4
ಬಜೆಟ್ 2018

ಎಲ್ಲರಿಗೂ ಒಂಚೂರು ಎನ್ನುವ ಬಜೆಟ್

Published:
Updated:
ಎಲ್ಲರಿಗೂ ಒಂಚೂರು ಎನ್ನುವ ಬಜೆಟ್

ವ್ಯಾಪಕತ್ವ ಹೊಂದಿರುವ, ಮುನ್ನೋಟದಿಂದ ಕೂಡಿರುವ 2018–19ನೇ ಸಾಲಿನ ಬಜೆಟ್ಟನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಆರೋಗ್ಯ ಸೇವೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮತ್ತು ಗ್ರಾಮೀಣ ಮೂಲಸೌಕರ್ಯ ಕ್ಷೇತ್ರಗಳ ಅಗತ್ಯಗಳನ್ನು ಈಡೇರಿಸುವ ಮೂಲಕ ಇದು ದೇಶದ ಅರ್ಥ ವ್ಯವಸ್ಥೆಯ ಸುಸ್ಥಿರ, ದೂರಗಾಮಿ ಮತ್ತು ಸಮಾನ ನೆಲೆಗಟ್ಟಿನ ಬೆಳವಣಿಗೆಗೆ ನೆರವಾಗಬಲ್ಲದು.

ಆರೋಗ್ಯ ಸೇವೆಗಳಿಗೆ ಶಕ್ತಿ: 10 ಕೋಟಿ ಬಡ ಕುಟುಂಬಗಳಿಗೆ ಅನ್ವಯ ಆಗುವ, ಪ್ರತಿ ಕುಟುಂಬಕ್ಕೆ ತಲಾ ₹ 5 ಲಕ್ಷ ಮೊತ್ತದ ಆರೋಗ್ಯ ವಿಮೆ ನೀಡುವ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ಯನ್ನು (ಎನ್‌ಎಚ್‌ಪಿಎಸ್‌) ಈ ಬಾರಿಯ ಬಜೆಟ್ಟಿನಲ್ಲಿ ಘೋಷಿಸಿರುವುದು ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆ.

ಈ ಯೋಜನೆಯು ಒಟ್ಟು 50 ಕೋಟಿಗಿಂತ ಹೆಚ್ಚಿನ ಭಾರತೀಯರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. 50 ಕೋಟಿ ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇಕಡ 40ರಷ್ಟಕ್ಕಿಂತ ಹೆಚ್ಚು. ಹಾಗಾಗಿ, ಈ ಯೋಜನೆಯು ದೇಶದ ಅರ್ಥ ವ್ಯವಸ್ಥೆಯಲ್ಲಿ ಪರಿವರ್ತನೆ ತರುವಂಥದ್ದು. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದರೆ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ.

ಈಗಾಗಲೇ ಇರುವ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ 24 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ಆರಂಭಿಸುವ ತೀರ್ಮಾನದ ಬಗ್ಗೆಯೂ ಇಲ್ಲಿ ಉಲ್ಲೇಖಿಸಬೇಕು. ಈ ಕ್ರಮದಿಂದಾಗಿ ಪ್ರತಿ ರಾಜ್ಯದಲ್ಲೂ ಕನಿಷ್ಠ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರುವಂತಾಗುತ್ತದೆ. ಇದು ದೇಶದಲ್ಲಿ ವೈದ್ಯಕೀಯ ವೃತ್ತಿ ಮತ್ತು ವೈದ್ಯಕೀಯ ಸಂಶೋಧನೆಗೆ ಪೂರಕ.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮನ್ನಣೆ: ಈ ಬಾರಿಯ ಬಜೆಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮನ್ನಣೆ ಸಿಕ್ಕಿರುವುದು ನನ್ನಲ್ಲಿ ಸಂತಸ ಮೂಡಿಸಿದೆ. ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಿಸಬೇಕು ಎಂಬುದು ನಮ್ಮ ಉದ್ದೇಶವಾದರೆ, ವೈಜ್ಞಾನಿಕ ಸಂಶೋಧನೆಯ ಮೇಲೆ ಸರ್ಕಾರ ಮಾಡುವ ವೆಚ್ಚವನ್ನು ನಾವು ಆದಷ್ಟು ಬೇಗ ಹೆಚ್ಚಿಸಬೇಕು.

ಮುಂದಿನ ತಲೆಮಾರಿನ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆ ದರ ಹೆಚ್ಚಿಸುವಲ್ಲಿ ಹೊಂದಿರುವ ಪಾತ್ರವನ್ನು ಬಜೆಟ್‌ ಗುರುತಿಸಿದೆ. ಇದರ ಪರಿಣಾಮವಾಗಿ ರೊಬೊಟಿಕ್ಸ್‌, ಕೃತಕ ಬುದ್ಧಿಮತ್ತೆ, ಡಿಜಿಟಲ್‌ ತಯಾರಿಕೆ, ದತ್ತಾಂಶ ವಿಶ್ಲೇಷಣೆ, ಇಂಟರ್ನೆಟ್‌ ಆಫ್‌ ಥಿಂಗ್ಸ್‌ (ಐ.ಒ.ಟಿ) ಬಗ್ಗೆ ಸಂಶೋಧನೆ ಕೈಗೊಳ್ಳಲು ಕಾರ್ಯಕ್ರಮವೊಂದನ್ನು ಆರಂಭಿಸುವ ಘೋಷಣೆ ಬಜೆಟ್‌ನಲ್ಲಿ ಇದೆ.

ಸೈಬರ್ ಮತ್ತು ಭೌತಿಕ ವ್ಯವಸ್ಥೆಗಳ ಸಮನ್ವಯಕ್ಕಾಗಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ನಿಗದಿ ಮಾಡುವ ಮೊತ್ತವನ್ನು ದ್ವಿಗುಣಗೊಳಿಸುವ ಪ್ರಸ್ತಾವ ಬಜೆಟ್‌ನಲ್ಲಿ ಇದೆ. ಇದು ಸರಿಯಾದ ಕ್ರಮ. ಹೊಸದನ್ನು ರೂಪಿಸುವ ಮನೋಭಾವ ಮತ್ತು ಅರ್ಥ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಶಕ್ತಿ ಇದಕ್ಕೆ ಇದೆ.

ನೀತಿ ಆಯೋಗವು ರಾಷ್ಟ್ರಮಟ್ಟದ ಕಾರ್ಯಕ್ರಮವೊಂದನ್ನು ರೂಪಿಸಲಿದ್ದು, ಅದು ದೇಶದ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿ

ಕೊಳ್ಳಲು ಯತ್ನ ನಡೆಸಲಿದೆ ಎಂದೂ ಬಜೆಟ್‌ನಲ್ಲಿ ಹೇಳಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿನ ಮೂಲಸೌಕರ್ಯ ಮತ್ತು ವ್ಯವಸ್ಥೆಗಳಿಗೆ ಹೊಸ ಚೈತನ್ಯ ಕೊಡುವ ‘ರೈಸ್‌’ ಯೋಜನೆಯನ್ನು ಆರಂಭಿಸುವ ಪ್ರಸ್ತಾವನೆ ಬಹಳ ಮಹತ್ವದ್ದು. ಇದರ ಅಡಿ 2022ರೊಳಗೆ ₹ 1 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಯ ಪರಿಣಾಮವಾಗಿ ವೈದ್ಯಕೀಯ ಸಂಸ್ಥೆಗಳೂ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳಿಗೆ ಹೆಚ್ಚಿನ ಹೂಡಿಕೆ ಆಗಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇದು ಉತ್ತಮ ಬಜೆಟ್. ಇದರಲ್ಲಿ ಎಲ್ಲರಿಗೂ ಒಂದಿಷ್ಟು ಕೊಡುಗೆಗಳು ಇವೆ. ಬಜೆಟ್ ಸಿದ್ಧಪಡಿಸುವ ಕೆಲಸದಲ್ಲಿ ಹಣಕಾಸು ಸಚಿವಾಲಯವು ನೀತಿ ಆಯೋಗವನ್ನೂ ಸೇರಿಸಿಕೊಂಡಿದ್ದು ಇದು ಎಲ್ಲರನ್ನೂ ಒಳಗೊಳ್ಳುವ ಬಜೆಟ್ ಎಂಬುದನ್ನು ತೋರಿಸುತ್ತದೆ. 2019ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈ ಬಜೆಟ್ ಮೂಲಕ ಕೇಂದ್ರ ಸರ್ಕಾರವು ‘ಸುಲಲಿತವಾಗಿ ಉದ್ದಿಮೆ ನಡೆಸುವ’ ತನ್ನ ಅಜೆಂಡಾವನ್ನು ‘ಜೀವನವನ್ನು ಸುಲಲಿತಗೊಳಿಸುವ’ ಪ್ರಕ್ರಿಯೆಯತ್ತ ವಿಸ್ತರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry