ಮಂಗಳವಾರ, ಡಿಸೆಂಬರ್ 10, 2019
25 °C

ಸತತ 7ನೇ ದಿನವೂ ಪೇರುಪೇಟೆ ಕುಸಿತ

Published:
Updated:
ಸತತ 7ನೇ ದಿನವೂ ಪೇರುಪೇಟೆ ಕುಸಿತ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸತತ ಏಳನೇ ದಿನವೂ ಕುಸಿತ ಕಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡದಿರುವುದು ಮತ್ತು ಆರ್ಥಿಕ ವೃದ್ಧಿ ದರ ತಗ್ಗಿಸಿರುವುದು ಪೇಟೆಯ ವಹಿವಾಟಿಗೆ ತಡೆ ಒಡ್ಡಿದೆ.

ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 113 ಅಂಶಗಳ ಕುಸಿತ ದಾಖಲಿಸಿ 34,082 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 21 ಅಂಶ ನಷ್ಟಕ್ಕೆ ಒಳಗಾಗಿ 10,476 ಅಂಶಗಳಿಗೆ ಇಳಿಯಿತು.

ಜಾಗತಿಕ ಷೇರುಪೇಟೆಗಳಲ್ಲಿ ಸ್ಥಿರತೆ ಕಂಡು ಬಂದಿರುವುದು ವಹಿವಾಟುದಾರರು ಕೆಲಮಟ್ಟಿಗೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ರಿಯಾಲ್ಟಿ ಮತ್ತು ವಾಹನ ತಯಾರಿಕಾ ಸಂಸ್ಥೆಗಳ ಷೇರುಗಳಲ್ಲಿನ ಖರೀದಿಯು ಕುಸಿತವನ್ನು ತಡೆಯಿತು.

ಮ್ಯೂಚುವಲ್‌ ಫಂಡ್‌ ಹೆಚ್ಚಿದ ಹೂಡಿಕೆ

ನವದೆಹಲಿ (ಪಿಟಿಐ): ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಿದ ಮೊತ್ತವು ಜನವರಿ ತಿಂಗಳಲ್ಲಿ ₹ 1 ಲಕ್ಷ ಕೋಟಿಗೆ ತಲುಪಿದೆ.

ಇದರಿಂದ ಮ್ಯೂಚುವಲ್‌ ಫಂಡ್‌ ಉದ್ದಿಮೆಯ ಒಟ್ಟಾರೆ ಸಂಪತ್ತು ನಿರ್ವಹಣಾ ಮೊತ್ತವು (ಎಯುಎಂ) ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 22.41 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಉದ್ದಿಮೆ ಮತ್ತು ವೈಯಕ್ತಿಕ ನೆಲೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಈ ದಾಖಲೆ ಪ್ರಮಾಣದ ಹೂಡಿಕೆಯಾಗಿದೆ. ಹೂಡಿಕೆದಾರರು ಸಾಂಪ್ರದಾಯಿಕ ಹೂಡಿಕೆಗಳಾದ ರಿಯಲ್ ಎಸ್ಟೇಟ್‌ ಮತ್ತು ಚಿನ್ನದ ಬದಲಿಗೆ  ಹಣಕಾಸು ಸಂಪತ್ತಿನ ವಲಯದತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ. ಇದು ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ ಎಂದು  ಮ್ಯೂಚುವಲ್‌ ಫಂಡ್ಸ್‌ ಸಂಘ (ಎಎಂಎಫ್‌ಐ) ತಿಳಿಸಿದೆ.

ಚಹ: ದಾಖಲೆ ಪ್ರಮಾಣದ ರಫ್ತು

ಕೋಲ್ಕತ್ತ (ಪಿಟಿಐ): ದೇಶದ ಚಹ ರಫ್ತು ಪ್ರಮಾಣವು 2017ರ ಕ್ಯಾಲೆಂಡರ್‌ ವರ್ಷದಲ್ಲಿ 24.07 ಕೋಟಿ ಕೆ.ಜಿಗಳಷ್ಟು ದಾಖಲೆ ಮಟ್ಟಕ್ಕೆ ತಲುಪಿದೆ.

ಈ ಹಿಂದೆ 1981ರಲ್ಲಿ 24.12 ಕೋಟಿ ಕೆಜಿ ರಫ್ತಾಗಿತ್ತು. 36 ವರ್ಷಗಳ ನಂತರ ರಫ್ತು ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ ಎಂದು ಚಹ ಮಂಡಳಿ ತಿಳಿಸಿದೆ.

2016ರಲ್ಲಿನ ರಫ್ತಿಗೆ ಹೋಲಿಸಿದರೆ ಶೇ 8.20ರಷ್ಟು (1.80 ಕೋಟಿ ಕೆ,ಜಿ) ಏರಿಕೆ ಕಂಡಿದೆ.

ಪ್ರತಿಕ್ರಿಯಿಸಿ (+)