ಸೋಮವಾರ, ಡಿಸೆಂಬರ್ 9, 2019
24 °C

ಬಿಜೆಪಿ ಹಿಂದುತ್ವ ಮತ್ತು ಕಾಂಗ್ರೆಸ್ ಹಿಂದುತ್ವದ ಮುಖಾಮುಖಿ

Published:
Updated:
ಬಿಜೆಪಿ ಹಿಂದುತ್ವ ಮತ್ತು ಕಾಂಗ್ರೆಸ್ ಹಿಂದುತ್ವದ ಮುಖಾಮುಖಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನ ಯಾವ ಚುನಾವಣೆಯಲ್ಲೂ ರಾಜ್ಯದ ನಾಯಕತ್ವವನ್ನು ಅರ್ಥಾತ್ ಮುಖ್ಯಮಂತ್ರಿಯನ್ನು ಈ ಬಾರಿಯಂತೆ ಅವಲಂಬಿಸಿರಲಿಲ್ಲ. ಬಿಜೆಪಿಯ ಸ್ಥಿತಿ ಇದಕ್ಕೆ ತದ್ವಿರುದ್ಧ. ಹಿಂದಿನ ಯಾವ ಚುನಾವಣೆಯಲ್ಲೂ ಆ ಪಕ್ಷಕ್ಕೆ ಈ ಸಲದಂತೆ ಅಸಹಾಯಕತೆಯಿಂದ ಕೇಂದ್ರ ನಾಯಕತ್ವದತ್ತ ಅಂದರೆ ಪ್ರಧಾನಮಂತ್ರಿಯತ್ತ ನೋಡಬೇಕಾದ ಪರಿಸ್ಥಿತಿ ಬಂದಿರಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ನಿಂತು ಕರ್ನಾಟಕ ರಾಜಕಾರಣವನ್ನು ಅವಲೋಕಿಸಿದಾಗ ಕಾಣುವ ಚಿತ್ರಣ ಇದು.

ರಾಜ್ಯದಲ್ಲಿ ಚುನಾವಣಾ ಕಣ ಅಣಿಯಾಗುತ್ತಿರುವುದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಣ ಹಣಾಹಣಿಗೆ ಮಾತ್ರವಲ್ಲ. ಕಾದಾಟ ಏನಿದ್ದರೂ ಇತ್ತಣದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅತ್ತಣದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡುವೆ, ಅವರ ನಾಯಕತ್ವದ ಮಾದರಿಗಳ  ನಡುವೆ. ಮಾತ್ರವಲ್ಲ, ಅವರಿಬ್ಬರೂ ಏನನ್ನು ಪ್ರತಿನಿಧಿಸುತ್ತಿದ್ದಾರೋ ಅವುಗಳ ನಡುವೆ.

ಈ ಕಣದಲ್ಲಿ ಮೂರನೆಯದೊಂದು ಪಕ್ಷವೂ ಇದೆ. ಭೂಗೋಳದಲ್ಲಿ ಮಳೆನೆರಳಿನ ಪ್ರದೇಶಗಳಿದ್ದಂತೆ ರಾಜಕೀಯದ ನೆಲದಲ್ಲೂ ದೊಡ್ಡ ಕದನಗಳ ಕಾವಿನಿಂದ ದೂರವಿರುವ ಪ್ರದೇಶಗಳು ಮತ್ತು ಲೆಕ್ಕಾಚಾರಗಳಿರುತ್ತವೆ. ಕರ್ನಾಟಕದ ಚುನಾವಣಾ ಕಣದಲ್ಲಿಯೂ ಇಂಥ ಪ್ರದೇಶಗಳಿವೆ. ಇಲ್ಲಿ ಹನಿಗೂಡಿಸಿಕೊಂಡು ತಮ್ಮ ತೆನೆಯ ಭಾರವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಜೆಡಿಎಸ್ ಅರ್ಥಾತ್ ಜಾತ್ಯತೀತ ಜನತಾದಳದ್ದು. ಸದ್ಯದ ಸ್ಥಿತಿಯಲ್ಲಿ  ಅದರದ್ದು ತೀರಾ ಸಣ್ಣಾಟ ಎಂದು ಕಡೆಗಣಿಸುವಂತಿಲ್ಲ.

ಕರ್ನಾಟಕದಲ್ಲಿ ಅಣಿಯಾಗುತ್ತಿರುವ ಈ ಮುಖಾಮುಖಿಯ ಸ್ವರೂಪ ಏನು ಎನ್ನುವುದನ್ನು ಅರ್ಥಮಾಡಿಕೊಳ್ಳುವ ಮೊದಲು ಈ ರೀತಿಯ ಕದನವೊಂದಕ್ಕೆ ವೇದಿಕೆ ಸಿದ್ಧವಾದದ್ದು ಹೇಗೆ ಅಂತ ನೋಡಬೇಕು.

ವೇದಿಕೆ: ಆಗ–ಈಗ

ಕಳೆದ ಚುನಾವಣೆಯನ್ನು ನೆನಪಿಸಿಕೊಳ್ಳಿ. ಆಗ ಐದು ವರ್ಷಗಳ (2008-13) ಆಡಳಿತ ನಡೆಸಿದ ಬಿಜೆಪಿ ದಯನೀಯ ಸ್ಥಿತಿ ತಲುಪಿತ್ತು. ಬಿಜೆಪಿಯ ಮೂರನೇ ಮುಖ್ಯಮಂತ್ರಿ ಇದ್ದರು. ಆ ಪಕ್ಷದ ಕೆಲವರು ಜೈಲಿನಲ್ಲಿದ್ದರು. ಇನ್ನು ಕೆಲವರು ಜಾಮೀನು ಪಡೆದು ಓಡಾಡಿಕೊಂಡಿದ್ದರು. ಕೆಲವರು ಪಕ್ಷ ಬಿಟ್ಟು ಹೋಗಿ ತಮ್ಮದೇ ಪಕ್ಷ ಕಟ್ಟಿದ್ದರು. ಮೋದಿ ಅಲೆ ಆಗಿನ್ನೂ ಹುಟ್ಟಿಕೊಂಡಿರಲಿಲ್ಲ.

ಬಿಜೆಪಿಯ ಆಡಳಿತದಿಂದ ಜನ ಕಂಗೆಟ್ಟರೋ ಬಿಟ್ಟರೋ ಎನ್ನುವುದಕ್ಕಿಂತ ಹೆಚ್ಚಾಗಿ ಆ ಪಕ್ಷದ ಯಾದವಿ ಕಲಹದಿಂದಾಗಿ ವಿರೋಧ ಪಕ್ಷಗಳಿಗೆ ಅನುಕೂಲಕರವಾದ ಸ್ಥಿತಿ ಇದೆ ಎಂದು ಯಾರಾದರೂ ಆಗ ಊಹಿಸಬಹುದಿತ್ತು. ಹಾಗೆಂದು ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಯಾರೂ ಹೇಳುವ ಸ್ಥಿತಿ ಇರಲಿಲ್ಲ. ಏಕೆಂದರೆ ಆಗಿನ ಕಾಂಗ್ರೆಸ್ ಕೂಡಾ ಸಪ್ಪೆಯಾಗಿ ಕಾಣಿಸುತ್ತಿತ್ತು. ಸಿದ್ದರಾಮಯ್ಯ ಆಗ ಬರೀ ವಿರೋಧಪಕ್ಷದ ನಾಯಕರಷ್ಟೇ ಆಗಿದ್ದರು. ಪರಮೇಶ್ವರ್‌ ಇನ್ನೊಬ್ಬ ಕೆಪಿಸಿಸಿ ಅಧ್ಯಕ್ಷರು ಎನ್ನುವಂತಿದ್ದರು.

ಜನತಾದಳ  ಎಂದಿನಂತೆ ಪಕ್ಕದಲ್ಲಿ ನಿಂತು ಲೆಕ್ಕಾಚಾರ ನಡೆಸುತ್ತಿತ್ತು. ಬಿಜೆಪಿಯ ಯಡಿಯೂರಪ್ಪ ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಲು ಶಪಥ ಮಾಡಿದ್ದರು. ಬಿಜೆಪಿಯ ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಕಟ್ಟಿ ಕ್ರಾಂತಿ ಮಾಡಲು ಹೊರಟಿದ್ದರು. ಒಡೆದ ಮನೆಯಾಗಿದ್ದ ಬಿಜೆಪಿಯಿಂದಾಗಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುವ ಬದಲು ಕಾಂಗ್ರೆಸ್ 121 ಸ್ಥಾನಗಳನ್ನು ಪಡೆದು ಗೆದ್ದಿತು.

ಮಾಮೂಲು ಸ್ಥಿತಿಯಲ್ಲಿ ಈ ಚುನಾವಣೆಯ ಹೊತ್ತಿಗೆ ಹಿಂದಿನ ಚುನಾವಣೆಯ ಸಂದರ್ಭದಲ್ಲಿದ್ದ ಸ್ಥಿತಿಗೆ ವಿರುದ್ಧವಾದ ಪರಿಸ್ಥಿತಿ  ಇರಬೇಕಿತ್ತು. ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿರಬೇಕಿತ್ತು. ಬಿಜೆಪಿಯನ್ನು ಬಿಟ್ಟು ಹೋದವರೆಲ್ಲ ಮರಳಿ ಪಕ್ಷ ಸೇರಿರುವುದರಿಂದ ಆ ಪಕ್ಷಕ್ಕೆ ಗೆಲುವು ನಿಚ್ಚಳ ಎನ್ನುವ ನಿರೀಕ್ಷೆ ಸರ್ವತ್ರ ಹುಟ್ಟಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ.

ಆಳುವ ಪಕ್ಷದಲ್ಲಿ ವಿಪರೀತ ಅಂತಃಕಲಹ ಇದ್ದರೆ ಅಥವಾ ಸರ್ಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಮತ್ತು ದುರಾಡಳಿತದ ದೂರುಗಳಿದ್ದಾಗ ಆಡಳಿತ ವಿರೋಧಿ ಅಲೆ ಹುಟ್ಟಿಕೊಳ್ಳುತ್ತದೆ. ಅದು ಹೇಗೋ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇವರೆಡೂ ದೊಡ್ಡ ಮಟ್ಟಿಗೆ ಆಗದಂತೆ ನಡೆದುಕೊಂಡಿದೆ. ದೊಡ್ಡ ಮಟ್ಟಿನ ಆಡಳಿತ ವಿರೋಧಿ ಅಲೆ ಇಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಇನ್ನೇನು ಗೆದ್ದೇ ಬಿಡುತ್ತದೆ ಎಂದು ನಿರೀಕ್ಷಿಸುವಂತಹ ಜನಪ್ರಿಯತೆಯನ್ನು ಸರ್ಕಾರ ಗಳಿಸಿದೆಯೇ ಎಂದರೆ ಅದೂ ಇಲ್ಲ. ಆದರೆ ಒಂದು ಮಾತನ್ನು ಸ್ಪಷ್ಟವಾಗಿ ಹೇಳಬಹುದು. ಕಾಂಗ್ರೆಸ್ 2013ರಲ್ಲಿ ಇದ್ದಂತಹ ನಿಸ್ತೇಜ ಸ್ಥಿತಿಯಲ್ಲಿಲ್ಲ. ಆಗ ಕಾಂಗ್ರೆಸ್ಸನ್ನು ನೋಡಿದರೆ ‘ನಾಯಕನಾರು?’ ಎನ್ನುವ ಕನ್ನಡ ಸಿನಿಮಾ ಹಾಡು ನೆನಪಾಗುತ್ತಿತ್ತು. ಈ ಬಾರಿ ನಾಯಕತ್ವದ ಕುರಿತು ಅಸ್ಪಷ್ಟತೆ ಇಲ್ಲ. ನಾಯಕ ಯಾರು ಅಂತ ಎಲ್ಲರಿಗೂ ತಿಳಿದಿದೆ.

ಸಿದ್ದರಾಮಯ್ಯ ಐದು ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವಾಗ ಅವರ ಬಗ್ಗೆ ಇದ್ದ ಅಭಿಪ್ರಾಯ ಅವರೊಬ್ಬರು ಉತ್ತಮ ಆಡಳಿತ

ಗಾರ ಎಂಬುದಾಗಿತ್ತು. ಅವರ ರಾಜಕೀಯ ನಾಯಕತ್ವದ ಕುರಿತು ಆಗ ಅಷ್ಟೇನೂ ಭರವಸೆಯ ಮಾತುಗಳು ಕೇಳಿಬರುತ್ತಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಇದು ತಲೆಕೆಳಗಾಗಿದೆ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಚರಿತ್ರೆ ನೆನಪಿಡುವಂತಹದ್ದು ಅಂತ ಏನೂ ಆಗಿರುವಂತೆ ಕಾಣಿಸುವುದಿಲ್ಲ. ಆದರೆ ರಾಜಕೀಯದಲ್ಲಿ ಸಿದ್ದರಾಮಯ್ಯ ಒಬ್ಬ ಚಾಣಾಕ್ಷ ನಾಯಕ ಎನ್ನುವುದು ಈ ಅವಧಿಯಲ್ಲಿ ಸಾಬೀತಾಗಿಹೋಗಿದೆ. ಕಾಂಗ್ರೆಸ್ಸಿಗೆ ವಲಸೆ ಬಂದವರಾದರೂ ಅವರೀಗ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ.  ತಮ್ಮದೇ ಆದ ರಾಜಕೀಯ ನುಡಿಗಟ್ಟನ್ನು ಅವರು ರೂಢಿಸಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್ಸಿನ ಮಟ್ಟಿಗೆ ಅವರು ಜನರನ್ನು ಸೆಳೆಯಬಲ್ಲ ನಾಯಕನಾಗಿ ಹೊರಹೊಮ್ಮಿದ್ದಾರೆ.

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಎದುರಿಸುತ್ತಿರುವ ಮೊದಲ ಚುನಾವಣೆ ಇದು (ಗುಜರಾತ್ ಚುನಾವಣೆಯ ಮಧ್ಯೆ ಅವರು ಅಧ್ಯಕ್ಷ ಸ್ಥಾನಕ್ಕೇರಿದ್ದು). ಅವರು ಇಲ್ಲಿಯೂ ರ‍್ಯಾಲಿ ಮಾಡಬಹುದು,  ದೇವಸ್ಥಾನ ಸುತ್ತಬಹುದು. ಆದರೆ ಚುನಾವಣೆಯ ಎಲ್ಲಾ ಆಗುಹೋಗುಗಳೂ  ಸಿದ್ದರಾಮಯ್ಯ ಸುತ್ತವೇ ಇರಲಿವೆ. ಕಾಂಗ್ರೆಸ್ ಪ್ರಚಾರದ ಕೇಂದ್ರ ಬಿಂದವೂ ಸಿದ್ದರಾಮಯ್ಯನವರೇ ಆಗಿರುತ್ತಾರೆಂಬುದನ್ನು ಇಲ್ಲಿಯ ತನಕದ ಬೆಳವಣಿಗೆಗಳು ಹೇಳುತ್ತಿವೆ.

ಈಗ ಬಿಜೆಪಿಯ ವಿಚಾರಕ್ಕೆ ಬರೋಣ. ಮೇಲ್ನೋಟಕ್ಕೆ  ಬಿಜೆಪಿ ಈ ಬಾರಿ ಒಡೆದ ಮನೆ ಅಲ್ಲ ಆದರೂ ಅದು ರಾಜ್ಯ ನಾಯಕರನ್ನಷ್ಟೇ ನೆಚ್ಚಿಕೊಂಡು ಚುನಾವಣೆ ಎದುರಿಸುವ ಸ್ಥಿತಿಯಲ್ಲಿಲ್ಲ. ಲಿಂಗಾಯತರ ಮತಗಳನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ನಡೆಸಿ ಬಿಜೆಪಿಯು ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿತು, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿತು. ಆದರೆ ಜನ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಆಗಬಾರದ್ದೆಲ್ಲಾ ಆಗಿಹೋದದ್ದನ್ನು ಮರೆತಿದ್ದಾರೆ ಎನ್ನುವ ಹಾಗಿಲ್ಲ. ಹೋದ ಚುನಾವಣೆಯ ಹೊತ್ತಿಗೆ ಬಿಜೆಪಿಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರಧಾರಿ ಯಡಿಯೂರಪ್ಪನವರೇ ಎನ್ನುವ ಕಹಿ ಸತ್ಯವನ್ನು ಬಿಜೆಪಿಯ ಒಳಗಿನವರು ಮರೆತ ಹಾಗೆ ಕಾಣಿಸುವುದಿಲ್ಲ. ಹೋಗಲಿ ಲಿಂಗಾಯತರ ಮತವನ್ನಾದರೂ ಅವರು ಬಿಜೆಪಿಗೆ ತಂದಾರು ಎನ್ನೋಣ ಎಂದರೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹುಟ್ಟಿಕೊಂಡ ಚಳವಳಿ ಕಾವು ಪಡೆದುಕೊಂಡು ಆ ಲೆಕ್ಕಾಚಾರವನ್ನೂ ತಿರುವು ಮುರುವು ಮಾಡಿದೆ.

ಹಿಂದೂ ಧರ್ಮದ ಏಕತೆಯನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿಯಲ್ಲಿರುತ್ತಾ ಯಡಿಯೂರಪ್ಪ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಜೈ ಎನ್ನುವ ಹಾಗಿಲ್ಲ. ಈ ಅನಿವಾರ್ಯ ಮೌನ ಯಡಿಯೂರಪ್ಪನವರನ್ನು ದೊಡ್ಡ ಸಂಖ್ಯೆಯ ಲಿಂಗಾಯತರು ಪ್ರಶ್ನಿಸುವಂತೆ ಮಾಡಿದೆ. ಲಿಂಗಾಯತ ಚಳವಳಿಯು ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳುವ ಹಾಗಿಲ್ಲ. ಆದರೆ ಲಿಂಗಾಯತರ ಪ್ರಶ್ನಾತೀತ ನಾಯಕ ಎಂಬ ಪಟ್ಟವನ್ನು ಯಡಿಯೂರಪ್ಪನವರಿಂದ ಕಿತ್ತುಕೊಂಡಿದೆ ಎಂಬುದು ವಾಸ್ತವ. ಯಾವ ಕಾರಣಕ್ಕೋಸ್ಕರ ಬಿಜೆಪಿಯು ಯಡಿಯೂರಪ್ಪ ಅವರನ್ನು ಮುಂಚೂಣಿಗೆ ತಂದಿತೋ ಆ ಕಾರಣವೇ ಈಗ  ಪ್ರಸ್ತುತತೆ ಕಳೆದುಕೊಂಡಿದೆ. ಅತ್ತ ಕಾಂಗ್ರೆಸ್ಸಿನ ಮೇಲೆ ಎರಗಲು ಬಿಜೆಪಿಗೆ ದೊಡ್ಡ ವಸ್ತುವೇನೂ ಇಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅದರ ಬಳಿ ದೊಡ್ಡ ಪುರಾವೆಗಳೇನೂ ಇಲ್ಲ. ಸುಮ್ಮನೆ ಭ್ರಷ್ಟಾಚಾರ ಎಂದು ಬೊಬ್ಬೆ ಹೊಡೆಯುವುದು ಚುನಾವಣೆ ಎದುರಿಸುವಷ್ಟು ಶಕ್ತಿ ಇರುವ ಅಸ್ತ್ರವಲ್ಲ. ಅದೂ ಭ್ರಷ್ಟಾಚಾರದ ವಿಚಾರದಲ್ಲಿ ತಮ್ಮನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ಮೀರಿಸಿದೆ ಎಂದು ಚುನಾವಣೆಯಲ್ಲಿ ಹೇಳಲು ಬಿಜೆಪಿಗೆ ಇನ್ನೂ ದೊಡ್ಡ ಸರಕಿನ ಅವಶ್ಯಕತೆ ಇದೆ.

ಬಿಜೆಪಿಗೆ ಇರುವ ಮತ್ತೊಂದು ದೊಡ್ಡ ಕೊರತೆಯೆಂದರೆ ಕನಸನ್ನು ಬಿತ್ತಿ ಪಕ್ಷದತ್ತ ಜನರನ್ನು ಆಕರ್ಷಿಸುವ ದೊಡ್ಡ ಸ್ಥಳೀಯ ನಾಯಕತ್ವ. ಯಡಿಯೂರಪ್ಪನವರು ತಮ್ಮ ಅನಿವಾರ್ಯ ಮೌನದಲ್ಲಿದ್ದಾರೆ. ಸಾಮೂಹಿಕ ನಾಯಕತ್ವವನ್ನು ಮುಂದಿಟ್ಟು ದೂರದರ್ಶಿತ್ವ ಇರುವ ಯೋಚನೆಗಳನ್ನು ಮುಂದಿಡುವ ಪ್ರಯತ್ನವೂ ಈ ತನಕ ಆಗಿಲ್ಲ.

ಈ ದೃಷ್ಟಿಯಲ್ಲಿ ನೋಡಿದರೆ ಕಾಂಗ್ರೆಸ್ಸಿನ ಮಟ್ಟಿಗೆ ಹೋದ ಚುನಾವಣೆಗೂ ಈ ಚುನಾವಣೆಗೂ ಇರುವ ವ್ಯತ್ಯಾಸ ಏನು ಅಂದರೆ ಸಿದ್ದರಾಮಯ್ಯ ಅವರ ನಾಯಕತ್ವ. ಬಿಜೆಪಿಯ ಮಟ್ಟಿಗೆ ಅದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ!

ಹಣಾಹಣಿಯ ಸ್ವರೂಪ

ಕರ್ನಾಟಕದ ಚುನಾವಣಾ ಸಮರದ ಸ್ವರೂಪ ಹೇಗಿರಬಹುದು ಎಂದು ಊಹಿಸಬೇಕಾದರೆ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವ ಏನನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ನಾಯಕತ್ವ ಪ್ರತಿನಿಧಿಸಿದ್ದು ಹಿಂದುತ್ವ ಮತ್ತು ಅಭಿವೃದ್ಧಿಗಳೆರಡೂ ಸೇರಿದ ಮೋಡಿ ಮಾಡುವಂಥ ಮಿಶ್ರಣವೊಂದನ್ನು. 2017ರ ಗುಜರಾತ್ ಚುನಾವಣೆಯ ಹೊತ್ತಿಗೆ ಇದರಲ್ಲಿ ಅಭಿವೃದ್ಧಿಯ ಪ್ರಮಾಣ ಕಡಿಮೆಯಾಗಿ ಹಿಂದುತ್ವ ವಿಜೃಂಭಿಸಿತ್ತು. ಕರ್ನಾಟಕದಲ್ಲಂತೂ ಮೋದಿಯವರು ಅಭಿವೃದ್ಧಿಯ ಬಗ್ಗೆ ಕನಸು ಬಿತ್ತುವುದಕ್ಕೆ ಬಹಳಷ್ಟು ಪ್ರಯಾಸ ಪಡಬೇಕಾಗುತ್ತದೆ.

ಕರ್ನಾಟಕದಲ್ಲಿ ಮೋದಿಯವರು  ‘ಸಬ್  ಕಾ ಸಾತ್ ಸಬ್‌ ಕಾ ವಿಕಾಸ್’ ಎಂದರೆ  ಇಲ್ಲಿನ ಜನ ‘ಮಹದಾಯಿಗೆ ಏನು ಮಾಡಿದಿರಿ?’, ‘ಕಾವೇರಿಗಾಗಿ ಏನು ಮಾಡಿದಿರಿ?’ ‘ಉದ್ಯೋಗ ನೀಡಲು ಏನು ಮಾಡಿದಿರಿ’ ಮತ್ತು ‘ಹಿಂದಿ ಯಾಕೆ ಹೇರುತ್ತಿದ್ದೀರಿ’  ಅಂತ ಕೇಳುವ ಸ್ಥಿತಿ ಇದೆ. ಹಾಗಾಗಿ ಕರ್ನಾಟಕದಲ್ಲಿ ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ ದೊಡ್ಡ ಮಾರುಕಟ್ಟೆ ಇದೆ ಅಂತ ಅನ್ನಿಸುವುದಿಲ್ಲ. ಉಳಿದದ್ದು ಹಿಂದುತ್ವ  ಮಾತ್ರ. ಹಿಂದುತ್ವವನ್ನು ಕೂಡ ಉತ್ತರ ಭಾರತದಲ್ಲಿ ಮಾರಿದಷ್ಟು ಸುಲಭವಾಗಿ ಇಲ್ಲಿ ಮಾರುವಂತಿಲ್ಲ. ಇಡೀ ಕರ್ನಾಟಕವಂತೂ ದಕ್ಷಿಣ ಕನ್ನಡವಲ್ಲ. ಇಲ್ಲಿ ಹಿಂದುತ್ವವನ್ನು ಹೆಚ್ಚು ಹೆಚ್ಚು ಮಾರಬೇಕಾದರೆ ಇರುವ ದಾರಿ ಒಂದೇ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸಬೇಕು. ಕಾಂಗ್ರೆಸ್ ಮುಸ್ಲಿಂ ಪಕ್ಷಪಾತಿ ಎಂದು ಬಿಂಬಿಸಬೇಕು.

ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ರಂಗಸಜ್ಜಿಕೆ ನಡೆಯುತ್ತಿದೆ. ರಾಜ್ಯ ಬಿಜೆಪಿಯ ನಾಯಕರು ಸಾಕಷ್ಟು ಗ್ರೌಂಡ್ ವರ್ಕ್ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ  ಈ  ಕಥನವನ್ನು ಜನರಿಗೆ ದಾಟಿಸಲು ಸೇಲ್ಸ್-ಮ್ಯಾನ್ ಆಗಿ ಮೋದಿ ಬರಲಿದ್ದಾರೆ. ಯೋಗಿ ಆದಿತ್ಯನಾಥ್ ಸಾಥ್ ನೀಡಲಿದ್ದಾರೆ ಎನ್ನುವ ಸೂಚನೆಗಳೂ ಇವೆ. ಇದನ್ನು ಎದುರಿಸಲು ಸಿದ್ದರಾಮಯ್ಯ ಅವರ ನಾಯಕತ್ವ ಮಾದರಿ ಸಾಕೆ? ಸಿದ್ದರಾಮಯ್ಯ ನಾಯಕತ್ವ ಎನ್ನುವುದು ಅವರ ಅಹಿಂದ ರಾಜಕೀಯದ ಆಯಾಮವಾಗಿ ಬೆಳೆದದ್ದು. ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ, ಒಂದು ರೀತಿಯ ಗ್ರಾಮ್ಯ ರಾಜಕೀಯ ನುಡಿಗಟ್ಟಿನ ಮೂಲಕ ರೂಢಿಸಿಕೊಂಡು ರೂಪುಗೊಂಡ ಮಾದರಿ ನಾಯಕತ್ವ ಅದು. ಅದು ಜನಪ್ರಿಯತೆ ಗಳಿಸುವುದರ ಜನತೆ ಜನವಿರೋಧವನ್ನು ಸ್ವಲ್ಪಮಟ್ಟಿಗೆ ಹುಟ್ಟುಹಾಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಅದಿನ್ನೂ ಚುನಾವಣಾ ಪರೀಕ್ಷೆ ಎದುರಿಸಿಲ್ಲ. ಆದುದರಿಂದ ಬಿಜೆಪಿ ಕಾಂಗ್ರೆಸ್ಸಿನ ವಿರುದ್ಧ ಬಳಸಲಿರುವ ‘ಹಿಂದೂ-ವಿರೋಧಿ’ ಅಸ್ತ್ರವನ್ನು ಎದುರಿಸಲು ಕಾಂಗ್ರೆಸ್ ‘ನಾವೂ ಹಿಂದೂ’  ‘ನಮ್ಮದು ಎಲ್ಲರನ್ನೂ ಒಳಗೊಳ್ಳುವ ಹಿಂದುತ್ವ’ ಎನ್ನುವ ತಿರುಮಂತ್ರದ ಮೊರೆ ಹೋಗುವ  ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ರಾಷ್ಟ್ರ ಮಟ್ಟದಲ್ಲೂ ಇದು ಕಾಂಗ್ರೆಸ್ಸಿನ ಹೊಸ ತಂತ್ರ. ಗುಜರಾತಿನಲ್ಲಿ ಸ್ವಲ್ಪ ಮಟ್ಟಿಗೆ ಪರೀಕ್ಷೆಗೊಳಗಾದ ಈ ತಂತ್ರವನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ದೊಡ್ಡ ಮಟ್ಟಿಗೆ ಪ್ರಯೋಗಕ್ಕಿಳಿಸುವ ಮೊದಲ ಸೂಚನೆಗಳು ಸಿದ್ದರಾಮಯ್ಯ ಅವರ ಇತ್ತೀಚೆಗಿನ ರಾಜ್ಯವ್ಯಾಪಿ ಯಾತ್ರೆಯ ವೇಳೆಗೆ ಸ್ಪಷ್ಟವಾಗಿ ಲಭಿಸಿವೆ.

ಒಟ್ಟರ್ಥದಲ್ಲಿ ಗ್ರಹಿಸಿದರೆ ಈ ಚುನಾವಣೆಯಲ್ಲಿ  ಸಿದ್ದರಾಮಯ್ಯ ಮತ್ತು ಮೋದಿಯವರ ನಾಯಕತ್ವದ ಮಾದರಿಗಳು ಮಾತ್ರ ಮುಖಾಮುಖಿಯಾಗುತ್ತಿಲ್ಲ. ಇವುಗಳೊಂದಿಗೆ ಹಿಂದುತ್ವದ ಎರಡು ಮಾದರಿಗಳ ಹಣಾಹಣಿಯೂ ಆಗಲಿದೆ. ಜತೆಗೆ ಕಾಂಗ್ರೆಸ್ಸಿನ ಅದೃಶ್ಯ ಮತದಾರ ಮತ್ತು ಅಮಿತ್ ಶಾ ಅವರ ಮತಗಟ್ಟೆ ಮಟ್ಟದ ಅದೃಶ್ಯ ತಂತ್ರಗಳ ಮುಖಾಮುಖಿಯೂ ಆಗಲಿದೆ.

1. ಕೇಂದ್ರ ನಾಯಕತ್ವದತ್ತ ಮುಖ ಮಾಡಿದ ಬಿಜೆಪಿ. ರಾಜ್ಯ ನಾಯಕತ್ವ ನಂಬಿದ ಕಾಂಗ್ರೆಸ್

2. ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಹಾಗೆಂದು ಜನಪ್ರಿಯತೆಯ ಉತ್ತುಂಗವನ್ನೂ ತಲುಪಿಲ್ಲ.

3. ಅಭಿವೃದ್ಧಿ ಕನಸು ಮಾರಲು ಬಿಜೆಪಿಗೆ ಪ್ರಯಾಸಕರ. ಹಿಂದುತ್ವವೇ ಏಕೈಕ ಮಂತ್ರ

4. ಎಲ್ಲರನ್ನೂ ಒಳಗೊಳ್ಳುವ ಹಿಂದುತ್ವ ಮಂತ್ರ ಪಠಿಸುತ್ತಿರುವ ಕಾಂಗ್ರೆಸ್

5. ಸಿದ್ದರಾಮಯ್ಯ ಮತ್ತು ಮೋದಿ ನಾಯಕತ್ವದ ಮಾದರಿ ನಡುವೆ ಹಣಾಹಣಿ

ಪ್ರತಿಕ್ರಿಯಿಸಿ (+)