ಕರಾವಳಿಯಲ್ಲಿ ತೀವ್ರಗೊಳ್ಳುತ್ತಿರುವ ನೋಟಾ ಅಭಿಯಾನ

7
ಎತ್ತಿನಹೊಳೆ ತಿರುವು ವಿರೋಧಿ ಹೋರಾಟಕ್ಕೆ ಸಿಗದ ಸ್ಪಂದನೆ

ಕರಾವಳಿಯಲ್ಲಿ ತೀವ್ರಗೊಳ್ಳುತ್ತಿರುವ ನೋಟಾ ಅಭಿಯಾನ

Published:
Updated:
ಕರಾವಳಿಯಲ್ಲಿ ತೀವ್ರಗೊಳ್ಳುತ್ತಿರುವ ನೋಟಾ ಅಭಿಯಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತಿನಹೊಳೆ ತಿರುವು ವಿರೋಧಿ ಹೋರಾಟಕ್ಕೆ ಸರ್ಕಾರ ಕಿಂಚಿತ್‌ ಸ್ಪಂದನೆಯೂ ನೀಡಿಲ್ಲ. ವಿರೋಧ ಪಕ್ಷ ಬಿಜೆಪಿ ಕೂಡ ಕಾಮಗಾರಿ ನಿಲ್ಲಿಸುವ ಉಮೇದಿನಿಂದ ಹೋರಾಟಕ್ಕೆ ಶಕ್ತಿ ತುಂಬಲಿಲ್ಲ ಎಂಬ ಅಸಮಾಧಾನದಿಂದ ಪರಿಸರವಾದಿಗಳು ನೋಟಾ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.

ಮಂಗಳೂರು ನಗರದಲ್ಲಿಯೇ 12ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಮನೆಮನೆಗೆ ತೆರಳಿ ‘ನೋಟಾ’ಚಲಾಯಿಸುವಂತೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

‘ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್‌ , ಬಿಜೆಪಿ, ಜೆಡಿಎಸ್ ಪಕ್ಷದ ಯಾವುದೇ ರಾಜಕಾರಣಿಗಳು ಮತಕೇಳಲು ಬರಬೇಡಿ ಎಂಬ ಬೋರ್ಡ್‌ನ್ನು ಮನೆಮನೆಗೆ ತೆರಳಿ ವಿತರಿಸುತ್ತಿದ್ದೇವೆ. ಜನರ ಸಮಸ್ಯೆಯನ್ನು ಆಲಿಸದ ಜನಪ್ರತಿನಿಧಿಗೆ ಸ್ವಲ್ಪವಾದರೂ ಅವಮಾನವಾಗಲಿ ಎಂಬುದು ನಮ್ಮ ಉದ್ದೇಶ. ಸಂಸದರು ವೈಯಕ್ತಿಕ ಹೋರಾಟದ ಮೂಲಕ ಕಾಮಗಾರಿಗೆ ತಡೆತರುವಷ್ಟರ ಮಟ್ಟಿಗಾದರೂ ಪ್ರಯತ್ನಿಸಬಹುದಿತ್ತು. ಆದರೆ ಅವರಿಗೆ ಯೋಜನೆಯನ್ನು ಕಿಂಚಿತ್‌ ತಡೆಯುವುದೂ ಸಾಧ್ಯವಾಗಲಿಲ್ಲ’ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣ ವೇದಿಕೆಯ ಶಶಿಶಧರ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎತ್ತಿನಹೊಳೆ ತಿರುವು ಯೋಜನೆಯ ನೆಪದಲ್ಲಿ ಪಶ್ಚಿಮ ಘಟ್ಟವನ್ನು ಸರ್ಕಾರ ಹಾಳುಗೆಡವುತ್ತಿದೆ. ನಗರದಲ್ಲಿಯೂ ಹಸಿರು ಸಂಪತ್ತನ್ನು ನಾಶ ಮಾಡಲಾಗುತ್ತಿದೆ. ಎಸ್ಟೇಟ್‌ ಮಾಫಿಯಾ, ಮರಳು ಮಾಫಿಯಾದ ಮೂಲಕ ಕರಾವಳಿಯ ಪರಿಸರ ಹಾಳಾಗುತ್ತಿದೆ. ಯಾವುದೇ ಜನಪ್ರತಿನಿಧಿ ಜನರ ಆತಂಕದ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಆದ್ದರಿಂದ ನೋಟಾ ಅಭಿಯಾನ ಮುಂದುವರೆಸುತ್ತಿದ್ದೇವೆ’ ಎಂದು ಪರಿಸರವಾದಿ ದಿನೇಶ್‌ ಹೊಳ್ಳ ಹೇಳಿದರು.

‘ನೇತ್ರಾವತಿ ಸೇರುವ ಎತ್ತಿನಹೊಳೆ ಹಳ್ಳ ತಿರುವನ್ನು ವಿರೋಧಿಸುವ ಹೋರಾಟಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಜತೆಯಾದಾಗ ನಮ್ಮಲ್ಲಿ ನಿರೀಕ್ಷೆ ಮೂಡಿತ್ತು. ಆದರೆ ಯಡಿಯೂರಪ್ಪ, ಈಶ್ವರಪ್ಪ, ಅಷ್ಟೇ ಏಕೆ ಸ್ಥಳೀಯರೇ ಆದ ಕೇಂದ್ರ ಸಚಿವ ಸದಾನಂದ ಗೌಡರು ಎತ್ತಿನಹೊಳೆ ಮಾಡಿಯೇ ಸಿದ್ಧ ಎಂದು ಹೇಳಿದ್ದರು. ಸ್ಥಳೀಯ ಹೋರಾಟಗಾರರೊಡನೆ ಮಾತುಕತೆ ನಡೆಸುವ ಸೌಜನ್ಯವನ್ನೂ ಆಡಳಿತ ಪಕ್ಷವೂ ತೋರಲಿಲ್ಲ. ಅದಕ್ಕಾಗಿ ಬಿಜೆಪಿ ಆಗ್ರಹವನ್ನೂ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಎತ್ತಿನಹೊಳೆ ರಥಯಾತ್ರೆಯೋ, ಪಾದಯಾತ್ರೆಯೋ ನಡೆಯಿತಷ್ಟೆ. ಕೇಂದ್ರ ಪರಿಸರ ಸಚಿವರ ಮನವೊಲಿಸಿ ಎತ್ತಿನಹೊಳೆ ಯೋಜನೆಗೆ ಪರಿಸರ ನಿರಾಕ್ಷೇಪಣಾ ಪತ್ರವನ್ನು ಕೊಡದಂತೆ ತಡೆಯುವುದೂ ಬಿಜೆಪಿಗೆ ಸಾಧ್ಯವಾಗಲಿಲ್ಲ’ ಎಂದು ದಿನೇಶ್‌ ವಿವರಿಸಿದರು.

‘ಈ ಬಾರಿ ಕನಿಷ್ಠ 2 ಲಕ್ಷ ನೋಟಾ ಮತ ಬೀಳುವಂತೆ ಪ್ರಯತ್ನ ನಡೆಸುತ್ತಿದ್ದೇವೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪ್ರಚಾರ ನಡೆಸದೇ 28, 600 ನೋಟಾ ಮತಗಳು ಬಿದ್ದಿದ್ದವು’ಎಂದು ನೋಟಾ ಅಭಿಯಾನದಲ್ಲಿ ತೊಡಗಿಸಿಕೊಂಡ ಅನಿತಾ ಭಂಡಾರ್ಕ್‌ರ್‌ ವಿವರಿಸುತ್ತಾರೆ.

‘ಚುನಾವಣೆ ಇರುವುದು ಜನಪ್ರತಿನಿಧಿಗಳ ಆಯ್ಕೆಗಾಗಿ. ಪ್ರಜ್ಞಾವಂತರ ಜಿಲ್ಲೆ ಎಂದೇ ಗುರುತಿಸಿಕೊಂಡ ದಕ್ಷಿಣ ಕನ್ನಡದಲ್ಲಿ ಜನರು ನೋಟಾ ಅಭಿಯಾನದಿಂದ ಪ್ರೇರಿತರಾಗುವುದಿಲ್ಲ. ಎತ್ತಿನಹೊಳೆ ತಿರುವು ವಿರೋಧಿ ಹೋರಾಟದಲ್ಲಿ ಪಕ್ಷ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ’ ಎಂದು ಬಿಜೆಪಿ ನಡೆಯನ್ನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಸಮರ್ಥಿಸಿಕೊಳ್ಳುತ್ತಾರೆ. ಈ ಮಧ್ಯೆ, ಮಾರ್ಚ್‌ 1ರಿಂದ ನೋಟಾ ಅಭಿಯಾನ ಚುರುಕುಗೊಳಿಸಲು ಸಂಘಟನೆಗಳು ಸಜ್ಜಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry