ಮಂಗಳವಾರ, ಡಿಸೆಂಬರ್ 10, 2019
20 °C

ಕಾಂಗ್ರೆಸ್–ಜೆಡಿಎಸ್ ಪಕ್ಕಾ, ಬಿಜೆಪಿಯಲ್ಲಿ ಪೈಪೋಟಿ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್–ಜೆಡಿಎಸ್ ಪಕ್ಕಾ, ಬಿಜೆಪಿಯಲ್ಲಿ ಪೈಪೋಟಿ

ವಿಜಯಪುರ: ಫೆಬ್ರುವರಿ ಆರಂಭದಲ್ಲೂ ಚಳಿಯ ತೀವ್ರತೆ ಹೆಚ್ಚಿದ್ದು, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರಾಜಕಾರಣ ಬಿಸಿಯೇರಿದೆ. ಹಿಂದಿನ ಚುನಾವಣೆಗಳಲ್ಲಿ ನಡೆದ ಜಾತಿ ಸಮೀಕರಣಕ್ಕೆ ವ್ಯತಿರಿಕ್ತವಾದ ವಾತಾವರಣ ಕ್ಷೇತ್ರ ವ್ಯಾಪ್ತಿಯಲ್ಲಿ ಗೋಚರಿಸುತ್ತಿದೆ. ಸಾರ್ವತ್ರಿಕ ಚುನಾವಣೆಯ ಆರಂಭದಿಂದ ಇಲ್ಲಿಯವರೆಗೂ ಪಂಚಮಸಾಲಿ, ರಡ್ಡಿ ಸಮುದಾಯದವರೇ ಶಾಸಕರಾಗಿ ಪ್ರಾಬಲ್ಯ ಮೆರೆದಿದ್ದಾರೆ. ಇದೀಗ ಮೊದಲ ಬಾರಿ ಅಹಿಂದದ ಪ್ರಬಲ ಧ್ವನಿ ಮೊಳಗುತ್ತಿದೆ.

1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಎಸ್‌.ಎಂ.ಮುರಿಗೆಪ್ಪ (ಗಾಣಿಗ) ಶಾಸಕರಾಗಿ ಆಯ್ಕೆಯಾಗಿದನ್ನೂ ಹೊರತುಪಡಿಸಿದರೆ, ಉಳಿದ ಅವಧಿಗೆ ಆಯ್ಕೆಯಾದವರು ಪಂಚಮಸಾಲಿ, ರಡ್ಡಿ ಸಮುದಾಯದವರು.

1978ರಿಂದ 2018ರವರೆಗೆ ನಾಲ್ಕು ದಶಕದ ಅವಧಿ ಕ್ಷೇತ್ರದಲ್ಲಿ ಪಂಚಮಸಾಲಿ, ರಡ್ಡಿ ಸಮುದಾಯದ ಶಾಸಕರೇ ಆಯ್ಕೆಯಾಗಿದ್ದಾರೆ. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ,ಎಸ್‌.ನಾಡಗೌಡ (ರಡ್ಡಿ) ಶಾಸಕರಾಗಿ ಅಧಿಕಾರ ನಡೆಸಿದ್ದಾರೆ. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ ಮಂಗಳಾದೇವಿ ಪ್ರಬಲ ಪೈಪೋಟಿ ನೀಡಿದ್ದಾರೆ.

ಸತತ ನಾಲ್ಕು ಬಾರಿ ಗೆಲುವು ದಾಖಲಿಸಿ ಕ್ಷೇತ್ರವನ್ನು ‘ಕೈ’ ಭದ್ರ ಕೋಟೆಯನ್ನಾಗಿಸಿಕೊಂಡಿರುವ ಸಿ.ಎಸ್‌.ನಾಡಗೌಡ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ. ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಈಗಾಗಲೇ ಚುನಾವಣಾ ತಯಾರಿಗೆ ಸೂಚಿಸಿದ್ದು, ತಳ ಹಂತದ ಸಂಘಟನೆ ಬಿರುಸಿನಿಂದ ನಡೆದಿದೆ. ಟಿಕೆಟ್‌ಗೆ ಪ್ರಬಲ ಪೈಪೋಟಿ ನೀಡುವವರು ಯಾರೊಬ್ಬರೂ ಇಲ್ಲದಿರುವುದು ಹಾಲಿ ಶಾಸಕರಿಗೆ ಪ್ಲಸ್‌ ಪಾಯಿಂಟ್‌.

ಆಡಳಿತಾರೂಢ ರಾಜ್ಯ ಸರ್ಕಾರವನ್ನೇ ಟೀಕಿಸಿ, ‘ಕೈ’ ಬಿಟ್ಟು ತೆನೆ ಹೊತ್ತ ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಜೆಡಿಎಸ್‌ನ ಘೋಷಿತ ಅಭ್ಯರ್ಥಿ. ಮುದ್ದೇಬಿಹಾಳದಲ್ಲಿ ಗೆಲುವು ದಾಖಲಿಸಲೇಬೇಕು ಎಂದು ಹಠ ತೊಟ್ಟಿರುವ ನಡಹಳ್ಳಿ ಹಿಂದಿನ ವಿಧಾನಸಭಾ ಚುನಾವಣೆಯಿಂದಲೂ ತಮ್ಮದೇ ಪಡೆ ರಚಿಸಿಕೊಂಡು ಹೋರಾಟ ನಡೆಸಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ ಬೇಗುದಿ: 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಂಗಳಾದೇವಿ ಶಾಂತಗೌಡ ಬಿರಾದಾರ ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಒಮ್ಮೆ ಪಕ್ಷ ತೊರೆದಿದ್ದರೂ, ಇದೀಗ ಮತ್ತೆ ಮರಳಿ ಗೂಡಿಗೆ ಸೇರಿದ್ದಾರೆ. ಮಹಿಳಾ ಕೋಟಾದಡಿ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದು, ವೀರಶೈವ ಹಂಡೇ ವಜೀರ ಸಮಾಜದ ಮತದಾರರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಅನುಕೂಲಕರವಾಗಿದೆ.

ಜಿಲ್ಲಾ ಬಿಜೆಪಿ ಯುವ ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌.ಪಾಟೀಲ ಪಕ್ಷ ನಿಷ್ಠೆ, ಸಂಘ ಪರಿವಾರದ ನಂಟು, ಯುವ ಕೋಟಾದಲ್ಲಿ ಟಿಕೆಟ್‌ ಗಿಟ್ಟಿಸಲು ಯತ್ನಿಸಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜತೆ ನಿಕಟ ಬಾಂಧವ್ಯ ಹೊಂದಿದ್ದು, ಪೈಪೋಟಿಯಲ್ಲಿ ವಿಜಯಿಯಾಗುವ ವಿಶ್ವಾಸ ಹೊಂದಿದ್ದಾರೆ.

ದೇಶಮುಖ ಮನೆತನದ ಸಖ್ಯ ಹೊಂದಿರುವ ಮಹಾಂತಪ್ಪಗೌಡ ಪಾಟೀಲ, ವಿಜಯಪುರ ಜಿಲ್ಲಾ ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಕುರುಬ ಸಮಾಜದ ವಕೀಲ ಬಿ.ಜಿ.ಜಗ್ಗಲ, ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಲಕೇಂದ್ರಗೌಡ ಪಾಟೀಲ, ಮಿಣಜಗಿಯ ಕೆ.ಡಿ.ಪಾಟೀಲರ ಅಳಿಯ ಮಲ್ಲನಗೌಡ ಬಿರಾದಾರ ಕೋರವಾರ, ಕಾಶೀಬಾಯಿ ರಾಂಪುರ ಸಹ ತಮ್ಮದೇ ಸಾಮರ್ಥ್ಯದಲ್ಲಿ ಬಿಜೆಪಿ ಟಿಕೆಟ್‌ ಗಿಟ್ಟಿಸಲು ಅತೀವ ಯತ್ನ ನಡೆಸಿದ್ದಾರೆ.

‘ಕ್ಷೇತ್ರದ ಗೆಲುವಿಗಾಗಿ ರಾಷ್ಟ್ರೀಯ ವರಿಷ್ಠರು ‘ಆಪರೇಷನ್‌ ಕಮಲ’ದ ಚಿಂತನೆಯನ್ನೂ ನಡೆಸಿದ್ದಾರೆ. ಕೊನೆ ಗಳಿಗೆಯಲ್ಲಿ ಟಿಕೆಟ್‌ ಯಾರ ಪಾಲಾಗಲಿದೆ ಎಂಬುದನ್ನು ಊಹಿಸಲು ಅಸಾಧ್ಯವಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹೊಸ ವರಸೆ...

ಕೋಲಾರ ಶಾಸಕ ವರ್ತೂರು ಪ್ರಕಾಶ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟುಕೊಂಡೇ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕುರುಬ ಸಮಾಜದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಮ್ಮ ಕಾಂಗ್ರೆಸ್‌ ಪಕ್ಷದಿಂದ ಸಹೋದರನ ಪುತ್ರ ವಿ.ಪಿ.ರಕ್ಷಿತ್ ಕಣಕ್ಕಿಳಿಸುವುದಾಗಿ ಈಗಾಗಲೇ ಘೋಷಿಸಿರುವುದು ಅಖಾಡದ ರಂಗನ್ನು ಹೆಚ್ಚಿಸಿದೆ.

ಜನಸಾಮಾನ್ಯರ ಪಕ್ಷದ ಸಂಸ್ಥಾಪಕ ಡಾ.ಡಿ.ಅಯ್ಯಪ್ಪ (ದೊರೆ) ಮುದ್ದೇಬಿಹಾಳ ತಾಲ್ಲೂಕಿನ ಸರೂರಿನವರು. ಲಿಂಗಾಯತ ಮತದ ಮೇಲೆ ಕಣ್ಣಿಟ್ಟೇ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಇವರು ಸ್ಪರ್ಧಿಸದಿದ್ದರೆ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಸುಕಾಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

ಮುದ್ದೇಬಿಹಾಳದ ಪ್ರತಿಷ್ಠಿತ ದೇಶಮುಖ ಮನೆತನ ಇಂದಿಗೂ ತನ್ನದೇ ವರ್ಚಸ್ಸು ಹೊಂದಿದ್ದು, ಜನತಾ ಪರಿವಾರ, ದಳದ ಸಖ್ಯ ಹೊಂದಿದೆ. ಪ್ರಸ್ತುತ ವಿಮಲಾಬಾಯಿ ದೇಶಮುಖ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದು, ಅಂತಿಮ ಕ್ಷಣದಲ್ಲಿ ಯಾರಿಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬುದು ಕ್ಷೇತ್ರದಾದ್ಯಂತ ಯಕ್ಷ ಪ್ರಶ್ನೆಯಾಗಿ ಕಾಡಲಾರಂಭಿಸಿದೆ.

* * 

ಪ್ರಸ್ತುತ ಚತುಷ್ಕೋನ ಸ್ಪರ್ಧೆ ಗೋಚರಿಸುತ್ತಿದೆ. ಟಿಕೆಟ್‌ ಅಂತಿಮಗೊಂಡ ಬಳಿಕ ಯಾರ‍್ಯಾರ ನಡುವೆ ಸ್ಪರ್ಧೆ ನಡೆಯಲಿದೆ ಎಂಬುದು ಖಚಿತವಾಗಲಿದೆ ಎಸ್‌.ಎಂ.ನೆರೆಬೆಂಚಿ ಕ್ಷೇತ್ರದ ಮತದಾರ

ಪ್ರತಿಕ್ರಿಯಿಸಿ (+)