ಭಾನುವಾರ, ಡಿಸೆಂಬರ್ 8, 2019
25 °C
ಪಾಕ್‌ ಐಎಸ್‌ಐ ಮಹಿಳಾ ಏಜೆಂಟ್‌ ಬಲೆ

ಮಾಹಿತಿ ಸೋರಿಕೆ: ವಾಯುಪಡೆ ಅಧಿಕಾರಿ ಸೆರೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಾಹಿತಿ ಸೋರಿಕೆ: ವಾಯುಪಡೆ ಅಧಿಕಾರಿ ಸೆರೆ

ನವದೆಹಲಿ: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐನ ಮಹಿಳಾ ಏಜೆಂಟ್‌ಗೆ ರಹಸ್ಯ ಮಾಹಿತಿ ಮತ್ತು ದಾಖಲೆ ನೀಡಿದ ಆರೋಪದಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿಯನ್ನು ಗುರುವಾರ ಬಂಧಿಸಲಾಗಿದೆ.

ಕಮಾಂಡೊಗಳಿಗೆ ವಿಮಾನದಿಂದ ಹಾರುವ ತರಬೇತಿ ನೀಡುವ 51 ವರ್ಷದ ಪ್ಯಾರಾ ಜಂಪರ್‌ ಅರುಣ್‌ ಮಾರ್ವಾ ಅವರನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಅವರನ್ನು ಐದು ದಿನ ಪೊಲೀಸರ ವಶಕ್ಕೆ ನೀಡಲಾಗಿದೆ. ಸೇನೆಯ ಮಾಹಿತಿ ಸೋರಿಕೆ ಕುರಿತು ಅವರ ವಿಚಾರಣೆ ನಡೆಸಲಾಗುತ್ತಿದೆ.

ಹನಿಟ್ರ್ಯಾಪ್‌!

ಐಎಸ್‌ಐ ಮಹಿಳಾ ಅಧಿಕಾರಿಯು ಕಿರಣ್‌ ರಾಂಧವಾ ಮತ್ತು ಮಹಿಮಾ ಪಟೇಲ್‌ ಎಂಬ ಫೇಸ್‌ಬುಕ್‌ನ ಎರಡು ಖಾತೆಗಳ ಮೂಲಕ ಮಾರ್ವಾ ಅವರನ್ನು ಬಲೆಗೆ ಕೆಡವಿಕೊಂಡಿದ್ದಾರೆ.

ಅಪರಿಚಿತ ಮಹಿಳೆಯೊಂದಿಗೆ ವಾಟ್ಸ್‌ಆ್ಯಪ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾರ್ವಾ ಅತ್ಯಂತ ಆಪ್ತವಾಗಿ ಸಂವಾದ ನಡೆಸಿದ್ದರು. ಆದರೆ, ಇದುವರೆಗೂ ಆ ಮಹಿಳೆಯನ್ನು ಭೇಟಿಯಾಗಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ ಮಹಿಳೆ ಪಾಕಿಸ್ತಾನದ ಐಎಸ್‌ಐ ಅಧಿಕಾರಿ ಎಂಬ ವಿಷಯ ತಿಳಿಯದೆ ಸೇನೆಯ ಅನೇಕ ರಹಸ್ಯ ಮಾಹಿತಿ ಮತ್ತು ದಾಖಲೆಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆರೆ ಹಿಡಿದು, ವಾಟ್ಸ್‌ಆ್ಯಪ್‌ ಮೂಲಕ ಆಕೆಗೆ ರವಾನಿಸಿದ್ದಾರೆ.

ಮಾರ್ವಾ ನಗ್ನ ಚಿತ್ರಗಳನ್ನು ತರಿಸಿಕೊಂಡಿದ್ದ ಮಹಿಳೆ ನಂತರ ಅದನ್ನೇ ಬಳಸಿಕೊಂಡು ಬೆದರಿಸಿ ಮಾಹಿತಿ ತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಷ್ಟು ಮಾಹಿತಿ ಸೋರಿಕೆಯಾಗಿದೆ ಎಂಬುವುದನ್ನು ಭಾರತೀಯ ವಾಯುಪಡೆ ಗುಪ್ತದಳ ತನಿಖೆ ನಡೆಸುತ್ತಿದೆ. ಫೇಸ್‌ಬುಕ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಮಾರ್ವಾ ಸಕ್ರಿಯರಾಗಿದ್ದರು. ಮಾರ್ವಾ ತಮ್ಮ ಕೆಲಸಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ಕುಟುಂಬದ ವಿಡಿಯೊಗಳನ್ನು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಷಯ ತಿಳಿದುಕೊಂಡು ಐಎಸ್‌ಐ ಅವರನ್ನು ಬಲೆಗೆ ಕೆಡವಿದೆ.

ಪ್ರತಿಕ್ರಿಯಿಸಿ (+)