ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಫಸಲು!

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ತಾವು ಇಷ್ಟಪಡುವ ಸಾಹಿತಿಯ ಹೊಸ ಕೃತಿ ತರುವ ನಿರೀಕ್ಷೆ, ಮುದ, ಭ್ರಮನಿರಸನಗಳು ಸಾಹಿತ್ಯಲೋಕದೊಂದಿಗೆ ಓದುಗ ಸ್ಥಾಪಿಸಿಕೊಳ್ಳುವ ಸಂಬಂಧದ ಮೂಲದ್ರವ್ಯಗಳಾಗಿಯೂ ಕೆಲಸಮಾಡುತ್ತವೆ. ಕನ್ನಡದ ಕೆಲವು ಪ್ರಮುಖ ಲೇಖಕರು ಹೊಸತಾಗಿ ಏನನ್ನು ಬರೆಯುತ್ತಿದ್ದಾರೆ ಎಂಬ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ‘ಮುಕ್ತಛಂದ’ ಮಾಡಿದೆ. ಹಲವು ಹೊಸ ಕಾದಂಬರಿಗಳು, ಕಥಾಸಂಕಲನ, ಕಾವ್ಯ, ಅನುವಾದ, ಸಂಪಾದನೆ ಹೀಗೆ ಈ ವರ್ಷವನ್ನು ಸಂಪನ್ನಗೊಳಿಸುವಷ್ಟು ವೈವಿಧ್ಯದ ಹೊಸ ಫಸಲಿಗೆ ಕೌತುಕದ ಮುನ್ನುಡಿ ಬರೆಯುವ ಪ್ರಯತ್ನ ನಮ್ಮದು.

*

ಪುಟ್ಟ ಕೈಯಲ್ಲಿ ಭಗವದ್ಗೀತೆಯ ಬೆಟ್ಟ!
*ಎಚ್‌. ಎಸ್‌. ವೆಂಕಟೇಶಮೂರ್ತಿ
ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಇತ್ತೀಚೆಗೆ ‘ಋಗ್ವೇದ ಸ್ಫುರಣ’ ಎಂಬ ಪುಸ್ತಕದ ಮೂಲಕ ಋಗ್ವೇದದ ಋಕ್ಕುಗಳನ್ನು ಕನ್ನಡಕ್ಕೆ ತಂದಿದ್ದರು. ಪರಂಪರೆಯ ಜ್ಞಾನಮೂಲಗಳನ್ನು ಸದ್ಯದ ಕನ್ನಡಕ್ಕೆ ಜೋಡಿಸುವ ಅವರ ಪ್ರಯತ್ನದ ಮುಂದುವರಿದ ರೂಪವಾಗಿ ಭಗವದ್ಗೀತೆಯನ್ನು ಸರಳ ಕನ್ನಡಕ್ಕೆ ಅನುವಾದಿಸುವ ಪ್ರಯತ್ನದಲ್ಲಿ ಅವರು ತೊಡಗಿಕೊಂಡಿದ್ದಾರೆ. ಜತೆಗೆ ಟಿಪ್ಪಣಿಯೂ ಇರಲಿದೆ. ಹದಿನೆಂಟು ಅಧ್ಯಾಯಗಳಲ್ಲಿ ಈಗಾಗಲೇ ಏಳು ಅಧ್ಯಾಯಗಳನ್ನು ಮುಗಿಸಿದ್ದಾರೆ. ಇನ್ನೊಂದು ಮೂರು– ನಾಲ್ಕು ತಿಂಗಳಲ್ಲಿ ಉಳಿದ ಶ್ಲೋಕಗಳನ್ನು ಅನುವಾದಿಸಿ ಮುಗಿಸುವ ಯೋಜನೆ ಅವರದ್ದು.

‘ನನ್ನ ಪ್ರಕಾರ ಒಂದು ಪಠ್ಯವನ್ನು ಆಮೂಲಾಗ್ರವಾಗಿ ಅರ್ಥಮಾಡಿಕೊಳ್ಳಲು ಇರುವಂಥ ಏಕೈಕ ದಾರಿ ಅದರ ಅನುವಾದ. ಯಾಕೆಂದರೆ ಅನುವಾದ ಮಾಡುವಾಗ ನಾವು ಪದಪದಗಳನ್ನೂ, ಪದ ಸಂಯೋಜನೆಯನ್ನೂ, ಆ ಸಂಯೋಜನೆ ಕೊಡುವ ಒಟ್ಟು ಅರ್ಥ, ಅದರ ಧ್ವನಿ ಎಲ್ಲವನ್ನೂ ಗಮನಿಸಬೇಕಾಗುತ್ತದೆ. ಹಾಗಾಗಿ ನಮ್ಮ ಶಕ್ತ್ಯಾನುಸಾರ ಪೂರ್ಣವಾಗಿ ಒಳಹೋಗುವುದು ಸಾಧ್ಯವಾಗುತ್ತದೆ’ ಎನ್ನುವ ಎಚ್ಚೆಸ್ವಿ, ಮೂಲ ಭಗವದ್ಗೀತೆಗೆ ತುಂಬ ನಿಷ್ಠರಾಗಿಯೇ ಈ ಅನುವಾದ ಮಾಡುತ್ತಿದ್ದಾರೆ. ಮೂಲ ಕೃತಿಯಲ್ಲಿನ ತತ್ವ ಮತ್ತು ಕಾವ್ಯ ಸೇರಿರುವ ಅದ್ಭುತ ಕೃತಿಯ ಸ್ಥೂಲ ಪರಿಚಯವನ್ನು ಇಂದಿನ ತಲೆಮಾರಿನವರಿಗೆ ಮಾಡಿಕೊಡುವುದೂ ಈ ಅನುವಾದದ ಮೂಲ ಉದ್ದೇಶಗಳಲ್ಲೊಂದು. ಇದೊಂದು ಬಗೆಯಲ್ಲಿ ‘ಪುಟ್ಟ ಕೈಯಲ್ಲಿ ಬೆಟ್ಟ ಹಿಡಿಯುವ ಯತ್ನ’ ಎಂದು ಅವರೇ ಹೇಳಿಕೊಳ್ಳುತ್ತಾರೆ.

ಈ ಕೃತಿ ಮುಗಿದ ಮೇಲೆ ಕುಮಾರವ್ಯಾಸನ ‘ಕರ್ನಾಟ ಭಾರತ ಕಥಾಮಂಜರಿ’ಯ ಅನುವಾದದಲ್ಲಿ ಮತ್ತೆ ತೊಡಗಿಕೊಳ್ಳುವ ಯೋಚನೆಯೂ ಅವರಿಗಿದೆ.

*


ಗದ್ಯದಿಂದ ಪದ್ಯದತ್ತ
* ಇಂದ್ರಕುಮಾರ್‌ ಎಚ್‌.ಬಿ.
ಸಣ್ಣ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಗದ್ಯಪ್ರಕಾರಗಳಲ್ಲಿಯೇ ಅಡ್ಡಾಡಿಕೊಂಡಿದ್ದ ಇಂದ್ರಕುಮಾರ್‌ ಇದೀಗ ಕಾವ್ಯಕನ್ನಿಕೆಯತ್ತ ಹೊರಳಿದ್ದಾರೆ. ಹಾಗೆಂದು ಕಾವ್ಯ ಅವರಿಗೆ ಹೊಸ ಪ್ರಕಾರವೇನೂ ಅಲ್ಲ. ತುಂಬ ಹಿಂದಿನಿಂದಲೂ ಅವರು ಕವಿತೆಯನ್ನು ಬರೆಯುತ್ತಲೇ ಬಂದವರು. ಹಲವು ಸ್ಪರ್ಧೆಗಳಲ್ಲಿ ಬಹುಮಾನವನ್ನೂ ಪಡೆದುಕೊಂಡವರು. ಆದರೆ ಅವುಗಳನ್ನು ಪುಸ್ತಕ ರೂಪದಲ್ಲಿ ತಂದಿರಲಿಲ್ಲ. ಇದೀಗ ತಮ್ಮದೇ ‘ಇಂಪನ ಪುಸ್ತಕ ಪ್ರಕಾಶನ’ದ ಮೂಲಕ ಮೊದಲ ಕವನ ಸಂಕಲನವನ್ನು ತರುವ ಉಮೇದಿನಲ್ಲಿದ್ದಾರೆ. ಪುಸ್ತಕ ಈಗಾಗಲೇ ಅಚ್ಚಿನಲ್ಲಿದೆ.

‘ನಮ್ಮ ಸಮಾಜದಲ್ಲಿ ಕಾಣುವ ಶೋಷಣೆ, ಬದಲಾಗುತ್ತಿರುವ ಮೌಲ್ಯಗಳು, ಬದುಕಿನ ಶಿಷ್ಟತೆ, ಮನುಷ್ಯನ ನಡುವೆ ಉಂಟಾಗುತ್ತಿರುವ ಬಿರುಕುಗಳು ಈ ಎಲ್ಲವೂ ಇಲ್ಲಿನ ಪದ್ಯಗಳ ವಸ್ತುಗಳಾಗಿವೆ. ಪ್ರಾಸಕ್ಕೆ ಹೆಚ್ಚು ಒತ್ತುಕೊಡದೇ ಭಾವ ಮತ್ತು ಅರ್ಥವನ್ನು ಗಮನದಲ್ಲಿಟ್ಟುಕೊಂಡು ಮಾಡಿದ ರಚನೆಗಳಿವು’ ಎಂದು ಅವರು ಹೇಳಿಕೊಳ್ಳುತ್ತಾರೆ.

ಇನ್ನೊಂದು ತಿಂಗಳಲ್ಲಿ ಇಂದ್ರಕುಮಾರ್‌ ಅವರ ಪದ್ಯಗಳ ಗುಚ್ಛ ಓದುಗರ ಕೈಸೇರಲಿದೆ.

*


ಗಜಲ್‌ಗಳ ಘಮಲು...
* ಆರೀಫ್‌ ರಾಜಾ
ಯುವ ತಲೆಮಾರಿನ ಪ್ರಮುಖ ಕವಿ ಆರೀಫ್‌ ರಾಜಾ ಅವರು ಕನ್ನಡದಲ್ಲಿ ಹೊಸ ಫ್ಲೆವರ್‌ನ ಗಜಲ್‌ಗಳ ಗಂಧವನ್ನು ಹರಡುವ ಸಿದ್ಧತೆಯಲ್ಲಿದ್ದಾರೆ. ‘ಕಲ್ಲಿನ ತೋಟ’ ಅವರ ಗಜಲ್‌ಗಳ ಸಂಕಲನ. ‘ಇದಕ್ಕೆ ಗಜಲ್‌ನಂಥ ಗಜಲ್‌ಗಳು’ ಎಂಬ ಅಡಿಶೀರ್ಷಿಕೆಯೂ ಇರಲಿದೆ. ಯಾಕೆ ಹೀಗೆ? ‘ಗಾಲಿಬ್‌ನಂಥ ಮೇರುಕವಿಗಳು ಬರೆದ ಗಜಲ್‌ಗಳನ್ನು ಓದಿದ ಮೇಲೆ ಈ ನನ್ನ ರಚನೆಗಳು ಘಜಲ್‌ಗಳಾಗಿವೆಯೇ ಇಲ್ಲವೇ ಎಂಬ ಕುರಿತು ನನಗೂ ಅನುಮಾನವಿದೆ. ಕವಿತೆ ಅನ್ನಿಸಬಹುದು. ಆದರೆ ಗಜಲ್‌ ಆಗಿವೆಯೇ ಇಲ್ಲವೇ ಎಂದು ನನಗೂ ಗೊತ್ತಿಲ್ಲ. ಓದುಗರು ಗಜಲ್‌ ಅಂದುಕೊಂಡು ಓದಿಕೊಳ್ಳುವುದಾದರೆ ಓದಿಕೊಳ್ಳಲಿ, ಇಲ್ಲವೇ ಕಾವ್ಯವಾಗಿಯಾದರೂ ಓದಿಕೊಳ್ಳಲಿ’ ಎಂದು ಆರೀಫ್‌, ಓದುಗರಿಗೇ ಆಯ್ಕೆಯ ಸ್ವಾತಂತ್ರ್ಯವನ್ನು ಬಿಡುತ್ತಾರೆ.

‘‘ಸಾಮಾನ್ಯವಾಗಿ ನಮ್ಮ ಮುಖ್ಯವಾಹಿನಿಯ ಕಾವ್ಯದಲ್ಲಿ ಒಂದು ಕಥನ ಇರುತ್ತದೆ. ಆದರೆ ಈ ರಚನೆಗಳಲ್ಲಿ ಹಾಗಿರುವುದಿಲ್ಲ. ಇಲ್ಲಿ ಪ್ರತಿ ದ್ವಿಪದಿಗಳೂ ಕೂಡ ರೂಪಕ, ಪ್ರತಿಮೆಗಳಲ್ಲಿಯೇ ಮಾತನಾಡುತ್ತ ಹೋಗುತ್ತವೆ. ಉದಾಹರಣೆಗೆ ‘ಈ ಕತ್ತಲೆಯೆಂಬ ಕನ್ಯೆ ಬರುವ ಗೆಜ್ಜೆಯ ಸದ್ದು ಯಾರಿಗೂ ಕೇಳಿಸುವುದಿಲ್ಲ/ ಅವಳ ಅವಕುಂಠನ ಸರಿದ ಮೇಲೆ ಮುಖ ಯಾರಿಗೂ ಕಾಣಿಸುವುದಿಲ್ಲ’’ ಎಂದು ಅವರು ತಮ್ಮ ಸಂಕಲನದ ವಿಶೇಷತೆಯನ್ನು ಗಜಲ್‌ನ ಸಾಲಿನೊಂದಿಗೇ ವಿವರಿಸುತ್ತಾರೆ. ‘ನಿರ್ಜೀವ ವಸ್ತುಗಳನ್ನೇ ಜೀವಂತವಾಗಿ ತೋರಿಸುವುದು ಈ ರಚನೆಗಳ ಶಕ್ತಿ. ಗಜಲ್‌ಗಳನ್ನು ರಚಿಸುವುದು ಎಂದರೆ ಎರಡೆರಡು ಹನಿಗಳನ್ನು ಭಟ್ಟಿ ಇಳಿಸಿದ ಹಾಗೆ’ ಎನ್ನುತ್ತಾರೆ ಅವರು.

ಪಲ್ಲವ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಲಿದೆ. ಆರೀಫ್‌ ಅವರು ಭಟ್ಟಿ ಇಳಿಸಿದ ಅಕ್ಷರದ ಅಮಲನ್ನು ನೆತ್ತಿಗೇರಿಸಿಕೊಳ್ಳಲು ಇನ್ನೊಂದೆರಡು ತಿಂಗಳು ಕಾಯಬೇಕು.

*


ಕುದುರೆಗಳ ಕುರಿತ ಕಾದಂಬರಿ
* ವಸುಧೇಂದ್ರ
ಸುಲಲಿತ ಪ್ರಬಂಧಗಳು ಮತ್ತು ಸಣ್ಣಕಥೆಗಳ ಮೂಲಕವೇ ಅಪಾರ ಅಭಿಮಾನಿ ಓದುಗರನ್ನು ಹೊಂದಿರುವ ವಸುಧೇಂದ್ರ ಅವರಿಗೆ ಅವುಗಳ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆಯಂತೆ. ‘ತಕ್ಷಣಕ್ಕೆ ಏನನ್ನು ಬರೆಯಲಾರೆ’ ಎಂದೂ ಅವರಿಗೆ ಅನಿಸುತ್ತಿದೆ. ಹಾಗಂತ ಅವರ ಅಭಿಮಾನಿಗಳು ನಿರಾಶರಾಗಬೇಕಿಲ್ಲ. ಅವರೇನೂ ಬರವಣಿಗೆಯಿಂದ ನಿವೃತ್ತಿ ತೆಗೆದುಕೊಳ್ಳುತ್ತಿಲ್ಲ. ದೊಡ್ಡ ಪ್ರಮಾಣದ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಅವರಲ್ಲಿ ಹುಟ್ಟಿದೆ!

ಶಾಲಾದಿನಗಳಲ್ಲಿ ಇತಿಹಾಸವೆಂದರೆ ಮಾರುದೂರ ಓಡುತ್ತಿದ್ದ ವಸುಧೇಂದ್ರ ಈಗ ವಿಜಯನಗರದ ಇತಿಹಾಸವನ್ನು ತಿಳಿಸುವ ರಾಶಿ ರಾಶಿ ಪುಸ್ತಕಗಳನ್ನು ಓದುತ್ತಿದ್ದಾರೆ. ಅದನ್ನು ಎಂಜಾಯ್‌ ಮಾಡುತ್ತಿದ್ದಾರೆ ಸಹ. ಕಾರಣ ಇಷ್ಟೆ, ವಿಜಯನಗರ ಇತಿಹಾಸ ಇಟ್ಟುಕೊಂಡು ಒಂದು ಕಾದಂಬರಿಯನ್ನು ಬರೆಯುವ ಆಲೋಚನೆ ಅವರನ್ನು ಆವರಿಸಿಕೊಂಡಿದೆ. ಅದು ಈಗಾಗಲೇ ನಮಗೆ ಗೊತ್ತಿರುವ ವಿಜಯನಗರ ಇತಿಹಾಸವನ್ನೇ ಮರುನಿರೂಪಿಸುವ ಉದ್ದೇಶದ ಕೃತಿಯಲ್ಲ. ಆ ಕಾಲದ ಕುದುರೆಗಳನ್ನು ಇಟ್ಟುಕೊಂಡು ಕಥೆ ಕಟ್ಟುವ, ಆ ಮೂಲಕ ಹೊಸ ರೀತಿಯ ಕಾದಂಬರಿಯೊಂದನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸುವ ಉತ್ಸಾಹ ಅವರದು.

‘ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಕುದುರೆಗಳ ಪಾತ್ರ ತುಂಬ ಮಹತ್ವದ್ದು. ಅವು ಇತಿಹಾಸವನ್ನೇ ಬದಲಿಸುವ ಮಟ್ಟಿಗೆ ಶಕ್ತವಾಗಿದ್ದವು. ಭಾರತ ಇಂದು ಯಾವ ಸ್ಥಿತಿಯಲ್ಲಿದೆಯೋ ಅದಕ್ಕೆ ಕುದುರೆಗಳೇ ಕಾರಣ ಎಂದು ನನಗನಿಸುತ್ತದೆ. ಅವುಗಳನ್ನೇ ಕೇಂದ್ರವಾಗಿಟ್ಟುಕೊಂಡು ಒಂದು ಕಾದಂಬರಿ ಬರೆಯುವ ಆಲೋಚನೆಯಲ್ಲಿದ್ದೇನೆ’ ಎಂದು ವಿವರಿಸುವ ವಸುಧೇಂದ್ರ, ಆ ಕಾದಂಬರಿ ಈ ವರ್ಷವೇ ಬರುತ್ತದೆ ಎಂಬ ಭರವಸೆಯನ್ನು ಕೊಡುವುದಿಲ್ಲ. ‘ಈಗ ಅಧ್ಯಯನದಲ್ಲಿ ತೊಡಗಿಕೊಂಡಿದ್ದೇನೆ. ಖಂಡಿತ ಕಾದಂಬರಿ ಬರೆಯುತ್ತೇನೆ. ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕು. ಯಾವಾಗ ಪ್ರಕಟವಾಗುತ್ತದೆಯೋ ಗೊತ್ತಿಲ್ಲ’ ಎನ್ನುತ್ತಾರೆ.

*


ಬಿಡಿಲೇಖನಗಳ ಗುಚ್ಛ
* ಜಯಂತ ಕಾಯ್ಕಿಣಿ
‘ಶಬ್ದ ತೀರ’ ಕೃತಿಯ ನಂತರ ಜಯಂತರು ಬರೆದ ಲೇಖನಗಳನ್ನೆಲ್ಲ ಒಡಲೊಳಗಿಟ್ಟುಕೊಂಡ ಪುಸ್ತಕವೊಂದು ಏಪ್ರಿಲ್‌ನಲ್ಲಿ ಜೀವತಳೆಯಲು ಸಿದ್ಧತೆ ನಡೆಸಿದೆ. ಇದರಲ್ಲಿ ಅವರು ‘ಪ್ರಜಾವಾಣಿ’ಗೆ ಬರೆದ ‘ಕಂಪಿನ ಕರೆ’ ಅಂಕಣಗಳಿಗೆ ಬರೆದ ಲೇಖನಗಳೂ ಸೇರಿವೆ. ಜತೆಗೆ ಹಲವಾರು ಕೃತಿಗಳಿಗೆ ಬರೆದ ಮುನ್ನುಡಿಗಳೂ ಸೇರಿದಂತೆ ಸುಮಾರು ಎಪ್ಪತ್ತು ಬರಹಗಳು ಈ ಪುಸ್ತಕದಲ್ಲಿ ಇರಲಿವೆ. ಅಂಕಿತ ಪುಸ್ತಕ ಈ ಪುಸ್ತಕವನ್ನು ಪ್ರಕಟಿಸುತ್ತಿದೆ.

ಇದರ ಜತೆಗೆ ತಂದೆ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯದ ಐದು ಸಂಪುಟಗಳ ಸಂಪಾದನೆಯನ್ನೂ ಜಯಂತ ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ಅವರ ಜತೆ ಎಂ.ಜಿ. ಹೆಗಡೆ ಅವರೂ ಕೈ ಜೋಡಿಸಿದ್ದಾರೆ. ಐದು ಸಂಪುಟಗಳಲ್ಲಿ ವಿಂಗಡಿತಗೊಂಡಿರುವ ಗೌರೀಶರ ಈ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸುತ್ತಿದೆ.

*


ವಿಡಂಬನೆಯ ಹೊಸ ಕಾದಂಬರಿ
* ಕುಂ. ವೀರಭದ್ರಪ್ಪ
‘ಕತ್ತೆಗೊಂದು ಕಾಲ’. ಇದು ಕುಂವೀ ಹೊಸ ಕಾದಂಬರಿ ಹೆಸರು. ರೋಚಕ ಕಥನ, ಐತಿಹಾಸಿಕ ಕಾದಂಬರಿ, ಯಾವ ಸಿನಿಮಾಗಳಿಗೂ ಕಮ್ಮಿ ಇಲ್ಲದಂಥ ಥ್ರಿಲ್ಲರ್‌ ಅನುಭವ ಇರುವ ಆತ್ಮಕಥೆಯ ಮೂಲಕ ಕನ್ನಡಿಗರ ಮನಸಲ್ಲಿ ನೆಲೆಯೂರಿದ ಕುಂವೀ ಅವರಿಗೀಗ ಮನುಷ್ಯರ ಕಥೆಯನ್ನು ಮನುಷ್ಯರ ಮೂಲಕವೇ ಹೇಳುವುದು ಸಾಕು ಅನಿಸಿದಂತಿದೆ. ಅದಕ್ಕಾಗಿಯೇ  ಪ್ರಾಣಿಗಳ ಬೆನ್ನು ಬಿದ್ದಂತಿದೆ. ಕಳೆದ ವರ್ಷ ಅವರು ‘ಕತ್ತೆ ರಾಷ್ಟ್ರೀಯ ಪ್ರಾಣಿಯಾಗಲಿ’ ಎಂದು ಹೇಳಿದ್ದು ಸುದ್ದಿಯಾಗಿತ್ತು. ಈಗ ಅದೇ ಕತ್ತೆಯನ್ನಿಟ್ಟುಕೊಂಡು ಕಾದಂಬರಿಯೊಂದನ್ನು ಬರೆಯುತ್ತಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಬರೆಯುತ್ತಿರುವ ‘ಕತ್ತೆಗೊಂದು ಕಾಲ’ವನ್ನು ಇನ್ನೆರಡು ತಿಂಗಳಲ್ಲಿ ಮುಗಿಸಿ ಪ್ರಕಟಣೆಗೆ ಕಾಲ ಕೂಡಿಬರುವಂತೆ ಮಾಡುವ ಯೋಚನೆ ಅವರದ್ದು. ಇದು ರಾಜಕೀಯ, ಧಾರ್ಮಿಕ ಕಥನವನ್ನು ಕತ್ತೆಯನ್ನು ಕೇಂದ್ರವಾಗಿರಿಸಿಕೊಂಡು ವಿಡಂಬನಾತ್ಮಕವಾಗಿ ಹೇಳುವ ಪ್ರಯತ್ನ.

‘ಒಂದು ಕತ್ತೆ, ಮಠದ ಧರ್ಮಾಧಿಕಾರಿಯಾದರೆ ಹೇಗಿರುತ್ತದೆ ಎಂಬುದನ್ನು ಇಟ್ಟುಕೊಂಡು ಈ ಕಾದಂಬರಿ ಬರೆದಿದ್ದೇನೆ. ಪ್ರಪಂಚದ ವಿದ್ಯಮಾನಗಳನ್ನೆಲ್ಲ ಕಥೆಯ ಮೂಲಕ ಗ್ರಹಿಸುವ ಕ್ರಮ ಇದು. ಸನಾತನ ಮೌಲ್ಯಗಳನ್ನು ಈ ಕಾದಂಬರಿ ಲೇವಡಿ ಮಾಡುತ್ತದೆ. ಈ ಪ್ರಪಂಚ ಹೊರನೋಟಕ್ಕೆ ಆಧುನಿಕವಾಗಿದೆ. ಆದರೆ ಒಳಗಿರುವುದೆಲ್ಲವೂ ಕ್ರಿ.ಪೂ. ಐದನೇ ಶತಮಾನಕ್ಕೆ ಸಂಬಂಧಿಸಿರುವ ರೀತಿ ಇದೆ. ಈ ವೈರುಧ್ಯವನ್ನು ವಿಡಂಬನಾತ್ಮಕವಾಗಿ ಅನಾವರಣಗೊಳಿಸುವ ಕೆಲಸವನ್ನು ಹೊಸ ಕಾದಂಬರಿಯಲ್ಲಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕುಂವೀ.

*


ಖಂಡಕಾವ್ಯದ ಕಂಪು
* ಜ. ನಾ. ತೇಜಶ್ರೀ

ಕನ್ನಡದ ಪ್ರಮುಖ ಕವಿ ಜ. ನಾ. ತೇಜಶ್ರೀ ಅವರು ‘ಖಂಡಕಾವ್ಯ’ದ ಗುಂಗಿನಲ್ಲಿದ್ದಾರೆ. ಇದರ ವಸ್ತುವೂ ಭಿನ್ನವಾಗಿದೆ.
ಭಾರತದ ಒಟ್ಟು ಇತಿಹಾಸಕ್ಕೆ ಪ್ರಮುಖ ತಿರುವು ನೀಡಿದ ‘ಕಳಿಂಗಯುದ್ಧ’ದ ಸಾವುನೋವುಗಳನ್ನು ನೋಡಿ ಯುದ್ಧಭೂಮಿಯಲ್ಲಿಯೇ ರಾಜ ಅಶೋಕನಿಗೆ ವೈರಾಗ್ಯಸಿದ್ಧಿಯಾಯಿತು ಎಂಬ ಮಾತಿದೆ. ಅವನ ಪರಿವರ್ತನೆ ಎನ್ನುವುದು ಥಟ್ಟನೆ ಉಂಟಾದದ್ದೇನಲ್ಲ. ಅದು ನಿಧಾನವಾಗಿ ತುಂಬ ಕಾಲದಿಂದ ಅವನ ಮನಸ್ಸಿನಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ.

ಯುದ್ಧದ ಕ್ರೌರ್ಯವನ್ನು ನೋಡಿದಾಗ ಅವನ ಮನಸ್ಸಿನಲ್ಲಿ ಉಂಟಾದ ಜ್ಞಾನಕ್ಕೆ ಹಿನ್ನೆಲೆಯಲ್ಲಿ ಹಲವು ಕಾರಣಗಳಿದ್ದವು. ಅವುಗಳಲ್ಲಿ ಮುಖ್ಯವಾಗಿ ಇದ್ದದ್ದು ಒಂದು ಪ್ರೇಮದ ಕಥೆ. ಕರುವಾಕಿ ಜತೆಗೆ ಬೆಳೆದ ಪ್ರೇಮದಿಂದಲೇ ಅಶೋಕನ ಮನಸ್ಸು ದೊಡ್ಡ ತಿರುವಿನೆಡೆಗೆ ಹೊರಳಿಕೊಂಡಿತೇನೋ ಎಂಬುದನ್ನು ಸೂಚಿಸುವ ಹಾಗೆ ಈ ಖಂಡಕಾವ್ಯದ ತಂತುಗಳು ಬೆಳೆದಿವೆ. ಬದುಕಿನ ಸತ್ಯಗಳನ್ನು ತಿಳಿದುಕೊಳ್ಳುವ ದಾರಿಗಳನ್ನು ಪ್ರೇಮದ ಮೂಲಕವೇ ಹೇಗೆ ತೆರೆದುಕೊಳ್ಳಬಹುದು ಎಂಬುದನ್ನು ಶೋಧಿಸುವ ಪ್ರಯತ್ನ ಈ ಖಂಡಕಾವ್ಯದಲ್ಲಿದೆ.

ಇದರ ಜತೆಗೆ ಹೊಸ ಕಾದಂಬರಿಯ ಬರವಣಿಗೆಯಲ್ಲಿಯೂ ಅವರು ತೊಡಗಿಕೊಂಡಿದ್ದಾರೆ.

*

ಮನಸ್ಸಿನ ಮಾಲಿನ್ಯ ಕಥನ
* ಎಚ್‌. ನಾಗವೇಣಿ
ಎಚ್‌. ನಾಗವೇಣಿ ಪರಿಸರದ ಕುರಿತು ಒಂದು ಪುಸ್ತಕ ಪ್ರಕಟಿಸಬೇಕು ಎಂಬ ಸಿದ್ಧತೆಯಲ್ಲಿದ್ದಾರೆ. ‘ಪರಿಸರ’ ಎಂದಾಕ್ಷಣ ಗಾಳಿ, ನೀರು, ನೆಲ ಮಾಲಿನ್ಯ, ಅರಣ್ಯನಾಶ ಇಂಥವುಗಳ ಬಗೆಗೆ ಅಂದುಕೊಳ್ಳಬೇಡಿ. ಇದು ಸಾಂಸ್ಕೃತಿಕ ‍ಪರಿಸರದ ಬಗ್ಗೆ, ಮಾನಸಿಕ ಮಾಲಿನ್ಯದ ಬಗ್ಗೆ ಬರೆದ ಕಥನಗಳ ಸಂಗ್ರಹ.

‘ಇವು ಲೇಖನಗಳಲ್ಲ, ಕಥನಗಳು’ ಎಂದು ಅವರೇ ಹೇಳಿಕೊಳ್ಳುತ್ತಾರೆ. ‘ನನ್ನ ಸುತ್ತಲಿನ ಜಗತ್ತು, ಹುಟ್ಟೂರು ಸುರತ್ಕಲ್‌ನಲ್ಲಿ ಮನಸ್ಸುಗಳ ನಡುವೆ ಆಗುತ್ತಿರುವ ಮಲಿನತೆಯ ಕುರಿತು ಬರೆಯುತ್ತೇನೆ. ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಧರ್ಮ– ಧರ್ಮಗಳ ನಡುವೆ ಗೋಡೆಗಳಿರಲಿಲ್ಲ. ಈಗ ಸ್ಪಷ್ಟ ಗೋಡೆಗಳು ಎದ್ದು ನಿಂತಿವೆ. ಮಾನವೀಯತೆಯ ಗಾಳಿ ಬೀಸುವುದೇ ಇಲ್ಲ. ಅದೂ ಚುನಾವಣೆ ಹತ್ತಿರ ಬಂದರಂತೂ ಪರಿಸ್ಥಿತಿ ಇನ್ನಷ್ಟು ದುಸ್ತರವಾಗುತ್ತದೆ.

ಈ ಕುರಿತು ಬರೆಯುವುದು ನನ್ನ ತುರ್ತು ಎಂದು ನನಗೆ ಅನಿಸಿದೆ’ ಎನ್ನುತ್ತಾರೆ ನಾಗವೇಣಿ. ಲಲಿತಪ್ರಬಂಧ ಮತ್ತು ಸಣ್ಣಕಥೆ ಎರಡೂ ಪ್ರಕಾರಗಳೂ ಸೇರಿದ ಕಥನದ ರೂಪದಲ್ಲಿ ಈ ಬರಹಗಳಿರುತ್ತವಂತೆ. ಇದಲ್ಲದೆ ‘ಆ ಮರ’ ಎಂಬ ಕಾದಂಬರಿಯನ್ನೂ ಇದೇ ವರ್ಷ ಪ್ರಕಟಿಸಲಿದ್ದಾರೆ.

*


ಶಿವಪ್ಪ ನಾಯಕ ಕುರಿತ ಕಾದಂಬರಿ
* ನಾ ಡಿಸೋಜಾ
ಕೊಡಗಿನಲ್ಲಿ ನಡೆದ 80ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೂ ಆಗಿದ್ದ ಹಿರಿಯ ಸಾಹಿತಿ ನಾ ಡಿಸೋಜಾ, ಶಿವಪ್ಪ ನಾಯಕನ ಕುರಿತು ‘ನಾಯಕ ಶಿವಪ್ಪ’ ಎಂಬ ಐತಿಹಾಸಿಕ ಕಾದಂಬರಿ ಬರೆದು ಮುಗಿಸಿ ನಿರಾಳರಾಗಿದ್ದಾರೆ.

ಶಿವಪ್ಪ ನಾಯಕನ ಕಾಲದ ಜನಜೀವನ, ಕಂದಾಯದ ಶಿಸ್ತು, ಅವನ ಯುದ್ಧಕೌಶಲ, ಪರಾಕ್ರಮ, ಬೇರೆ ದೊರೆಗಳ ಜತೆ ಇರಿಸಿಕೊಂಡಿದ್ದ ಸಂಪರ್ಕ, ಅವನ ಅವಸಾನ ಎಲ್ಲವನ್ನೂ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.  ಸುಮಾರು 250 ಪುಟದ ಈ ಕಾದಂಬರಿಯಲ್ಲಿ ಶಿವಪ್ಪ ನಾಯಕನ ಕಾಲದ ಬದುಕು, ಪೋರ್ಚುಗೀಸರ ವಿರುದ್ಧದ ಅವನ ಹೋರಾಟ, ಡಚ್ಚರ ಜತೆಗಿನ ವ್ಯಾಪಾರ ಸಾಂಗತ್ಯ, ಕೊನೆಯಲ್ಲಿ ಮೈಸೂರು ರಾಜರ ಜತೆಗೆ ನಡೆದ ಯುದ್ಧದಲ್ಲಿ ನಾಯಕ ಮರಣ ಹೊಂದಿದ ಕಥಾವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ.  ಇನ್ನೊಂದು ತಿಂಗಳ ಒಳಗೆ ಶಿವಮೊಗ್ಗ ಗೀತಾಂಜಲಿ ಪ್ರಕಾಶನದ ಮೂಲಕ ಈ ಕಾದಂಬರಿ ಓದುಗರ ಕೈ ಸೇರಲಿದೆ.

*


ಚಿಂತನೀಯ ಲೇಖನ, ಕಥೆಗಳ ತೋರಣ
* ವಿಕ್ರಮ್‌ ಹತ್ವಾರ್
ಸಣ್ಣಕಥೆಗಳು ಮತ್ತು ಕಾವ್ಯದ ಮೂಲಕ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಗುರ್ತಿಸಿಕೊಂಡಿರುವವರು ವಿಕ್ರಮ್‌ ಹತ್ವಾರ್‌. ಸಮಕಾಲೀನ ಸಂಗತಿಗಳ ಬಗ್ಗೆ ಲೇಖನಗಳ ಮೂಲಕವೂ ಸ್ಪಂದನ ನೀಡುತ್ತ ಬಂದಿದ್ದರು. ಅವರು ಇದುವರೆಗೆ ಬೇರೆ ಬೇರೆ ವಿಷಯಗಳ ಕುರಿತು ಬರೆದ ಲೇಖನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಉತ್ಸಾಹದಲ್ಲಿದ್ದಾರೆ. ಲೇಖನಗಳ ಈ ಸಂಗ್ರಹವನ್ನು ಛಂದ ಪುಸ್ತಕ ಪ್ರಕಟಿಸುತ್ತಿದೆ.

‘ಬಹು ಹಿಂದೆಯೇ ಬರಬೇಕಿದ್ದ ಈ ಪುಸ್ತಕಗಳು ನನ್ನದೇ ನಿರಾಸಕ್ತಿ ಮತ್ತು ಉದಾಸೀನತೆಯಿಂದಾಗಿ ಇಷ್ಟು ಕಾಲ ತಡವಾಗಿದೆ. ಸಾಹಿತ್ಯ, ಸಂಸ್ಕೃತಿ, ಸಿನಿಮಾಗಳ ಕುರಿತಾದ ಸ್ಪಂದನೀಯವೂ ಚಿಂತನೀಯವೂ ಆದ ಪ್ರಬಂಧಗಳು ಪುಸ್ತಕ ರೂಪದಲ್ಲಿ ಬರಲಿದೆ. ಭಾಷೆ, ಸಂವಾದ, ತರ್ಕ, ಕಾವ್ಯ, ಸಾಹಿತ್ಯ ಇತ್ಯಾದಿ ವಿಚಾರಗಳ ಬಗೆಗಿನ ಬರಹಗಳಿವು. ಪುಸ್ತಕ ಪ್ರಕಟಣೆಗೆ ಸಿದ್ಧವಾಗಿದೆ. ಮುನ್ನುಡಿಗಾಗಿ ಕಾಯುತ್ತಿದ್ದೇನೆ’ ಎಂದು ಈ ಪುಸ್ತಕದ ಕುರಿತು ಅವರು ಹೇಳಿಕೊಳ್ಳುತ್ತಾರೆ.

ಇದರ ಜತೆಗೆ ಇನ್ನೊಂದು ಕಥಾಸಂಕಲನವನ್ನೂ ಅವರು ತರಲು ಸಿದ್ಧತೆ ನಡೆಸಿದ್ದಾರೆ. ಅಂಕಿತ ಪ್ರಕಾಶನ ಕಥಾಸಂಕಲನವನ್ನು ಪ್ರಕಟಿಸಲಿದೆ. ‘ಝೀರೋ ಮತ್ತು ಒಂದು’ ಕಥಾ ಸಂಕಲನ ಬಿಡುಗಡೆಯಾಗಿ ಐದು ವರ್ಷಗಳ ನಂತರ ಅವರ ಎರಡನೆಯ ಕಥಾಸಂಕಲನ ಬಿಡುಗಡೆಯಾಗಲಿದೆ. ಭಿನ್ನ ಮಾದರಿಯ, ವಸ್ತುವಿನ, ಹಂದರದ ಕಥೆಗಳನ್ನು ಈ ಸಂಕಲನದಲ್ಲಿ ನಾವು ನಿರೀಕ್ಷಿಸಬಹುದು.

*


ಬರ್ಮಾ ದೇಶದ ರಾಜನ ಕುರಿತ ಕಾದಂಬರಿ
* ಕೆ. ಎನ್‌. ಗಣೇಶಯ್ಯ
ಕೆ. ಎನ್‌. ಗಣೇಶಯ್ಯ ಅವರು ಐತಿಹಾಸಿಕ ಥ್ರಿಲ್ಲರ್‌ಗಳಿಂದಲೇ ಜನಪ್ರಿಯರಾದವರು. ಇತಿಹಾಸದ ರೋಚಕ ಸಂಗತಿಗಳನ್ನು ಕಥನದ ಚೌಕಟ್ಟಿನೊಳಗೆ ನಿರೂಪಿಸುವ ಅವರ ಶೈಲಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಸಂವೇದನೆಯೊಂದನ್ನು ಸೇರಿಸಿದೆ. ಅದರ ಮುಂದುವರಿಕೆಯಾಗಿ ಅವರು ಬರ್ಮಾ ದೇಶದ ಒಬ್ಬ ರಾಜನ ಕುರಿತು ಒಂದು ಕಾದಂಬರಿಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

‘ಬ್ರಿಟಿಶರು ಬರ್ಮಾ ದೇಶದ ರಾಜನನ್ನು ಭಾರತಕ್ಕೆ ಕರೆದುಕೊಂಡು ಬಂದಿರುತ್ತಾರೆ. ಯಾಕೆ ಕರೆದುಕೊಂಡು ಬಂದರು? ಅದರಿಂದಾಗಿ ಅವನು ಎಂಥ ಪರಿಸ್ಥಿತಿಗಳನ್ನು ಎದುರಿಸಬೇಕಾಯ್ತು? ಹೀಗೆ ಅವನ ಜೀವನವನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಾರಿತ್ರಿಕ ಕಾದಂಬರಿ ರಚಿಸುತ್ತಿದ್ದೇನೆ. 19ನೇ ಶತಮಾನದ ಆರಂಭ ಮತ್ತು 20ನೇ ಶತಮಾನದ ಆರಂಭದಲ್ಲಿ ನಡೆಯುವ ಕಥನ ಇದು’ ಎನ್ನುತ್ತಾರೆ ಗಣೇಶಯ್ಯ.

ಈ ಚಾರಿತ್ರಿಕ ಕಾದಂಬರಿಗಾಗಿ ಅವರು ನಡೆಸಿರುವ ಸಿದ್ಧತೆಯೂ ದೊಡ್ಡದೇ. ಈ ಕಾದಂಬರಿಯ ಸಂಶೋಧನೆಗಾಗಿಯೇ ಅವರು ಇತ್ತೀಚೆಗಷ್ಟೇ ಬರ್ಮಾ ದೇಶಕ್ಕೂ ಹೋಗಿ ಬಂದಿದ್ದಾರೆ. ಚಾರಿತ್ರಿಕ ಪುಸ್ತಕಗಳು, ಬರ್ಮಾ ದೇಶದಲ್ಲಿ ಸಿಕ್ಕ ಜಾನಪದ ಕಥೆಗಳು, ಅಲ್ಲಿನ ಸ್ಥಳೀಯ ಪುಸ್ತಕಗಳು, ಬ್ರಿಟೀಶರ ಕಾಲದ ದಾಖಲೆಗಳು, ಭಾರತದಲ್ಲಿ ಬಂದಾಗ ಅವನು ಅನುಭವಿಸಿದ ಪರಿಸ್ಥಿತಿಗಳ ಮೇಲೆ ಹಲವರು ಬರೆದಿದ್ದಾರೆ, ಅವನ ಮಕ್ಕಳು, ಮೊಮ್ಮಕ್ಕಳಲ್ಲಿ ಕೆಲವರು ಇನ್ನೂ ಬದುಕಿದ್ದಾರೆ. ಈ ಎಲ್ಲವನ್ನೂ ಗಣೇಶಯ್ಯ ಅಧ್ಯಯನ ನಡೆಸುತ್ತಿದ್ದಾರೆ. ಆ ರಾಜನ ಸಮಾಧಿ, ಅರಮನೆಗಳಿಗೂ ಭೇಟಿ ನೀಡಿ ಬಂದಿದ್ದಾರೆ.

ಅಂಕಿತ ಪುಸ್ತಕ ಪ್ರಕಟಿಸಲಿರುವ ಈ ಕಾದಂಬರಿ ವರ್ಷದ ದ್ವಿತೀಯಾರ್ಧದಲ್ಲಿ ಓದುಗರ ಕೈಸೇರಲಿದೆ.

*


ಕಾದಡವಿ
* ಸುನಂದಾ ಕಡಮೆ
ಸಣ್ಣಕಥೆ, ಕಾವ್ಯ, ನುಡಿಚಿತ್ರಗಳ ಮೂಲಕ ಸಮಕಾಲೀನ ಕನ್ನಡ ಸಾಹಿತ್ಯ ಲೋಕದಲ್ಲಿ ಗುರ್ತಿಸಿಕೊಂಡಿರುವ ಸುನಂದಾ ಕಡಮೆ ಇತ್ತೀಚೆಗೆ ಕಾದಂಬರಿ ಪ್ರಕಾರದ ಕಡೆಗೆ ಒಲಿದಂತಿದ್ದಾರೆ. ಈಗಾಗಲೇ ಎರಡು ಕಾದಂಬರಿಗಳನ್ನು ಪ್ರಕಟಿಸಿರುವ ಇವರು ತಮ್ಮ ಮೂರನೇ ಕಾದಂಬರಿಯನ್ನು ಬರೆದು ಮುಗಿಸಿದ್ದಾರೆ. ಕಾದಂಬರಿಯ ಹೆಸರು ‘ಕಾದಡವಿ’.

ಉತ್ತರಕನ್ನಡ ಜಿಲ್ಲೆಯ ಅರಬೈಲ್‌ ಎಂಬ ಹೆದ್ದಾರಿ ಪಕ್ಕದ ಊರನ್ನು ಕೇಂದ್ರವಾಗಿಟ್ಟುಕೊಂಡು ಈ ಕಥನವನ್ನು ಕಟ್ಟಲಾಗಿದೆ. ಉತ್ತರ ಕನ್ನಡದ ಪರಿಸರದ ಮಲಿನತೆ ಮತ್ತು ಆ ಪರಿಸರದ ಜತೆಗೇ ಹೆಣೆದುಕೊಂಡಿರುವ ಮನುಷ್ಯ ಸಮುದಾಯದ ಮನಸ್ಸುಗಳ ಮಾಲಿನ್ಯವೇ ಈ ಕಾದಂಬರಿಯ ವಸ್ತು.

ಆಶಾ ಕಾರ್ಯಕರ್ತೆಯರ ಬದುಕಿನ ಸಂಕಷ್ಟ– ಸವಾಲುಗಳನ್ನೂ ಈ ಕಾದಂಬರಿಯಲ್ಲಿ ತೋರಿಸುವ ಪ್ರಯತ್ನವನ್ನು ಲೇಖಕಿ ಮಾಡಿದ್ದಾರೆ.

‘ಹೆದ್ದಾರಿಯಂಚಿನವರ ಬದುಕು, ಆಗಂತುಕರ ಅಪಘಾತ– ಸಾವು, ನೋವುಗಳಿಗೆ ನಿರಂತರವಾಗಿ ಸಾಕ್ಷಿಯಾಗುತ್ತಲೇ ಇರುತ್ತದೆ. ಹಾಗೆಯೇ ಉತ್ತರಕನ್ನಡದ ಹೆದ್ದಾರಿ, ಅಲ್ಲಿನ ದಟ್ಟ ಕಾಡಿನ ಮರಗಳ ಕಳ್ಳಸಾಗಾಣಿಕೆಯ ದಾರುಣತೆಗೂ ಸಾಕ್ಷಿಯಾಗಿದೆ. ಹೀಗೆ ಮನುಷ್ಯ ಬದುಕು ಮತ್ತು ಪರಿಸರದ ನಡುವಿನ ಸಂಬಂಧದಲ್ಲಿನ ವೈರುಧ್ಯಗಳನ್ನು ಕಾದಂಬರಿಯ ಮೂಲಕ ಶೋಧಿಸಲು ಪ್ರಯತ್ನಿಸಿದ್ದೇನೆ. ಜತೆಗೊಂದು ಪ್ರೇಮಕಥೆಯ ಎಳೆಯೂ ಇದೆ’ ಎನ್ನುತ್ತಾರೆ ಸುನಂದಾ ಕಡಮೆ.

ಆಕೃತಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಲಿದೆ.

*


ಮೊದಲ ಕಾದಂಬರಿಯ ಪುಲಕ
* ಅಮರೇಶ ನುಗಡೋಣಿ
ಕನ್ನಡಕ್ಕೆ ಭಿನ್ನ ಕಥಾಜಗತ್ತನ್ನು ಪರಿಚಯಿಸಿದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಅಮರೇಶ ನುಗಡೋಣಿ ಅವರ ಹೊಸ ಕಥಾಸಂಕಲನ ‘ಚುಕ್ಕಿಯ ಮದುವೆ’ ಅಚ್ಚಿನಲ್ಲಿದೆ. ಇದು ಅವರ ಐದನೇ ಕಥಾಸಂಕಲನ. ಜತೆಗೇ ತಮ್ಮ ಮೊದಲ ಕಾದಂಬರಿಯನ್ನೂ ಬರೆದು ಮುಗಿಸಿದ ಪುಲಕದಲ್ಲಿ ಅವರಿದ್ದಾರೆ.

‘ದೊಡ್ಡ ಸಮುದಾಯಗಳ ಒಳಗಡೆ ಇರುವ ಸಣ್ಣ ಸಣ್ಣ ಸಮುದಾಯಗಳ ನಡುವಿನ ಸಂಘರ್ಷಗಳನ್ನು ಮೀರಿ ಮನುಷ್ಯತ್ವವನ್ನು ಗುರ್ತಿಸುವುದು ನನ್ನೆಲ್ಲ ಕಥೆಗಳ ಮೂಲ ಆಶಯ. ಈ ಸಂಕಲನದ ಎಲ್ಲ ಕಥೆಗಳಲ್ಲಿಯೂ ಈ ಅಂಶ ಸಾಮಾನ್ಯವಾಗಿ ಕಂಡುಬರುತ್ತದೆ’ ಎಂದು ಅವರು ಹೇಳಿಕೊಳ್ಳುತ್ತಾರೆ. ಈ ಸಂಕಲನದಲ್ಲಿ ಏಳು ಕಥೆಗಳಿವೆ. ಸೃಷ್ಟಿ ಪ್ರಕಾಶನ ಈ ಸಂಕಲನವನ್ನು ಪ್ರಕಟಿಸುತ್ತಿದೆ.

ಇಂದು ಹಳ್ಳಿಗಳೆಲ್ಲವೂ ನಗರಮುಖಿಗಳಾಗಿವೆ. ಅಂದರೆ ಹಳ್ಳಿಗಳಲ್ಲಿ ಎಲ್ಲ ಯುವಕರೂ ನಗರಕ್ಕೆ ವಲಸೆ ಹೋಗಿ ಹಳ್ಳಿ ಬರಿದಾಗುತ್ತದೆ. ಇಂಥ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಒಂದು ವಿದ್ಯಾವಂತ ಕುಟುಂಬ ಹಳ್ಳಿಗೆ ಹೋಗಿ ಅಲ್ಲಿ ಮತ್ತೆ ನೆಲದ ಜತೆ ತಮ್ಮ ಸಂಬಂಧವನ್ನು ಪುನಶ್ಚೇತನಗೊಳಿಸಿಕೊಳ್ಳುವ, ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನವೇ ಈ ಕಾದಂಬರಿಯ ಕಥಾವಸ್ತು. ಈ ಕಾದಂಬರಿಯನ್ನು ಪಲ್ಲವ ಪ್ರಕಾಶನ ಪ್ರಕಟಿಸುತ್ತಿದೆ. ಜೂನ್‌ ತಿಂಗಳಲ್ಲಿ ಕಾದಂಬರಿ ಪ್ರಕಟವಾಗುವ ನಿರೀಕ್ಷೆ ಇದೆ.

*


ಅನುವಾದದ ತೊರೆ
* ಓ. ಎಲ್‌. ನಾಗಭೂಷಣ ಸ್ವಾಮಿ
ಹಿರಿಯ ವಿಮರ್ಶಕ ಓ. ಎಲ್‌. ನಾಗಭೂಷಣ ಸ್ವಾಮಿ ಅವರು ಜಗತ್ತಿನ ಶ್ರೇಷ್ಠ ಸಾಹಿತ್ಯಕೃತಿಗಳನ್ನು ಕನ್ನಡದ ಚೌಕಟ್ಟಿನೊಳಗೆ ತರುವ ಧ್ಯಾನದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಟಾಲ್‌ಸ್ಟಾಯ್‌, ಸಿಂಗರ್‌ ಸೇರಿದಂತೆ ಹಲವರ ಕೃತಿಗಳನ್ನು ಕನ್ನಡಕ್ಕೆ ತಂದಿರುವ ಓಎಲ್‌ಎನ್‌, ಇದೀಗ ಆರು ಕೃತಿಗಳ ಅನುವಾದದಲ್ಲಿ ತೊಡಗಿಕೊಂಡಿದ್ದಾರೆ! ಅದರ ‍ಪಟ್ಟಿಯನ್ನೂ ಅವರೇ ನೀಡಿದ್ದಾರೆ:

ಒರ್ಹಾನ್ ಪಾಮುಕ್: ಟರ್ಕಿ ದೇಶದ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತನ ಎರಡು ಪುಸ್ತಕಗಳ ಕೆಲಸ ನಡೆದಿದೆ.

1. ಕಾದಂಬರಿ ಕಲೆ, ಮತ್ತು ಪ್ರಕಾರವನ್ನು ಕುರಿತು ಆತ ಮಾಡಿರುವ ಆರು ಉಪನ್ಯಾಸಗಳ ಅನುವಾದ-‘ಮುಗ್ಧ-ಪ್ರಬುದ್ಧ’. ಓದುಗರು ಮತ್ತು ಲೇಖಕರ ದೃಷ್ಟಿಯಿಂದ ಕಾದಂಬರಿ ಸಾಹಿತ್ಯದ ವೈಶಿಷ್ಟ್ಯವನ್ನು ವಿವರಿಸುವ ಪುಸ್ತಕ. ಇಂಗ್ಲಿಷಿನಲ್ಲೂ ಇಂಥ ಬರವಣಿಗೆ ಅಪರೂಪ. ವಿದ್ವತ್ತಿನ ಭಾರವಿರದ, ಆದರೂ ಅಸಂಖ್ಯ ಒಳನೋಟಗಳನ್ನು ನೀಡುವ ಕೃತಿ. ಅನುವಾದ ಮುಗಿದಿದೆ, ಸದ್ಯದಲ್ಲೆ ಪ್ರಕಟವಾಗುತ್ತದೆ.

2. ಅವನದೇ ಕಾದಂಬರಿ, 2009ರಲ್ಲಿ ಪ್ರಕಟಗೊಂಡ ‘ಮ್ಯೂಸಿಯಮ್ ಆಫ್ ಇನ್ನೊಸೆನ್ಸ್’ ಅನುವಾದ. ಮೊದಲ ಕರಡು ಬಲುಮಟ್ಟಿಗೆ ಮುಗಿದಿದೆ, ಪರಿಷ್ಕರಣೆಯ ಕೆಲಸ ನಡೆದಿದೆ.

3. ರಷ್ಯಾದ ಕಾದಂಬರಿಕಾರ ದಾಸ್ತೋವ್‌ಸ್ಕಿಯ ‘ಕ್ರೈಂ ಅಂಡ್ ಪನಿಶ್‍ಮೆಂಟ್’. ಎಂ.ಎ. ಓದುವ ದಿನಗಳಲ್ಲಿ ಟಾಲ್‌ಸ್‌ಟಾಯ್‌ ಮತ್ತು ದಾಸ್ತಯೇವ್ಸ್‍ಕಿ ನನ್ನ ಆವರಿಸಿಕೊಂಡಿದ್ದರು. ಈಗ ಕ್ರೈಂ ಅಂಡ್ ಪನಿಶ್‍ಮೆಂಟ್‍ನ ಅನುವಾದ ಅರ್ಧ ಮುಗಿದಿದೆ. ಈ ವರ್ಷ ಪೂರಾ ಮುಗಿದೀತು. ಟಾಲ್‌ಸ್ಟಾಯ್‌ ಚಿತ್ರಿಸಿದ್ದಕ್ಕಿಂತ ಬೇರೆಯ ವರ್ಗದ ಜನ, ಜನರ ಬದುಕು, ಮನುಷ್ಯ ಮನಸಿನ ಆಳದ ಒತ್ತಡ, ಸಮಾಜದ ರಚನೆ, ನೀತಿ ಮತ್ತು ಕಾನೂನುಗಳ ಜಟಿಲ ಬಂಧ, ಶೇಕ್ಸ್‌ಪಿಯರ್‌ನು ನಾಟಕ ಪ್ರಕಾರದಲ್ಲಿ ಸಾಧಿಸಿದ್ದನ್ನು ಕಾದಂಬರಿಯಲ್ಲಿಯೂ ಸಾಧ್ಯವಾಗಿಸಿದ ಲೇಖಕನ ಮುಖ್ಯ ಕೃತಿ.

4. ದಾಸ್ತೋವ್‌ಸ್ಕಿ ‘ಬ್ರದರ್ಸ್ ಕಾರ್ಮಝೋವ್’: ಧರ್ಮ, ನೀತಿ, ಭಿನ್ನ ವ್ಯಕ್ತಿತ್ವದ ಸಹೋದರರ ಮತ್ತು ಮನೆಯ ವ್ಯಕ್ತಿಗಳ ಕಥನ, ಒಂದು ಥರದಲ್ಲಿ ಆಧುನಿಕ ಕಾಲದ ಮಹಾಭಾರತ. ಅನುವಾದ ಮುಗಿಯುತ್ತ ಬಂದಿದೆ. ಈ ವರ್ಷವೇ ಮುಗಿಸುವ ಆಸೆ.

5. ವಚನಗಳ ಬಗ್ಗೆ ಇದುವರೆಗೆ ಬರೆದಿರುವ ಲೇಖನಗಳ ಪುಸ್ತಕ ತಯಾರಾಗುತ್ತಿದೆ. ಅದಕ್ಕಾಗಿ ವಚನಗಳ ತಾತ್ವಿಕತೆ ಕುರಿತು ಸುದೀರ್ಘವಾದ ಬರಹದ ಕೆಲಸ ನಡೆದಿದೆ.

6. ಕಳೆದ ಡಿಸೆಂಬರಿನಲ್ಲಿ ಪ್ರಕಟಗೊಂಡ ಪಾಬ್ಲೋ ನೆರೂಡಾನ ಆತ್ಮಕಥೆ ನೆನಪುಗಳು’ ಅನುವಾದಿಸುವಾಗ ಆತ ಉಲ್ಲೇಖಿಸಿರುವ ಸುಮಾರು ಮೂವತ್ತು ಕವಿಗಳ ಆಯ್ದ ಕವಿತೆಗಳ ಅನುವಾದ ರೂಪಪಡೆಯುತ್ತಿದೆ.

ಈ ಪಟ್ಟಿಯನ್ನು ನೋಡಿದರೆ, ಈ ವರ್ಷ ಜಗತ್ತಿನ ಹಲವು ಶ್ರೇಷ್ಠ ಕೃತಿಗಳನ್ನು ಕನ್ನಡದಲ್ಲಿಯೇ ಓದುವ ಖುಷಿ ಓದುಗರಿಗೆ ಕಾದಿದೆ ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT