ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಮ್ಮಟ ನಗರಿ ಛಾಯಾಚಿತ್ರಗಳಿಗೆ 3 ಡಿ ಸ್ಪರ್ಶ

ಮಹಾಮಸ್ತಕಾಭಿಷೇಕ: ಶಾಶ್ವತ ಕಲಾಗ್ಯಾಲರಿ ಸ್ಥಾಪನೆಗೆ ಸಿದ್ಧತೆ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಬರುವ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳಗಳ ತ್ರೀ ಡಿ ನೋಟದ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಲಿದೆ.

ಇಲ್ಲಿನ ಬಸದಿಗಳು ಹಾಗೂ ಐತಿಹಾಸಿಕ ಸ್ಥಳಗಳ ಛಾಯಾಚಿತ್ರಗಳನ್ನು ನೋಡಲು ವಿಶೇಷ ಕನ್ನಡಕವನ್ನು ಸಹ ಉಚಿತವಾಗಿ ನೀಡಲಿದೆ. ಬರಿ ಕಣ್ಣಿನಿಂದ ನೋಡುವುದಕ್ಕಿಂತ 3 ಡಿ ಕನ್ನಡಕಗಳ ಮೂಲಕ ಐತಿಹಾಸಿಕ ಸ್ಥಳಗಳ ವೀಕ್ಷಣೆ ನೈಜ ಅನುಭವ ಕಟ್ಟಿಕೊಡಲಿದೆ.

ಗೊಮ್ಮಟೇಶ್ವರನ ಮಹಾಮಜ್ಜನ ಹಾಗೂ ಅದರ ಸುತ್ತಲೂ ನಡೆಯುವ ಎಲ್ಲ ವಿದ್ಯಮಾನಗಳನ್ನೂ ಮೊಬೈಲ್‌ನ ಆ್ಯಪ್‌ ಮೂಲಕ ವೀಕ್ಷಿಸುವ ತಂತ್ರಜ್ಞಾನ ಆವಿಷ್ಕಾರಗೊಳಿಸಿದ ಬೆನ್ನಲ್ಲೇ ಜೈನ ಕಾಶಿಯ ಛಾಯಾಚಿತ್ರವನ್ನು ವಿಶೇಷ ಕನ್ನಡಕದ ಮೂಲಕ ವೀಕ್ಷಿಸುವ ಕಲಾ ಗ್ಯಾಲರಿ ಸ್ಥಾಪನೆಯ ಸಿದ್ಧತೆಯೂ ನಡೆಯುತ್ತಿದೆ.

ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬೆಂಗಳೂರಿನ ಸಂಸ್ಥೆ ತ್ರೀ ಡಿ ಕ್ಯಾಮೆರಾ ಮೂಲಕ ಸೆರೆ ಹಿಡಿದಿರುವ ಬಾಹುಬಲಿ ಮಂದಸ್ಮಿತತೆ, ಮಸ್ತಕಾಭಿಷೇಕ ದೃಶ್ಯಾವಳಿ, ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟದ ಸೌಂದರ್ಯ, ಚಿಕ್ಕಬೆಟ್ಟದ 14 ಬಸದಿಗಳು, ತ್ಯಾಗಸ್ತಂಭ, ಮಾನಸ್ತಂಭ, ಬ್ರಹ್ಮಸ್ತಂಭ, ಜೈನ ಮಠದ ಭಿತ್ತಿ ಚಿತ್ರಗಳು, ಕ್ಷೇತ್ರದ ಅಧಿದೇವತೆ ಕುಷ್ಮಾಂಡಿಣಿ ದೇವಿ, ಗಜಲಕ್ಷ್ಮಿ ವಿಶೇಷ, ಚಿಕ್ಕದೇವರಾಜ ಒಡೆಯರ್‌ ಕಲ್ಯಾಣಿ, ಗುಳ್ಳಕಾಯಜ್ಜಿ, ಲಲಿತಾ ಸರೋವರದ ಹಲವು ವಿಸ್ಮಯಗಳನ್ನು ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ಈಗಾಗಲೇ ಬೆಳಗೊಳದ ಸುತ್ತಮುತ್ತಲಿನ ನೂರು ಐತಿಹಾಸಿಕ ಸ್ಥಳಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

‘ವಿಶ್ವಕ್ಕೆ ಶಾಂತಿ ಸಂದೇಶ ಸಾರುತ್ತಿರುವ ಜೈನಕಾಶಿಯ ಪರಂಪರೆ, ಸಂಪ್ರದಾಯವನ್ನು ಬೆಂಬಿಸುವ ಛಾಯಾಚಿತ್ರವನ್ನು ‘ಶ್ರವಣಬೆಳಗೊಳ ಇನ್‌ 3 ಡಿ’ ಮೂಲಕ ವೀಕ್ಷಿಸಿ, ಆನಂದಿಸುವ ಅವಕಾಶವನ್ನು ಭಕ್ತರು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ. ನೂರು ಚಿತ್ರಗಳನ್ನು ಸೆರೆ ಹಿಡಿಯಲು ಅಂದಾಜು ₹ 6 ಲಕ್ಷ ವೆಚ್ಚ ಮಾಡಲಾಗಿದೆ’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷ ಅಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹೋತ್ಸವ ನೆನಪಿಗಾಗಿ ಶಾಶ್ವತ ಕಲಾಗ್ಯಾಲರಿ ಸ್ಥಾಪಿಸಲು ಜಾಗ ನೀಡುವಂತೆ ಮಠದ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಇದರಿಂದ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಶ್ರವಣಬೆಳಗೊಳದ ಇತಿಹಾಸವನ್ನು ಪರಿಚಯಿಸಿದಂತೆ ಆಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT