7

ನಿತ್ರಾಣಗೊಂಡ ಸಿಂಹ!

Published:
Updated:
ನಿತ್ರಾಣಗೊಂಡ ಸಿಂಹ!

ಚಿತ್ರ: ರಾಜಾ ಸಿಂಹ

ನಿರ್ಮಾಪಕರು: ಸಿ.ಡಿ. ಬಸಪ್ಪ

ನಿರ್ದೇಶಕರು: ರವಿ ರಾಮ್

ತಾರಾಗಣ: ಅನಿರುದ್ಧ್‌, ಭಾರತಿ ವಿಷ್ಣುವರ್ಧನ್, ನಿಖಿತಾ, ಸಂಜನಾ, ಬುಲೆಟ್‌ ಪ್ರಕಾಶ್‌, ಶರತ್‌ ಲೋಹಿತಾಶ್ವ, ಅರುಣ್‌ ಸಾಗರ್

ರಂಗುರಂಗಾದ ಪೇಟ, ಕೆಂಬಣ್ಣದ ಗಡ್ಡ, ಮಾತು ಮಾತಿಗೂ ಕೈಗಡಗ ತಿರುಗಿಸುವುದು, ನೆಚ್ಚಿನ ನಾಯಕನ ಹತ್ಯೆ, ಹಳ್ಳಿಗರ ಅಸಹಾಯಕತೆ, ಪ್ರೀತಿಯ ಹುಡುಕಾಟ, ಜೊತೆಗೆ ಭರ್ಜರಿ ಹೊಡೆದಾಟ, ಚೂರು ಹಾಸ್ಯ– ಹೀಗೆ ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ತೋರುವ ದಾರಗಳನ್ನು ಪೋಣಿಸಿ ‘ರಾಜಾ ಸಿಂಹ’ನಿಗೆ ಕೋಟೆ ಕಟ್ಟಲು ಯತ್ನಿಸಿದ್ದಾರೆ ನಿರ್ದೇಶಕ ರವಿ ರಾಮ್.

ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ್‌ ಅವರಿಗೆ ಆ್ಯಕ್ಷನ್‌ ಇಮೇಜ್‌ ತಂದುಕೊಡಲು ನಿರ್ದೇಶಕರು ನಡೆಸಿರುವ ಕಸರತ್ತು ಸಿನಿಮಾದುದ್ದಕ್ಕೂ ಎದ್ದುಕಾಣುತ್ತದೆ. ಆದರೆ, ತೀರಾ ಕೃತಕವಾಗಿ ಕಾಣುವ ಕೆಲವು ಸನ್ನಿವೇಶಗಳು, ಬಿಲ್ಡಪ್ ಮಾತುಗಳ ಮೂಲಕ ರಾಜಾ ಸಿಂಹನನ್ನು ನಿತ್ರಾಣಗೊಳಿಸಿದ್ದಾರೆ.

ವಿಷ್ಣು ಅವರ ಛಾಯೆ ಕಾಣಿಸಲು ‘ಸಿಂಹಾದ್ರಿಯ ಸಿಂಹ’ ಚಿತ್ರದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಸಿನಿಮಾವನ್ನು ಭಿನ್ನವಾಗಿ ಕಾಣುವಂತೆ ಮಾಡಲು ಬಳಸಿರುವ ಈ ಕೃತಕತೆಯೇ ಅದರ ದೌರ್ಬಲ್ಯವೂ ಆಗಿದೆ. ಹಾಗಾಗಿ, ಚಿತ್ರದ ಮಧ್ಯಂತರದಲ್ಲಿ ಕಥೆಗೆ ಸಿಗುವ ಟ್ವಿಸ್ಟು ನೋಡುಗರಲ್ಲಿ ಅಚ್ಚರಿ ಮೂಡಿಸುವುದಿಲ್ಲ. ವಿಷ್ಣು ಅವರನ್ನು ಬಳಸಿಕೊಂಡು ಸಿನಿಮಾ ಯಶಸ್ವಿಗೊಳಿಸುವ ನಿರ್ದೇಶಕರ ಉಮೇದು ಎದ್ದುಕಾಣುತ್ತದೆ. ಆದರೆ, ಅದು ನಿರೀಕ್ಷಿತ ಫಲ ಕೊಟ್ಟಿಲ್ಲ.

ಚಿತ್ರದ ಮೊದಲಾರ್ಧವು ಪ್ರೀತಿಯ ಹುಡುಕಾಟ, ಪೇಲವ ಸಂಭಾಷಣೆಯಲ್ಲಿಯೇ ಮುಗಿದು ಹೋಗುತ್ತದೆ. ಫ್ಲ್ಯಾಷ್‌ ಬ್ಯಾಕ್‌ ಮೂಲಕ ದ್ವಿತೀಯಾರ್ಧದಲ್ಲಿ ಕೌಟುಂಬಿಕ ಸೇಡಿನ ಕಥನ ತೆರೆದುಕೊಂಡರೂ ದುರ್ಬಲ ನಿರೂಪಣೆಯಿಂದಾಗಿ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ.

ಸಿನಿಮಾ ಆರಂಭವಾಗುವುದೇ ಭರ್ಜರಿ ಫೈಟಿಂಗ್‌ ಮೂಲಕ. ಸಮಾಜ ಸೇವೆಯೇ ಯುವರಾಜನ(ಅನಿರುದ್ಧ್‌) ಜೀವನದ ಧ್ಯೇಯ. ಆತ ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ನಡೆಸುತ್ತಿರುತ್ತಾನೆ. ಇದಕ್ಕೆ ಆತನ ತಾಯಿಯ ಬೆಂಬಲವೂ ಉಂಟು. ಬಸ್ಸಿನಲ್ಲಿ ಒಮ್ಮೆ ಹುಡುಗಿಯನ್ನು ನೋಡುತ್ತಾನೆ. ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಮೂಡುತ್ತದೆ.

ಆಕೆಯ ಪ್ರೀತಿಗಾಗಿ ಹಂಬಲಿಸಿ ಅವಳ ಊರಿಗೆ ಸ್ನೇಹಿತರೊಟ್ಟಿಗೆ ತೆರಳುತ್ತಾನೆ. ಆ ಗ್ರಾಮದ ಒಡೆಯ ರುದ್ರೇಗೌಡ. ಸುತ್ತಮುತ್ತಲಿನ ಊರುಗಳಿಗೂ ಅವನೇ ದಂಡನಾಯಕ. ಕೊನೆಗೆ, ತಾನು ಸಿಂಹಾದ್ರಿ ವಂಶದ ನರಸಿಂಹೇಗೌಡನ ಪುತ್ರನೆಂದು ಯುವರಾಜನಿಗೆ ಗೊತ್ತಾಗುತ್ತದೆ. ಜನರಿಗೆ ನೆರವಾಗಲು ಅಣೆಕಟ್ಟು ಕಟ್ಟಿಸಬೇಕೆಂಬುದು ಅಪ್ಪನ ಆಸೆ. ಇದಕ್ಕೆ ಸ್ವಂತ ಚಿಕ್ಕಪ್ಪನಿಂದಲೇ ವಿರೋಧ. ಪುತ್ರ ಹೇಗೆ ಅಪ್ಪನ ಆಸೆ ಈಡೇರಿಸುತ್ತಾನೆ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ನಿಖಿತಾ, ಶರತ್‌ ಲೋಹಿತಾಶ್ವ ಮತ್ತು ಅರುಣ್‌ ಸಾಗರ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಂಜನಾ ಅವರ ಪಾತ್ರವನ್ನು ಅನಗತ್ಯವಾಗಿ ತುರುಕಿದಂತಿದೆ. ಹಾಸ್ಯ ಪಾತ್ರದಲ್ಲಿ ಬುಲೆಟ್‌ ಪ್ರಕಾಶ್‌ ಮನಸೆಳೆಯುತ್ತಾರೆ. ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜಿಸಿರುವ ಹಾಡುಗಳು ಸಿನಿಮಾಕ್ಕೆ ಹೊಸದೇನನ್ನೂ ಕಟ್ಟಿಕೊಟ್ಟಿಲ್ಲ. ಡಿಫರೆಂಟ್‌ ಡ್ಯಾನಿ ನಿರ್ದೇಶಿಸಿರುವ ಸಾಹಸ ದೃಶ್ಯಗಳು ನೋಡುಗರಿಗೆ ಖುಷಿ ಕೊಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry