ಹಸಿರಿನಿಂದ ಕಂಗೊಳಿಸುವ ಸರ್ಕಾರಿ ಶಾಲೆ

7

ಹಸಿರಿನಿಂದ ಕಂಗೊಳಿಸುವ ಸರ್ಕಾರಿ ಶಾಲೆ

Published:
Updated:
ಹಸಿರಿನಿಂದ ಕಂಗೊಳಿಸುವ ಸರ್ಕಾರಿ ಶಾಲೆ

ಕಲಾದಗಿ: ಅದು ಖಾಸಗಿ ಶಾಲೆಗಳನ್ನೇ ನಾಚಿಸುವಂತಹ ಪುಟ್ಟ ಸರ್ಕಾರಿ ಶಾಲೆ. ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣವನ್ನು ನೀಡುವ ಪರಿಸರ ಸ್ನೇಹಿ ಶಾಲೆಯಾಗಿದ್ದು, ವಿದ್ಯಾರ್ಥಿಗಳ ನೆಚ್ಚಿನ ಉದ್ಯಾನವನ ಕೂಡಾ ಆಗಿದೆ.

ಹೌದು ಕಲಾದಗಿ ಸಮೀಪದ ಉದಗಟ್ಟಿ ಕ್ರಾಸ್‌ ಬಳಿ ಇರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಇದಕ್ಕೆ ಒಂದು ಉತ್ತಮ ನಿದರ್ಶನ. ಶಾಲೆಯು ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಹಾಗಾಗಿ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಮಾಡುವ ಹಳದಿ ಶಾಲೆ ಪ್ರಶಸ್ತಿ (2016–17) ಕೂಡಾ ಭಾಜನವಾಗಿದೆ.

ಹಸಿರಿನ ಮಧ್ಯೆ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಶಿಕ್ಷಕರಿಗೆ ಕಲಿಸಲು ಬೇಕಾದ ಪೂರಕ ವಾತಾವರಣ ಕೂಡಾ ನಿರ್ಮಾಣವಾಗಿದೆ. 2008ರಲ್ಲಿ ಶಾಲೆ ಪ್ರಾರಂಭವಾದಾಗ ಕೇವಲ 14 ಮಕ್ಕಳಿದ್ದರು. ಈಗ 37 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದರು.

ಮುಖ್ಯ ಶಿಕ್ಷಕ ಇಮ್ರಾನ್ ಹಾಗೂ ಸಿಬ್ಬಂದಿ ಶಾಲೆಯನ್ನು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಆವರಣದಲ್ಲಿ ನಾನಾ ಬಗೆಯ ಸಸಿಗಳನ್ನು ಬೆಳೆಸಿ, ಪೋಷಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೂಡಾ ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಗ್ರಾಮಸ್ಥರ ಸಹಕಾರದಿಂದಾಗಿ ಶಾಲಾ ಆವರಣದ ಸುತ್ತಲೂ ಗೋಡೆ ಕೂಡಾ ನಿರ್ಮಾಣ ಮಾಡಲಾಗಿದೆ.

ಶಾಲಾ ಆವರಣದಲ್ಲಿ ಸಂಗ್ರಹವಾಗುವ ಕಸವನ್ನು ಇಲ್ಲಿನ ವಿದ್ಯಾರ್ಥಿಗಳು ಕೊಳೆಯುವ, ಕೊಳೆಯಲಾರದ ಕಸ ವನ್ನು ವಿಂಗಡನೆ ಮಾಡಿ ಬೇರ್ಪಡಿಸುವ ವಿಧಾನ ಅನುಸರಿಸುತ್ತಿದ್ದಾರೆ. ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇಲ್ಲದಂತೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ.

‘ಗ್ರಾಮಸ್ಥರ ಸಹಕಾರದಿಂದ ಅಭಿವೃದ್ದಿ ಸಾಧಿಸಲು ಸಾಧ್ಯವಾಗಿದೆ. ಎಸ್‌ಡಿಎಂಸಿ ಹಾಗೂ ಸಿಬ್ಬಂದಿಗಳ ಪಾತ್ರ ಕೂಡಾ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಶಾಲೆಗೆ ಬೆನ್ನೆಲುಬಾಗಿ ನಿಂತಿರುವುದಕ್ಕೆ ಶಾಲೆ ಇಷ್ಟೊಂದು ಸುಂದರವಾಗಿ ಕಾಣಲು ಸಾಧ್ಯವಾಗಿದೆ’ ಎಂದು ಮುಖ್ಯ ಶಿಕ್ಷಕ ಇಮ್ರಾನ್ ಹೇಳಿದರು.

ಭೂಮಿ ದಾನ : ಶಾಲಾ ಕಟ್ಟಡ ನಿರ್ಮಿಸಲು ಗ್ರಾಮದ ಶಿವಪ್ಪ ಮಾದರ ಮತ್ತು ಮಾರುತಿ ಮಾದರ ಅವರು ತಮ್ಮ ಭೂಮಿಯನ್ನು ಶಾಲೆಗೆ ದಾನ ಮಾಡಿದ್ದಾರೆ.

ಸಿಕಂದರ.ಆರ್. ಬಾವಾಖಾನ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry