ಆಕರ್ಷಣೆಯ ಶಕ್ತಿಯಾಗಿ ಪ್ರೇಮ

7

ಆಕರ್ಷಣೆಯ ಶಕ್ತಿಯಾಗಿ ಪ್ರೇಮ

Published:
Updated:

ಕೆಲವು ಸಂಪ್ರದಾಯಸ್ಥ ಸೂಫಿಗಳ ಅಭಿಪ್ರಾಯದಂತೆ ದೇವರನ್ನು ಪ್ರೇಮದ ಮೂಲಕ ಆರಾಧಿಸುವುದು ತರವಲ್ಲ, ಅದೊಂದು ರೀತಿಯಲ್ಲಿ ಪಾಪಕಾರ್ಯ. ಸಂಪ್ರದಾಯಿಗಳ ಈ ಅಭಿಪ್ರಾಯವನ್ನು ವಿರೋಧಿಸುವವರು ಆತ್ಮವೆಂಬ ದೈವೀ ಪ್ರಭೆಯು ತಮ್ಮ ದೇಹದೊಳಗೆ ಬಂಧಿತವಾಗಿದೆ ಎಂಬ ನಂಬಿಕೆಯ ಅಯಸ್ಕಾಂತದ ಸೆಳೆತದ ಮೂಲಕ ಮೂಲರೂಪದ ಪ್ರೇಮವು ಮತ್ತೆ ತಮ್ಮನ್ನು ದೇವರೆಡೆಗೆ ಆಕರ್ಷಿಸಲಿದೆ ಎಂಬ ಆಶಾವಾದಿಗಳಾಗಿದ್ದರು. ದೇವರ ಸೃಷ್ಟಿಯ ಸರ್ವಸ್ವವನ್ನೂ ಪ್ರೀತಿಸುವುದು, ಸರ್ವ ಜನಾಂಗದೊಂದಿಗಿನ ಒಡನಾಟ, ಸರ್ವ ಮಾನವ ಜನಾಂಗದೊಂದಿಗೆ ಪ್ರೇಮವು ಸೂಫಿ ಅಧ್ಯಾತ್ಮದ ಮೂಲ ಪ್ರೇರಣೆಯಾಯಿತು.

ಪ್ರೇಮದ ಶಕ್ತಿಯು ಬೆಳೆಯುತ್ತಿರುವುದರೊಂದಿಗೆ ಎಲ್ಲ ವಿಚಾರಗಳಲ್ಲೂ ಅಚ್ಚುಕಟ್ಟುತನ ಹುಟ್ಟಿಕೊಂಡಿತು. ಸಂತ ಮನ್ಸೂರ್ ಅಲ್ ಹಲ್ಲಾಜರ ‘ಮೂಲಸತ್ವದ ಅಪೇಕ್ಷೆಗಳು’ ಎಂಬ ಸೈದ್ಧಾಂತಿಕ ವಿಚಾರಗಳಲ್ಲಿ ದೇವರು ಆಗಾಗ ಹೆಚ್ಚು ಕಮ್ಮಿ ತನ್ನ ಅಯಸ್ಕಾಂತೀಯ ಆಕರ್ಷಣೆಯ ಮೂಲಕ ಉದ್ಭವಿಸುವ ದೈವಶಕ್ತಿಯಿಂದ ಮೂಲಕ್ಕೆ ಎಲ್ಲವನ್ನೂ ಸೆಳೆದುಕೊಳ್ಳುತ್ತಾನೆ ಎಂಬ ವ್ಯಾಖ್ಯಾನ ಶುರುವಾಯಿತು. ಆದರೆ ಹಳೆಯ ಕಾಲದ ಸೂಫಿಗಳ ಅನುಭವದಂತೆ ಪ್ರೇಮವು ಒಂದು ಶಕ್ತಿಯುತವಾದ ವೈಯಕ್ತಿಕ ಮತ್ತು ಅಸ್ತಿತ್ವಕ್ಕೆ ಸಂಬಂಧಿಸಿದ ಬದ್ಧತೆಯಾಗಿದೆ.

ಸಂತ ಹಲ್ಲಾಜ ಯಾವ ಮುಲಾಜೂ ಇಲ್ಲದೆ ನೇರವಾಗಿ ದೃಢ ವಿಶ್ವಾಸ (ಈಮಾನ್)ಕ್ಕಿಂತ ಎತ್ತರದ ಸ್ಥಾನವನ್ನು ಪ್ರೇಮಕ್ಕೆ ನೀಡಿದ್ದರು. ‘ಅದು ಆದಿಸ್ವರೂಪದ ದೈವೀಶಕ್ತಿಯಾಗಿದ್ದು, ಪ್ರೇಮವಿಲ್ಲವಾಗಿರುತ್ತಿದ್ದರೆ ನೀವು ಪವಿತ್ರ ಗ್ರಂಥದ ಸಂದೇಶವನ್ನಾಗಲಿ, ನಂಬಿಕೆ, ವಿಶ್ವಾಸವನ್ನಾಗಲಿ ಇಟ್ಟುಕೊಳ್ಳುವುದನ್ನು ತಿಳಿದುಕೊಳ್ಳುತ್ತಿರಲಿಲ್ಲ’ ಎಂದು ಸಂತ ಹಲ್ಲಾಜ ಹೇಳುತ್ತಿದ್ದರು. ಕುರಾನಿನ ಸಂದೇಶ(5:59)ದಲ್ಲಿ ಹೇಳುವಂತೆ ‘ಅವರೆಲ್ಲರನ್ನೂ ಅವನು ಪ್ರೀತಿಸುತ್ತಾನೆ, ಅವರೂ ಕೂಡ ಅವನನ್ನು ಪ್ರೀತಿಸುತ್ತಾರೆ’, ಅಂದರೆ ಇದರರ್ಥ ಮನುಷ್ಯರು ಅವನನ್ನು ಪ್ರೀತಿಸುವ ಮೊದಲೇ ಅವನು ಮನುಷ್ಯರನ್ನು ಪ್ರೀತಿಸಿದ್ದಾನೆ ಎಂದಾಯಿತು.

ದೇವರಿಂದಲೇ ಪ್ರೀತಿಯ ಪ್ರಾರಂಭವಾಗುವುದರಿಂದ ಪ್ರೀತಿಯು ದೈವೀ ಅನುಗ್ರಹವೆಂದು ತಿಳಿಯಬೇಕಾಗುತ್ತದೆ. ಇದರಿಂದಾಗಿ ಪ್ರೀತಿಯ ಪಾಠವನ್ನು ಕಲಿಯುವ ಅಗತ್ಯಬಾರದು. ಅದು ಮನುಷ್ಯನ ಸಹಜ ಸ್ವಭಾವದಲ್ಲೇ ಅಡಕವಾಗಿರುತ್ತದೆ. "ವಿಶ್ವವು ಪ್ರೇಮವನ್ನು ಇಡಿಯಾಗಿ ತನ್ನೆಡೆಗೆ ಆಕರ್ಷಿಸಿಕೊಂಡಿರುವುದು ಕಷ್ಟಸಾಧ್ಯ. ಅದನ್ನು ತಿರಸ್ಕರಿಸುವುದು ಸಾಧ್ಯವೆಂದು ತಿಳಿದರೆ ಅದುಕೂಡ ಸಾಧ್ಯವಾಗದು ಯಾಕೆಂದರೆ ಅದೊಂದು ದೇವರ ಕೊಡುಗೆಯೇ ಹೊರತು ಸಂಪಾದನೆಯಲ್ಲ" ಎಂದು ಅಲೀ ಉಸ್ಮಾನ್ ಅಲ್ ಹುಜ್ವೇರಿಯವರು ತನ್ನ ವಿಶ್ವವಿಖ್ಯಾತ ಗ್ರಂಥ ‘ಕಷ್ಪ್ ಅಲ್ ಮಹಜೂಬ್’ನಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry