ಭಾನುವಾರ, ಡಿಸೆಂಬರ್ 8, 2019
24 °C

ಎರಡನೇ ಹಂತದ ಕಾಮಗಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡನೇ ಹಂತದ ಕಾಮಗಾರಿಗೆ ವಿರೋಧ

ಕಾರವಾರ: ಇಲ್ಲಿನ ಬಂದರಿನ ಎರಡನೇ ಹಂತದ ಅಭಿವೃದ್ಧಿ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪರಿಸರ ಸಾರ್ವಜನಿಕ ಆಲಿಕೆ ಸಭೆ’ಯಲ್ಲಿ ಬಂದರು ಇಲಾಖೆ ವಿರುದ್ಧ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.

ಬೈತಖೋಲ್ ನಿವಾಸಿಗಳ ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರ್ಕರ್ ಮಾತನಾಡಿ, ‘ಯೋಜನೆಯ ನೀಲನಕ್ಷೆ ಸಿದ್ಧಪಡಿಸಿದ ಚೆನ್ನೈನ ಹೂಬರ್ಟ್ ಎನ್ವಿರೋ ಕೇರ್ ಸಂಸ್ಥೆಯವರು ತಮ್ಮ ವರದಿಯಲ್ಲಿ 50 ಎಕರೆ ಜಮೀನು ಒತ್ತುವರಿಯಾಗಿದೆ ಎಂದು ತೋರಿಸಿದ್ದಾರೆ. ಅದು ಯಾರಿಂದ ಎಂದು ತಿಳಿಸಬೇಕು. ಮೊದಲ ಹಂತದ ಕಾಮಗಾರಿಗೆ ಜಮೀನು ಕಳೆದುಕೊಂಡ ಮೂಲ ನಿವಾಸಿಗಳಿಗೆ ಇನ್ನೂ ಪುನರ್‌ ವಸತಿ ವ್ಯವಸ್ಥೆ ಆಗಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಎರಡನೇ ಹಂತದ ಕಾಮಗಾರಿ ಬೇಡ’ ಎಂದು ಒತ್ತಾಯಿಸಿದರು.

‌ಕಾರವಾರದ ಡಾ.ಬಿ.ಎನ್.ನಾಯ್ಕ್ ಮಾತನಾಡಿ, ‘ಎರಡನೇ ಹಂತದ ಕಾಮಗಾರಿಯ ನೀಲನಕ್ಷೆಯಲ್ಲಿ ಕೋಣೆನಾಲಾವನ್ನು ಕಡೆಗಣಿಸಲಾಗಿದೆ. ಅದನ್ನು ಬಂದರಿನ ಒಳಗೆ ತೆರೆದರೆ ಬಂದರು ಕೆಸರಿನಲ್ಲಿ ಮುಚ್ಚಿಹೋಗುತ್ತದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರು.

ಮುಖಂಡ ಕೆ.ಟಿ.ತಾಂಡೇಲಿ ಮಾತನಾಡಿ, ‘ಬಂದರು ವಿಸ್ತರಣೆಗೆ ನಿರ್ಮಿಸುವ ತಡೆಗೋಡೆ ಕಾಳಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಲಿದೆ. ಇದು ನೈಸರ್ಗಿಕ ಬಂದರು. ಇದನ್ನು ಹೀಗೇ ಬಿಡುವುದು ಉತ್ತಮ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ ವಿಠ್ಠೋಬ ನಾಯ್ಕ್ ಮಾತನಾಡಿ, ‘ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಜಾರಿ ಮಾಡಲು ಮುಂದಾಗಬೇಕಿತ್ತು. ಎರಡನೇ ಹಂತದ ಕಾಮಗಾರಿ ಬಗ್ಗೆ ನಗರಸಭೆಗೇ ಮಾಹಿತಿಯಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‌ನಗರಸಭೆ ಸದಸ್ಯ ಸಂದೀಪ್ ಕೃಷ್ಣ ತಾಳೇಕರ ಮಾತನಾಡಿ, ‘ಒಂದು ವೇಳೆ ಯೋಜನೆ ಜಾರಿಯಾದರೆ ಇಡೀ ಕಾರವಾರವನ್ನೇ ಸ್ಥಳಾಂತರಿಸಬೇಕಾಗಬಹುದು. ಬಂದರಿನಲ್ಲಿ ರಾಶಿ ಹಾಕುವ ವಿವಿಧ ಅದಿರಿನ ದೂಳು ನಗರವಿಡೀ ಹರಡಲಿದೆ. ಈ ಹಿಂದೆ ಮ್ಯಾಂಗನೀಸ್ ರಫ್ತು ಮಾಡುತ್ತಿದ್ದಾಗ ಹೇಗಿತ್ತು ಎಂದು ನೆನಪಿಸಿಕೊಳ್ಳಿ’ ಎಂದರು.

ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಕೂಡ ವಿರೋಧ ವ್ಯಕ್ತಪಡಿಸಿದರು. ‘ಸೀಬರ್ಡ್ ಯೋಜನೆಯಿಂದ ಸುಮಾರು 20 ಕಿ.ಮೀ ವ್ಯಾಪ್ತಿಯ ನಿವಾಸಿಗಳು ನಿರಾಶ್ರಿತರಾಗಿದ್ದಾರೆ. ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ನಡೆದರೆ ಆಗುವ ಅನಾಹುತಗಳನ್ನು ಊಹಿಸಿದರೇ ಭಯವಾಗುತ್ತದೆ. ಮೊದಲ ಹಂತದಲ್ಲಿ ಬಾಕಿಯಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿ’ ಎಂದು ಒತ್ತಾಯಿಸಿದರು.

ಬಂದರು ವಿಸ್ತರಣೆ ಅಗತ್ಯ: ಕಾಜೂಭಾಗ ನಿವಾಸಿ ಆಸೀಮ್ ಎ ಖಾನ್ ಬಂದರಿನ ವಿಸ್ತರಣೆ ಅಗತ್ಯ ಪ್ರತಿಪಾದಿಸಿದರು. ‘ಈ ಯೋಜನೆಯಿಂದ ಪರಿಸರಕ್ಕೆ ತೊಂದರೆಯಾಗುತ್ತದೆ ಎಂಬ ಆರೋಪವಿದೆ. ಆದರೆ, ಯೋಜನೆ ಮುಗಿದ ಬಳಿಕ ಉದ್ಯೋಗಾವಕಾಶ ಸೃಷ್ಟಿಯಾಗುವ ಬಗ್ಗೆ ಯೋಚಿಸಬೇಕು. ಯೋಜನೆಯನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ನಾಗರಿಕ ಗೇಬ್ರಿಯಲ್ ಸಿಡ್ನಿ ಮಾತನಾಡಿ, ‘ಇಲ್ಲಿ ಈ ಹಿಂದೆ ಇದ್ದ 30 ಕಂಪನಿಗಳ ಪೈಕಿ ಇಂದು ಕೇವಲ ಐದು ಕಾರ್ಯ ನಿರ್ವಹಿಸುತ್ತಿವೆ. ಮೊದಲು 350 ಟಿಪ್ಪರ್ ಲಾರಿಗಳಿದ್ದವು. ಈಗ 30 ಮಾತ್ರ ಇವೆ. ಬಂದರು ಅಭಿವೃದ್ಧಿಯಾದರೆ 1,200 ಕುಟುಂಬಗಳಿಗೆ ಪರೋಕ್ಷವಾಗಿ  ಉಪಕಾರವಾಗುತ್ತದೆ’ ಎಂದು ಅಂಕಿ ಅಂಶ ನೀಡಿದರು.

ಸ್ಥಳೀಯರಾದ ಬಲರಾಮ ನಾಯ್ಕ್ ಮಾತನಾಡಿ, ‘ಈ ಹಿಂದೆ ಬಂದರಿನಲ್ಲಿ 800 ಕಾರ್ಮಿಕರಿದ್ದರು. ಈಗ ಕೇವಲ 75 ಜನರಿದ್ದಾರೆ. ಕಾರ್ಮಿಕರಿಗೆ ವೇತನ ನೀಡಲೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಬಂದರು ಅಭಿವೃದ್ಧಿ ಅತ್ಯಗತ್ಯ’ ಎಂದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ ಅವರೂ ಉಪಸ್ಥಿತರಿದ್ದರು.

‘ಸಿಬಿಐ ತನಿಖೆಯಾಗಲಿ’

1962ರಲ್ಲಿ ಬಂದರು ನಿರ್ಮಾಣಕ್ಕೆಂದು ಸ್ಥಳೀಯರಿಂದ ಜಮೀನು ವಶ ಪಡಿಸಿಕೊಳ್ಳಲಾಯಿತು. ಆಗ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಪ್ರತಿ ಗುಂಟೆಗೆ ₨ 150ರಂತೆ ಪರಿಹಾರ ಘೋಷಿಸಿತ್ತು. ಆದರೆ, ಅದೇ ಜಮೀನಿಗೆ ಪ್ರತಿ ಗುಂಟೆಗೆ ₨ 3.64 ಲಕ್ಷದಂತೆ ಪಡೆದು ಸೀಬರ್ಡ್ ಯೋಜನೆಗೆ ಹಸ್ತಾಂತರಿಸಿತು. ಈಗ ಆ ಹಣ ಎಲ್ಲಿದೆ? ಈ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಪ್ರೀತಮ್ ಮಾಸೂರ್ಕರ್ ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)