ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

7

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Published:
Updated:
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಬೆಂಗಳೂರು: ‘ಹೈಕೋರ್ಟ್‌ ನೌಕರರ ವೇತನವನ್ನು ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಗೆ ಸಮನಾಗಿ ಏರಿಸುವ ಆದೇಶ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲನೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

‘ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನವನ್ನು ನಿಗದಿತ ಅವಧಿಯಲ್ಲಿ ಪಾಲನೆ ಮಾಡಿಲ್ಲ’ ಎಂದು ಆಕ್ಷೇಪಿಸಿ ನಿಜಗುಣಿ ಎಂ ಕರಡಿಗುಡ್ಡ ಹಾಗೂ ’ಕರ್ನಾಟಕ ಹೈಕೋರ್ಟ್ ನೌಕರರ ಕಲ್ಯಾಣ ಸಂಘ’ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ, ‘ಹೈಕೋರ್ಟ್‌ ನೌಕರರು ಕಳೆದ 14 ವರ್ಷಗಳಿಂದ ತಮ್ಮ ಸಂಬಳ ಮಾರ್ಪಾಡು ಕುರಿತಂತೆ ಕಾನೂನು ಸಮರ ನಡೆಸುತ್ತಿದ್ದಾರೆ. ಅಂತಿಮವಾಗಿ ಸುಪ್ರೀಂ ಕೋರ್ಟ್ 2017ರ ಸೆಪ್ಟೆಂಬರ್ 18ರಂದು ನೌಕರರ ಮೇಲ್ಮನವಿಯನ್ನು ಪರಿಗಣಿಸಿ ಮುಂದಿನ 4 ತಿಂಗಳಿನಲ್ಲಿ ಆದೇಶ ಜಾರಿಗೆ ತನ್ನಿ ಎಂದು ನಿರ್ದೇಶನ ನೀಡಿದೆ. ಆದರೆ, ಈವರೆವಿಗೂ ಆದೇಶ ಜಾರಿಗೆ ಬಂದಿಲ್ಲ’ ಎಂದರು.

‘ಸರ್ಕಾರದ ಈ ನಡೆ ನ್ಯಾಯಾಂಗ ನಿಂದನೆಯಾಗಿದೆ. ಹೈಕೋರ್ಟ್‌ ನೌಕರರ 14 ವರ್ಷಗಳ ಈ ವನವಾಸಕ್ಕೆ ಇನ್ನಾದರೂ ತೆರೆ ಎಳೆಯಬಹುದೇನೋ ಎಂದರೆ ರಾಜ್ಯ ಸರ್ಕಾರ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ಆಕ್ಷೇಪಿಸಿದರು.

ಅರ್ಜಿದಾರರ ಪರ ಹಾಜರಿದ್ದ ಮತ್ತೊಬ್ಬ ಹಿರಿಯ ವಕೀಲ ರಾಜೇಂದ್ರ ಪ್ರಸಾದ್, ’ಫಿಟ್‌ಮೆಂಟ್‌ (ವೇತನ ಪರಿಷ್ಕರಿಸಿದಾಗ ವೇತನ ಹೆಚ್ಚಳವಾಗುವಂತೆ ಮಾಡಲು ‘ತಾರತಮ್ಯ ಸರಿದೂಗಿಸುವ ಮೊತ್ತ’ವನ್ನು ನೀಡಲಾಗುತ್ತದೆ. ಇದನ್ನೇ ಫಿಟ್‌ಮೆಂಟ್ ಎನ್ನಲಾಗುತ್ತದೆ) ಪಟ್ಟಿ ತಯಾರಿಸುವುದಾಗಿ ಸರ್ಕಾರ ಸುಮ್ಮನೇ ಸಬೂಬು ಹೇಳುತ್ತಿದೆ. ಸರ್ಕಾರಕ್ಕೆ ಆದೇಶ ಅನುಷ್ಠಾನಕ್ಕೆ ತರುವ ಮನಸ್ಸಿಲ್ಲ’ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಅಡ್ವೊಕೇಟ್‌ ಜನರಲ್ ಎಂ.ಆರ್.ನಾಯಕ್‌, ‘ಸುಪ್ರೀಂ ಕೋರ್ಟ್‌ ಆದೇಶವನ್ನು ನಿಗದಿತ ಅವಧಿಯಲ್ಲೇ ಪಾಲನೆ ಮಾಡಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಈ ಕುರಿತಂತೆ ಹೊರಡಿಸಿರುವ ಸರ್ಕಾರದ ಆದೇಶವನ್ನು ರಾಜ್ಯಪಾಲರ ಅನುಮೋದನೆಗೆ ರವಾನಿಸಲಾಗಿದೆ. ಹಲವು ಶ್ರೇಣಿಗಳ ನೌಕರರು ಇರುವುದರಿಂದ ಅವರ ಫಿಟ್‌ಮೆಂಟ್ ಪಟ್ಟಿ ತಯಾರಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ. ಈಗಾಗಲೇ ಈ ಕುರಿತಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರ ಜೊತೆ ಚರ್ಚಿಸಲಾಗಿದೆ’ ಎಂದೂ ತಿಳಿಸಿದರು.‌

ಇದಕ್ಕೆ ಕೊಂಚ ಗರಂ ಆದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ, ‘ನಾಲ್ಕು ತಿಂಗಳಲ್ಲಿ ಆದೇಶ ಜಾರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ನೀವು ಸರಿಯಾಗಿ ಅರ್ಥೈಸಿಕೊಂಡಿಲ್ಲವೆಂದು ಕಾಣುತ್ತದೆ. ಮೂರೂವರೆ ತಿಂಗಳ ನಂತರ ಈ ವಿಷಯವನ್ನು ಸಂಪುಟದ ಮುಂದೆ ಇರಿಸಿ ನಿರ್ಧಾರ ಕೈಗೊಂಡಿದ್ದೀರಿ. ಇಷ್ಟೊಂದು ವಿಳಂಬ ಏಕೆ’ ಎಂದು ಪ್ರಶ್ನಿಸಿದರು.

‘ಸರ್ಕಾರದ ಈ ರೀತಿಯ ಕ್ರಮಗಳು ಕೋರ್ಟ್‌ಗೆ ತೀವ್ರ ಅಸಂತೋಷ ಉಂಟು ಮಾಡಿದೆ. ಮುಂದಿನ ವಿಚಾರಣೆ ವೇಳೆಗೆ ಹೈಕೋರ್ಟ್‌ ರಿಜಿಸ್ಟ್ರಾರ್ ಖುದ್ದು ಹಾಜರಾಗಬೇಕು ಹಾಗೂ ನೌಕರರ ಫಿಟ್‌ಮೆಂಟ್‌ ಪಟ್ಟಿಯ ಅಂಕಿ ಅಂಶಗಳನ್ನು ನ್ಯಾಯಪೀಠಕ್ಕೆ ನೀಡಬೇಕು’ ಎಂದು ಆದೇಶಿಸಿ ವಿಚಾರಣೆಯನ್ನು ಫೆಬ್ರುವರಿ 1ಕ್ಕೆ ಮುಂದೂಡಿದರು.

ಆದೇಶದಲ್ಲಿ ‘ನ್ಯಾಯಪೀಠ ಅಸಂತೋಷಗೊಂಡಿದೆ’ ಎಂಬ ಪದವನ್ನು ತೆಗೆದುಹಾಕಬೇಕು ಎಂದು ನಾಯಕ್‌ ಮಾಡಿದ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry