ಶುಕ್ರವಾರ, ಡಿಸೆಂಬರ್ 6, 2019
25 °C

ಮಾಯಕೊಂಡದಲ್ಲಿ ಮುಂದುವರಿಯುತ್ತಾ ಬಿಜೆಪಿ ಅಧಿಪತ್ಯ?

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಮಾಯಕೊಂಡದಲ್ಲಿ ಮುಂದುವರಿಯುತ್ತಾ ಬಿಜೆಪಿ ಅಧಿಪತ್ಯ?

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾ ಇತಿಹಾಸ ಅವಲೋಕಿಸಿದರೆ ಅದು ಮೊದಲಿನಿಂದಲೂ ಬಿಜೆಪಿಯ ಭದ್ರ ನೆಲಗಟ್ಟೆನೂ ಅಲ್ಲ. ಕಾಂಗ್ರೆಸ್, ಜನತಾಪಾರ್ಟಿ ಕ್ರಮವಾಗಿ ಮೂರು, ಎರಡು ಸಲ ಜಯಗಳಿಸಿವೆ. ಎಸ್‌.ಎ.ರವೀಂದ್ರನಾಥ್‌ ಅವರ ಹ್ಯಾಟ್ರಿಕ್‌ ಗೆಲುವಿನ ನಾಗಾಲೋಟದಿಂದ ಬಸವರಾಜನಾಯ್ಕ ಅವರ ಗೆಲುವಿನವರೆಗೆ ಮಾಯಕೊಂಡದಲ್ಲಿ ಇದಿದ್ದು ಬಿಜೆಪಿಯ ಅಧಿಪತ್ಯ.

1978ರ ಕ್ಷೇತ್ರ ಪುನರ್‌ವಿಂಗಡನೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಮಾಯಕೊಂಡ. ಅದೇ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಗಮ್ಮ ಕೇಶವಮೂರ್ತಿ ಗೆಲುವು ಸಾಧಿಸಿದರು. ಅವರು ಜಿಲ್ಲೆಯ ಎರಡನೇ ಶಾಸಕಿಯಾಗಿ ಇತಿಹಾಸದಲ್ಲಿ ದಾಖಲಾದರು. ನಂತರ 1983ರ ಚುನಾವಣೆ, 1985ರ ಉಪ ಚುನಾವಣೆ ಎರಡಲ್ಲೂ ಜನತಾಪಾರ್ಟಿ ಗೆಲುವು ಸಾಧಿಸಿತು. ಕೆ.ಜಿ.ಮಹೇಶ್ವರಪ್ಪ, ಕೆ.ಮಲ್ಲಪ್ಪ ಕ್ರಮವಾಗಿ ಶಾಸಕರಾದರು. 1989ರಲ್ಲಿ ಮತ್ತೆ ನಾಗಮ್ಮ ಕೇಶವಮೂರ್ತಿ ಅಖಾಡಕ್ಕೆ ಇಳಿದರು. ಆ ವೇಳೆ ಅವರು ಗೆದ್ದು, ಸಚಿವರಾಗಿಯೂ ಕೆಲಸ ಮಾಡಿದರು.

ಮುಂದಿನ ನಾಲ್ಕೂ ಚುನಾವಣೆಗಳು ಬಿಜೆಪಿಯದ್ದೇ ಆಗಿದ್ದವು. ಎಸ್‌.ಎ.ರವೀಂದ್ರನಾಥ್‌ ಸತತ ಮೂರು ಬಾರಿ ಗೆಲುವು ಕಂಡರು. ಮತ್ತೊಮ್ಮೆ ಕ್ಷೇತ್ರ 2008ರಲ್ಲಿ ಪುನರ್‌ ವಿಂಗಡಣೆಯಾಯಿತು. ಅದುವರೆಗೂ ಸಾಮಾನ್ಯ ಕ್ಷೇತ್ರವಾಗಿದ್ದ ಮಾಯಕೊಂಡ ನಂತರ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಯಿತು.

ಅಷ್ಟರವರೆಗೆ ಬಿಜೆಪಿಯ ಭದ್ರಕೋಟೆಯಾಗಿದ್ದ ಮಾಯಕೊಂಡದಲ್ಲಿ ಮೊದಲ ಬಾರಿಗೆ ಗೆಲ್ಲುವ ಅಭ್ಯರ್ಥಿಗೆ ಹುಡುಕಾಟ ನಡೆಯಿತು. ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರನಾಯ್ಕ ಅವರನ್ನು ಇಲ್ಲಿಗೆ ತಂದು ಗೆಲ್ಲಿಸುವ ಬಗ್ಗೆಯೂ ಬಿಜೆಪಿ ಮುಖಂಡರು ಚಿಂತನೆ ನಡೆಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಪತ್ರಕರ್ತ ನಜೀರ್.

ಆದರೆ, ಅದೃಷ್ಟ ಎಂ.ಬಸವರಾಜನಾಯ್ಕ ಪಾಲಿಗಿತ್ತು. 2008ರಲ್ಲಿ ಅವರಿಗೆ ಬಿಜೆಪಿ ಟೆಕೆಟ್‌ ಕೊಟ್ಟು ರವೀಂದ್ರನಾಥ್‌ ನಾಯಕತ್ವದಲ್ಲಿ ಗೆಲ್ಲಿಸಿಯೂ ಆಯಿತು. 2013ರ ಚುನಾವಣೆ ಮಾತ್ರ ಬಿಜೆಪಿ ಪಾಲಿಗೆ ಅಘಾತ. ಯಡಿಯೂರ‍ಪ್ಪ ಅವರ ಕೆಜೆಪಿ ಕಾರಣದಿಂದಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜನಾಯ್ಕ ಅವರಿಗೆ ನಾಲ್ಕನೇ ಸ್ಥಾನ. ಈ ಚುನಾವಣೆಯಲ್ಲಿ ಅದೃಷ್ಟವಂತರು ಕಾಂಗ್ರೆಸ್‌ನ ಕೆ.ಶಿವಮೂರ್ತಿ. ಇವರ ಪ್ರತಿಸ್ಪರ್ಧಿ ಹಾಗೂ ಇವರಿಗೂ ಕೇವಲ 694 ಮತಗಳಷ್ಟೇ ವ್ಯತ್ಯಾಸ. ಪ್ರಬಲ ಪೈಪೋಟಿ ಕೊಟ್ಟಿದ್ದು ಕೆಜೆಪಿಯ ಪ್ರೊ.ಎನ್‌.ಲಿಂಗಣ್ಣ. ನಂತರದ ಸಮೀಪ ಸ್ಪರ್ಧಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದಪ್ಪ. ಇವರು ಪಡೆದ ಮತಗಳು 18,355. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ವೈ.ರಾಮಪ್ಪ 9,395 ಮತ ಪಡೆದುಕೊಂಡರು.

2018ರ ಚುನಾವಣೆಯಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೆಜೆಪಿ–ಬಿಜೆಪಿ ಒಟ್ಟಾಗಿವೆ. ಆದರೆ, ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್‌ನಲ್ಲಿ ಭಿನ್ನಸ್ವರಗಳು ಕೇಳಿಬಂದಿವೆ. ಜೆಡಿಎಸ್‌ನಿಂದ ಶೀಲಾನಾಯ್ಕ ತಯಾರಿ ನಡೆಸಿದ್ದಾರೆ.

ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾದ ಪ್ರೊ.ಎನ್‌.ಲಿಂಗಣ್ಣ ನೇತೃತ್ವದಲ್ಲಿ ಈಚೆಗೆ ಅಣಜಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಹರಿಜನ (ಮಾದಿಗ) ಸಮಾಜದ ಸಮಾವೇಶ ನಡೆಸಿತು. ಕಾರ್ಯಕರ್ತರೆಲ್ಲರೂ ಲಿಂಗಣ್ಣ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರೂ ಯಡಿಯೂರಪ್ಪ ಸೇರಿದಂತೆ ಯಾವ ನಾಯಕರೂ ಟಿಕೆಟ್‌ ಭರವಸೆಯನ್ನು ಯಾರಿಗೂ ನೀಡಲಿಲ್ಲ. ಪಕ್ಷ ಯಾರಿಗೇ ಟಿಕೆಟ್‌ ಕೊಟ್ಟರೂ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಆಣೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದ ಇತರೆ ಪ್ರಬಲ ಆಕಾಂಕ್ಷಿಗಳು ಈ ಸಮಾವೇಶದಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ, ಮಾಯಕೊಂಡ ಬಿಜೆಪಿಗೆ ಸುಲಭದ ತುತ್ತು ಅಂತೂ ಅಲ್ಲ.

ಕಾಂಗ್ರೆಸ್‌ನಲ್ಲೂ ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದೆ. ಹಾಲಿ ಶಾಸಕ ಕೆ.ಶಿವಮೂರ್ತಿ ಹೇಗೂ ಸ್ಪರ್ಧಿಸುವ ಪಟ್ಟಿಯಲ್ಲಿದ್ದಾರೆ. ಅವರೊಂದಿಗೆ ಡಾ.ವೈ.ರಾಮಪ್ಪ, ಡಿ.ಬಸವರಾಜ, ಬಿ.ಎಚ್‌.ವೀರಭದ್ರಪ್ಪ ಕೂಡ ಪ್ರಬಲ ಆಕಾಂಕ್ಷಿಗಳು. ಈ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಮಾಯಕೊಂಡ

2013

                      ಪಕ್ಷ              ಅಭ್ಯರ್ಥಿಗಳು                   ಪಡೆದ ಮತ

ಗೆಲುವು         ಕಾಂಗ್ರೆಸ್‌            ಕೆ.ಶಿವಮೂರ್ತಿ                 32,435

ಪ್ರತಿಸ್ಪರ್ಧಿ      ಕೆಜೆಪಿ                ಎನ್‌.ಲಿಂಗಣ್ಣ                31,741

ಅಂತರ         694                  (ಶೇ 0.51)

–––––––––––––––

2008       

               ಬಿಜೆಪಿ           ಎಂ.ಬಸವರಾಜನಾಯ್ಕ              52,128

               ಕಾಂಗ್ರೆಸ್‌          ಡಾ.ವೈ.ರಾಮಪ್ಪ                   35,471

ಅಂತರ 16,657 (ಶೇ 14.86)

––––––––––––––––––––––––––––––

2004

             ಬಿಜೆಪಿ                ಎಸ್‌.ಎ.ರವೀಂದ್ರನಾಥ್             62,290

            ಕಾಂಗ್ರೆಸ್‌               ಆರ್‌.ಎಸ್‌.ಶೇಖರಪ್ಪ               53,193

ಅಂತರ 9,097 (ಶೇ 7.06)

–––––––––––––

1999

   ಬಿಜೆಪಿ                ಎಸ್‌.ಎ.ರವೀಂದ್ರನಾಥ್            46,917

   ಕಾಂಗ್ರೆಸ್‌               ಆರ್‌.ಜೆ.ಜಯದೇವಪ್ಪ           32,720

ಅಂತರ 14,197 (ಶೇ 12.64)

––––––––––

1994

  ಬಿಜೆಪಿ                ಎಸ್‌.ಎ.ರವೀಂದ್ರನಾಥ್            48,955

  ಕಾಂಗ್ರೆಸ್‌               ಸಿ.ನಾಗಮ್ಮ ಕೇಶವಮೂರ್ತಿ           22,799

ಅಂತರ 26,156 (ಶೇ 26.19)

––––––––––

1989

      ಕಾಂಗ್ರೆಸ್‌         ಸಿ.ನಾಗಮ್ಮ ಕೇಶವಮೂರ್ತಿ         31,869

      ಜೆಡಿಎಸ್‌          ಕೆ.ಮಲ್ಲಪ್ಪ                            21,141

       ಅಂತರ 10,728 (ಶೇ 12.36)

––––––––––

1983

     ಜೆಎನ್‌ಪಿ       ಕೆ.ಜಿ.ಮಹೇಶ್ವರಪ್ಪ                   32,113

      ಕಾಂಗ್ರೆಸ್‌          ಎಚ್‌.ಡಿ.ಮಹೇಶ್ವರಪ್ಪ              25,036

       ಅಂತರ 7,077 (ಶೇ 11.32)

––––––––––

1985

     ಜೆಎನ್‌ಪಿ         ಕೆ.ಮಲ್ಲಪ್ಪ                          37,137

     ಕಾಂಗ್ರೆಸ್‌          ಕೆ.ಆರ್‌.ಜಯದೇವಪ್ಪ             33,319

      ಅಂತರ 3,818 (ಶೇ 5.13)

––––––––––

1978

     ಕಾಂಗ್ರೆಸ್‌ (ಐ)        ನಾಗಮ್ಮ ಕೇಶವಮೂರ್ತಿ             28,277

      ಜೆಎನ್‌ಪಿ                ಕೆ.ಜಿ.ಮಹೇಶ್ವರಪ್ಪ                  22,556

    ಅಂತರ 5,721 (ಶೇ 9.52)

ಪ್ರತಿಕ್ರಿಯಿಸಿ (+)