ಭಾನುವಾರ, ಡಿಸೆಂಬರ್ 8, 2019
24 °C

ಬಿಜೆಪಿ ಪಕ್ಕಾ, ಕಾಂಗ್ರೆಸ್‌ನಲ್ಲಿ ಬೇಗುದಿ

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಬಿಜೆಪಿ ಪಕ್ಕಾ, ಕಾಂಗ್ರೆಸ್‌ನಲ್ಲಿ ಬೇಗುದಿ

ಬಾಗಲಕೋಟೆ: ಮಾಗಿಯ ಶೀತ ಕರಗಿ ನಿಧಾನವಾಗಿ ಬಿಸಿಲು ಟಿಸಿಲೊಡೆಯುತ್ತಿದೆ. ಇದರ ನಡುವೆ ಮುಂಬರುವ ವಿಧಾನಸಭಾ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದ ರಾಜಕಾರಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ.

ಮೂರು ದಶಕಗಳ ನಂತರ ಕಾಂಗ್ರೆಸ್‌ ವಶವಾಗಿರುವ ಬಿಜೆಪಿಯ ಶಕ್ತಿ ಕೇಂದ್ರವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿಯ ಹುಡುಕಾಟದಲ್ಲಿದೆ. ‘ಸಂಘ ಸ್ಥಾನ’ದ ಮರು ವಶಕ್ಕೆ ಮುಂದಾಗಿರುವ ಬಿಜೆಪಿ ಕೂಡ ಹಳೆಯ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಈ ನಡುವೆ ಹೊಸ ಮುಖದೊಂದಿಗೆ ಬಾಜಿಗಿಳಿಯಲು ಜೆಡಿಎಸ್ ತಯಾರಿ ನಡೆಸಿದೆ.

ದಲಿತರು, ಮುಸ್ಲಿಮರನ್ನು ಮತಬ್ಯಾಂಕ್‌ನ ಮಿತಿಯಿಂದ ರಾಜಕೀಯ ಶಕ್ತಿಯಾಗಿಸಲು ಎಂಐಎಂ–ಆರ್‌ಪಿಐ, ಪ್ರಜಾ ಪರಿವರ್ತನಾ ಪಾರ್ಟಿ ಸಿದ್ಧತೆ ನಡೆಸಿವೆ. ಕಳಸಾ–ಬಂಡೂರಿ ಹೋರಾಟದ ಬಿಸಿ ಬಳಕೆಗೆ ಜನಸಾಮಾನ್ಯರ ಪಕ್ಷ ಸಜ್ಜಾಗಿದೆ.

ಕಾಂಗ್ರೆಸ್ ಬೇಗುದಿ: ಕಾಂಗ್ರೆಸ್ ಪಕ್ಷದಿಂದ ಶಾಸಕ ಎಚ್.ವೈ.ಮೇಟಿ, ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮುಖಂಡ ಶ್ರೀನಿವಾಸ ಬಳ್ಳಾರಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೆ ಟಿಕೆಟ್ ಎಂಬುದು ಇಲ್ಲಿಯವರೆಗೂ ಖಚಿತವಾಗಿಲ್ಲ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪ್ರಸಂಗವೇ ಮೇಟಿ ಅವರಿಗೆ ಟಿಕೆಟ್ ತಪ್ಪಿಸಲಿದೆ. ವಿರೋಧಿಗಳಿಂದ ಪಕ್ಷದ ಇಮೇಜ್‌ಗೆ ಧಕ್ಕೆ ತಡೆಯಲು ಟಿಕೆಟ್ ನೀಡಿಕೆ ಅನುಮಾನ ಎಂಬ ವದಂತಿ ಪಕ್ಷದೊಳಗೆ ಹರಿದಾಡುತ್ತಿದೆ. ‘ಸಿಎಂ ಒಲವು ಗಳಿಸಿರುವ ಮೇಟಿ ಅವರಿಗೆ ಟಿಕೆಟ್ ಕೈ ತಪ್ಪುವುದು ಕಷ್ಟ. ಕುರುಬ, ದಲಿತ, ಮುಸ್ಲಿಂ ಮತ ಸಮೀಕರಣಕ್ಕೆ ಮೇಟಿಯೇ ಸೂಕ್ತ’ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಮೈಗೂಡಿಸಿಕೊಂಡ ಸಭ್ಯತೆ, ಪರಿವಾರದ ಹಳೆಯ ಬೆಂಬಲಿಗರು, ರಡ್ಡಿ ಸಮುದಾಯದ ಶ್ರೀ ರಕ್ಷೆ, ಕಳೆದ ಬಾರಿ ಮೇಟಿಗಾಗಿ ಮಾಡಿದ್ದ ತ್ಯಾಗ ಪೂಜಾರಗೆ ಪೂರಕವಾಗಲಿದೆ ಎಂಬುದು ಬೆಂಬಲಿಗರ ನಿರೀಕ್ಷೆ.

ಬಸವೇಶ್ವರ ಬ್ಯಾಂಕ್ ಶತ ಮಾನೋತ್ಸವದ ಮೂಲಕ ತಮ್ಮ ಸಂಘಟನಾ ಶಕ್ತಿ ಪ್ರಕಟಪಡಿಸಿದ ಪ್ರಕಾಶ ತಪಶೆಟ್ಟಿ, ಪಕ್ಷದ ಹಿತಕ್ಕಾಗಿ ತಮ್ಮನ್ನೂ ಪರಿಗಣಿಸುವಂತೆ ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಸಚಿವೆ ಉಮಾಶ್ರೀ ಅವರ ಕೃಪಾಕಟಾಕ್ಷ ಶ್ರೀನಿವಾಸ ಬಳ್ಳಾರಿ ಅವರಿಗೆ ಬಲ.

ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರೇ ಬಿಜೆಪಿ ಅಭ್ಯರ್ಥಿ ಎಂಬುದನ್ನು ಪರಿವರ್ತನಾ ಯಾತ್ರೆಗೆ ಬಂದಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದಾರೆ.

ಹಾಗಾಗಿ ಅಲ್ಲಿ ಗೊಂದಲಕ್ಕೆ ಆಸ್ಪದವಾಗಿಲ್ಲ. 2013ರ ಚುನಾವಣೆಯಲ್ಲಿ 2900 ಮತಗಳ ಅಂತರದಿಂದ ಸೋತಿರುವ ಚರಂತಿಮಠ, ಕಳೆದ ಬಾರಿ ಕಳೆದುಕೊಂಡ ಮತಗಳನ್ನು ಈ ಬಾರಿ ಕೂಡಿಸುವ ಲೆಕ್ಕದಲ್ಲಿ ತೊಡಗಿದ್ದಾರೆ. ಜೆಡಿಎಸ್‌ನಿಂದ ಮೋಹನ ಜಿಗಳೂರು ಹೆಸರು ಮುಂಚೂಣಿಯಲ್ಲಿದೆ. ಅದೂ ಕೊನೆಯ ಕ್ಷಣದ ಬದಲಾವಣೆಗಳ ಷರತ್ತು ಅನ್ವಯದೊಂದಿಗೆ!.

ಓವೈಸಿ ಪಕ್ಷದ ಮಿಂಚು: ಪರಶುರಾಮ ನೀಲನಾಯಕ ಎಂಐಎಂ–ಆರ್‌ಪಿಐ ಮೈತ್ರಿ ಕೂಟದ ಅಭ್ಯರ್ಥಿ. ಎರಡು ವರ್ಷಗಳಿಂದಲೂ ಗಂಭೀರ ಸಿದ್ಧತೆಯಲ್ಲಿ ತೊಡಗಿರುವ ನೀಲನಾಯಕ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಸೆಳೆಯುವಿಕೆಯ ಲೆಕ್ಕದೊಂದಿಗೆ ಹೆಜ್ಜೆ ಇಡುತ್ತಿದ್ದಾರೆ. ಫೆಬ್ರುವರಿ 9ರಂದು ವಿಜಯಪುರಕ್ಕೆ ಪ್ರಕಾಶ್ ಅಂಬೇಡ್ಕರ್‌ ಬರಲಿದ್ದು, ಅಲ್ಲಿಂದ ಬಾಗಲಕೋಟೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ.

‘ಚಳವಳಿ ಮೂಲಕ ಪಕ್ಷವಾಗಿ ರೂಪುಗೊಂಡ ಪ್ರಜಾಪರಿವರ್ತನಾ ಪಾರ್ಟಿ ತಳಹಂತದಿಂದಲೇ ನೆಲೆ ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಹೆಜ್ಜೆ ಇಟ್ಟಿದೆ. ಇದೇ 4ರಂದು ಪಕ್ಷದ ಸಮಾವೇಶ ಹಮ್ಮಿಕೊಂಡಿದ್ದೇವೆ. ನಂತರ ಬಾಗಲಕೋಟೆಗೆ ಪಕ್ಷದ ಅಭ್ಯರ್ಥಿ ಅಂತಿಮಗೊಳಿಸಲಿದ್ದೇವೆ’ ಎಂದು ಪಕ್ಷದ ಮುಖಂಡ ಪರಶುರಾಮ ಮಹಾರಾಜನವರ ಹೇಳುತ್ತಾರೆ. ‘ಸಮಾನ ಮನಸ್ಕರೊಂದಿಗೆ ಮಹಾಮೈತ್ರಿಯ ಸನ್ನಾಹದಲ್ಲಿದ್ದೇವೆ, ಹಾಗಾಗಿ ಇನ್ನೂ ಬಾಗಲಕೋಟೆ

ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ’ ಎಂದು ಜನಸಾಮಾನ್ಯರ ಪಕ್ಷದ ವಕ್ತಾರ ನಾಗರಾಜ ಹೊಂಗಲ್ ತಿಳಿಸಿದರು.

11 ಪಕ್ಷಗಳಿಂದ ಹಕ್ಕುದಾರಿಕೆ...

ವೀಕ್ಷಕರಿಂದ ಆಕಾಂಕ್ಷಿಗಳ ಅಳಲು ಆಲಿಸುವ ಮೂಲಕ ಕಾಂಗ್ರೆಸ್‌ ಜಿಲ್ಲೆಯಲ್ಲಿ ಅಧಿಕೃತವಾಗಿ ಚುನಾವಣೆ ಸಿದ್ಧತೆ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಡೆಸುವ ಹಲವು ಸುತ್ತುಗಳ ಸಮೀಕ್ಷೆಯ ಫಲಿತಾಂಶ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿ ನಿರ್ಧರಿಸಲಿದೆ ಎನ್ನಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಕಮಲಪಾಳಯದಲ್ಲೀಗ ಕುದಿಮೌನ.

ವಿಜಯಪುರ–ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎರಡೂ ಕಡೆ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಜೊತೆಗೆ ಪ್ರಜಾಪರಿವರ್ತನಾ ಪಾರ್ಟಿ (ಪಿಪಿಪಿ), ಓವೈಸಿ ಹಾಗೂ ಪ್ರಕಾಶ್ ಅಂಬೇಡ್ಕರ್ ಅವರ ಎಂಐಎಂ–ಆರ್‌ಪಿಐ ಮೈತ್ರಿ ಕೂಟ, ಜನಸಾಮಾನ್ಯರ ಪಕ್ಷ, ವರ್ತೂರು ಪ್ರಕಾಶ್ ನೇತೃತ್ವದ ನಮ್ಮ ಕಾಂಗ್ರೆಸ್, ಪದ್ಮನಾಭ ಪ್ರಸನ್ನಕುಮಾರ ಅಧ್ಯಕ್ಷತೆಯ ಕೆಜೆಪಿ, ನಟ ಉಪೇಂದ್ರರ ಪ್ರಜಾಕೀಯ, ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್, ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ ಕೂಡ ರಂಗಸಿದ್ಧತೆ ಮಾಡಿಕೊಳ್ಳುತ್ತಿವೆ.

ತಿಂಗಳಾಂತ್ಯಕ್ಕೆ ಮತದಾರರ ಅಂತಿಮಪಟ್ಟಿ

ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಚಾಲನೆ ನೀಡುತ್ತಿ ದ್ದಂತೆಯೇ ಜಿಲ್ಲೆಯಲ್ಲಿ 47,446 ಮಂದಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ.

ಮತ ದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ಬದಲಾವಣೆ, ರದ್ಧತಿಗೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗ ಜನವರಿ 22ರವರೆಗೆ ಅವಕಾಶ ಕಲ್ಪಿಸಿತ್ತು. ಪರಿಷ್ಕರಣೆಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಫೆಬ್ರುವರಿ ಅಂತ್ಯದ ವೇಳೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಆಯೋಗ ಸಿದ್ಧತೆ ನಡೆಸಿದೆ.

ಸಾಮಾಜಿಕ ಜಾಲ ತಾಣದಲ್ಲೂ ಮಾಹಿತಿ: ಚುನಾವಣೆ ಆಯೋಗದ ಆದೇಶದಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯ ಕಚೇರಿಯಿಂದ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅಕೌಂಟ್ ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿದ ಸಲಹೆ, ಸೂಚನೆ ನೀಡಲು ಈ ಅಕೌಂಟ್ ಬಳಸಬಹುದಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಆಯೋಗ ಇದೇ ಮೊದಲ ಬಾರಿಗೆ ಕೈಗೊಂಡಿದೆ. ಟ್ವಿಟರ್ ಹಾಗೂ ಫೇಸ್‌ಬುಕ್‌ನ ಜಾಲ ಕಿಂಡಿಯಲ್ಲಿ deputy commissioner bagalkot ಎಂದು ಹುಡುಕಾಟ ನಡೆಸಿ ಜಿಲ್ಲಾ ಚುನಾವಣಾ ಆಯೋಗದ ಅಕೌಂಟ್‌ಗೆ ಪ್ರವೇಶ ಪಡೆಯಬಹುದಾಗಿದೆ.

ಪ್ರತಿಕ್ರಿಯಿಸಿ (+)