ಕಾರಿನ ಮೇಲೆ ಉರುಳಿದ ಲಾರಿ: ವಕೀಲ ಸಾವು

7

ಕಾರಿನ ಮೇಲೆ ಉರುಳಿದ ಲಾರಿ: ವಕೀಲ ಸಾವು

Published:
Updated:
ಕಾರಿನ ಮೇಲೆ ಉರುಳಿದ ಲಾರಿ: ವಕೀಲ ಸಾವು

ಬೆಂಗಳೂರು: ಯಲಹಂಕದ ಅಲ್ಲಾಳಸಂದ್ರದ ಮೇಲ್ಸೇತುವೆ ಬಳಿ ಶುಕ್ರವಾರ ಕಾರಿನ ಮೇಲೆ ಲಾರಿ ಉರುಳಿ ಬಿದ್ದಿದ್ದರಿಂದ ರಂಜಿತ್ ಕುಮಾರ್ (40) ಎಂಬುವರು ಮೃತಪಟ್ಟಿದ್ದಾರೆ.

ಜಕ್ಕೂರಿನ ತಲಕಾವೇರಿ ಲೇಔಟ್‌ ನಿವಾಸಿಯಾದ ಅವರು ವಕೀಲರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ.

ಯೂ ಟರ್ನ್ ತೆಗೆದುಕೊಳ್ಳಲು ಲಾರಿ ಚಾಲಕ ಮುಂದಾಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ, ಪಕ್ಕದಲ್ಲಿ ತೆರಳುತ್ತಿದ್ದ ರಂಜಿತ್ ಅವರ ಕಾರಿನ ಮೇಲೆ ಬಿದ್ದಿದೆ. ಲಾರಿಯಲ್ಲಿದ್ದ ಸಾವಿರಾರು ಕೆ.ಜಿ. ತೂಕದ ಪೇಪರ್‌ ರೋಲ್‌ಗಳು ಸಹ ಕಾರಿನ ಮೇಲೆ ಬಿದ್ದಿವೆ. ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದರು.

ಕಾರಿನಲ್ಲಿ ಸಿಲುಕಿದ್ದ ರಂಜಿತ್ ಅವರನ್ನು ಹೊರಗೆಳೆದು ಬ್ಯಾಟರಾಯನಪುರದ ಪ್ರೊಲೈಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಮಾಹಿತಿ ನೀಡಿದರು.

ಸಂಚಾರ ದಟ್ಟಣೆ: ‘ಮುಖ್ಯರಸ್ತೆಯಲ್ಲಿ ಲಾರಿ ಉರುಳಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳದಲ್ಲಿ ಸಾಕಷ್ಟು ಜನ ಸೇರಿದ್ದರಿಂದ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಎರಡು ಕ್ರೇನ್‌ಗಳ ಮೂಲಕ ಲಾರಿ ಹಾಗೂ ಕಾರನ್ನು ಸ್ಥಳಾಂತರ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿದೆವು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry