ಕಪ್ಪುಪಟ್ಟಿಗೆ ಗುತ್ತಿಗೆದಾರ ಸೇರಿಸಲು ಸೂಚನೆ: ಸಚಿವ

7

ಕಪ್ಪುಪಟ್ಟಿಗೆ ಗುತ್ತಿಗೆದಾರ ಸೇರಿಸಲು ಸೂಚನೆ: ಸಚಿವ

Published:
Updated:
ಕಪ್ಪುಪಟ್ಟಿಗೆ ಗುತ್ತಿಗೆದಾರ ಸೇರಿಸಲು ಸೂಚನೆ: ಸಚಿವ

ಚಿಕ್ಕಮಗಳೂರು: ನಗರದ ಒಳಚರಂಡಿ ಕಾಮಗಾರಿಯಲ್ಲಿ ಲೋಪಗಳಾಗಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ರೋಷನ್‌ ಬೇಗ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಳಚರಂಡಿ ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದೇನೆ. ಕೆಲಸ ಸರಿಯಾಗಿ ಮಾಡಿಲ್ಲ. ಕಾಮಗಾರಿಯಲ್ಲಿ ಲೋಪವಾಗಿದೆ, ಹಣ ದುರುಪಯೋಗವಾಗಿದೆ. ಹೀಗಾಗಿ, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ’ ಎಂದರು.

‘ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಸಮಿತಿಯು ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಸಂಪುಟ ಸಮಿತಿಯು ವರದಿಯನ್ನು ವರದಿಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಅವರನ್ನು ಅಮಾನುತು ಮಾಡಿರುವ ವಿಷಯ ಗಮನಕ್ಕೆ ಬಂದಿದೆ. ಅವರನ್ನು ಅಮಾನತು ಮಾಡಿದ್ದು. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದು ಉತ್ತರಿಸಿದರು.

ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಬೇಕಾಗಿಲ್ಲ. ಕೋಮುಸೌಹಾರ್ದ ಕೆಡಿಸುವುದು, ಮತ ಧ್ರುವೀಕರಣ ಮಾಡುವುದು ಅವರ ಗುರಿಯಾಗಿದೆ. ರಾಜ್ಯ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯಲು ತಿಂಗಳು ಕಾಲಾವಕಾಶ ಯಾಕೆ ಬೇಕು. ಏನಾದರೂ ಇದ್ದರೆ ಈಗಲೇ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

‘ಚಿಕ್ಕಮಗಳೂರು ಪ್ರಮುಖ ಪ್ರವಾಸಿತಾಣವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಚಿಕ್ಕಮಗಳೂರು– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಜನಶತಾಬ್ಧಿ ಎಕ್ಸ್‌ಪ್ರೆಸ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಡ ಹೇರುತ್ತೇನೆ’ ಎಂದರು.

ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಗಮನಹರಿಸಲಾಗಿದೆ. ಬಯಲು ಸೀಮೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ ನೀಡಲು ಚಿಂತನೆ ನಡೆದಿದೆ ಎಂದರು.

ಶೃಂಗೇರಿಗೆ ರಾಹುಲ್‌ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಮಾಡಲಿದ್ದಾರೆ. ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು, ತಾವೂ ಭೇಟಿ ನೀಡಬೇಕು ಎಂದು ತಿಳಿಸಿದ್ದೇನೆ. ಭೇಟಿಯ ದಿನ ಇನ್ನು ನಿಗದಿಯಾಗಿಲ್ಲ ಎಂದು ತಿಳಿಸಿದರು.

* * 

ಜಿಲ್ಲೆಗೆ ಕುಡಿಯುವ ನೀರು ನಿರ್ವಹಣೆಗೆ ₹ 23 ಕೋಟಿ ಅನುದಾನ ಒದಗಿಸಲು ಕೋರಿ ಸಲ್ಲಿಸಿರುವ ಪ್ರಸ್ತಾವ ಅನುಮೋದನೆಯಾಗಿದೆ. ಅನುದಾನ ಬಿಡುಗಡೆ ಮಾಡಿಸಲು ಗಮನ ಹರಿಸಿದ್ದೇನೆ.

ಆರ್‌.ರೋಷನ್‌ ಬೇಗ್‌

ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry