ಶುಕ್ರವಾರ, ಡಿಸೆಂಬರ್ 6, 2019
24 °C

ಬಂಜೆತನ ನಿವಾರಣೆಗೆ ಹೊಸ ಆಶಾಕಿರಣ: ಮಾನವ ಅಂಡಾಣು ಅಭಿವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

ಬಂಜೆತನ ನಿವಾರಣೆಗೆ ಹೊಸ ಆಶಾಕಿರಣ: ಮಾನವ ಅಂಡಾಣು ಅಭಿವೃದ್ಧಿ

ಲಂಡನ್‌: ಇದೇ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮಾನವನ ಅಂಡಾಣುಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿರುವುದಾಗಿ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

30 ಮತ್ತು 40 ವಯಸ್ಸಿನ ಆಸುಪಾಸಿನಲ್ಲಿರುವ 10 ಮಹಿಳೆಯರ ಅಂಡಾಣುಗಳ ಜೀವಕೋಶ ಹೊರತೆಗೆದು ಪ್ರಯೋಗಾಲಯದಲ್ಲಿ ಸ್ವತಂತ್ರವಾಗಿ ಬೆಳೆಸಲಾಗಿದೆ. ಆ ಪೈಕಿ 48 ಅಂಡಾಣು ಭಾಗಶಃ ಮತ್ತು 9 ಅಂಡಾಣು ಸಂಪೂರ್ಣ ಪಕ್ವವಾಗಿ ಬೆಳೆದಿವೆ. ಆದರೆ, ಈ ಅಂಡಾಣುಗಳು ವೀರ್ಯಾಣು ಜತೆ ಸೇರಿ ಫಲಿತಗೊಳ್ಳಲು ವಿಫಲವಾಗಿವೆ.

20 ವರ್ಷಗಳ ಹಿಂದೆಯೇ ಪ್ರಯೋಗಾಲಯದಲ್ಲಿ ಇಲಿಗಳ ಅಂಡಾಣು ಬೆಳವಣಿಗೆ ಪ್ರಯೋಗ ಯಶಸ್ವಿಯಾಗಿತ್ತು. ಆದರೆ, ಮಾನವನ ಅಂಡಾಣುಗಳ ಬೆಳವಣಿಗೆ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿರಲಿಲ್ಲ. ಲಭ್ಯವಿರುವ ತಂತ್ರಜ್ಞಾನದ ನೆರವಿನಿಂದ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಬಂಜೆತನಕ್ಕೆ ಚಿಕಿತ್ಸೆ ಪಡೆಯುತ್ತಿರುವ ದಂಪತಿಗೆ ಈ ಸಂಶೋಧನೆ ಆಶಾಕಿರಣವಾಗಲಿದೆ. ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆ ಪಡೆಯುತ್ತಿರುವ ಮತ್ತು ಗರ್ಭಪಾತ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಸಹ ಆರೋಗ್ಯವಂತ ಮಕ್ಕಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಪ್ರಯೋಗ ನಡೆಸಲು ಎಡಿನ್‌ಬರ್ಗ್‌ ವಿಜ್ಞಾನಿಗಳ ತಂಡ ಕಾನೂನಾತ್ಮಕವಾಗಿ ಒಪ್ಪಿಗೆ ಪಡೆದಿರಲಿಲ್ಲ. ಈಗ ಈ ತಂಡ ಅನುಮತಿ ಪಡೆಯಲು ಯೋಚಿಸುತ್ತಿದೆ.

ಬಂಜೆತನ ನಿವಾರಣೆ ಚಿಕಿತ್ಸೆ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಕ ಸಂಶೋಧನೆಯಾಗಿದೆ ಎಂದು ಸಂಶೋಧನಾ ತಂಡದ ಪ್ರಾಧ್ಯಾಪಕ ಎವೆಲಿನ್‌ ಟೆಲ್‌ಫರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)