ಕುಷ್ಠ ರೋಗ: ರಾಜ್ಯದಲ್ಲಿ ಜಿಲ್ಲೆಗೆ 4ನೇ ಸ್ಥಾನ

7

ಕುಷ್ಠ ರೋಗ: ರಾಜ್ಯದಲ್ಲಿ ಜಿಲ್ಲೆಗೆ 4ನೇ ಸ್ಥಾನ

Published:
Updated:

ಕಾರವಾರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಷ್ಠ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿಯೇ ಉತ್ತರಕನ್ನಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಬಳ್ಳಾರಿ, ಚಾಮರಾಜನಗರ, ರಾಯಚೂರು ರಾಜ್ಯದಲ್ಲಿ ಅತಿ ಹೆಚ್ಚು ಕುಷ್ಠ ರೋಗಿಗಳಿರುವ ಮೊದಲ ಮೂರು ಜಿಲ್ಲೆಗಳು. ಉತ್ತರಕನ್ನಡ ಜಿಲ್ಲೆಯಿಂದ ಈ ರೋಗದ ಸಂಪೂರ್ಣ ನಿರ್ಮೂಲನೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯೋನ್ಮುಖವಾಗಿದೆ. ಈ ಸಂಬಂಧ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ 2014ರಿಂದ 2017ರ ಡಿಸೆಂಬರ್‌ ಅಂತ್ಯದವರೆಗೆ 152 ಪ್ರಕರಣಗಳು ದೃಢಪಟ್ಟಿವೆ. ಈ ಎಲ್ಲ ರೋಗಿಗಳಿಗೂ ಆರೋಗ್ಯ ಇಲಾಖೆ ಚಿಕಿತ್ಸೆ ಮುಂದುವರಿಸಿದೆ. ಅದರಲ್ಲಿ 113 ಮಂದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಗೂ 39 ಮಂದಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಕಂಡು ಬಂದಿವೆ.

ಪರಿಣಾಮವೇನು?: ಕುಷ್ಠರೋಗಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅಥವಾ ತಡವಾಗಿ ಪ್ರಾರಂಭಿಸಿದರೆ, ಚಿಕಿತ್ಸೆ ಸಂಪೂರ್ಣಗೊಳ್ಳದಿದ್ದರೆ ರೋಗಿಗೆ ಅಪಾಯ ಖಚಿತ. ಅಂತೆಯೇ ಶರೀರದಲ್ಲಿ ಸ್ಪರ್ಶ ಜ್ಞಾನವಿಲ್ಲದ ಜಾಗಗಳನ್ನು ಸೂಕ್ತವಾಗಿ ಆರೈಕೆ ಮಾಡದಿದ್ದರೆ ಶಾಶ್ವತ ಅಂಗವೈಕಲ್ಯ ಅಥವಾ ನ್ಯೂನತೆಗಳು ಉಂಟಾಗಬಹುದು.

ಮೂಢನಂಬಿಕೆ ಬೇಡ: ‘ಕುಷ್ಠ ರೋಗದ ಬಗ್ಗೆ ಹಲವರಲ್ಲಿ ಮೂಢನಂಬಿಕೆ ಇದೆ. ಈ ರೋಗಕ್ಕೆ ತುತ್ತಾದವರು ಶಾಪಗ್ರಸ್ಥರು, ಹಿಂದೆ ಅನ್ಯಾಯ ಮಾಡಿದವರು ಎಂದು ದೂಷಿಸುತ್ತಾರೆ. ಆದರೆ, ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ಈ ಬಗ್ಗೆ ಕೆಲವರಲ್ಲಿ ಅರಿವು ಕಡಿಮೆ ಇರುವುದು ಕೂಡ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ’ ಎನ್ನುತ್ತಾರೆ ಜಿಲ್ಲಾ ರೋಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಶಂಕರರಾವ್.

ಜಾಗೃತಿಗಾಗಿ ಆಂದೋಲನ: ಕುಷ್ಠ ರೋಗದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಜ.30ರಿಂದ ಇದೇ 13ರವರೆಗೆ ‘ಸ್ಪರ್ಶ ಕುಷ್ಠರೋಗ ಅರಿವು’ ಆಂದೋಲನವನ್ನು ಆರಂಭಿಸಿದೆ.

ರೋಗದ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ– ಸಮಾರಂಭಗಳು, ಶಾಲಾ– ಕಾಲೇಜುಗಳಲ್ಲಿ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.‘ಕುಷ್ಠ ರೋಗ ಮುಕ್ತ ಭಾರತ ನನ್ನ ಸ್ವಪ್ನ’ ಘೋಷ ವಾಕ್ಯದೊಂದಿಗೆ ಇಲಾಖೆ ಜನರಿಗೆ ತಿಳಿವಳಿಕೆ ಮೂಡಿಸಲು ಮುಂದಾಗಿದೆ.

ಕುಷ್ಠ ರೋಗದ ಲಕ್ಷಣಗಳೇನು?

ಕುಷ್ಠ ರೋಗವನ್ನು ಹಲವು ಲಕ್ಷಣಗಳ ಮೂಲಕ ಪತ್ತೆ ಹಚ್ಚಬಹುದಾಗಿದೆ. ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ ಕಾಣಿಸುವುದು, ಕೈಕಾಲು ಜೋಮು ಹಿಡಿದು ಸ್ಪರ್ಶ ಜ್ಞಾನ ಇಲ್ಲದಂತಾಗುವುದು, ಮುಖ ಅಥವಾ ಕೈ ಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಕಂಡುಬರುವುದು ರೋಗದ ಪ್ರಾರಂಭಿಕ ಲಕ್ಷಣಗಳು.

ಹೊರ ರಾಜ್ಯದವರಿಂದ ರೋಗಾಣು ಪ್ರಸರಣ!

‘ವಿಶ್ವದಲ್ಲಿನ ಕುಷ್ಠ ರೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇ 60ರಷ್ಟು ಮಂದಿ ಭಾರತದಲ್ಲಿದ್ದಾರೆ. ಬಿಹಾರ, ಛತ್ತೀಸಗಡ ಮತ್ತಿತರ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅಲ್ಲಿಯವರು ಮೀನುಗಾರಿಕೆ, ಗಾರೆ ಕೆಲಸ ಸೇರಿದಂತೆ ಇನ್ನಿತರ ಉದ್ಯೋಗಕ್ಕಾಗಿ ಜಿಲ್ಲೆಗೆ ಬಂದು ನೆಲೆಸಿದ್ದಾರೆ. ಅಂಥವರಲ್ಲಿಯೇ ಹೆಚ್ಚಿನ ರೋಗ ಲಕ್ಷಣಗಳು ಕಂಡು ಬಂದಿವೆ’ ಎನ್ನುತ್ತಾರೆ ಡಾ.ಶಂಕರ್‌ರಾವ್

* * 

ಕುಷ್ಠ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಬಳಿಕ ಎಂ.ಡಿ.ಟಿಯನ್ನು (ಬಹು ಔಷಧಿ ಚಿಕಿತ್ಸೆ) ಕ್ರಮಬದ್ಧವಾಗಿ ಪಡೆಯಬೇಕು

ಡಾ.ಶಂಕರರಾವ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry