ಬುಧವಾರ, ಡಿಸೆಂಬರ್ 11, 2019
24 °C

ಮಕ್ಕಳನ್ನು ಕಾಡುವ ಜಂತುಹುಳು

Published:
Updated:
ಮಕ್ಕಳನ್ನು ಕಾಡುವ ಜಂತುಹುಳು

ಹಳ್ಳಿಗಳ ದೇಶ ಭಾರತದಂತಹ ದೇಶದಲ್ಲಿ ನೈರ್ಮಲ್ಯದ ಬಗ್ಗೆ ಇಂದಿಗೂ ಚರ್ಚೆಗಳು ನಡೆಯುತ್ತಲೇ ಇವೆ. ಕೊಳಚೆನೀರು, ಅಶುದ್ಧಗಾಳಿ – ಇಂಥವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿದೂ ಜನರು ನೈರ್ಮಲ್ಯದತ್ತ ಮನಸ್ಸು ಮಾಡುತ್ತಿಲ್ಲ. ಬಯಲು ಶೌಚಾಲಯ, ಅಶುದ್ಧ ನೀರು, ಅರೆಬೆಂದ ಆಹಾರ – ಇವೆಲ್ಲವುಗಳಿಂದ ನಾನಾ ತರಹದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗಳ ಸಾಲಿಗೆ ಸೇರಿರುವುದು ಜಂತುಹುಳುವಿನ ಸಮಸ್ಯೆ.

‘ಡಿ–ವರ್ಮಿಂಗ್’ ದಿನದ ಉದ್ದೇಶ

ಮಕ್ಕಳು ದೇಶದ ಭವಿಷ್ಯ ಎಂಬ ಮಾತಿದೆ. ನಮ್ಮ ದೇಶದಲ್ಲಿ 24 ಕೋಟಿ ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆ ಇದೆ ಎಂಬುದನ್ನು ವರಿದಿಯೊಂದು ತಿಳಿಸಿದೆ. ಜಂತುಹುಳುವಿನ ಸೋಂಕು ಕಾಣಿಸಿಕೊಂಡರೆ ರಕ್ತಹೀನತೆ, ಅಪೌಷ್ಟಿಕತೆ ಮುಂತಾದ ದೈಹಿಕ ಸಮಸ್ಯೆಗಳಷ್ಟೇ ಅಲ್ಲದೇ ಮಾನಸಿಕವಾಗಿಯೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಕೊರತೆಯನ್ನು ಉಂಟು ಮಾಡಿ ಶೈಕ್ಷಣಿಕವಾಗಿಯೂ ಹಿಂದುಳಿಯಲು ಕಾರಣವಾಗುತ್ತದೆ. ದೈನಂದಿನ ಚಟುವಟಿಕೆಯ ಮೇಲೂ ಪರಿಣಾಮ ಇಲ್ಲದಿಲ್ಲ. ಆ ಕಾರಣಕ್ಕಾಗಿ ಡಿ–ವರ್ಮಿಂಗ್ ದಿನವನ್ನು (ಜಂತುಹುಳು ನಿವಾರಣ ದಿನ) ಆಚರಿಸುವ ಮೂಲಕ ಮಕ್ಕಳಲ್ಲಿ ಜಂತುಹುಳುವಿನ ಸಮಸ್ಯೆಯನ್ನು ನಿವಾರಿಸುವ ಕೆಲಸವನ್ನು ಸರ್ಕಾರ–ಸಂಘಸಂಸ್ಥೆಗಳು ಮಾಡುತ್ತಿವೆ.

ಕಾರಣ

ಜಂತುಹುಳು ಸಾಮಾನ್ಯವಾಗಿ ಹೆಚ್ಚು ಕಾಣಿಸಿಕೊಳ್ಳುವುದು ಆರು ವರ್ಷದ ಒಳಗಿನ ಮಕ್ಕಳಲ್ಲಿ. ಆ ವಯಸ್ಸಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವುದೂ ಇದಕ್ಕೆ ಒಂದು ಕಾರಣ.

ಜಂತುಹುಳುವಿಗೆ ಮುಖ್ಯ ಕಾರಣ ಅಶುದ್ಧತೆ. ನಮ್ಮ ಆಹಾರ, ಕುಡಿಯುವ ನೀರು, ಅರೆಬೆಂದ ಮಾಂಸ ಇವುಗಳಲ್ಲಿ ಜಂತುಹುಳುಗಳಿರುತ್ತವೆ. ಮಣ್ಣು ಹಾಗೂ ನೀರಿನಲ್ಲಿ ಇರುವ ಹುಳುಗಳು ಹೆಚ್ಚಾಗಿ ಮಕ್ಕಳನ್ನು ಕಾಡುತ್ತವೆ. ಮಕ್ಕಳು ನೀರು ಹಾಗೂ ಮಣ್ಣಿನೊಂದಿಗೆ ಆಟವಾಡಿ, ಕೈ ಬಾಯಿ ತೊಳೆಯದೆ ಆಹಾರ ಸೇವಿಸುತ್ತಾರೆ. ಆ ಮೂಲಕ ಅವುಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ಕೆಲಮೊಮ್ಮೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಿದರೂ ಜಂತುಹುಳುಗಳು ದೇಹವನ್ನು ಸೇರುತ್ತವೆ. ಚಪ್ಪಲಿ ಧರಿಸದೆ ಇದ್ದಾಗ ಕಾಲನ್ನು ಕಚ್ಚಿ ಆ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಈ ಹುಳುಗಳನ್ನು ಇಂಗ್ಲಿಷಿನಲ್ಲಿ ‘ಹುಕ್‌ವರ್ಮ್‌’ಗಳು ಎಂದು ಕರೆಯುತ್ತಾರೆ.

ಲಕ್ಷಣಗಳು

ಜಂತುಹುಳುಗಳು ಕಾಣಿಸಿಕೊಂಡ ಮಕ್ಕಳಲ್ಲಿ ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತ ಹೋಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವು ಗಂಭೀರ ಸಂದರ್ಭಗಳಲ್ಲಿ ಮೆದುಳಿನಲ್ಲಿ ಜಂತುಹಯಳು ಸೇರಿಕೊಂಡರೆ ಮಕ್ಕಳು ಕೋಪ ಮಾಡಿಕೊಳ್ಳುವುದು, ಸಿಡಿಮಿಡಿಗೊಳ್ಳುವುದು ಮಾಡುತ್ತವೆ. ಕಾರಣವಿಲ್ಲದೆ ಅಳುವುದು, ಊಟ ಬಿಡುವುದು ಇವು ಕೂಡ ಜಂತುಹುಳುವಿನ ಲಕ್ಷಣಗಳೇ. ಕೆಲವು ಮಕ್ಕಳಲ್ಲಿ ಮಲವಿಸರ್ಜನೆಯ ಜಾಗದಲ್ಲಿ ತುರಿಕೆಯಾಗುತ್ತದೆ. ಚರ್ಮದ ತುರಿಕೆಯೂ ಕಾಣಿಸುತ್ತದೆ. ಮುಖ್ಯವಾಗಿ ಈ ಲಕ್ಷಣಗಳಿದ್ದಾಗ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗುತ್ತದೆ. ‌ಮಕ್ಕಳಲ್ಲಿ ಸ್ವಲ್ಪ ಸ್ವಲ್ಪವಾಗಿ ದೇಹದಿಂದ ರಕ್ತ ಹೊರ ಹೋಗುತ್ತಿರುತ್ತದೆ. ಇದರಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಇವೆಲ್ಲವೂ ಒಂದಕ್ಕೊಂದು ಕೊಂಡಿಯಂತಿದೆ.

ಗಂಭೀರತೆ

ಜಂತುಹುಳುಗಳು ಕರುಳನ್ನು ಸೇರಿ ಊಟ ಸೇರದೆ ಇರುವುದು, ನಿತ್ರಾಣದಂತಹ ಸಮಸ್ಯೆಗಳನ್ನು ತಂದೊಡ್ಡೊತ್ತವೆ. ಆದರೆ ಇನ್ನು ಕೆಲವು ಜಂತುಹುಳುಗಳು ಶ್ವಾಸಕೋಶ, ಮೆದುಳು ಹಾಗೂ ಸ್ನಾಯುಗಳಲ್ಲಿ ಸೇರಿಕೊಂಡು ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು. ಕೆಲವೊಮ್ಮೆ ನೂರಾರು ಜಂತುಹುಳುಗಳು ಕರುಳಲ್ಲಿ ಸೇರಿಕೊಂಡು ಕರುಳುಬಳ್ಳಿಯಲ್ಲಿ ತೊಡಕುಂಟಾಗಿ ಇದರ ಕಾರ್ಯವೈಖರಿಯಲ್ಲೂ ವ್ಯತ್ಯಾಸವಾಗಬಹುದು.

ಜಂತುಹುಳುವಿನ ಸಮಸ್ಯೆ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ದೊಡ್ಡವರಲ್ಲೂ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಈ ಸಮಸ್ಯೆಯ ಲಕ್ಷಣಗಳು ಬೇಗನೇ ಕಾಣಿಸಿಕೊಂಡರೆ ದೊಡ್ಡವರಲ್ಲಿ ಸ್ವಲ್ಪ ನಿಧಾನಕ್ಕೆ ಕಾಣಿಸಿಕೊಳ್ಳುತ್ತದೆ. ಒಟ್ಟಾರೆ ಸಮಸ್ಯೆ ಕಾಣಿಸಿಕೊಂಡ ಮೇಲೆ ಕೊರಗುವುದಕ್ಕಿಂತ ಸಮಸ್ಯೆ ಬರುವ ಮೊದಲೇ ಜಾಗ್ರತೆ ವಹಿಸುವುದು ಉತ್ತಮ.

ನಿವಾರಣೆಗೆ ಹೀಗೆ ಮಾಡಿ

ಜಂತುಹುಳುವಿನ ನಿವಾರಣೆಗೆ ಸ್ವಚ್ಛತೆ ತುಂಬ ಮುಖ್ಯ. ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಮಾಡಬೇಕಿರುವುದು:

* ಶೌಚಾಲಯಕ್ಕೆ ಹೋಗುವ ಮೊದಲು ಹಾಗೂ ಹೋಗಿ ಬಂದ ಮೇಲೆ ಶುದ್ಧವಾಗಿ ಕೈ ತೊಳೆದುಕೊಳ್ಳಬೇಕು.

* ಊಟ ಮಾಡುವ ಮೊದಲು ಎರೆಡೆರಡು ಬಾರಿ ಕೈ ತೊಳೆದುಕೊಳ್ಳಬೇಕು.

* ತಿನ್ನುವ ಆಹಾರವನ್ನು ಮುಚ್ಚಿ ಇಡುವ ಅಭ್ಯಾಸ ಮಾಡಿಕೊಳ್ಳಿ.

* ಬಯಲಿನಲ್ಲಿ ಶೌಚ ಮಾಡುವುದನ್ನು ಆದಷ್ಟು ತಪ್ಪಿಸಿ.

* ತೆರೆದ ಶೌಚಾಲಯಕ್ಕಿಂತ ಮುಚ್ಚಿದ ಶೌಚಲಯಕ್ಕೆ ಹೆಚ್ಚು ಒತ್ತು ನೀಡಿ.

* ಹೊರಗೆ ಹೋಗುವಾಗ ಚಪ್ಪಲಿ ಧರಿಸದೆ ಹೋಗಬೇಡಿ.

* ಕುಡಿಯುವ ನೀರಿನ ಡ್ರಮ್‌ ಒಳಗೆ ಕೈ ಹೋಗದಂತೆ ಎಚ್ಚರ ವಹಿಸಿ.

* ಮಣ್ಣಿನಲ್ಲಿ ಆಟವಾಡಿ ಬಂದ ಮಕ್ಕಳು ನೇರವಾಗಿ ಮನೆಯೊಳಗೆ ಬರದಂತೆ ತಡೆಯಿರಿ.

ನಿರೂಪಣೆ: ರೇಷ್ಮಾ ಶೆಟ್ಟಿ

ಪ್ರತಿಕ್ರಿಯಿಸಿ (+)