ಶುಕ್ರವಾರ, ಡಿಸೆಂಬರ್ 13, 2019
27 °C

ಶಿಥಿಲಾವಸ್ಥೆಯಲ್ಲಿ ಪೊಲೀಸ್‌ ವಸತಿಗೃಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಥಿಲಾವಸ್ಥೆಯಲ್ಲಿ ಪೊಲೀಸ್‌ ವಸತಿಗೃಹ

ಸುಂಟಿಕೊಪ್ಪ: ಇಲ್ಲಿನ ಪೊಲೀಸ್‌ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಹಾಳು ಕೊಂಪೆಯಂತಾಗಿದ್ದು, ಪೊಲೀಸರು ಹಾಗೂ ಅವರ ಕುಟುಂಬಸ್ಥರು ಆತಂಕದಿಂದ ದಿನದೂಡುವ ಸ್ಥಿತಿಯಿದೆ.

ಜನ ಸಾಮಾನ್ಯರನ್ನು ನೆಮ್ಮದಿಯಿಂದ ನಿದ್ದೆ ಮಾಡುವಂತೆ ಮಾಡುವ ಪೊಲೀಸರಿಗೇ ನೆಮ್ಮದಿ ಇಲ್ಲವಾಗಿದೆ. ಅವರಿಗೆ ವಿಶ್ರಾಂತಿಗೆ ಸುಸಜ್ಜಿತ ವಸತಿಗೃಹವಿಲ್ಲದೇ ಕುಶಾಲನಗರ, ಮಡಿಕೇರಿಯಲ್ಲಿ ಬಾಡಿಗೆಗೆ ಮನೆ ಪಡೆದು ಓಡಾಡುತ್ತಿದ್ದಾರೆ.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಗ್ರಾಮ ಪಂಚಾಯಿತಿ ಮತ್ತು 20 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಶಾಲಾ–ಕಾಲೇಜು, ಬ್ಯಾಂಕ್‌, ಅರಣ್ಯ ಪ್ರದೇಶ ಹಾಗೂ ಜನರ ಸುರಕ್ಷತೆಯ ಹೊಣೆ ಇಲ್ಲಿಯ ಪೊಲೀಸ್ ಸಿಬ್ಬಂದಿಗೆ ಇದೆ.

ಮೂಲ ಸೌಕರ್ಯ ಇಲ್ಲ: 50 ವರ್ಷಗಳ ಹಿಂದೆ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, ಈಗ ಅವು ಶಿಥಿಲಾವಸ್ಥೆಗೆ ತಲುಪಿವೆ. ಚಾವಣಿ ಕುಸಿಯುವ ಹಂತದಲ್ಲಿವೆ. ಕೊಡಗಿನಲ್ಲಿ ಮಳೆ ಅಧಿಕ, ಸಣ್ಣ ಮಳೆಗೂ ಮಳೆಯ ನೀರು ಒಳಗೆ ಬರುವುದು ಸಾಮಾನ್ಯವಾಗಿದೆ.

ಆದ್ದರಿಂದ, ಪ್ಲಾಸ್ಟಿಕ್‌ ಹೊದಿಕೆಯೇ ಆಶ್ರಯವಾಗಿದೆ. ಗೋಡೆಗಳು ಬಿರುಕುಬಿಟ್ಟು ಅಪಾಯ ಆಹ್ವಾನಿಸುತ್ತಿವೆ. ಪಿಎಸ್‌ಐ ಒಳಗೊಂಡಂತೆ ಐದು ಕುಟುಂಬಗಳು ಅದೇ ವಸತಿಗೃಹದಲ್ಲಿ ಬದುಕು ನಡೆಸುತ್ತಿದ್ದರೆ, 19 ಮಂದಿ ಇವುಗಳ ಸಹವಾಸವೇ ಸಾಕೆಂದು ಬಾಡಿಗೆ ಮನೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಸಿಬ್ಬಂದಿ.

ಉಲುಗುಲಿ ಗ್ರಾಮದ 1.65 ಎಕರೆ ಜಾಗದ ಆರ್‌ಟಿಸಿ ಅನ್ನು ಒದಗಿಸಿಕೊಡುವಂತೆ ಸೋಮವಾರ ಪೇಟೆ ತಾಲ್ಲೂಕು ತಹಶೀಲ್ದಾರ್‌ಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ ಎನ್ನುತ್ತಾರೆ ಪೊಲೀಸರು.

‘ಇಲ್ಲಿರುವ ವಸತಿ ಗೃಹಗಳು ಬಹಳಷ್ಟು ಹಳೆಯದಾಗಿವೆ: ‘ನವೀಕರಿಸಲು ಸಾಧ್ಯವಿಲ್ಲ. ಆರ್‌ಟಿಸಿ ಬದಲಾವಣೆಗೆ ಕೋರಿ ಉಪ ವಿಭಾಗದಿಕಾರಿ, ಜಿಲ್ಲಾಧಿಕಾರಿ, ತಹಶೀಲ್ದಾರ್‌ ವರದಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಆರ್‌ಟಿಸಿ ಬದಲಾವಣೆಯಾದರೆ, ₹1 ಕೋಟಿ ವೆಚ್ಚದಲ್ಲಿ ಪೊಲೀಸ್‌ ವಸತಿಗೃಹಕ್ಕೆ ಮನವಿ ಮಾಡುತ್ತೇವೆ’ ಎಂದು ಪಿಎಸ್‌ಐ ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸುನಿಲ್ ಎಂ.ಎಸ್

* * 

ಆರ್‌ಟಿಸಿ ವರ್ಗಾಯಿಸಲು ಎಲ್ಲ ದಾಖಲಾತಿ ಸಲ್ಲಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಪೊಲೀಸರ ಜೀವನಕ್ಕೂ ಉತ್ತಮ ವಸತಿ ಗೃಹಗಳು ಬೇಕಲ್ಲವೇ?  

ನಾಗೇಶ್ ಪೂಜಾರಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

ಪ್ರತಿಕ್ರಿಯಿಸಿ (+)