ಕಾರು ಕಳ್ಳ ರಾಜಸ್ಥಾನದಲ್ಲಿ ಸೆರೆ!

7

ಕಾರು ಕಳ್ಳ ರಾಜಸ್ಥಾನದಲ್ಲಿ ಸೆರೆ!

Published:
Updated:
ಕಾರು ಕಳ್ಳ ರಾಜಸ್ಥಾನದಲ್ಲಿ ಸೆರೆ!

ಬೆಂಗಳೂರು: ಬಾಡಿಗೆ ನೆಪದಲ್ಲಿ ಐಷಾರಾಮಿ ಕಾರುಗಳನ್ನು ಕದ್ದೊಯ್ದಿದ್ದ ದಿಲೀಪ್‌ಕುಮಾರ್ (25) ಎಂಬಾತನನ್ನು ರಾಜಸ್ಥಾನದಲ್ಲಿ ಬಂಧಿಸಿರುವ ಜೀವನ್‌ಬಿಮಾನಗರ ಪೊಲೀಸರು, ಆತನಿಂದ ₹40 ಲಕ್ಷದ ಎರಡು ಎಕ್ಸ್‌ಯುವಿಗಳನ್ನು ಜಪ್ತಿ ಮಾಡಿದ್ದಾರೆ.

ಬಿಎ ಪದವೀಧರನಾದ ದೀಪಕ್ ವಿರುದ್ಧ ಬೆಂಗಳೂರು ಮಾತ್ರವಲ್ಲದೆ ಮುಂಬೈ, ಹೈದರಾಬಾದ್, ತಮಿಳುನಾಡಿನಲ್ಲೂ ವಂಚನೆ ಹಾಗೂ ಕಳ್ಳತನ ಪ್ರಕರಣಗಳು ದಾಖಲಾಗಿವೆ. ನಗರದಿಂದ ಕದ್ದೊಯ್ದಿದ್ದ ಒಂದು ಎಕ್ಸ್‌ಯುವಿಯಲ್ಲಿ ಜಪಿಎಸ್ ಉಪಕರಣ ಅಳವಡಿಸಲಾಗಿತ್ತು. ಅದರ ಸುಳಿವಿನಿಂದ ಆರೋಪಿಯನ್ನು ರಾಜಸ್ಥಾನದಲ್ಲಿ ಪತ್ತೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದರು.

ಈತನ ವಿರುದ್ಧ ಎಚ್‌ಎಎಲ್‌ ನಾಲ್ಕನೇ ಅಡ್ಡರಸ್ತೆಯ ‘ಜಸ್ಟ್ ರೈಡ್ ಟೂರ್ಸ್‌ ಅಂಡ್ ಟ್ರಾವೆಲ್ಸ್‌’ ಮಾಲೀಕ ಭರತ್ ದೂರು ಕೊಟ್ಟಿದ್ದರು. 2017ರ ಆ.21ರಂದು ಅವರ ಟ್ರಾವೆಲ್ಸ್‌ಗೆ ಹೋಗಿದ್ದ ಆರೋಪಿ, ಬಲವೀರ್ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡಿದ್ದ.

‘ನಾನು ಲಾಂಗ್ ಡ್ರೈವ್ ಹೋಗಬೇಕು. ನಾಲ್ಕು ದಿನಗಳ ಮಟ್ಟಿಗೆ ನಿಮ್ಮ ಎಕ್ಸ್‌ಯುವಿ ಬೇಕು’ ಎಂದಿದ್ದ. ಅಂತೆಯೇ ಆತನಿಂದ ಮುಂಗಡ ಹಾಗೂ ಮನೆ ವಿಳಾಸದ ದಾಖಲೆಗಳನ್ನು ಪಡೆದುಕೊಂಡ ಭರತ್, ವಾಹನ ಕೊಟ್ಟು ಕಳುಹಿಸಿದ್ದರು. ವಾರ ಕಳೆದರೂ ಆರೋಪಿ ಬಾರದಿದ್ದಾಗ ಠಾಣೆ ಮಟ್ಟಿಲೇರಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, 15 ದಿನಗಳ ಹಿಂದೆ ಜೆ.ಪಿ.ನಗರದ ಠಾಣೆ ವ್ಯಾಪ್ತಿಯಲ್ಲೂ ಇಂಥದ್ದೊಂದು ಪ್ರಕರಣ ದಾಖಲಾಗಿರುವುದು ಗೊತ್ತಾಯಿತು. ಅಲ್ಲಿನ ಟ್ರಾವೆಲ್ಸ್ ಏಜೆನ್ಸಿಗೆ ತೆರಳಿ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಎರಡೂ ಕಡೆ ಒಬ್ಬನೇ ಆರೋಪಿ ವಂಚನೆ ಮಾಡಿರುವುದು ಖಚಿತವಾಯಿತು.

ಡ್ರಗ್ಸ್ ಸಾಗಣೆಗೆ ಬಳಕೆ: ರಾಜಸ್ಥಾನದಲ್ಲಿ ಡ್ರಗ್ಸ್ ಮಾರಾಟ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದ ದಿಲೀಪ್, ಕದ್ದ ಎಕ್ಸ್‌ಯುವಿಗಳನ್ನು ಮಾದಕ ವಸ್ತುಗಳ ಸಾಗಣೆಗೆ ಬಳಸುತ್ತಿದ್ದ. ನೋಂದಣಿ ಫಲಕಗಳನ್ನು ಬದಲಾಯಿಸಿದ್ದ ಆತ, ಸ್ವಂತ ವಾಹನ ಎಂದು ಬಿಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಜೆ.ಪಿ.ನಗರ ಠಾಣೆ ವ್ಯಾಪ್ತಿಯಿಂದ ಕದ್ದೊಯ್ದಿದ್ದ ಎಕ್ಸ್‌ಯುವಿಯಲ್ಲಿ ಜಿಪಿಎಸ್‌ ಎಂಜಿನ್ ಭಾಗದಲ್ಲಿತ್ತು. ಹೀಗಾಗಿ, ಅದು ಆತನ ಕಣ್ಣಿಗೆ ಬಿದ್ದಿರಲಿಲ್ಲ. ಅದರ ಜಾಡು ಹಿಡಿದುಕೊಂಡೇ ರಾಜಸ್ಥಾನ ತಲುಪಿದ ಸಿಬ್ಬಂದಿಯ ತಂಡ, ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry