ಸೋಮವಾರ, ಡಿಸೆಂಬರ್ 9, 2019
22 °C

ಹೀಗಾಗಿದೆ ನೋಡಿ ಮೆಜೆಸ್ಟಿಕ್

Published:
Updated:
ಹೀಗಾಗಿದೆ ನೋಡಿ ಮೆಜೆಸ್ಟಿಕ್

ಕಂಗಳ ತುಂಬಾ ಕನಸು ಹೊತ್ತು, ಉದ್ಯೋಗ ಅರಸಿ ಹಳ್ಳಿಯೊಂದರಿಂದ ರಾಜಧಾನಿಗೆ ಬಂದಿದ್ದ ಆ ತರುಣ. ಅಪ್ಪ ಕೈಖರ್ಚಿಗೆಂದು ಕೊಟ್ಟಿದ ರೊಕ್ಕ ಜೇಬಿನಲ್ಲಿದ್ದುದನ್ನು ಪದೇಪದೇ ಖಾತ್ರಿಪಡಿಸಿಕೊಳ್ಳುತ್ತಿದ್ದ. ಮೆಜೆಸ್ಟಿಕ್‌ ಬಸ್‌ನಿಲ್ದಾಣದಿಂದ ಹೊರಹೋಗಲೆಂದು ಅಂಡರ್‌ಪಾಸ್‌ನತ್ತ ಹೆಜ್ಜೆ ಹಾಕಿದ. ಇನ್ನೇನು ಅಂಡರ್‌ಪಾಸ್ ದಾಟಿ ಬಿಎಂಟಿಸಿ ಬಸ್‌ನಿಲ್ದಾಣದ ಕಡೆ ಹೆಜ್ಜೆ ಹಾಕಬೇಕು ಅನ್ನುವಷ್ಟರಲ್ಲಿ ಅವಳು ಬಂದುಬಿಟ್ಟಳು.

ಮುಂದೆ ಹೋಗುತ್ತಿದ್ದವನ ಭುಜಕ್ಕೆ ಭುಜ ತಾಗಿಸಿ, ಕಣ್ಸನ್ನೆ ಮಾಡುತ್ತಲೇ ‘ಬರ್ತೀಯಾ ನನ್ ಜತೆಗೆ’ ಎಂದು ಕಣ್ಣುಮಿಟುಕಿಸಿದಳು. ಗುರುತು ಪರಿಚಯ ಇಲ್ಲದಾಕೆ ಎದುರು ನಿಂತು, ‘ಬರ್ತೀಯಾ’ ಅಂತ ಕೇಳಿದ ತಕ್ಷಣ ಇವನಿಗೆ ಭಯ. ‘ಎಲ್ಲಿಗೆ ಬರಬೇಕು? ಯಾಕೆ ಬರಬೇಕು? ನೀವು ಯಾರು?’ ಎಂಬ ಪ್ರಶ್ನೆಗಳು ಅವನ ಗಂಟಲು ದಾಚಿ ಈಚೆ ಬರುವ ಮುನ್ನವೇ ಅವನನ್ನು ನಾಲ್ಕೈದು ಯುವಕರ ಗುಂಪು ಅವನನ್ನು ಸುತ್ತುವರಿದು ‘ಯಾರು ಬೇಕು ಹೇಳು’ ಎಂದು ದಬಾಯಿಸುವಂತೆ ಪ್ರಶ್ನಿಸುತ್ತಾ ದರ ನಿಗದಿ ಶುರು ಮಾಡಿತು. ಇದ್ದಬದ್ದ ಅಷ್ಟೂ ಶಕ್ತಿಯನ್ನೂ ಒಗ್ಗೂಡಿಸಿ ಹೊರಗೆ ಓಡಿಬಂದವನಿಗೆ ಅವನ ಹೃದಯದ ಬಡಿತ ಅವನಿಗೇ ಕೇಳಿಸುತ್ತಿತ್ತು. 

–ಇದು ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ಕಂಡ ನೋಟ. ಪರ ಊರುಗಳಿಂದ ಬರುವ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡಿರುವ ಬೆಲೆವೆಣ್ಣುಗಳು ಅಸಹ್ಯ ರೀತಿಯಲ್ಲಿ ಮೈತೋರಿಸಿ ಕಾಮಕೇಳಿಗೆ ಕರೆಯುವುದು ಇಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಕಣ್ಣಿಗೆ ಕಾಣಿಸುವ ಎಲ್ಲ ಗಂಡಸರೂ ಇಲ್ಲಿ ಸಾಲುಗಟ್ಟಿ ನಿಂತಿರುವ ತಲೆಹಿಡುಕರಿಗೆ ‘ಗಿರಾಕಿ’ಗಳಂತೆ ಕಾಣಿಸುತ್ತಾರೆ. ಮೊದಲ ಸಲ ರಾಜಧಾನಿಗೆ ಬಂದವರಿಗೆ ಸಿಗುವ ಸ್ವಾಗತದ ಪರಿಯಿದು.

‘ವಿದ್ಯಾರ್ಥಿಗಳು, ಗೃಹಸ್ಥರು ಎನ್ನದೇ ಸಿಕ್ಕಸಿಕ್ಕ ಗಂಡಸರನ್ನು ಇವರು ಕರೆಯುತ್ತಾರೆ. ಹೆಣ್ಣುಮಕ್ಕಳು ಓಡಾಡಲೂ ಮುಜುಗರ–ಭಯ ಪಡುವಂತೆ ಆಗಿದೆ. ಒಂಟಿಯಾಗಿ ಓಡಾಡುವ ಯಾವುದೇ ಹುಡುಗಿಯನ್ನು ಕೆಲವರು ಹಿಂದೆಮುಂದೆ ಯೋಚಿಸದೇ, ‘ಎಷ್ಟು ರೇಟು’ ಎಂದು ಅಸಹ್ಯವಾಗಿ ಪ್ರಶ್ನಿಸುತ್ತಾರೆ. ಥೂ, ಅಸಹ್ಯ ಅನಿಸುತ್ತೆ’ ಎಂದು ಬೇಸರ ವ್ಯಕ್ತಪಡಿಸಿದರು ವಿದ್ಯಾರ್ಥಿನಿ ನಯನಾ.

‘ಪೊಲೀಸರಿಗೆ ದೂರು ಕೊಡಬಹುದಲ್ವಾ?’ ಅಂತ ಕೇಳಿದರೆ ‘ಅಯ್ಯೋ ಮೇಡಂ, ಇಲ್ಲಿ ಏನು ನಡೆಯುತ್ತೆ ಅನ್ನೋದು ಅವರಿಗೆ ಗೊತ್ತಿಲ್ಲ ಅಂದ್ಕೊಡ್ರಾ...’ ಎಂದು ನನಗೆ ಮರುಪ್ರಶ್ನೆ ಹಾಕಿದರು.

ಈ ಅಂಡರ್‌ಪಾಸ್‌ನಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕು. ಗೋಡೆಗಳ ಮೇಲಿರುವ ದೇವರ ಫೋಟೊಗಳಿಗೂ ಎಲೆಅಡಿಕೆಯ ಕೆಂಪು ಸಿಂಗಾರ. ಅನೇಕ ದಿನಗಳಿಂದ ಕಸ ವಿಲೇವಾರಿ ಆದ ಲಕ್ಷಣವೇ ಕಾಣಿಸಲಿಲ್ಲ. ಮೂತ್ರದ ದುರ್ನಾತ ಸಹಿಸುತ್ತಾ, ಮೂಗುಮುಚ್ಚಿಕೊಂಡೇ ಜನರು ಓಡಾಡುತ್ತಿದ್ದರು.

ಮಳಿಗೆಗಳಲ್ಲಿ ಹಗಲುದರೋಡೆ

ಅಂಡರ್‌ಪಾಸ್‌ನಿಂದ ಮೇಲೆ ಬಂದರೆ ಅತ್ತ ಕೆಎಸ್‌ಆರ್‌ಟಿಸಿ ಇತ್ತ ಬಿಎಂಟಿಸಿ ಬಸ್‌ನಿಲ್ದಾಣಗಳಿವೆ. ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ  ಖಾಸಗಿ ಮಳಿಗೆಗಳಲ್ಲಿ ಅಕ್ಷರಶಃ ಹಗಲುದರೋಡೆ ನಡೆಯುತ್ತಿದೆ.

‘ಕಮಿಷನ್‌ಗೆ ನೆಚ್ಚಿಕೊಂಡಿರುವ ಅಧಿಕಾರಿಗಳು, ಪೊಲೀಸರು ವ್ಯಾಪಾರಿಗಳ ಮೇಲಿನ ನಿಯಂತ್ರಣವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ’ ಎಂದು ಶಿವಮೊಗ್ಗ ಬಸ್‌ಗೆ ಕಾಯುತ್ತಿದ್ದ ಮಂಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಬಸ್‌ನಿಲ್ದಾಣದ ಅಂಗಡಿಯಲ್ಲಿ ಐದು ರೂಪಾಯಿ ಬೆಲೆಯ ಸಣ್ಣ ವ್ಯಾಸಲೀನ್ ಡಬ್ಬಿಯನ್ನು ಹತ್ತು ರೂಪಾಯಿಗೆ ಮಾರುತ್ತಿದ್ದರು. ‘ಡಬ್ಬಿ ಮೇಲೆ ಐದು ರೂಪಾಯಿ ಅಂತ ಇದೆ. ಹತ್ತು ರೂಪಾಯಿ ಯಾಕ್ರೀ ತಗೊಳ್ತಿದ್ದೀರಿ?’ ಅಂತ ಪ್ರಶ್ನಿಸಿದೆ.

‘ಬಸ್‌ನಿಲ್ದಾಣದಲ್ಲಿ ಮಳಿಗೆಗಳ ಬಾಡಿಗೆ ದರ ಜಾಸ್ತಿ. ಹಾಗಾಗಿ, ಜಾಸ್ತಿ ರೇಟ್‌ಗೆ ಮಾರ್ತೀವಿ. ಇಷ್ಟ ಇದ್ರೆ ತಗೊಳ್ರೀ, ಕಷ್ಟ ಆದ್ರೆ ಬಿಡ್ರಿ. ಯಾರಿಗೆ ಬೇಕಾದ್ರೂ ಹೇಳಿಕೊಳ್ರೀ’ ಎಂದು ಅಂಗಡಿಯಲ್ಲಿದ್ದ ಹುಡುಗರು ಮುಖಕ್ಕೆ ಹೊಡೆದಂತೆ ಹೇಳಿದರು.

ಕತ್ತೆತ್ತಿ ನೋಡಿದರೆ, ಅದೇ ಅಂಗಡಿಯ ಮುಂದೆ ಒಂದು ಬೋರ್ಡ್‌ ಇತ್ತು. ‘ಮಳಿಗೆಗಳಲ್ಲಿ ಗರಿಷ್ಠ ಮಾರಾಟದರಕ್ಕಿಂತ ಹೆಚ್ಚಿನ ದರ ಕೇಳಿದರೆ ಕಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ’ ಎಂದು ಬರೆದುಕೊಂಡಿತ್ತು. ಸರಿ ದೂರು ಹೇಳೋಣ ಎಂದುಕೊಂಡು, 77609 60049, 77609 90554 ಸಂಖ್ಯೆಗಳಿಗೆ ಕರೆ ಮಾಡಿದೆ. ಆದರೆ ಯಾರೂ ರಿಸೀವ್ ಮಾಡಲಿಲ್ಲ. ಆದರೆ ಟ್ರೂಕಾಲರ್‌ನಲ್ಲಿ ಮಾತ್ರ ‘KSRTC RATE COMPLAINT' ಎಂದು ಹೆಸರು ತೋರಿಸಿತು.

ಬಸ್‌ನಿಲ್ದಾಣಗಳಲ್ಲಿ ನೀವು ನೆಮ್ಮದಿಯಾಗಿ ಶೌಚಕ್ಕೂ ಹೋಗುವಂತಿಲ್ಲ. ‘ಮೂತ್ರ ವಿಸರ್ಜನೆ ಉಚಿತ. ಟಾಯ್ಲೆಟ್‌ಗೆ ₹5’ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದಾರೆ. ಆದರೆ ₹8 ವಸೂಲಿ ಮಾಡುತ್ತಾರೆ. ಇಂಥ ಜಾಗದಲ್ಲಿ ಯಾಕೆ ಗಲಾಟೆ ಮಾಡಿಕೊಳ್ಳೋದು ಎಂದುಕೊಳ್ಳುವ ಪ್ರಯಾಣಿಕರು ಕೇಳಿದಷ್ಟು ಹಣಕೊಟ್ಟು ಕೆಲಸ ಮುಗಿಸಿಕೊಳ್ಳುತ್ತಾರೆ.

ಪಕ್ಕದ ಬಿಎಂಟಿಸಿ ಬಸ್‌ನಿಲ್ದಾಣಕ್ಕೆ ಬನ್ನಿ, ಅಲ್ಲಿಯೂ ಇಂಥದ್ದೇ ಹಗಲುದರೋಡೆಯ ಹಲವು ರೂಪಗಳು ಕಾಣಿಸುತ್ತವೆ. ‘ಅಮುಲ್’ ಹೆಸರಿನ ಕೂಲ್‌ಕಾರ್ನರ್‌ನಲ್ಲಿ ಬಿಂದು ಜೀರಾ ಬಾಟಲಿಗೆ ₹20 ಪಡೆದರು. ಅದರ ಮೇಲೆ ₹15 ಎಂದು ನಮೂದಾಗಿತ್ತು. ‘ಯಾಕಣ್ಣ ಐದು ರೂಪಾಯಿ ಜಾಸ್ತಿ ಕೊಡಬೇಕು’ ಅಂದ್ರೆ ‘ಕೂಲಿಂಗ್ ಚಾರ್ಚ್‌ ಮೇಡಂ’ ಎನ್ನುವ ಉತ್ತರ ಸಿಕ್ಕಿತು. ‘ನೀವು ಯಾವ ಅಂಗಡಿಗೆ ಬೇಕಾದ್ರೂ ಕೇಳಿ, ಐದು ರೂಪಾಯಿ ಜಾಸ್ತಿ ಕೊಡಲೇಬೇಕು’ ಎಂದು ಅವರು ಘಂಟಾಘೋಷವಾಗಿ ಹೇಳಿದರು.

ಆಗತಾನೇ ಖರೀದಿಸಿದ್ದ ತಂಪುಪಾನೀಯ ಸವಿಯುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿ ರೇಣುಕಾ ಅವರನ್ನು ಮಾತಿಗೆಳೆದೆ.

‘ನಾನು ಎಂಆರ್‌ಪಿ ಸರಿಯಾಗಿ ನೋಡಲಿಲ್ಲ. ಅವಸರದಲ್ಲಿ ಅವರು ಕೇಳಿದಷ್ಟು ಕೊಟ್ಟು, ತಗೊಂಡೆ. ಐದು ರೂಪಾಯಿಗಾಗಿ ಅವರ ಜತೆ ಜಗಳ ಮಾಡೋಕೆ ಆಗುತ್ತಾ? ಈಗ ಎಲ್ಲಾ ಕಡೆನೂ ಹೀಗೇ ಅಲ್ವಾ?’ ಎಂದುಬಿಟ್ಟರು. ನಮ್ಮ ಪ್ರಯಾಣಿಕರು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಅಸಾಮರ್ಥ್ಯವನ್ನು ಒಪ್ಪಿಕೊಂಡಿರುವುದಕ್ಕೆ ಅವರ ಮಾತು ಸಾಕ್ಷಿಯಂತಿತ್ತು.

ಆಟೊ ಉಪಟಳ

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೊ ನಿಲ್ದಾಣ ಹೆಸರಿಗೆ ಮಾತ್ರ ಅಸ್ತಿತ್ವ ಉಳಿಸಿಕೊಂಡಿದೆ. ಸದಾ ಬೀಗ ಹಾಕಿರುವ ಈ ಪ್ರಿಪೇಯ್ಡ್ ಕೇಂದ್ರದ ಬಳಿ ನಿಂತಿರುವ ಆಟೊ ಡ್ರೈವರ್‌ಗಳು ಬಾಯಿಗೆ ಬಂದಂತೆ ದರ ನಿಗದಿಪಡಿಸುತ್ತಾರೆ. ರಾತ್ರಿ 10ರಿಂದ ಬೆಳಿಗ್ಗೆ 8ರವರೆಗೆ ಇವರು ಕೇಳಿದಷ್ಟು ದುಡ್ಡು ಕೊಟ್ಟೇ ಆಟೊ ಹತ್ತಬೇಕು ಅನ್ನುವಂತಾಗಿದೆ. ಹಗಲು ಹೊತ್ತು ಪರಿಸ್ಥಿತಿ ಹೆಚ್ಚೇನೂ ಭಿನ್ನವಾಗಿರುವುದಿಲ್ಲ.

ಆಟೊ ನಿಲ್ದಾಣದ ಬೋರ್ಡ್‌ನಲ್ಲಿ ನಮೂದಿಸಿರುವ ಟ್ರಾಫಿಕ್ ಕಂಟ್ರೋಲರ್ ದೂರವಾಣಿಗೆ ಕರೆ ಮಾಡಿದರೆ, ಅವರು ಉಪ್ಪಾರಪೇಟೆ ಸಂಚಾರ ವಿಭಾಗಕ್ಕೆ ಕರೆ ಮಾಡಿ ಅನ್ನುತ್ತಾರೆ. ಅಲ್ಲಿಗೆ ಕರೆ ಮಾಡಿದರೆ ತಡೀರಿ ಇನ್‌ಸ್ಟೆಕ್ಟರ್ ಅವರನ್ನು ಕಳಿಸ್ತೀವಿ ಅಂತ ಹೇಳಿ ಕರೆ ಕಟ್ ಮಾಡುತ್ತಾರೆ.

ಹಗಲು ಕಂಡ ಬಾವಿಗೆ ಹಗಲೇ ಬೀಳಬೇಕು ಎಂತಿದ್ದರೆ ಅಥವಾ ಟೋಪಿ ಹಾಕಿಸಿಕೊಳ್ಳಬೇಕೆಂದಿದ್ದರೆ ಸೀದಾ ಮೆಜೆಸ್ಟಿಕ್ ಬಸ್‌ನಿಲ್ದಾಣಕ್ಕೆ ಬಂದರೆ ಸಾಕು ಎನ್ನುವಂತಾಗಿದೆ ನಗರದ ನಾಗರಿಕರ ಸ್ಥಿತಿ. 

ಹಾಲೂಡಿಸಲು ಜಾಗ ಬೇಕು

ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ನಿಲ್ದಾಣಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಬೇಕು. ಹಾಲೂಡಿಸುವ ತಾಯಂದಿರಿಗೆ ಪ್ರತ್ಯೇಕ ಕೋಣೆ ಮಾಡಿಕೊಟ್ಟರೆ ಅನುಕೂಲ. ನೋಡಿ ಹೀಗೆ ಸುತ್ತಲೂ ಜನರು, ಸಿಸಿಟಿವಿ ಕ್ಯಾಮೆರಾ ಇರುವ ಈ ಸ್ಥಳದಲ್ಲಿ ಬಯಲಲ್ಲಿ ಕೂತು ಯಾವ ತಾಯಿ ತಾನೇ ಮಗುವಿಗೆ ಹಾಲೂಡಿಸಲು ಸಾಧ್ಯ? ಮಕ್ಕಳನ್ನು ಸಂತೈಸಲು, ಅವುಗಳ ಬಟ್ಟೆ ಬದಲಿಸಲು ಒಂದಿಷ್ಟು ಸ್ಥಳ ಬೇಕು. ಈಗಿನ ಸರ್ಕಾರದಲ್ಲಿ ಮಹಿಳೆಯರೂ ಉನ್ನತ ಸ್ಥಾನದಲ್ಲಿದ್ದಾರೆ. ಅವರಿಗೂ ನಮ್ಮಂಥ ತಾಯಂದಿರ ಕಷ್ಟ ಅರ್ಥವಾಗುವುದಿಲ್ಲವೇ?

– ಉಮಾ, ಹರಿಹರ

*

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಅಧಿಕಾರಿಗಳು ಮತ್ತು ಪೊಲೀಸರು ವ್ಯಾಪಾರಿಗಳು ಮತ್ತು ಆಟೊ ಚಾಲಕರ ಮೇಲೆ ನಿಯಂತ್ರಣವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಸಾರಿಗೆ ಸಚಿವರು ಇತ್ತ ಗಮನ ಹರಿಸುವವರೆಗೆ ಪ್ರಯಾಣಿಕರ ಶೋಷಣೆ ನಡೆಯುತ್ತಲೇ ಇರುತ್ತದೆ.

– ಮಂಜಣ್ಣ, ಪ್ರಯಾಣಿಕರು, ಶಿವಮೊಗ್ಗ

*

ಸಿಟಿ ರೈಲು ನಿಲ್ದಾಣದ ಮಳಿಗೆಗಳಲ್ಲಿ ಎಂಆರ್‌ಪಿ ದರಕ್ಕೇ ವಸ್ತುಗಳನ್ನು ಮಾರುತ್ತಾರೆ. ಅಲ್ಲಿ ಕಡಿಮೆ ದರಕ್ಕೆ ಶುದ್ಧ ಕುಡಿಯುವ ನೀರನ್ನು ಬಾಟಲಿಗಳಿಗೆ ತುಂಬಿಸಿಕೊಡುವ ವ್ಯವಸ್ಥೆಯೂ ಇದೆ. ಅಲ್ಲಿಂದ ಕೂಗಳತೆಯ ದೂರದಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿಲ್ದಾಣದಲ್ಲಿ ಏಕೆ ಇಷ್ಟು ಅವ್ಯವಸ್ಥೆ? ಇಲ್ಲಿಯೂ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಅಳವಡಿಸಬೇಕು.

– ಚಂದ್ರಿಕಾ, ಪ್ರಯಾಣಿಕರು, ಪದ್ಮನಾಭನಗರ

ಪ್ರತಿಕ್ರಿಯಿಸಿ (+)