ಶುಕ್ರವಾರ, ಡಿಸೆಂಬರ್ 6, 2019
25 °C

ಇಂದಿರಾ ಕ್ಯಾಂಟೀನ್‌ ರುಚಿ ಮತ್ತಷ್ಟು ವಿಳಂಬ

ರವಿ ಎಸ್. ಬಳೂಟಗಿ Updated:

ಅಕ್ಷರ ಗಾತ್ರ : | |

ಇಂದಿರಾ ಕ್ಯಾಂಟೀನ್‌ ರುಚಿ ಮತ್ತಷ್ಟು ವಿಳಂಬ

ಕಲಬುರ್ಗಿ: ಕಡಿಮೆ ಬೆಲೆಗೆ ಶುಚಿ–ರುಚಿಯಾದ ಆಹಾರ ನೀಡುವ ಇಂದಿರಾ ಕ್ಯಾಂಟೀನ್‌ಗಳು ನಗರದಲ್ಲಿ ಇನ್ನೂ ಆರಂಭವಾಗಿಲ್ಲ. ಕ್ಯಾಟೀನ್‌ ನಿರ್ಮಾಣ ಪೂರ್ಣಗೊಂಡರೂ, ಅಡುಗೆ ಪೂರೈಕೆಯಲ್ಲಿನ ಸಿದ್ಧತೆ ಅಪೂರ್ಣವಾಗಿದೆ.

ನಗರದ ಏಳು ಕಡೆ ಡಿಸೆಂಬರ್‌ ತಿಂಗಳಲ್ಲಿಯೇ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಆರಂಭವಾಯಿತು. ಜನವರಿ 1ರಂದು ಉದ್ಘಾಟಿಸುವ ಗುರಿ ಹೊಂದಲಾಗಿತ್ತು. ಫೆ.5 ಕಳೆದರೂ ಉದ್ಘಾಟನೆ ದಿನಾಂಕ ನಿಗದಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳೂ ಖಚಿತ ಮಾಹಿತಿ ನೀಡುತ್ತಿಲ್ಲ.

ಕೇಂದ್ರೀಕೃತ ಅಡುಗೆ ಮನೆ(ಮಾಸ್ಟರ್‌ ಕಿಚನ್) ಸಿದ್ಧವಾಗದಿರುವುದೇ ವಿಳಂಬಕ್ಕೆ ಪ್ರಮುಖ ಕಾರಣ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಈ ಅಡುಗೆ ಮನೆಯು ನಿರ್ಮಾಣವಾಗುತ್ತಿದೆ. ‘ಮುಖ್ಯ ಅಡುಗೆ ಮನೆಯಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಅಡುಗೆ ಸರಬರಾಜು ಮಾಡುವ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ.

ಖಾಸಗಿ ಏಜೆನ್ಸಿಗೆ ಹೊಣೆ ವಹಿಸಲಾಗಿದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಅವರೇ ಪೂರೈಸಲಿದ್ದಾರೆ’ ಎಂದು ಪಾಲಿಕೆಯ ಆಯುಕ್ತ ರಘುನಂದನ ಮೂರ್ತಿ ತಿಳಿಸಿದರು.

ತಾಲ್ಲೂಕುಗಳಲ್ಲಿ ನನೆಗುದಿಗೆ

ಕಲಬುರ್ಗಿಯಲ್ಲಿ ಏಳು ಹಾಗೂ ಜಿಲ್ಲೆಯ ಆರು ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ತಾಲ್ಲೂಕು ಕೇಂದ್ರಗಳ ಬಸ್‌ ನಿಲ್ದಾಣದ ಆವರಣದಲ್ಲಿ ಕ್ಯಾಂಟೀನ್‌ ನಿರ್ಮಾಣ ಆಗಬೇಕಾಗಿದೆ. ಆದರೆ, ಕಲಬುರ್ಗಿಯಲ್ಲೇ ಇನ್ನೂ ಉದ್ಘಾಟನೆಗೊಂಡಿಲ್ಲ. ಇನ್ನು ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಾಣ ಕಾರ್ಯ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

* * 

ಆರಂಭದ ದಿನಗಳಲ್ಲಿ ಒಂದು ಹೊತ್ತಿಗೆ 500 ಊಟ ಪೂರೈಕೆ ಆಗಲಿದೆ. ತಟ್ಟೆ, ಲೋಟಗಳನ್ನು ಪಾಲಿಕೆ ಖರೀದಿಸಿದೆ. ಪಾಲಿಕೆ ನೀರು ಸರಬರಾಜು ಮಾಡಲಿದೆ.

ರವಿ ಚವಾಣ, ಕಿರಿಯ ಎಂಜಿನಿಯರ್, ನಗರಪಾಲಿಕೆ

ಪ್ರತಿಕ್ರಿಯಿಸಿ (+)