ಶುಕ್ರವಾರ, ಡಿಸೆಂಬರ್ 13, 2019
27 °C
ವಿಶ್ವ ಕ್ಯಾನ್ಸರ್‌ ದಿನ

ಸಮಚಿತ್ತದಿಂದ ಸ್ವೀಕರಿಸಿದರೆ ಕ್ಯಾನ್ಸರ್‌ ವಿರುದ್ಧ ಜಯ ಸುಲಭ, ಭಯ ಬೇಡ!

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

ಸಮಚಿತ್ತದಿಂದ ಸ್ವೀಕರಿಸಿದರೆ ಕ್ಯಾನ್ಸರ್‌ ವಿರುದ್ಧ ಜಯ ಸುಲಭ, ಭಯ ಬೇಡ!

ಕ್ಯಾನ್ಸರ್‌ ಎಂದರೆ ಹೌಹಾರುವವರೇ ಹೆಚ್ಚು. ಅದರಲ್ಲೂ ನಮಗೇ ಕ್ಯಾನ್ಸರ್‌ ಬಂದಿದೆ ಎಂದಾಗ ಹೃದಯದ ಬಡಿತ ಏರುಪೇರಾಗುವುದು ಸಹಜ. ಆದರೆ ಈ ಒಂದು ಹಂತವನ್ನು ಭಯಪಡದೆ ಸಮಚಿತ್ತದಿಂದ ಸ್ವೀಕರಿಸಿದರೆ ಕ್ಯಾನ್ಸರ್‌ ವಿರುದ್ಧ ಜಯ ಸುಲಭ.

ಹೌದು, ಇದು ನನ್ನ ಅನುಭವದ ಮಾತು ಕೂಡ. ನಾನು ಕ್ಯಾನ್ಸರ್‌ನ ಕಬಂಧಬಾಹುವಿನಿಂದ ಸುಲಭವಾಗಿ ಹೊರಬಂದಿದ್ದು ನನ್ನ ಆತ್ಮವಿಶ್ವಾಸದಿಂದ. ಕ್ಯಾನ್ಸರ್‌ ಬಂತೆಂದು ನಾನ್ಯಾವಾಗಲೂ ಕೊರಗಲೇ ಇಲ್ಲ. ಕ್ಯಾನ್ಸರ್‌ಗಡ್ಡೆ ನನ್ನ ದೇಹದಲ್ಲಿತ್ತೆ ವಿನಾ ಮನಸ್ಸಿನಲ್ಲಿರಲಿಲ್ಲ. ನನಗೆ ಕ್ಯಾನ್ಸರ್‌ ಇದೆ – ಎಂಬ ವರದಿ ಕೈಗೆ ಬಂದಾಗ ನಾನು ಮಾನಸಿಕವಾಗಿಯೂ ಒಂದಿನಿತೂ ಕುಗ್ಗಲಿಲ್ಲ; ಬದಲು ಅದರಿಂದ ಹೊರ ಬರುವುದರ ಕುರಿತು ಇರಬಹುದಾದ ದಾರಿಗಳನ್ನು ಹುಡುಕತೊಡಗಿದೆ.

ಎರಡೂ ಸ್ತನಗಳಲ್ಲೂ ಗಂಟುಗಳಿವೆ ಎಂದು ವೈದ್ಯರು ಹೇಳಿದಾಗಲೂ ಅದನ್ನು ಸಮಚಿತ್ತದಿಂದಲೇ ಸ್ವೀಕರಿಸಿದೆ. ಅಲೋಪಥಿ ಬಿಟ್ಟು ಬೇರೆ ಚಿಕಿತ್ಸಾಪದ್ಧತಿಗೆ ಒಗ್ಗಿಕೊಳ್ಳೋಣ ಎಂದರೆ ಪರಿಸ್ಥಿತಿ ಕೈಮೀರಿತ್ತು. ಬಲಸ್ತನದ ಗಂಟು ಮೂರನೇ ಹಂತ ದಾಟಿತ್ತು. ಯೋಚಿಸಲು ಕಾಲಾವಕಾಶ ಇರದ ಕಾರಣ ಕಿಮೋಥೆರಪಿ, ಸರ್ಜರಿ, ರೆಡಿಯೋಥೆರಪಿ ಚಿಕಿತ್ಸೆ ನನ್ನ ಆಯ್ಕೆಯಾಗಿತ್ತು.

’ಕ್ಯಾನ್ಸರ್‌’ ಎಂಬ ಹೆಸರಿಗೇ ರೋಗಿಗಳ್ಯಾಕೆ ಯಾಕೆ ಮಾನಸಿಕವಾಗಿ ಕುಗ್ಗುತ್ತಾರೆ ಎನ್ನಲು ಕಾರಣ ಇಷ್ಟೆ: ಚಿಕಿತ್ಸೆಯಿಂದ ಎದುರಿಸಬೇಕಾದ ಅಡ್ಡಪರಿಣಾಮಗಳು. ಕಿಮೋ ಇಂಜೆಕ್ಷನ್‌ ಪಡೆದ ನಂತರ ರೋಗಿ ಪಡುವ ಯಾತನೆ ಭಯಾನಕ. ಆ ಐದಾರು ದಿನಗಳು ಮಾತ್ರ ಮನಸ್ಸು ಖಿನ್ನತೆಗೆ ಬೀಳದೇ ಇರದು. ನಮ್ಮ ನರವ್ಯೂಹದ ಮೇಲೆ ಕಿಮೋ ಇಂಜೆಕ್ಷನ್‌ ದಾಳಿ ಮಾಡುವುದರಿಂದ ಮನಸ್ಸು ನಿಯಂತ್ರಣಕ್ಕೆ ಬಾರದೆ ಅಲ್ಲೋಲ ಕಲ್ಲೋಲವೆನಿಸುತ್ತದೆ. ಮನಸ್ಸನ್ನು ಎಷ್ಟೇ ಗಟ್ಟಿ ಮಾಡಿಕೊಂಡರೂ ಖಿನ್ನತೆಗೆ ಜಾರದಿರಲು ಸಾಧ್ಯವೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ನನ್ನ ಸಹಾಯಕ್ಕೆ ಬಂದಿದ್ದು ಯೋಗ, ಧ್ಯಾನ, ಪ್ರಾಣಾಯಾಮ, ಕ್ಯಾನ್ಸರ್‌ ನಿವಾರಣಾ ಗಾಯತ್ರೀಮುದ್ರೆಗಳು.

ಹೌದು; ನಿತ್ಯವೂ ಬೆಳಗ್ಗೆ ಮಧ್ಯಾಹ್ನ ರಾತ್ರಿ ಚಾಚೂ ತಪ್ಪದೇ ಅವುಗಳ ಪಾಲನೆಯಿಂದ ಕ್ಯಾನ್ಸರ್‌ ನನ್ನೆದುರಿಗೆ ತಲೆ ಬಾಗಿತ್ತು. ಕಿಮೊ ಪಡೆದು ಎರಡು ದಿನಗಳ ನಂತರ ವಿಲವಿಲವೆನ್ನುತ್ತಿದ್ದ ಮನಸ್ಸು ಬಹುಬೇಗ, ಅಂದರೆ ಮೂರೇ ದಿನಗಳಲ್ಲಿ ಸರಿದಾರಿಗೆ ಬರುತ್ತಿತ್ತು. ಒಟ್ಟಾರೆ ನಾನು ಪಡೆದ ಎಂಟು ಕಿಮೊ ಇಂಜೆಕ್ಷನ್‌ಗಳ ಯಾತನೆಯನ್ನು ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರೆ ಕುಂಠಿತಗೊಳಿಸಿದ್ದವು. ಮೈಮೇಲೆ ಕೂದಲೆಂಬ ಕುರುಹು ಇಲ್ಲದಿದ್ದರೂ ಅದರ ಬಗ್ಗೆ ನಾನು ತಲೆಕೆಡಿಸಿಕೊಂಡವಳಲ್ಲ. ನನ್ನ ಅವಸ್ಥೆಯನ್ನು ನೋಡಿ ಮರುಗಿದವರಿಗೆ ನಾನೇ ಧೈರ್ಯ ಹೇಳುತ್ತಿದ್ದೆ; ಇಷ್ಟಕ್ಕೆಲ್ಲ ಕಾರಣ ನನ್ನ ಗಟ್ಟಿ ಮನಸ್ಸು.

ಮುದ್ರೆಯಿಂದ ಗಂಟು ಮಾಯ!

ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಯೋಗಗಳಲ್ಲೊಂದಾಗ ಮುದ್ರಾಯೋಗದಲ್ಲಿ ಶಕ್ತಿಯೆಷ್ಟಿದೆ ಎಂಬುದನ್ನು ನಾನು ಸ್ವತಃ ಕಂಡುಕೊಂಡಿದ್ದೇನೆ. ಕ್ಯಾನ್ಸರ್‌ ನಿವಾರಣಾ ಗಾಯತ್ರೀಮುದ್ರೆಗಳಿಗೆ ನಾನು ಥ್ಯಾಂಕ್ಸ್‌ ಹೇಳಲೇ ಬೇಕು. ಕಾರಣವೆಂದರೆ ನನ್ನ ಎಡಸ್ತನದಲ್ಲಿದ್ದ ಗಂಟುಗಳು ಇದೇ ಗಾಯತ್ರೀಮಂತ್ರ ಮುದ್ರೆಗಳಿಂದ ಕರಗಿ ಹೋಗಿದ್ದವು. ಅದೂ ಒಂದೇ ವಾರದಲ್ಲಿ! ಮಂತ್ರಕ್ಕೆ ಮಾವಿನಕಾಯಿ ಉದುರುವುದೇ ಎಂದು ಪ್ರಶ್ನಿಸುವವರಿಗೆ ನಾನೇ ಉತ್ತರವಾಗಿದ್ದೇನೆ.

ಆರಂಭದೆರಡು ದಿನಗಳು ಶ್ಲೋಕದ ಸ್ಪಷ್ಟ ಉಚ್ಚಾರಣೆ ಕಷ್ಟವಾಯಿತಾದರೂ ಬರಬರುತ್ತ ರೂಢಿಯಾಯಿತು; ಸರಳವೆನಿಸಿತು. ದಿನಕ್ಕೆ ಮೂರು ಬಾರಿ ನೂರು ನೂರು ಬಾರಿ ಚಿನ್ಮುದ್ರೆಯೊಂದಿಗೆ ಗಾಯತ್ರೀಮಂತ್ರವನ್ನು ಪಠಿಸಿದೆ.

ಒಂದು ವಾರದಲ್ಲೇ ನನಗೆ ಅಚ್ಚರಿಯೆನಿಸಿದ್ದು ಸುಳ್ಳಲ್ಲ. ಕಿಮೋಥೆರಪಿ ಆರಂಭಕ್ಕೆ ಮೊದಲೇ ನೆನೆಸಿದ ಕಡಲೆ ಗಾತ್ರದ ಗಂಟುಗಳೆರಡು ಮಾಯವಾಗಿದ್ದವು. ಅದು ಕೂಡ ಒಂದೇ ವಾರದ ಅವಧಿಯಲ್ಲಿ ಎಂದರೆ ನಂಬಲೇ ಬೇಕು. ಇದನ್ನು ಪೆಟ್‌ ಸಿ.ಟಿ. ಸ್ಕ್ಯಾನ್‌ ಕೂಡ ದೃಢಿಕರಿಸಿದೆ. ನನ್ನಲ್ಲಿ ಕ್ಯಾನ್ಸರ್ ಇದೆ ಎಂದು ಸ್ಕ್ಯಾನಿಂಗ್‌, ಬಯಾಪ್ಸಿ ವರದಿ ದೃಢಿಕರಿಸಿದ ದಿನದಿಂದ ಆರಂಭಿಸಿದ ಯೋಗ, ಧ್ಯಾನ, ಮುದ್ರೆಗಳು ಇಂದಿಗೂ ನಿತ್ಯಸಂಗಾತಿಯೆನಿಸಿವೆ. ಆಹಾರಕ್ರಮದಿಂದಲೂ ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸಬಹುದು.

ಯಾವುದೇ ತೆರನಾದ ಕ್ಯಾನ್ಸರ್‌ ಬಂದರೂ ಧೈರ್ಯ ಕಳೆದುಕೊಳ್ಳದಿದ್ದರೆ ಅರ್ಧ ಗೆದ್ದಂತೆ. ಕ್ಯಾನ್ಸರ್‌ ಆರಂಭಿಕ ಹಂತದಲ್ಲಿದ್ದರೆ ಬೇಗನೆ ಗುಣಮುಖರಾಗಬಹುದು. ಗಟ್ಟಿ ಮನಸ್ಸು ಮತ್ತು ಆತ್ಮವಿಶ್ವಾಸದಿಂದ ಸಾವನ್ನೂ ಗೆಲ್ಲಬಹುದು. ದೇಹದ ಯಾವುದೇ ಭಾಗಗಳಲ್ಲಿ ಗಂಟುಗಳು ಕೈಗೆ ಹತ್ತಿದರೆ ಮೊದಲು ಅಗತ್ಯ ಸ್ಕ್ಯಾನಿಂಗ್‌ನ ಮೊರೆ ಹೋಗಿ. ಎಲ್ಲ ಗಂಟುಗಳೂ ಕ್ಯಾನ್ಸರ್‌ ಅಲ್ಲದೇ ಇರಬಹುದು.

ಕ್ಯಾನ್ಸರ್‌ ಗಂಟುಗಳೇ ಆಗಿದ್ದರೆ ನಿರ್ಲಕ್ಷ್ಯ ನಮ್ಮನ್ನು ಸಾವಿನ ದವಡೆಗೆ ನೂಕಲಿದೆ. ಅದಕ್ಕೂ ಮೊದಲೇ ಎಚ್ಚೆತ್ತುಕೊಳ್ಳುವುದು ಅಗತ್ಯ. ಹಾವು ಕಡಿದಾಗ ಭಯದಿಂದ ಸಾಯುವಂತೆ, ಕ್ಯಾನ್ಸರ್‌ ಬಂತೆಂದು ಭಯದಿಂದ ಸಾಯುವವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಕ್ಯಾನ್ಸರ್‌ ಬಂದರೆ ಭಯಬೇಡ. ಇಂದಿನ ಮುಂದುವರಿದ ವೈದ್ಯಲೋಕದಲ್ಲಿ ಚಿಕಿತ್ಸೆ ಇದ್ದೇ ಇದೆ.

(ಕೃಷ್ಣಿ ಶಿರೂರ)

ಪ್ರತಿಕ್ರಿಯಿಸಿ (+)