, ಜಾತಿಗಳೊಂದೂ ಇಲ್ಲದ, ಹಣದ ಗೊಡವೆಯೇ ಇಲ್ಲದ ಬಳೆಚೂರಿನ ಗಂಟು ದೊಡ್ಡವರ್ಯಾರಿಗೂ ಸಿಗದ ಜಾಗದಲ್ಲಿ ಸುರಕ್ಷಿತವಾಗಿರುತ್ತಿತ್ತು.

ಊರ ಸಮಾರಂಭದ ಅವಿಭಾಜ್ಯ ಅಂಗವಾಗಿದ್ದ ಬಳೆಗಾರನೀಗ ಕಳೆದು ಹೋಗಿದ್ದಾನೆ. ಬದುಕೇ ವ್ಯಾಪಾರವಾಗಿರುವಾಗ ಮನುಷ್ಯ ಸಂಬಂಧಗಳೂ ಕಳೆದು ಹೋಗುತ್ತಿವೆ. ಬಳೆಗಾರನ ಬಗಲಲ್ಲಿದ್ದ ಬಳೆಸರಗಳೀಗ ಗಾಜಿನ ಕಪಾಟಿನಲ್ಲಿವೆ. ಬಳೆಗಳಂತೂ ಕಾಣೆಯಾಗಿಲ್ಲವಲ್ಲ? ಮುಚ್ಚಿದ ಬಾಗಿಲು ತೆರೆವ ಕೈ ಬಳೆಯ ನಾದದ ಮಾಧುರ್ಯವಿನ್ನೂ ಕಳೆದು ಹೋಗಿಲ್ಲವೆನ್ನುವುದೇ ಸಂತಸದ ಸಂಗತಿ.

ಹಳ್ಳಿಯ ಮನೆಯನ್ನಗಲಿ ಪಟ್ಟಣ ಸೇರಿದ ಗೌರಿ ದಶಕಗಳ ಹಿಂದೆ ಅಡಗಿಸಿಟ್ಟ ಬಳೆಚೂರುಗಳನ್ನು ತನ್ನ ಪುಟ್ಟ ಮಗಳ ಬಾಲ್ಯಕ್ಕೆ ಸೇರಿಸುವ ಆಶೆಯಿಂದ ಹುಡುಕಾಡಿದಾಗ ಕಳೆದ ಚಿತ್ರಗಳೆಲ್ಲ ಹಾಡಾಗಿ ಹರಿದವು:

ನಮ್ಮೂರ ಜಾತ್ರೆಗೆ ಎಂಟು ದಿನವಿರುವಾಗ

ಬಳೆಗಾರ ರಾಚಪ್ಪ ಹೊಳೆ ದಾಟಿಕೊಂಡು

ಬೆನ್ನು ಮೈ ಕೈ ತುಂಬ ಬಳೆ ಸರವು ಝಣಕೆನಲು

ನಮ್ಮೂರ ಕೇರಿಯಲಿ ಕಾಣಿಸುವನು |

ಊರಿಗೊಂದೆ ಮನೆಯ ಉಪದ್ಯಾರ ಅಂಗಳಕೆ

ಬಂದವನೆ ಸಣ್ಣವಳ ಕೂಗಿ ಕರೆಯುವನು

ಪಕ್ಕದಲಿ ಬಗಲೊಳಗೆ ಅವಳಿಗೆಂದೆ ತಂದ

ತರ ತರದ ಬಳೆಚೂರ ಕೊಟ್ಟು ಹೊರಡುವನು|

ವರುಷ ವರುಷವು ಹೀಗೆ ಕೂಡಿಟ್ಟ ಬಳೆಚೂರು

ಗೆಳತಿಯರ ಬಳಗದಲಿ ಬಣ್ಣ ಬಣ್ಣದ ಕನಸು

ಬಳೆಚೂರಿನೊಂದಿಗೆ ಬೆಳೆಯುತಿದ್ದಳು ಗೌರಿ

ಚಿಕ್ಕೆ ಮಿರುಗನು ಮೀರಿ ಕಣ್ಣ ಹೊಳಪು|

ಈ ವರುಷ ರಾಚಪ್ಪ ಜಾತ್ರೆಗಿಂತಲು ಮೊದಲೆ

ಕೇರಿಯಲಿ ಚೈತ್ರದಲಿ ಕಾಣಿಸಿದನು

ಚಲುವೆ ಗೌರಿಯ ಕೈಗೆ ಹಸಿರು ಬಳೆಗಳ ತೊಡಿಸಿ

ಮದುವೆಯೂಟವನುಂಡು ನಗುತ ಹರಸಿದನು|

ಈ ಮನೆಯ ಬಂಗಾರ ಹೊರಟಿರುವ ಸಿಂಗಾರ

ಸುಖವಾಗಿ ಇರಲೆಂದು ಹಾರೈಸಿದ

ಲಕಲಕಿಸಿ ಲಜ್ಜೆಯಲಿ ಗೌರಿ ಒಳಗೋಡಿರಲು

ಮುಖದ ಸುಕ್ಕೊಳಗೆಲ್ಲ ನಗೆಯ ಹೊಮ್ಮಿಸಿದ|

ವರುಷ ಮೂರರ ಮುಂದೆ ತೌರಿನಂಗಳದಲ್ಲಿ

ಬಗಲೊಳಗೆ ಗೊಂಬೆ ಪುಟ್ಟ ಕುವರಿ

ಸುಣ್ಣ ಕಾರಣೆ ಮನೆಗೆ ಜಾತ್ರೆ ಇಡಿ ಊರಿಗೆ

ಬರಲಿಲ್ಲ ರಾಚಪ್ಪ ಕೇರಿಯೊಳಗೆ|

ಪೇಟೆ ಬೀದಿಯ ತುಂಬ ಬಳೆಯಂಗಡಿಯ ಸಾಲು

ಚಕಮಕಾ ವ್ಯಾಪಾರ ಊರಂತರಂಗ

ಬರಿದು ಬಂದಿಳಿದಿತ್ತು ಊರ ಜಾತ್ರೆಯ ತುಂಬ

ನೆನಪಾಗಿ ಉಳಿದಿತ್ತು ಹರಿದೆಳೆಯ ಛಂದ|

ಖಿನ್ನ ಕಲಕಿದ ಮನಸು ಕಳೆದದ್ದ ಕೆದಕಿರಲು

ಮುಖದ ಸುಕ್ಕೊಳು ನಗೆಯು ಸಂತೈಸಿತು

ಊರನಗಲಿದ ದೂರ ದಾರಿ ಬುತ್ತಿಯ ಜೊತೆಗೆ

ನೆನಪಿನಾಳದಲ್ಲಿ ಮೌನವಿತ್ತು|

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry