ಬುಧವಾರ, ಡಿಸೆಂಬರ್ 11, 2019
15 °C

ಸೌಲಭ್ಯಕ್ಕೆ ಒತ್ತಾಯಿಸಿ ಮಾರುಕಟ್ಟೆ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಲಭ್ಯಕ್ಕೆ ಒತ್ತಾಯಿಸಿ ಮಾರುಕಟ್ಟೆ ಬಂದ್‌

ಹಾವೇರಿ: ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ತರಕಾರಿ ಮಾರುಕಟ್ಟೆಗೆ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಹಳೇ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡದಂತೆ ಒತ್ತಾಯಿಸಿ, ದಲ್ಲಾಳಿಗಳ ಸಂಘ ಗುರುವಾರ ಮಾರುಕಟ್ಟೆಯನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿತು.

‘ಮಾರುಕಟ್ಟೆಯಲ್ಲಿ ಸುಮಾರು 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು, ಕಾಲಕಾಲಕ್ಕೆ ಬಾಡಿಗೆ ಹಾಗೂ ಸೆಸ್‌ ತುಂಬುತ್ತಿದ್ದೇವೆ. ಆದರೆ, ಇದುವರೆಗೂ ಮಾರುಕಟ್ಟೆಯಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ’ ಎಂದು ದಲ್ಲಾಳಿಗಳ ಸಂಘದ ಅಧ್ಯಕ್ಷ ಈಶ್ವರಯ್ಯ ನಡುವಿನಮಠ ದೂರಿದರು.

‘ನಗರಸಭೆಯವರು ತರಕಾರಿ ಮಾರುಕಟ್ಟೆಯ ಎಲ್ಲ ಮಳಿಗೆಗಳನ್ನು ಖಾಲಿ ಮಾಡಿ ಅವುಗಳನ್ನು ಮರು ಹರಾಜು ಹಾಕಲು ನೋಟಿಸ್‌ ನೀಡಿದ್ದಾರೆ. ₹ 50 ಸಾವಿರ ಠೇವಣಿ ಇಟ್ಟು ಹರಾಜಿನಲ್ಲಿ ಪಾಲ್ಗೊಳ್ಳಬೇಕು. ಆದರೆ, ಅಷ್ಟೊಂದು ಹಣ ಕಟ್ಟಿ ಮರು ಹರಾಜಿನಲ್ಲಿ ನಾವು ಪಾಲ್ಗೊಳ್ಳುವುದು ದಲ್ಲಾಳಿಗಳಿಗೆ ಕಷ್ಟವಾಗಿದೆ. ಆದ್ದರಿಂದ, ಈಗಾಗಲೇ ಬಾಡಿಗೆ ಇರುವ ಹಳೇ ದಲ್ಲಾಳಿಗಳ ವಾಣಿಜ್ಯ ಮಳಿಗೆಗಳನ್ನು ಬಿಟ್ಟು, ಉಳಿದ ಖಾಲಿ ಮಳಿಗೆಗಳನ್ನು ಹರಾಜು ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ಸುರೇಶ ಚಲವಾದಿ, ‘ಮಾರುಕಟ್ಟೆಯ ತರಕಾರಿಯು ಮುಂಬೈ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಹೋಗುತ್ತದೆ. ಆದರೆ, ಮೂಲಸೌಕರ್ಯಗಳಿಲ್ಲದಿರುವುದಿಂದ ರೈತರು ಬೆಳೆಗಳನ್ನು ತಂದು ಮಾರಾಟ ಮಾಡಲು ತೊಂದರೆ ಅನುಭವಿಸುವಂತಾಗಿದೆ’ ಎಂದರು.

‘ತರಕಾರಿ ಮಾರುಕಟ್ಟೆಯ ರಸ್ತೆ ಅತ್ಯಂತ ಕಿರಿದಾಗಿದ್ದು ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ, ಮಾರುಕಟ್ಟೆಯ ಹರಾಜಿನ ಸಮಯಕ್ಕೆ ರೈತರು ತರಕಾರಿ ತರಲು ಸಾಧ್ಯವಾಗುತ್ತಿಲ್ಲ’ ಎಂದು ಪರಿಸ್ಥಿತಿ ಬಿಚ್ಚಿಟ್ಟರು.

ತಾಲ್ಲೂಕಿನ ಹಾವಂಸಿಶಾಕಾರ ಗ್ರಾಮದ ಸಂಗಮೇಶ ಕಾಟೇನಹಳ್ಳಿ, ’ನಾನೂ ಎರಡು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೇನೆ. ಇಂದಿನ ಮಾರುಕಟ್ಟೆಗೆ ಒಟ್ಟು 28 ಬಾಕ್ಸ್‌ಗಳನ್ನು ಬಾಡಿಗೆ ವಾಹನದ ಮೂಲಕ ಮಾರಾಟಕ್ಕೆ ತಂದಿದ್ದೇನೆ. ಆದರೆ, ಇಂದಿನ ಮಾರುಕಟ್ಟೆ ಬಂದ್‌ ಇದ್ದು, ಟೊಮೆಟೊ ಬೆಲೆ ಬಾಕ್ಸ್‌ಗೆ ಕೇವಲ ₹ 30 ಇದೆ. ಹಾಕಿದ ಬಂಡವಾಳ ಕೂಡ ಸಿಗುವುದಿಲ್ಲ. ಹೀಗಾದರೆ ಏನು ಮಾಡುವುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ವ್ಯಾಪಾರಿ ನಯಾಜ್‌, ‘ಮಾರುಕಟ್ಟೆಯ ಕಸವನ್ನು ನಗರ ಸಭೆಯವರು ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಸ್ವಚ್ಛಗೊಳಿ

ಸುತ್ತಾರೆ. ಹೀಗಾಗಿ, ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ’ ಎಂದರು.

* * 

ಹಸಿ ಗುಂಟೂರು ಮೆಣಸಿನಕಾಯಿ ವ್ಯಾಪಾರ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅದಕ್ಕಾಗಿ ಸೂಕ್ತ ಸ್ಥಳ ನಿಗದಿ ಮಾಡಿ, ಅಗತ್ಯ ವಿದ್ಯುತ್ ಪೂರೈಸಬೇಕು ಸುರೇಶ ಚಲವಾದಿ, ರೈತ ಮುಖಂಡ

ಪ್ರತಿಕ್ರಿಯಿಸಿ (+)