ಭಾನುವಾರ, ಡಿಸೆಂಬರ್ 8, 2019
24 °C

‘ಭಿಕ್ಷೆ ಬೇಡುವ ಬದಲು ಪಕೋಡ ಮಾರುವುದೇ ವಾಸಿ’

ಪಿಟಿಐ Updated:

ಅಕ್ಷರ ಗಾತ್ರ : | |

‘ಭಿಕ್ಷೆ ಬೇಡುವ ಬದಲು ಪಕೋಡ ಮಾರುವುದೇ ವಾಸಿ’

ನವದೆಹಲಿ: ನಿರುದ್ಯೋಗಿಗಳಾಗಿರುವ ಬದಲು ಪಕೋಡ ಮಾರುವುದು ಎಷ್ಟೋ ವಾಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ರಾಷ್ಟ್ರಪತಿ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಕೂಲಿ ಕೆಲಸ, ಪಕೋಡ ಮಾರಾಟ ಮಾಡಲು ಯಾರೂ ಅಸಹ್ಯಪಟ್ಟುಕೊಳ್ಳಬೇಕಾಗಿಲ್ಲ. ಭಿಕ್ಷೆ ಬೇಡುವುದಕ್ಕಿಂತ ಪಕೋಡ ಮಾರುವುದು ಎಷ್ಟೋ ಮೇಲು’ ಎಂದರು.

ಪಕೋಡ ಮಾರುವುದೂ ಉದ್ಯೋಗವೇ ಎಂದು ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಕಾಂಗ್ರೆಸ್‌ ಲೇವಡಿ ಮಾಡಿತ್ತು.

‘ಪಕೋಡ ಮಾರುವುದು ಉದ್ಯೋಗ ಸೃಷ್ಟಿಯಾದರೆ, ಭಿಕ್ಷೆ ಬೇಡುವುದೂ ಉದ್ಯೋಗ ಸೃಷ್ಟಿಯೇ?’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ವ್ಯಂಗ್ಯ ಮಾಡಿದ್ದರು.

‘55 ವರ್ಷ ದೇಶ ಆಳಿದ್ದು ಯಾರು? ಈ ಸಮಸ್ಯೆ ಇದೀಗ ಏಕಾಏಕಿ ಉದ್ಭವಿಸಿದ್ದಲ್ಲ. ಹಾಗಾದರೆ ಉದ್ಯೋಗ ಸೃಷ್ಟಿ ವೈಫಲ್ಯ ಯಾರ ತಪ್ಪು’ ಎಂದು ಶಾ ಪ್ರಶ್ನಿಸಿದರು. ಇದು ಹಿಂದಿನ ಯುಪಿಎ ಸರ್ಕಾರದ ದುರ್ಬಲ ನೀತಿಗಳ ಫಲ ಎಂದು ಆರೋಪಿಸಿದರು.

ಮೋದಿ ನೇತೃತ್ವದ ಸರ್ಕಾರದ ಜನಧನ ಯೋಜನೆ ಜಾರಿಗೆ ಮೊದಲು ದೇಶದ ಬಹುತೇಕ ಕುಟುಂಬಗಳಿಗೆ ಕನಿಷ್ಠ ಒಂದು ಬ್ಯಾಂಕ್‌ ಖಾತೆ ಕೂಡ ಇರಲಿಲ್ಲ. ಇದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು ಎಂದರು.

ಕೆಲವು ಸಮಸ್ಯೆ ಸರಿ ಹೋದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದೇಶಕ್ಕೆ ಬಹುದೊಡ್ಡ ಲಾಭ ತಂದು ಕೊಡಲಿದೆ. ಇಂತಹ ಕಾನೂನಾತ್ಮಕ ತೆರಿಗೆ ವ್ಯವಸ್ಥೆಯನ್ನು ಕಾಂಗ್ರೆಸ್‌ ಪಕ್ಷವು ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’ಎಂದು ಜರಿಯುವ ಮೂಲಕ ಹಿಂದಿ ಚಿತ್ರದ (ಶೋಲೆ) ಗಬ್ಬರ್‌ ಸಿಂಗ್‌ ಎಂಬ ಡಕಾಯಿತನಿಗೆ ಹೋಲಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಜಿಎಸ್‌ಟಿ ಕಾನೂನಾತ್ಮಕವಾಗಿ ತೆರಿಗೆ ಸಂಗ್ರಹಿಸುವ ವ್ಯವಸ್ಥೆ. ಇದು ಡಕಾಯಿತಿ ಅಲ್ಲ. ಈ ಹಣ ಬಡವರು ಮತ್ತು ವಿಧವೆಯರ ಕಲ್ಯಾಣಕ್ಕಾಗಿ ವಿನಿಯೋಗವಾಗುತ್ತದೆ ಎಂದರು.

ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವುದನ್ನು ಅಮಿತ್‌ ಶಾ ಸಮರ್ಥಿಸಿಕೊಂಡರು.

ಸುಮಾರು ಒಂದು ತಾಸಿನ ಭಾಷಣದಲ್ಲಿ ಅವರು, ಅಡುಗೆ ಅನಿಲ ಸಬ್ಸಿಡಿ, ವಿದ್ಯುತ್‌ ಪೂರೈಕೆ, ಸ್ವಚ್ಛ ಭಾರತ ಯೋಜನೆ, ಶೌಚಾಲಯ ನಿರ್ಮಾಣ, ಬಡತನ ಮತ್ತು ನಿರುದ್ಯೋಗ ನಿರ್ಮೂಲನೆ, ನಿರ್ದಿಷ್ಟ ದಾಳಿ, ತ್ರಿವಳಿ ತಲಾಖ್‌, ಆರೋಗ್ಯ ವಲಯದಲ್ಲಿ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

* ಪಕೋಡ ಮಾರುವುದು ಸ್ವ ಉದ್ಯೋಗ. ಅದನ್ನು ನೀವು (ಕಾಂಗ್ರೆಸ್‌) ಭಿಕ್ಷೆಗೆ ಹೋಲಿಸುತ್ತೀರಾ? ಚಹಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮಗ ಇಂದು ದೇಶದ ಪ್ರಧಾನಿಯಾಗಿದ್ದಾರೆ

– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

* ರಾಜಕಾರಣದಲ್ಲಿ ಇರಬೇಕಾಗದ ಕನಿಷ್ಠ ಪ್ರಾಮಾಣಿಕತೆಯೂ ಬಿಜೆಪಿಗಿಲ್ಲ. ಯುಪಿಎ ಸರ್ಕಾರದ 23 ಯೋಜನೆಗಳ ಪೈಕಿ 19 ಯೋಜನೆಗಳನ್ನೇ ಕೇಂದ್ರ ಸರ್ಕಾರ ಹೊಸ ಹೆಸರುಗಳೊಂದಿಗೆ ಮರು ಜಾರಿ ಮಾಡಿದೆ

– ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ನಾಯಕ

ಪ್ರತಿಕ್ರಿಯಿಸಿ (+)