ಗುರುವಾರ , ಡಿಸೆಂಬರ್ 12, 2019
24 °C

ಮಾತೃಪೂರ್ಣ ಯೋಜನೆಗೆ ನೀರಸ ಪ್ರತಿಕ್ರಿಯೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

ಮಾತೃಪೂರ್ಣ ಯೋಜನೆಗೆ ನೀರಸ ಪ್ರತಿಕ್ರಿಯೆ

ಚಿಂತಾಮಣಿ: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಮಾತೃಪೂರ್ಣ ಯೋಜನೆ’ಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂಗನವಾಡಿಗಳಲ್ಲಿ ಆಹಾರ ತಯಾರಿಸಿ ಒದಗಿಸುವ ಮಾತೃಪೂರ್ಣ ಯೋಜನೆಗೆ ಕಳೆದ ಅಕ್ಟೋಬರ್‌ 2ರಂದು ಚಾಲನೆ ನೀಡಲಾಗಿತ್ತು. ತಾಲ್ಲೂಕಿನಲ್ಲಿ 2,833 ಗರ್ಭಿಣಿಯರು ಮತ್ತು 2,954 ಬಾಣಂತಿಯರನ್ನು ಫಲಾನುಭವಿಗಳನ್ನಾಗಿ ಗುರುತಿಸಲಾಗಿತ್ತು. ಅವರಲ್ಲಿ 1,861 ಗರ್ಭಿಣಿಯರು ಹಾಗೂ 2,005 ಬಾಣಂತಿಯರು ಪ್ರಯೋಜನ ಪಡೆಯುತ್ತಿದ್ದು, ಶೇ 67ರಷ್ಟು ಸಾಧನೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಅಧಿಕಾರಿಗಳು ನೀಡುವ ಅಂಕಿ ಅಂಶಗಳು ಸುಳ್ಳು. ವಾಸ್ತವಾಂಶದಲ್ಲಿ ಶೇ 40 ರಷ್ಟು ಸಾಧನೆಯಾಗಿಲ್ಲ ಎಂದು ಅಂಗನವಾಡಿಗಳ ಮುಖಂಡರು ಹೇಳುತ್ತಾರೆ. ಗರ್ಭಿಣಿ, ಬಾಣಂತಿ ಮತ್ತು ಮಗು ಅಪೌಷ್ಟಿಕತೆಯಿಂದ ನರಳಬಾರದು ಎಂದು ಅಂಗನವಾಡಿಗಳಲ್ಲಿ ಮಧ್ಯಾಹ್ನ ಬಿಸಿಯೂಟ, ಮೊಟ್ಟೆ, ನೆಲಗಡಲೆ, ಬೆಲ್ಲ ನೀಡಲಾಗುತ್ತದೆ. ಆದರೆ ಅದನ್ನು ಸೇವಿಸಲು ಫಲಾನುಭವಿಗಳು ಅಂಗನವಾಡಿಗಳ ಕಡೆ ಮುಖ ಮಾಡುತ್ತಿಲ್ಲ ಎನ್ನುತ್ತಾರೆ.

ತಾಲ್ಲೂಕಿನಲ್ಲಿ ಒಟ್ಟು 460 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ 199 ಸ್ವಂತ ಕಟ್ಟಡ, 54 ಪಂಚಾಯತ್‌ ಕೇಂದ್ರಗಳಲ್ಲಿ, 42 ಸಮುದಾಯ ಭವನಗಳಲ್ಲಿ, 63 ಶಾಲೆಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ 76 ಹಾಗೂ ಇತರೆ ಪರ್ಯಾಯ ವ್ಯವಸ್ಥೆಯಲ್ಲಿ 26 ಕೇಂದ್ರಗಳಿವೆ.

ಪೂರ್ವ ತಯಾರಿ ಇಲ್ಲದೆ ಸರ್ಕಾರ ಯೋಜನೆ ಜಾರಿಗೊಳಿಸಿರುವುದು ಯೋಜನೆ ವಿಫಲತೆಗೆ ಕಾರಣವಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಭಿಪ್ರಾಯಪಡುತ್ತಾರೆ.

ಜನರು ಸ್ವಾಭಿಮಾನಿಗಳಾಗಿದ್ದು, ಅಂಗನವಾಡಿಗಳಿಗೆ ತೆರಳಿ ಬಿಸಿಯೂಟ ಸೇವಿಸಲು ಹಿಂದೇಟು ಹಾಕುತ್ತಾರೆ. ಜಾಗೃತಿ ಇಲ್ಲದಿರುವುದು, ಜಾತಿ ವ್ಯವಸ್ಥೆ, ಸ್ಥಿತಿವಂತರು, ಧೋರಣೆ ಮನೋಭಾವನೆ, ಮನೆಯಿಂದ ಅಂಗನವಾಡಿಗಳು ದೂರವಿರುವುದು, ಮಗು ಬಿಟ್ಟು ಬರಲು ಸಾಧ್ಯವಾಗದಿರುವುದು, ಕೆಲಸ ಕಾರ್ಯಗಳಿಗೆ ಹೋಗುವವರು ಸಮಯಕ್ಕೆ ಸರಿಯಾಗಿ ಬರಲಾಗದಿರುವುದು ಯೋಜನೆಯ ವಿಫಲತೆಗೆ ಕಾರಣಗಳು ಎಂದು ಫಲಾನುಭವಿಗಳು ಹೇಳುತ್ತಾರೆ.

ಬಹುತೇಕ ಕೇಂದ್ರಗಳಲ್ಲಿ ಒಂದೇ ಕೊಠಡಿಯಲ್ಲಿ ಎಲ್ಲವೂ ನಡೆಯಬೇಕಾಗಿದೆ. ಅಂಗನವಾಡಿಗಳಲ್ಲಿ ಕುಳಿತು ಉಣ್ಣುವ ವಾತಾವರಣ ಇರುವುದಿಲ್ಲ. ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಸ್ವಚ್ಛವಾದ ಸ್ಥಳಾವಕಾಶದ ಕೊರತೆಯಿಂದ  ಫಲಾನುಭವಿಗಳು ಅಂಗನವಾಡಿಗಳಿಗೆ ಬಂದು ಊಟ ಮಾಡಲು ಒಪ್ಪುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಹಿಂದೆ ಮನೆಗಳಿಗೆ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತಿತ್ತು. ಪೌಷ್ಟಿಕ ಆಹಾರ ಫಲಾನುಭವಿಗಳಿಗೆ ಸಿಗದೆ ಮನೆಯವರೆಲ್ಲರೂ ಉಪಯೋಗಿಸುತ್ತಾರೆ. ತಾಲ್ಲೂಕಿನಲ್ಲಿ 60–70 ಮಂದಿ ಅಪೌಷ್ಟಿಕತೆಯಿಂದ

ನರಳುತ್ತಿದ್ದಾರೆ. ಅಪೌಷ್ಟಿಕತೆ ನಿವಾರಣೆ ಮಾಡಿ ತಾಯಿ ಮಗುವಿನ ಆರೋಗ್ಯ ಕಾಪಾಡುವುದು, ಗರ್ಭಿಣಿ ಹಾಗೂ ಶಿಶುಗಳ ಮರಣ ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಗರ್ಭಿಣಿ ಮತ್ತು ಬಾಣಂತಿಯರಿಗೆ ಯೋಜನೆಯ ಉದ್ದೇಶ ಹಾಗೂ ಮಹತ್ವ ವಿವರಿಸಿ ಪುಸಲಾಯಿಸಲಾಗುತ್ತಿದೆ. ಫಲಾನುಭವಿಗಳ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿದ್ದು, ದೂರವಾಣಿ ಮೂಲಕವೂ ಮನವೊಲಿಸಲಾಗುತ್ತಿದೆ. ಆದಾಗ್ಯೂ ಫಲಾನುಭವಿಗಳು ಆಸಕ್ತಿ ತೋರುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪ್ರತಿ ಫಲಾನುಭವಿಗೆ ₹ 21 ವೆಚ್ಚದಲ್ಲಿ ಪೌಷ್ಟಿಕ ಬಿಸಿಯೂಟ ಒದಗಿಸುವ ನೂತನ ಮಾತೃಪೂರ್ಣ ಯೋಜನೆಯನ್ನು ರೂಪಿಸಲಾಗಿದೆ. ಇಂದಿನ ದುಬಾರಿ ಬೆಲೆ ಏರಿಕೆಯ ಕಾಲದಲ್ಲಿ ₹ 21ಕ್ಕೆ ಎಂತಹ ಪೌಷ್ಟಿಕ ಆಹಾರ ನೀಡಲು ಸಾಧ್ಯ ಎಂದು ಸಮಾಜ ಸೇವಕರು ಪ್ರಶ್ನಿಸುತ್ತಾರೆ.

ಕಳೆದ ಅಕ್ಟೋಬರ್‌ನಲ್ಲಿ ಯೋಜನೆ ಆರಂಭಿಸಿದ್ದರೂ ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರು ತಮ್ಮ ಸ್ವಂತ ಹಣದಿಂದ ಯೋಜನೆ ನಿಭಾಯಿಸುತ್ತಿದ್ದೇವೆ ಎಂಬುದು ಅಂಗನವಾಡಿ ಸಿಬ್ಬಂದಿಯ ಅಳಲಾಗಿದೆ.

 

ಪ್ರತಿಕ್ರಿಯಿಸಿ (+)