ಬುಧವಾರ, ಡಿಸೆಂಬರ್ 11, 2019
21 °C

‘ಸಾಹುಕಾರ್‌ ಸಾಮ್ರಾಜ್ಯ’ ವಶಕ್ಕೆ ಬಿಜೆಪಿ ರಣತಂತ್ರ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

‘ಸಾಹುಕಾರ್‌ ಸಾಮ್ರಾಜ್ಯ’ ವಶಕ್ಕೆ ಬಿಜೆಪಿ ರಣತಂತ್ರ!

ಬೆಳಗಾವಿ: ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಅಧಿಪತ್ಯದಲ್ಲಿರುವ ಗೋಕಾಕ ಮತಕ್ಷೇತ್ರವನ್ನು ಈ ಬಾರಿ ತನ್ನ ವಶಪಡಿಸಿಕೊಳ್ಳಲು ರಣೋತ್ಸಾಹದಲ್ಲಿರುವ ಬಿಜೆಪಿಯು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಚುನಾವಣೆಯ ಉಸ್ತುವಾರಿ ವಹಿಸಿದೆ.

ರಮೇಶ ಜಾರಕಿಹೊಳಿ ಐದನೇ ಬಾರಿಯೂ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಆಕಾಂಕ್ಷಿಗಳಿಲ್ಲ! ಕಾಂಗ್ರೆಸ್‌ ವಿರುದ್ಧ ಬಿಜೆಪಿಯ ಅಶೋಕ ಪೂಜಾರಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ಒಂದೇ ಶಾಲೆಯಲ್ಲಿ ಓದಿದ, ಒಂದರ್ಥದಲ್ಲಿ ಸಹಪಾಠಿಗಳಾಗಿದ್ದವರ ನಡುವಿನ ಮತ್ತೊಂದು ಹಣಾಹಣಿಗೆ ಕ್ಷೇತ್ರ ಸಜ್ಜಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಂಘಟನೆ ಹಾಗೂ ಪ್ರಚಾರ ಕಾರ್ಯದ ಉಸ್ತುವಾರಿಯನ್ನು ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ವಹಿಸಿದೆ. ಇದಕ್ಕೆ ಪೂರಕವಾಗಿ ಆರ್‌ಎಸ್‌ಎಸ್‌ ಮುಖಂಡರೂ ಬೆಂಬಲವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಅಲ್ಲಿನ ಕಮಲ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ.

ಗೋಕಾಕಕ್ಕೆ ಎರಡು ಬಾರಿ ಭೇಟಿ ನೀಡಿದ್ದ ಸಚಿವರು, ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಗೋಪ್ಯವಾಗಿ ಚರ್ಚಿಸಿ, ಸಲಹೆ–ಸೂಚನೆಗಳನ್ನು ನೀಡಿದ್ದಾರೆ. ಚುನಾವಣೆ ದಿನಾಂಕ ಹಾಗೂ ಅಭ್ಯರ್ಥಿಗಳ ಘೋಷಣೆ ನಂತರ ಕ್ಷೇತ್ರದಲ್ಲಿ ಜನತಂತ್ರದ ಹಬ್ಬ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.

ಕ್ಷೇತ್ರದ ಮೇಲಿನ ಪ್ರೀತಿ: ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಮೇಶಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೋದ ವರ್ಷ ಅವರ ಸಹೋದರ ಸತೀಶ  ಜಾರಕಿಹೊಳಿಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದ ಪಕ್ಷದ ವರಿಷ್ಠರು, ರಮೇಶಗೆ ಆ ಗಾದಿ ನೀಡಿದ್ದಾರೆ. ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ, ಪಕ್ಷದ ಮಟ್ಟದಲ್ಲಿ ಹೆಚ್ಚಿನ ಪ್ರಭಾವಿಯಾಗಿಯೂ ಹೊರಹೊಮ್ಮಿದ್ದಾರೆ.

ಹೋದ ವರ್ಷ ನಡೆದ ಹೊಸ ತಾಲ್ಲೂಕುಗಳ ರಚನೆ ಸಂದರ್ಭದಲ್ಲಿ ಗೋಕಾಕ ಕ್ಷೇತ್ರದ ಕೆಲವು ಹಳ್ಳಿಗಳನ್ನು ನಿಯೋಜಿತ ಮೂಡಲಗಿ ತಾಲ್ಲೂಕಿಗೆ ಸೇರಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಮೇಶ, ಅಧಿಕೃತ ಆದೇಶವಾಗದಂತೆ ತಡೆದಿದ್ದರು. ‘ಮೂಡಲಗಿ ತಾಲ್ಲೂಕು ಘೋಷಣೆ ಆಗದಂತೆ ತಡೆದದ್ದು ನಾನೇ. ನನ್ನ (ಗೋಕಾಕ) ಕ್ಷೇತ್ರದ ಜನರಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ಹೀಗೆ ಮಾಡಿದ್ದೇನೆ.

ಪ್ರಸ್ತಾವದಂತೆ, ಮೂಡಲಗಿ ತಾಲ್ಲೂಕು ರಚನೆಯಾದರೆ ಗೋಕಾಕ ಫಾಲ್ಸ್‌ ಪ್ರದೇಶ ಬಿಟ್ಟು ನನ್ನ ಕ್ಷೇತ್ರದ ಉಳಿದೆಲ್ಲ ಹಳ್ಳಿಗಳೂ ಅಲ್ಲಿಗೇ ಹೋಗುತ್ತಿದ್ದವು. ಇದೆಲ್ಲವೂ ಗೊತ್ತಿದ್ದೂ ನನ್ನ ಜನರಿಗೆ ಅನ್ಯಾಯ ಮಾಡಲೇ? ಅಲ್ಲಿನ ಪ್ರತಿನಿಧಿಯಾಗಿ ಏನು ಪ್ರಯೋಜನ’ ಎಂದು ಬಹಿರಂಗವಾಗಿಯೇ ಪ್ರಶ್ನಿಸಿ ಕ್ಷೇತ್ರದ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದರು.

ಅರಬಾವಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳನ್ನು ಸೇರಿಸಿ ಮೂಡಲಗಿ ತಾಲ್ಲೂಕು ರಚಿಸುವುದಕ್ಕೆ ನನ್ನ ವಿರೋಧವಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕು ಘೋಷಣೆಗೆ ಕ್ರಮ ಕೈಗೊಳ್ಳುತ್ತೇನೆ. ಬೇಕಿದ್ದರೆ ನನ್ನ ಕ್ಷೇತ್ರದ ಒಂದೆರಡು ಹಳ್ಳಿಗಳನ್ನೂ ಸೇರಿಸಿಕೊಳ್ಳಲಿ. ಆದರೆ, ಗೋಕಾಕದ ಅಸ್ತಿತ್ವಕ್ಕೆ ಧಕ್ಕೆಯಾಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿ ಹಾಗೆಯೇ ನಡೆದುಕೊಂಡಿದ್ದರು.

ಸಹೋದರನಿಗಾಗಿ ತ್ಯಾಗ?!: ಸಹೋದರ ಲಖನ್‌ ಜಾರಕಿಹೊಳಿ ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ‘ಲಖನ್‌ಗೆ ಯಮಕನಮರಡಿಯಲ್ಲಿ ಟಿಕೆಟ್‌ ದೊರೆಯದಿದ್ದರೆ ನನ್ನ ಕ್ಷೇತ್ರ ಗೋಕಾಕನ್ನೇ ಬಿಟ್ಟುಕೊಡುವುದಕ್ಕೆ ಸಿದ್ಧವಿದ್ದೇನೆ. ತ್ಯಾಗ ಮಾಡುತ್ತೇನೆ’ ಎಂದೂ ಇತ್ತೀಚೆಗೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇದು ಕ್ಷೇತ್ರದಲ್ಲಿ ತೀವ್ರ ಚರ್ಚೆಗೂ ಗ್ರಾಸವಾಗಿದೆ. ಈಚೆಗೆ ಅಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಖನ್‌ಗೆ ಪ್ರಾಮುಖ್ಯತೆ ದೊರೆಯುವಂತೆಯೂ ರಮೇಶ ನೋಡಿಕೊಂಡಿದ್ದರು.

2008 ಹಾಗೂ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ ಪೂಜಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆ ಪಕ್ಷದಿಂದ ಅವರಿಗೆ ಟಿಕೆಟ್‌ ದೊರೆಯುವುದು ಬಹುತೇಕ ಖಚಿತವಾಗಿದೆ. ಅಲ್ಲಿ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕೂಡ ಈ ಸುಳಿವು ನೀಡಿದ್ದಾರೆ. ಈ ಭರವಸೆ ಆಧಾರದ ಮೇಲೆ ಪೂಜಾರಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಅಧಿಪತ್ಯ ಕೊನೆಗಾಣಿಸಬೇಕು ಎಂದು ಬಯಸುತ್ತಿರುವ ಇತರ ಪಕ್ಷಗಳ ಮುಖಂಡರು ಕೂಡ ಪೂಜಾರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.

ಚುನಾವಣಾ ಆಯೋಗದ ಮೊರೆ: ಕ್ಷೇತ್ರದಲ್ಲಿ ಹಣ ಹಾಗೂ ತೋಳ್ಬಲ ವ್ಯಾಪಕವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅತ್ಯಂತ ಸೂಕ್ಷ್ಮ ಕ್ಷೇತ್ರವೆಂದು ಘೋಷಿಸಬೇಕು. ಮತದಾರರ ಪಟ್ಟಿಗೆ ಆಧಾರ್‌ ಕಾರ್ಡ್‌ ಜೋಡಿಸಬೇಕು ಎಂದು ಕೋರಿ, ಚುನಾವಣಾ ಆಯೋಗದ ಬಾಗಿಲನ್ನೂ ತಟ್ಟಿದ್ದಾರೆ ಪೂಜಾರಿ.

ಭೀಮಶಿ ಜಾರಕಿಹೊಳಿ ಸಹೋದರ ರಮೇಶ ವಿರುದ್ಧ 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈಚಿನ ದಿನಗಳಲ್ಲಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿರುವುದು ಕಂಡುಬರುತ್ತಿಲ್ಲ. ಈ ಬಾರಿ ಅವರೂ ಬಿಜೆಪಿ ಟಿಕೆಟ್‌ ಬಯಸಿದರೂ ಅಚ್ಚರಿ ಇಲ್ಲ! 2013ರಲ್ಲಿ ಬಿಜೆಪಿಯಿಂದ ಕಣದಲ್ಲಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಾಸುದೇವ ಸೌತೆಕಾಯಿ ಪರಾಭವಗೊಂಡಿದ್ದರು. ಯಡಿಯೂರಪ್ಪ ನೇತೃತ್ವ ವಹಿಸಿದ್ದ ಕೆಜೆಪಿಯಿಂದ ಉಮೇಶ ನಿರ್ವಾಣಿ ಸ್ಪರ್ಧಿಸಿದ್ದರು.

ರಮೇಶಗೆ ಪ್ರಬಲ ಪೈಪೋಟಿ ಕೊಡುತ್ತಾ ಬಂದಿರುವ ಅಶೋಕ ಪೂಜಾರಿ ಬಿಜೆಪಿಗೆ ಬಂದಿದ್ದರಿಂದ, ಜೆಡಿಎಸ್‌ ಪ್ರಭಾವ ಕೊಂಚ ಮಂಕಾಗಿದೆ. ಎಲ್‌.ಬಿ. ಹುಳ್ಳೇರ ಹಾಗೂ ಎಲ್‌.ಬಿ. ತಳವಾರ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯದ ಅಂಕಿ–ಅಂಶಗಳ ಪ್ರಕಾರ, ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟರ ಮತಗಳು ಇಲ್ಲಿ ನಿರ್ಣಾಯಕವಾಗಿವೆ. ಮುಸ್ಲಿಮರ ಮತಗಳ ಮುಖ್ಯವಾಗಿ ಪರಿಗಣನೆ ಬರಲಿವೆ. 2013ರ ಚುನಾವಣೆಯಲ್ಲಿ ರಮೇಶ (79175 ಮತ), ಜೆಡಿಎಸ್‌ನ ಅಶೋಕ ಪೂಜಾರಿ (51170 ಮತ) ವಿರುದ್ಧ ಗೆದ್ದಿದ್ದರು.

ಪ್ರತಿಕ್ರಿಯಿಸಿ (+)