ಮಂಗಳವಾರ, ಡಿಸೆಂಬರ್ 10, 2019
19 °C
ಮೆಚ್ಚುಗೆ ಪಡೆದ ಪ್ರಬಂಧ

ಲಜ್ಜೆ ಇಲ್ಲದ ಗೆಜ್ಜೆನಾದ

Published:
Updated:
ಲಜ್ಜೆ ಇಲ್ಲದ ಗೆಜ್ಜೆನಾದ

ಆತಂಕದ ಕಣ್ಣುಗಳಿಗೂ ಕ್ಯಾರೇ ಮಾಡುತ್ತಿಲ್ಲವೆಂದರೆ ಇಂದೇನಾಗಿರಬಹುದು? ಬಾರದಿರಲು ಕಾರಣವಾದರೂ ಏನೋ? ಅದೆಷ್ಟು ದಿನಗಳ ಗಾಢ ಪ್ರೇಮಸಂಬಂಧ ನಮ್ಮದು?

ರಾಟೆಯಿಂದ ಇಳಿದ ಹಗ್ಗದ ತುದಿಗೆ ಬಂಧಿಯಾದ ಕೊಡಪಾನದ ಕುತ್ತಿಗೆ ಒಮ್ಮೆ ನೀರ ಕಡೆ ಹೊರಳಿ ತಕ್ಷಣ ಒಲ್ಲೆನೆಂದು ಮಗ್ಗಲು ಬದಲಿಸಿ ಮೇಲ್ಮುಖವಾಗಿ ತೇಲುತ್ತಾ ಎಂದೋ ಬಿದ್ದು ಮೇಲೇರಲಾರದೆ ಅಂಗಾತವಾಗಿ ತೇಲುತ್ತಿದ್ದ ಕೊಡದ ಸೊಂಟಕ್ಕೆ ಮುತ್ತನ್ನಿಕ್ಕಿ ಅದೇನೋ ಗುಟ್ಟು ಹೇಳಿ ಮೆಲ್ಲನೆ ತುಸು ದೂರ ಸರಿದು ವೃತ್ತದಲ್ಲಿ ತಿರುಗಿ ನರ್ತಿಸಿ ಸಂಗಾತಿಯನ್ನು ರಮಿಸುತ್ತಾ ತುಂಬದೆ ನನ್ನನ್ನು ಸತಾಯಿಸಿತು.

ಕೊಡಪಾನದೊಡನೆ ಸ್ವಲ್ಪ ಮುನಿಸಿಕೊಂಡ ನಾನು ಒಂದು ಕೈಯಿಂದ ಹಗ್ಗವನ್ನು ಮೇಲೆಳೆದು ತುಸು ಜೋರಾಗಿ ಕುಕ್ಕಿದ ರಭಸಕ್ಕೆ ಪುಸಕ್ಕನೆ ನೀರೆಡೆ ಮುಖಮಾಡಿ ನೀರ ಕುಡಿಯುತ್ತಾ ನನ್ನ ಆಜ್ಞೆ ಪಾಲಿಸಲಾರಂಭಿಸಿದಾಗ ಕೊಡಪಾನದ ಚುಂಬನಕ್ಕೆ ಪುಳಕಗೊಂಡ ಅದೆಷ್ಟೋ ನೀರ್ಗುಳ್ಳೆಗಳು ಮನದೊಳಗೆ ಅದ್ಯಾವುದೋ ಚಿತ್ತಾರ ಚಿತ್ರಿಸಿ ಆ ಕ್ಷಣದಲ್ಲೆ ಇನಿಯನನ್ನು ಕಾಣಲು ಹಂಬಲಿಸಿದೆ.

ಎಂದಿನಂತೆ ಕೈ ಬಳೆಗಳೂ, ಕಾಲ್ಗೆಜ್ಜೆಗಳೂ ಜೋರಾಗಿ ನಿನಾದಿಸಿ ಇನ್ನೂ ಬೇರೆ ಬೇರೆ ಕಸರತ್ತುಗಳಿಂದ ನನ್ನ ಇರುವಿಕೆಯನ್ನು ಸಾಬೀತು ಮಾಡುತ್ತಲೇ ಅದೆಷ್ಟು ಕಾದರೂ ಪ್ರಿಯತಮನ ಪತ್ತೆಯೇ ಇಲ್ಲ. ಹಗ್ಗ, ರಾಟೆ, ಕೊಡ, ಕೈಗಳು ಎಲ್ಲವನ್ನೂ ಕೆಲ ಹೊತ್ತು ನಿಶ್ಚಲವಾಗಿಸಿ ತಿಳಿನೀರಲ್ಲಿ ನನ್ನ ಪ್ರತಿಬಿಂಬ ಮೂಡಿಸಿದರೂ ಬರಲೇ ಇಲ್ಲ. ಆತಂಕದ ಕಣ್ಣುಗಳಿಗೂ ಕ್ಯಾರೇ ಮಾಡುತ್ತಿಲ್ಲವೆಂದರೆ ಇಂದೇನಾಗಿರಬಹುದು? ಬಾರದಿರಲು ಕಾರಣವಾದರೂ ಏನೋ? ಅದೆಷ್ಟು ದಿನಗಳ ಗಾಢ ಪ್ರೇಮಸಂಬಂಧ ನಮ್ಮದು?

ನೀರಿಗೆ ಅಂಟಿಕೊಂಡಂತೆ ಬಾವಿಯ ಬಾಯಿಗೆ ಒಂಟಿ ಹಲ್ಲೊಂದು ಹುಟ್ಟಿದಂತಿರುವ ಕಲ್ಲೊಂದರ ಮೇಲೆ ಸದಾ ಕುಳಿತಿರುತ್ತಿದ್ದ ನನ್ನ ಪ್ರಿಯತಮ ಕಪ್ಪೆರಾಯ ಎಲ್ಲಿ? ವಿರಹವೇದನೆಯಿಂದ ಮುಖ ಬಾಡಿ ಕಣ್ಣುಗಳು ಸೋತು ದುಃಖ ಒತ್ತರಿಸಿ ರಾಟೆ, ಹಗ್ಗ, ಕೊಡಪಾನದ ಮೇಲೆ ಕೈಗಳ ಬಲಪ್ರದರ್ಶನವಾಗಿ ಸಿಕ್ಕಾಪಟ್ಟೆ ನೀರು ಚಿಮ್ಮಿ ಆದ ಅಲ್ಲೋಲ ಕಲ್ಲೋಲದ ರಭಸಕ್ಕೆ ಎಚ್ಚರವಾದಂತೆ ಒಮ್ಮೆಲೆ ಜೋರಾಗಿ ವಟಗುಟ್ಟಲಾರಂಭಿಸಿದ. ‘ಹೇಯ್... ಇದ್ದೀಯಾ? ಎಲ್ಲಿ ಹೋಗಿದ್ದೆ? ಇಷ್ಟು ಹೊತ್ತು ನನ್ನನ್ನು ಕಡಿಮೆ ಸತಾಯಿಸಿಬಿಟ್ಟೆಯಾ?’ ಆತಂಕ ಮಾಯವಾಗಿ ಮುಗುಳ್ನಗು ಮೆಲ್ಲನೆ ಜಿನುಗಿ ಬಾವಿಯೊಳಗೆ ಸಾಧ್ಯವಾದಷ್ಟು ತಲೆ ತೂರಿಸಿ ಮುದಗೊಳ್ಳುತ್ತಾ ‘ಲವ್ ಯೂ... ಡಿಯರ್’ ಎಂದು ಎಂದಿನಂತೆ ಉಸುರಿ ಫ್ಲೈಯಿಂಗ್ ಕಿಸ್ಸೊಂದನ್ನು ಹಾಯಿಸಿದೆ. ಎಂದಿನಂತೆಯೇ ಆ ಧ್ಯಾನಸ್ಥ ಸ್ಥಿತಿ ಕಂಡು ಬೆರಗಾದೆ.

ಬಾವಿಯೊಳಗಿನ ಬಿಂದಿಗೆ ತುಂಬಿ ಯಾವುದೋ ಕಾಲ ಆಗಿದೆ. ಸೇದಲೆಂದು ಹಗ್ಗವನೆಳೆದು ತಲೆಯೆತ್ತಿ ‘ಓ ಧಕ್‌ ಧಕ್‌ ಕರ್‍ನೇ... ಲಗಾ...’ ಪುಳಕಗೊಂಡು ಗುನು ಗುನಿಸುತ್ತಿರುವಂತೆಯೇ ‘ಇಲ್ಲಿ ಶಾಂತಮ್ಮನ ಮನೆ ಯಾವುದು?’ ಪ್ರಶ್ನೆ ಕೇಳಿ ತಿರುಗಿದರೆ ಇಬ್ಬರು ಮಹಿಳೆಯರನ್ನೊಳಗೊಂಡಂತೆ ನಾಲ್ವರು ಅಪರಿಚಿತರು. ಮುದಗೊಂಡಿದ್ದ ಮನಸ್ಸು ಸ್ವಲ್ಪ ವಿಚಲಿತವಾಗಿ ಇವರು ಯಾರು? ನಮ್ಮ ಹಳ್ಳಿಗೆ ಅಪರಿಚಿತರು ಎಂದು ಕೊಳ್ಳುತ್ತಲೇ ‘ಓ... ಅಲ್ಲಿ ಕಾಣುವ ಮಧ್ಯದ ಸಣ್ಣ ಮನೆ ನೋಡಿ... ಅದೇ ಮನೆ’ ಎಂದು ಬೆಟ್ಟು ತೋರಿಸಿ ನನ್ನ ಕೆಲಸ ಮುಂದುವರೆಸಿದೆ.

ಪ್ರಿಯತಮನಿಗೆ ಅಲ್ಲೆ ಕುಳಿತಿರು, ನೀರು ಹುಯ್ದು ಬೇಗನೆ ಬರುವೆನೆಂದು ಅನುಮತಿ ಕೇಳಿ ಸೊಂಟದಲ್ಲಿ ಒಂದು ಕೊಡಪಾನ, ಬಲಗೈಯಲ್ಲಿ ಮತ್ತೊಂದು ಸಣ್ಣ ಕೊಡಪಾನ ಹಿಡಿದು ಎಂದಿನಂತೆ ಹಿತ್ತಲ ಬಾಗಿಲಿನಿಂದ ಅಡುಗೆ ಕೋಣೆಗೆ ನುಗ್ಗಿ ದೊಡ್ಡ ಸ್ಟೀಲ್ ಹಂಡೆಗೆ ಕೊಡ ಎತ್ತಿ ಸೊರ್ರನೆ ಹುಯ್ಯುತ್ತಾ ಮತ್ತೆ ಜೋರಾಗಿ ‘ಓ... ಧಕ್ ಧಕ್‌ ಕರ್ ನೇ ಲಗಾ...’ ಮುಗಿಸುವ ಮೊದಲೇ ಅಮ್ಮ ನಡುಮನೆಯಿಂದ ಓಡಿಬಂದು ‘ಮೆತ್ತಗೆ, ನಿಲ್ಲಿಸು... ಗಂಡುಬೀರಿ ಹಾಗೆ ಆಡದೆ ಒಂದು ಹದದಲ್ಲಿರು’ ಎಂದು ಹೇಳಿ ಬೇಗ ಹೋಗಿ ಮುಖ ತೊಳೆದು ತಲೆ ಬಾಚಿ ಬಾ, ‘ನಿನ್ನನ್ನು ನೋಡಲು ಹುಡುಗನ ಕಡೆಯವರು ಬಂದಿದ್ದಾರೆ. ಮಿಲಿಟರಿಯವರಂತೆ’ ಎಂದಾಗ ಬಾವಿಕಟ್ಟೆಯ ಹತ್ತಿರ ವಿಳಾಸ ಕೇಳಿದವರು ಇವರೇ ಎಂದು ಈ ಗೊಡ್ಡು ತಲೆಗೆ ಹೊಳೆದದ್ದು ಆಗಲೆ!

ನನ್ನ ಕೂಪಮಂಡೂಕದ ಜೊತೆ ಸೇರಿ ತಾನೂ ಮಂಡೂಕವಾಗಿರುವೆ ಎಂದು ಪೆಚ್ಚಾಗಿ ನಗು ಬಂದು ಮತ್ತೆಲ್ಲವೂ ಸಹಜವಾಗಿ ಚಹಾ ವಿತರಣೆ, ಹೆಸರು, ವಯಸ್ಸು, ವಿದ್ಯಾರ್ಹತೆ ಎಂದು ಸಂದರ್ಶನ ಪ್ರಾರಂಭ. ಮೌನವಾಗಿರಬೇಕೆಂದು ಅದೆಷ್ಟೋ ಬಾರಿ ಅಮ್ಮ ತಾಕೀತು ಮಾಡಿದ್ದರೂ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ‘ನೀವೆಷ್ಟು ಓದಿದ್ದೀರಿ?’ ಎಂದು ತಿರುಗಿ ಪ್ರಶ್ನಿಸುತ್ತಿದ್ದಂತೆಯೇ ಸುಮ್ಮನಿರು ಎಂದು ಅಮ್ಮ ಕಣ್ಸನ್ನೆಯಲ್ಲಿಯೇ ಗದರಿದರು. ಮಾತುಗಾರ್ತಿ, ಚೂಟಿ ಎಂಬ ಬಿರುದು ನೀಡಿ ಹೊರಟ ಇವರಂತೆ ಅದೆಷ್ಟು ಸಂದರ್ಶನಗಳು? ಸ್ವಾಭಾವಿಕವಾಗಿರದೆ ಕೃತಕ ಅಲಂಕಾರದಲ್ಲಿ ಪ್ರದರ್ಶನ ನೀಡಿ ನೀಡಿ ಮತ್ತೇನು? ಹುಡುಗಿ ಕಪ್ಪು, ನಾಲ್ಕು ಹೆಣ್ಣು ಮಕ್ಕಳಲ್ಲಿ ಹಿರಿಯವಳಿವಳು, ಕುಟುಂಬದ ಜವಾಬ್ದಾರಿ ನಮ್ಮ ತಲೆ ಮೇಲೆ ಬರುತ್ತದೆ.

ಆರ್ಥಿಕವಾಗಿ ಸಬಲರಲ್ಲ, ಹುಡುಗಿಯೇನೋ ವಿದ್ಯಾವಂತೆ; ಆದರೆ ಸ್ವಂತ ಮನೆಯಿಲ್ಲ, ಜಾತಕ, ನಕ್ಷತ್ರ – ಹೀಗೆ ನಿರಾಕರಿಸಲು ತರಾವರಿ ಕಾರಣಗಳು. ಹರೆಯಕ್ಕೆ ಬಂದ ಹೆಣ್ಣುಮಗಳು ಗಂಡಿನ ಕಡೆಯವರಿಗೆ ಆಯ್ಕೆಯಾಗಬೇಕಾದರೆ ‘ಅಡುಗೆ ಬರುತ್ತದಾ? ರಂಗೋಲಿ ಗೊತ್ತಾ? ಹಾಡು ಹೇಳಲು ತಿಳಿಯುತ್ತದಾ? ಹೊಲದ ಕೆಲಸ ಮಾಡುತ್ತಾಳಾ?’ ನೂರಾರು ಪ್ರಶ್ನೆಗಳ ಈ ಆಯ್ಕೆಯ ಪ್ರಕ್ರಿಯೆಗಳನ್ನು ಹಳೆಯ ಸಿನಿಮಾಗಳಲ್ಲಿ ಸಾಕಷ್ಟು ನೋಡಿದಂತೆ ನಿಜಜೀವನದಲ್ಲೂ ಸೀರೆಯ ಸೆರಗು ಹೊದ್ದು ನಾಚಿಕೆಯಿಂದ ತಲೆತಗ್ಗಿಸಿ ಹಿರಿಯರ ಮುಂದೆ ಕುಳಿತುಕೊಳ್ಳಬೇಕಾದ ಮುಜುಗರದ ಸನ್ನಿವೇಶಗಳನ್ನು ನಮ್ಮ ಒಡನಾಡಿಗಳಿಂದ ಬಲ್ಲವರಿದ್ದೇವೆ.

ಗಂಡುಮಕ್ಕಳಿಗೆ ಯಾವುದೇ ಊನಗಳಿದ್ದರೂ ಹೆಣ್ಣುಮಕ್ಕಳು ಮಾತ್ರ ನಿಯಮದನ್ವಯ ಇರಬೇಕೆಂಬ ಬಯಕೆ. ಇತ್ತೀಚಿನ ದಿನಗಳಲ್ಲಿ ಈ ವಿಚಾರದಲ್ಲಿ ಹೀಗೆ ಮುಜುಗರಗೊಳ್ಳುವ ಪ್ರಮೇಯವೇ ಇಲ್ಲ. ಅಂದಿನ ಹಾಗೆ ಮನೆ ಮನೆಗೆ ಬಂದು ಹುಡುಗಿ ಕೇಳಿ ಪ್ರಚಾರ ಮಾಡದೆ ಎಲ್ಲೋ ಹೊರಗಡೆ ಒಂದೆಡೆ ನೋಡುವ ವ್ಯವಸ್ಥೆ ಬೆಳೆದು ಹುಡುಗಿಯರೂ ಈ ವ್ಯವಸ್ಥೆಗೆ ನಾಚಿಕೆ ಬಿಟ್ಟು ತಮ್ಮ ಬದುಕ ಕಟ್ಟುವ ಸಂಗಾತಿಯ ಆಯ್ಕೆಯಲ್ಲಿ ದಿಟ್ಟತನ ಮೆರೆಯುತ್ತಿರುವುದು ಮತ್ತೊಂದು ಕ್ರಾಂತಿಯೇ ಸರಿ. ಮ್ಯಾಟ್ರಿಮೋನಿ, ಫೇಸ್‍ಬುಕ್ ಮುಂತಾದ ಅಂತರ್ಜಾಲತಾಣಗಳಲ್ಲಿ ಪರಿಚಿತರಾಗಿ ಪರಸ್ಪರ ಅರ್ಥಮಾಡಿಕೊಂಡು ಜೊತೆಯಾಗಿ ಬದುಕಲು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸಹಜವೆಂಬಂತೆ ನಡೆಯುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಲಿವಿಂಗ್ ಟುಗೆದರ್‍ನಿಂದ ಹೊಂದಾಣಿಕೆಯಾಗದಿದ್ದರೆ ಮುಲಾಜಿಲ್ಲದೆ ಬೇರೆಯಾಗುವ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ದಿಟ್ಟತನ ಗಟ್ಟಿಯಾಗಿಯೇ ಹೊಸತನಕ್ಕೆ ನಾಂದಿ ಹಾಡುತ್ತಿದೆ.

ಅಂದ ಹಾಗೆ ನಾನು ಈ ಹಿಂದೆ ಕಪ್ಪೆಯನ್ನು ಪ್ರೀತಿಸಿದ ಪರಿ ನಿಮಗಿಲ್ಲಿ ವಿಚಿತ್ರವಾಗಿ ಕಂಡಿರಬಹುದು. ಈ ರೀತಿಯ ಪ್ರೇಮಾಯಣವನ್ನು ಕಾಲ್ಪನಿಕ ಹಾಗೂ ಅಜ್ಜಿಕತೆಗಳಲ್ಲಿ ಮಾತ್ರವೇ ಕೇಳಿರುತ್ತೇವೆ. ಆದರೆ ನನ್ನ ಅನುಭವಕ್ಕೆ ಬಂದಿದ್ದು ದಿಟ! ನನ್ನ ಕಪ್ಪೆರಾಯನ ಜತೆ ಅದೆಷ್ಟೋ ದಿನಗಳು ಪ್ರೇಮಪಲ್ಲವಿ ಹಾಡಿದ್ದೆ. ಕಾಣದಿದ್ದರೆ ಆಗುವ ತಳಮಳ, ಕಂಡಾಗ ಸಿಗುವ ಖುಷಿ ಅದು ಹೇಳತೀರದು.

ವ್ಯವಸ್ಥೆಯ ಹುದುಲಲ್ಲಿ ಮದುವೆಯೆಂಬ ಪರಿಷೆಗೆ ಪ್ರವೇಶ ಪಡೆದು ಅಣಿಯಾಗುತ್ತಲೇ ಮದುವೆಯ ಹಿಂದಿನ ದಿನ ಬೆಳಗ್ಗೆ ಕೊಡಪಾನದೊಂದಿಗೆ ಬಾವಿಕಟ್ಟೆಯಲ್ಲಿ ನಿಂತಾಗ ಇನಿಯನಿಗಾಗಿ ಹುಡುಕಬೇಕಾಗಿ ಬರಲಿಲ್ಲ

ಅವನು ಅದೆಷ್ಟೋ ಹೊತ್ತಿನಿಂದ ಕಲ್ಲ ಮೇಲೆ ಧ್ಯಾನಸ್ಥನಾಗಿದ್ದ. ನಾನಂದು ಮೂಕಳಾಗಿದ್ದೆ. ತುಂಬಾ ಹೊತ್ತು ಅವನಲ್ಲೇ ಕಣ್ಣ ನೆಟ್ಟೆ. ನನ್ನ ಕಣ್ಣಿನಿಂದ ಬಿದ್ದ ಒಂದು ಹನಿ ಅದು ಅವನನ್ನು ತೋಯಿಸಿತೇ? ನೀರು ಎಳೆದ ಕೊಡಪಾನದ ಅಂಚಿನಲ್ಲಿದ್ದ ಆ ದೊಡ್ಡ ಹನಿ ಅವನ ಕಂಬನಿಯೇ ಇರಬಹುದೇ? ಅದೆಷ್ಟು ದಿನ ಕೊಡಪಾನ ಹತ್ತಿರ ಹಿಡಿದು ನೆಗೆದು ಕೊಡಪಾನದ ಒಳಗೆ ಬಾ ಎಂದು ಗೋಗರೆದಿಲ್ಲಾ? ಎಲ್ಲದಕ್ಕೂ ನೆಲೆಯೂರಿದ ಬಂಡೆಯಂತೆ ಧ್ಯಾನಸ್ಥ ಸ್ಥಿತಿ. ಈಗ ನಾನೇನು ಮಾಡಲಿ? ಕೊನೆಯ ಬಾರಿಗೆ ಗದ್ಗದಿತವಾಗಿ ‘ಲವ್ ಯೂ ಫಾರ್‌ ಎವರ್’ ಎಂದು ಹೇಳಿ ತಿರುಗಿ ನೋಡದೆ ಬಂದಿದ್ದೆ.

ಮಲಗಿ ಅದೆಷ್ಟು ಹೊತ್ತು ಸರಿದರೂ ನಿದ್ದೆ ಹತ್ತುತ್ತಿಲ್ಲ. ಹೊರಳಿ ಹೊರಳಿ ಮಗ್ಗಲು ಬದಲಿಸುತ್ತಲೇ ಮನದಾಳದಲ್ಲಿ ಕೊರೆಯುವ ನೋವು. ತಡರಾತ್ರಿಯಾದರೂ ಮನೆಯ ತುಂಬೆಲ್ಲಾ ಹಗಲೆಂಬಂತೆ ಬೆಳಕು, ಸಂಭ್ರಮ, ಜವಾಬ್ದಾರಿಯ ಓಡಾಟ, ಗದ್ದಲ ಇದ್ದರೂ ನಿದ್ದೆಗೆ ಭಂಗವಾಗಿದ್ದು ಏಕಾಂತತೆಯಲ್ಲಿ ಇನಿಯನ ನೆನಪೊಂದೆ.

ತನ್ನ ಅರಮನೆಯ ಕಲ್ಲಿನ ಸಿಂಹಾಸನದಲ್ಲಿ ರಾಜಕುಮಾರ ನನ್ನನ್ನು ಕಾಯುತ್ತಿರಬಹುದೇ? ನನ್ನೆದೆಯ ತಳಮಳವನ್ನು ಯಾರೊಂದಿಗೆ ಹೇಳಿಕೊಳ್ಳಲಿ? ವಿಚಿತ್ರವೆಂದು ದೂಷಿಸುತ್ತಾರಲ್ಲದೆ ಪ್ರಯೋಜನವಾದರೂ ಏನು? ನನ್ನ ರಾಯನಿಗೂ ವಿರಹವೇದನೆ ಅದೆಷ್ಟು ಕಾಡುತ್ತಿರಬಹುದೋ? ಬಾವಿಕಟ್ಟೆಯಿಂದ ಒಳಗೆ ನೆಗದು ಪ್ರಿಯತಮನನ್ನು ಸೇರಿಬಿಡಲೇ? ಬೆಳದಿಂಗಳು ಇಷ್ಟೊಂದು ಆವರಿಸಿರುವಾಗ ಎಲ್ಲರ ಕಣ್ಣು ತಪ್ಪಿಸಿ ಕೋಣೆಯಿಂದ ಹೊರಗೆ ದಾಟುವುದಾದರೂ ಹೇಗೆ? ಮುನಿಯಂತೆ ಕುಳಿತು ತಪಸ್ಸು ಮಾಡುವುದ ಬಿಟ್ಟು ಬಂದು ನನ್ನನ್ನು ಕರೆದುಕೊಂಡು ಹೋಗಬಾರದೇಕೆ? ನನ್ನ ಅಸಹಾಯಕತೆ ಅರ್ಥವಾಗುತ್ತಿಲ್ಲವೇ? ನಿಟ್ಟುಸಿರು! ನಿಟ್ಟುಸಿರು!!

ಬದುಕಿನಲ್ಲಿ ನಮಗೋಸ್ಕರವೇ ಎದುರಾಗುವ ಎಲ್ಲಾ ಸವಾಲುಗಳನ್ನು ಸ್ವೀಕರಿಸುತ್ತಲೇ ಓಡಾಡುತ್ತಿರುವ ಅಮ್ಮನ ಮುಖ! ತೆಪ್ಪಗಿರು ಎಂಬ ಹೊದಿಕೆಯಿಂದ ಹೊರಬರುವಷ್ಟರಲ್ಲಿ ಬೆಳಕಾಗಿತ್ತು.

ತವರುಮನೆಗೆ ಬಂದಾಗಲೆಲ್ಲಾ ಒಮ್ಮೆ ಬಾವಿಯೊಳಗೆ ಇಣುಕಿ ಹುಡುಕಾಡಿದರೆ ನಿರಾಸೆಯಷ್ಟೆ. ಅನುದಿನವೂ ಕಾಡುತ್ತಿದ್ದ ಪ್ರಿಯಕರನನ್ನು ಮರೆಯಲಾಗದಿದ್ದರೂ ನಂತರದಲ್ಲಿ ಬದುಕಿನ ತಿರುವಿಗೆ ಸಿಕ್ಕಿ ನೆನಪಿಸಿಕೊಳ್ಳಲಾಗಲಿಲ್ಲ. ಸೀಮಂತ ಮುಗಿಸಿ ಅಮ್ಮನ ಮನೆಗೆ ಮರಳಿದ ನಾನು ಬಾವಿಯೆಂಬ ನನ್ನ ಹಳೆಯ ಅರಮನೆಯಿಂದ ತಂಗಿ ನೀರು ಸೇದುತ್ತಿದ್ದಾಗ ಹೋಗಿ ಇಣುಕಿದೆ. ಅಂತರಂಗವೆಲ್ಲಾ ರಾಯನ ನೆನಪು ಆವರಿಸಿ ನೋಡಲೇಬೇಕೆಂಬ ತೀವ್ರ ಬಯಕೆ! ಬಾಣಂತನ ಮುಗಿಸಿ ಹಿಂದಿರುಗುವವರೆಗೂ ಅದೆಷ್ಟೋ ಬಾರಿ ಒಮ್ಮೆ ನೋಡಲು ಹಾತೊರೆದಿದ್ದೇನೆ. ಆ ಬಳಿಕ ಒಮ್ಮೆಯೂ ನನ್ನಿನಿಯ ಕಾಣಸಿಗಲೇ ಇಲ್ಲ.

ಹೊರಡುವ ಹಿಂದಿನ ರಾತ್ರಿ ಅಮ್ಮ ಮೊಮ್ಮಗುವಿನ ತಲೆ ಸವರಿ ಮುದ್ದಿಸುವಾಗ ನಮ್ಮ ಶೈಶವದಲ್ಲಿ ಚಾಪೆ ಹಾಸಿ ಎಲ್ಲರೂ ಒಟ್ಟಾಗಿ ಮಲಗುತ್ತಿದ್ದುದು ನೆನಪಿಗೆ ಬಂತು. ಪ್ರತಿ ರಾತ್ರಿಗಳಲ್ಲೂ ಅಮ್ಮನ ವೈವಿದ್ಯಮಯ ಕಥೆಗಳಿಗಾಗಿ ಕಾಯುತ್ತಿದ್ದೆವು. ಅಂದಿನ ಆ ಮೈ ನವಿರೇಳಿಸುವ ಕಥೆಯಲ್ಲಿ ಕಥಾನಾಯಕಿ ಗುಣವಂತೆ, ರೂಪವತಿ. ಸಣ್ಣವಳಿಂದಲೇ ಚಿಕ್ಕಮ್ಮನಿಂದ ಕಿರುಕುಳ ಅನುಭವಿಸಿ ಪಡುವ ಪಾಡು, ಬವಣೆಗಳನ್ನು ಅನೇಕರಿಂದ ಕೇಳಿ ತಿಳಿದ ರಾಜಕುಮಾರ ಕಪ್ಪೆಯ ವೇಷದಲ್ಲಿ ಅವಳ ಮನೆ ಹೊಕ್ಕು ಅವಳ ಸೌಂದರ್ಯ, ಗುಣಗಳಿಗೆ ಮಾರುಹೋಗಿ ಅವಳಲ್ಲಿ ಅನುರಾಗಿಯಾಗಿ ಪ್ರತಿದಿನ ಮಾತನಾಡಿಸಿ ಸಂತೈಸಲು ಪ್ರಯತ್ನಿಸುತ್ತಿದ್ದ.

ತನ್ನನ್ನು ಮದುವೆಯಾಗುವಂತೆ ಅದೆಷ್ಟು ಭಾರಿ ಕೇಳಿದರೂ ಕಪ್ಪೆಯನ್ನು ಮದುವೆಯಾಗಲು ಸಾಧ್ಯವೇ ಎಂದು ತನ್ನ ವಿಧಿಯನ್ನು ನೆನೆದು ಕಣ್ಣೀರಿಟ್ಟಳು. ಅದೊಂದು ಸುಂದರ ಕ್ಷಣದಲ್ಲಿ ಕಪ್ಪೆ ತನ್ನ ಪೊರೆಯನ್ನು ಕಳಚಿ ಸುಂದರ ರಾಜಕುಮಾರನಾಗಿ ಪ್ರತ್ಯಕ್ಷಗೊಂಡು ಆ ಬಡ ಹುಡುಗಿಯನ್ನು ಮದುವೆಯಾಗಿ ಮಹಾರಾಣಿಯಂತೆ ನೋಡಿಕೊಂಡು ಮುಂದೆ ಬಹುಕಾಲ ಇಬ್ಬರು ಸುಖವಾಗಿ ಬದುಕಿದರು.

ಅಮ್ಮ ಹೇಳಿದ ಈ ಕಥೆಯು ನನ್ನಲ್ಲಿ ಎಷ್ಟು ಪರಿಣಾಮ ಬೀರಿತ್ತೆಂದರೆ ಬಾವಿಯೊಳಗಿದ್ದ ನನ್ನ ಕಪ್ಪೆರಾಯನೂ ಒಂದಲ್ಲಾ ಒಂದು ದಿನ ತನ್ನ ಪೊರೆಯನ್ನು ಕಳಚಿ ನನ್ನನ್ನು ವರಿಸುವ ರಾಜಕುಮಾರನಾಗುತ್ತಾನೆ ಎಂಬ ನಿರೀಕ್ಷೆ ಬಲವಾಗಿ ಆವರಿಸುವಷ್ಟು. ಅವನನ್ನು ನನ್ನ ಜೀವನಸಂಗಾತಿಯೆಂದು ಪ್ರೀತಿಸಿಬಿಟ್ಟಿದ್ದೆ. ಹುಚ್ಚು ಕನಸು ಹೆಣೆದಿದ್ದೆ. ಅಥವಾ ಅವನೇ ಪೊರೆ ಕಳಚಿ ರಾಜಕುಮಾರನಾಗಿ ಬಂದನೇ? ಏಕೆಂದರೆ ಮತ್ತೊಮ್ಮೆಯೂ ನನ್ನ ಕಪ್ಪೆರಾಯ ಕಾಣಲೇ ಇಲ್ಲವಲ್ಲಾ? ಲಜ್ಜೆ ಇಲ್ಲದೆ ಆ ಗೆಜ್ಜೆನಾದ ನನ್ನೊಳಗೆ ನಿನಾದಿಸುತ್ತಲೇ ಇದೆ. ಜೊತೆಗೆ ಪುಳಕವ ಹೊತ್ತು...

*

ಪ್ರತಿಕ್ರಿಯಿಸಿ (+)