ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪ ಕ್ರಿಕೆಟ್‌ನಿಂದ ನಿವೃತ್ತನಾಗಿಬಿಡು ಅಂದಿದ್ದರು’

‘ಎ ಸೆಂಚೂರಿ ಈಸ್‌ ನಾಟ್‌ ಇನಫ್‌’ ಪುಸ್ತಕದಲ್ಲಿ ಅನಿಲ್ ಕುಂಬ್ಳೆ ಬೆಂಬಲ ನೆನಪಿಸಿಕೊಂಡ ಗಂಗೂಲಿ
Last Updated 4 ಫೆಬ್ರುವರಿ 2018, 19:15 IST
ಅಕ್ಷರ ಗಾತ್ರ

ನವದೆಹಲ: ‘ಆಸ್ಟ್ರೇಲಿಯಾದ ಗ್ರೆಗ್‌ ಚಾಪೆಲ್‌, ಭಾರತ ತಂಡದ ಕೋಚ್‌ ಆಗಿದ್ದಾಗ, ನನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದರು. ಜೊತೆಗೆ ಕೆಲ ಸರಣಿಗಳಿಗೆ ತಂಡದಲ್ಲಿಯೂ ಸ್ಥಾನ ನೀಡಿರಲಿಲ್ಲ. ಸಂಕಷ್ಟದ ಆ ದಿನಗಳಲ್ಲಿ ನನ್ನ ತೊಳಲಾಟ ಕಂಡು ಅಪ್ಪ ಚಾಂಡೀದಾಸ್‌, ಕ್ರಿಕೆಟ್‌ಗೆ ವಿದಾಯ ಹೇಳಿಬಿಡು ಅಂದಿದ್ದರು’-

ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್‌ ಗಂಗೂಲಿ, ತಮ್ಮ ಜೀವನವನ್ನು ಆಧರಿಸಿ ಬರೆದಿರುವ ‘ಎ ಸೆಂಚೂರಿ ಈಸ್‌ ನಾಟ್‌ ಇನಫ್‌’ ಪುಸ್ತಕದಲ್ಲಿ ಹಿಂದಿನ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಗೌತಮ್‌ ಭಟ್ಟಾಚಾರ್ಯ ಅವರು ಸಹಲೇಖಕರಾಗಿರುವ ಈ ಪುಸ್ತಕವನ್ನು ಜಗ್ಗರ್‌ನಾಟ್‌ ಬುಕ್ಸ್‌ ಪ್ರಕಾಶನ ಸಂಸ್ಥೆ ಹೊರತರುತ್ತಿದ್ದು, ಪುಸ್ತಕದ ಮೊದಲ ಅಧ್ಯಾಯವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘ಅಪ್ಪ, ಕ್ರಿಕೆಟ್‌ನಿಂದ ನಿವೃತ್ತನಾಗು ಅಂದಾಗ, ನನ್ನಲ್ಲಿ ಇನ್ನೂ ಕ್ರಿಕೆಟ್‌ ಆಡುವ ಸಾಮರ್ಥ್ಯ ಇದೆ. ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆಯುತ್ತೇನೆ. ಆ ದಿನಕ್ಕಾಗಿ ನೀವು ಕಾಯಿರಿ ಎಂದಿದ್ದೆ. ಸಂಕಷ್ಟದ ದಿನಗಳಲ್ಲಿ ಸೋಲೊಪ್ಪಿಕೊಳ್ಳದೆ ದಿಟ್ಟತನದಿಂದ ಎಲ್ಲಾ ಸವಾಲುಗಳನ್ನು ಮೆಟ್ಟಿನಿಲ್ಲಬೇಕು ಎಂದು ಆಗ ನಿರ್ಧರಿಸಿದ್ದೆ’ ಎಂದು ಸೌರವ್‌ ಬರೆದಿದ್ದಾರೆ.

‘ತಂಡದಿಂದ ಹೊರಗಿದ್ದ ದಿನಗಳಲ್ಲಿ ತುಂಬಾ ನೋವು ಅನುಭವಿಸಿದ್ದೆ. ಆಗ ಭಾರತದ ನಾಯಕರಾಗಿದ್ದ ಅನಿಲ್‌ ಕುಂಬ್ಳೆ ಅವರಿಗೆ ಕರೆ ಮಾಡಿ, ನಾನು ಆಡುವ ಬಳಗದಲ್ಲಿ ಸ್ಥಾನ ಪಡೆಯುವಷ್ಟು ಸಮರ್ಥನಲ್ಲವೇ ಎಂದು ಪ್ರಶ್ನಿಸಿದ್ದೆ. ದಿಲೀಪ್‌ ವೆಂಗ್‌ಸರ್ಕರ್‌ ನೇತೃತ್ವದ ಆಯ್ಕೆ ಸಮಿತಿ ನಿಮ್ಮನ್ನು ತಂಡದಿಂದ ಹೊರಗಿಡುವ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಅವರು ಕೇಳಿಲ್ಲ ಎಂದು ಅನಿಲ್‌ ಉತ್ತರಿಸಿದ್ದರು’ ಎಂದು ಬರೆದುಕೊಂಡಿದ್ದಾರೆ.

‘ನಾನು ಇನ್ನೂ ತಂಡದಲ್ಲಿ ಆಡ ಬೇಕು ಅಂತ ನಿಮಗೆ ಅನಿಸು ತ್ತದೆಯೇ ಎಂದೂ ಕುಂಬ್ಳೆ ಅವ ರನ್ನು ಪ್ರಶ್ನಿಸಿದ್ದೆ. ಆಗ ಅವರು ಖಂಡಿತವಾಗಿಯೂ ನೀವು ತಂಡದಲ್ಲಿ ಇರಬೇಕು. ಮುಂಬರುವ ಟೆಸ್ಟ್‌ ಸರಣಿಗೆ ತಂಡದ ಆಯ್ಕೆ ವೇಳೆ ನನ್ನ ಅಭಿಪ್ರಾಯ ಕೇಳಿದರೆ ಮೊದಲು ನಿಮ್ಮ ಹೆಸರು ಸೂಚಿಸುತ್ತೇನೆ ಅಂದರು. ಅವರ ಮಾತು ಕೇಳಿ ತುಂಬಾ ಖುಷಿಯಾಯಿತು’ ಎಂದು ಉಲ್ಲೇಖಿಸಿದ್ದಾರೆ.

‘ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಾಗ ಚಂಡೀಗಡದಲ್ಲಿ ನಡೆಯುತ್ತಿದ್ದ ದೇಶಿ ಲೀಗ್‌ ಜೆ.ಪಿ.ಆತ್ರೇಯ ಸ್ಮಾರಕ ಟ್ರೋಫಿಯಲ್ಲಿ ಆಡಿದೆ. ಬಳಿಕ ಕೆ.ಶ್ರೀಕಾಂತ್‌ ನೇತೃತ್ವದ ಆಯ್ಕೆ ಸಮಿತಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ನೀಡಿತು. ಜೊತೆಗೆ ಕಾಂಗರೂಗಳ ನಾಡಿನ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ ಪ್ರಕಟಿಸಿದ ಅಧ್ಯಕ್ಷರ ಇಲೆವನ್‌ ತಂಡದಲ್ಲೂ ಅವಕಾಶ ನೀಡಿತ್ತು. ಸಾಮಾನ್ಯವಾಗಿ ಯುವ ಆಟಗಾರರು ಮತ್ತು ನಿವೃತ್ತಿಯ ಅಂಚಿನಲ್ಲಿರುವ ಹಿರಿಯರನ್ನು ಅಧ್ಯಕ್ಷರ ಇಲೆವನ್‌ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಅವರ ಈ ನಿರ್ಧಾರ ನನಗೆ ತುಂಬಾ ಬೇಸರ ತರಿಸಿತ್ತು. ಆ ಕೂಡಲೇ ಅಪ್ಪನ ಬಳಿ ಹೋಗಿ ನಿವೃತ್ತಿ ಪ್ರಕಟಿಸುವ ವಿಷಯ ಹೇಳಿದೆ. ಮೂರು ವರ್ಷಗಳ ನಂತರ ನಾನಾಡಿದ ಮಾತು ಕೇಳಿ ಅವರಿಗೆ ಅಚ್ಚರಿಯಾಗಿತ್ತು’ ಎಂದು ನೆನಪಿನ ಪುಟ ತಿರುವಿ ಹಾಕಿದ್ದಾರೆ.

‘ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿದಾಯದ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದೆ. ನಾಗಪುರದಲ್ಲಿ ಎರಡನೇ ಪಂದ್ಯದಲ್ಲಿ 85ರನ್‌ ಗಳಿಸಿದ್ದೆ. ಕೊನೆಯ ದಿನ ನೀವು ತಂಡವನ್ನು ಮುನ್ನಡೆಸಬೇಕು ಎಂದು ಪಂದ್ಯದ ಹಿಂದಿನ ದಿನ ನಾಯಕ ಮಹೇಂದ್ರ ಸಿಂಗ್‌ ದೋನಿ ಕೇಳಿಕೊಂಡಾಗ ಅವರ ಮನವಿಯನ್ನು ನಯವಾಗಿಯೇ ತಿರಸ್ಕರಿಸಿದ್ದೆ. ಆದರೆ ಅವರು ಬಿಡಲಿಲ್ಲ. ಆ ನಂತರ ಮಹಿ ಬಳಿ ಹೋಗಿ ಇದು ನಿಮ್ಮ  ಕೆಲಸ ನೀವೇ ನಿಭಾಯಿಸಿ ಎಂದಾಗ ಇಬ್ಬರೂ ನಕ್ಕಿದ್ದೆವು’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT