7

ಪ್ರೇಮ, ವಿವಾಹ, ಸುದೀರ್ಘ ದಾಂಪತ್ಯ

Published:
Updated:
ಪ್ರೇಮ, ವಿವಾಹ, ಸುದೀರ್ಘ ದಾಂಪತ್ಯ

ಅಮಿತಾಭ್‌ ಬಚ್ಚನ್‌– ಜಯಾ: ಎತ್ತರದ ಹುಡುಗ, ಕುಳ್ಳಗಿನ ಹುಡುಗಿಯನ್ನು ಮದುವೆಯಾದರೆ ‘ಅಮಿತಾಬ್‌–ಜಯಾ ಬಚ್ಚನ್‌ರಂತಿದೆ ಈ ಜೋಡಿ’ ಎಂಬ ಚಟಾಕಿ ಶುರುವಾದದ್ದು ಈ ಜೋಡಿ ಮದುವೆಯಾದ ನಂತರವೇ. ಸ್ವಚ್ಛಂದ ಪ್ರೇಮಹಕ್ಕಿಗಳಾಗಿ ವಿಹರಿಸುತ್ತಿದ್ದ ಜೋಡಿ ಮದುವೆಯಾಗಿದ್ದು 1973ರಲ್ಲಿ. ಅಮಿತಾಭ್‌ ಸಿನಿ ಬದುಕಿನ ಮಹತ್ವದ ಚಿತ್ರಗಳಲ್ಲೊಂದಾದ ‘ಜಂಜೀರ್‌’ ಬಿಡುಗಡೆಯಾದ ಕೆಲಸಮಯದಲ್ಲೇ ಅವರು ಮದುವೆಯಾದರು. ‘ಶೋಲೆ’ ಚಿತ್ರದಲ್ಲಿಯೂ ಈ ಜೋಡಿ ಮೋಡಿ ಮಾಡಿತ್ತು. ಅವರ ದಾಂಪತ್ಯಕ್ಕೀಗ ನಾಲ್ಕೂವರೆ ದಶಕದ ಹರೆಯ.

**

ದಿಲೀಪ್‌ಕುಮಾರ್‌– ಸಾಯಿರಾಬಾನು: ಇವರ ಮದುವೆಯಾಗಿದ್ದು 1966ರಲ್ಲಿ. ಈಗ ಅವರ ದಾಂಪತ್ಯಕ್ಕೆ 52ರ ಹರೆಯ. ದಿಲೀಪ್‌ ಅವರನ್ನು ಮೆಚ್ಚಿ, ಮದುವೆಯಾದರೆ ಇವನನ್ನೇ ಎಂದು ತೀರ್ಮಾನಿಸಿದಾಗ ಸಾಯಿರಾಗೆ ಕೇವಲ 12 ವರ್ಷ. ಸಾಯಿರಾ ಬಾಲಿವುಡ್‌ ಪ್ರವೇಶಿಸಿದ್ದು 1960ರಲ್ಲಿ. ನಟನೆ, ನೃತ್ಯ ಮತ್ತು ಗ್ಲಾಮರ್‌ನಿಂದಾಗಿ ಅವರು ಉತ್ತುಂಗಕ್ಕೇರಲು ಹೆಚ್ಚು ಕಾಲ ಬೇಕಾಗಲಿಲ್ಲ. ಅಲ್ಲದೆ, 1963ರಿಂದ 1969ರವರೆಗೂ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ಸಾಯಿರಾ ಮೂರನೇ ಸ್ಥಾನದಲ್ಲಿದ್ದರು. ದಿಲೀಪ್‌ ಕುಮಾರ್‌ ಕೂಡಾ ಬಿ ಟೌನ್‌ನ ಬಹುಬೇಡಿಕೆಯ ನಟನಾಗಿ ಬೆಳೆಯುತ್ತಿದ್ದ ಹೊತ್ತಿನಲ್ಲೇ ಮದುವೆಯಾದರು.

***

ರಿಶಿ ಕಪೂರ್‌ ಮತ್ತು ನೀತು ಸಿಂಗ್‌: ಬಾಲಿವುಡ್‌ನಲ್ಲಿ ಪ್ರೇಮ ವಿವಾಹವಾಗಿ ದೀರ್ಘಕಾಲ ಅನ್ಯೋನ್ಯವಾಗಿ ಬಾಳುತ್ತಿರುವ ಮತ್ತೊಂದು ಜೋಡಿ. 1970ರಲ್ಲಿ ತಂದೆ ರಾಜ್‌ಕಪೂರ್‌ ಅವರ ‘ಮೇರಾ ನಾಮ್‌ ಜೋಕರ್‌’ನಲ್ಲಿ ಬಾಲನಟನಾಗಿ ಕಾಣಿಸಿಕೊಂಡ ರಿಷಿ ಕಪೂರ್‌ ರಾಷ್ಟ್ರಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು. ಅಲ್ಲಿಂದೀಚೆ ರಿಷಿ ಹಿಂತಿರುಗಿ ನೋಡಿದ್ದೇ ಇಲ್ಲ. 1980ರ ಜನವರಿ 22ರಂದು ರಿಷಿ ಕಪೂರ್‌, ಬಾಲಿವುಡ್‌ ನಟಿ ನೀತು ಸಿಂಗ್‌ ಅವರನ್ನು ವಿವಾಹವಾದಾಗ ಹೊಟ್ಟೆ ಉರಿದುಕೊಂಡ ಸೆಲೆಬ್ರಿಟಿಗಳಿಗೆ ಕಮ್ಮಿಯಿರಲಿಲ್ಲ. ಈ ಜೋಡಿ ತಮ್ಮ 38ನೇ ವಿವಾಹ ವಾರ್ಷಿಕೋತ್ಸವವನ್ನು ಕಳೆದ ತಿಂಗಳಷ್ಟೇ ಆಚರಿಸಿಕೊಂಡಿತು.

***

ಜಾವೇದ್‌ ಅಖ್ತರ್‌ ಮತ್ತು ಶಬಾನಾ ಆಜ್ಮಿ: ಸಿನಿಮಾ ಕ್ಷೇತ್ರದ ಹೊರತಾಗಿ ಸಾರಸ್ವತ ಮತ್ತು ಬೌದ್ಧಿಕ ಲೋಕದಲ್ಲಿ ಗುರುತಿಸಿಕೊಂಡ ದಂಪತಿಗಳಲ್ಲಿ ಜಾವೇದ್‌ ಅಖ್ತರ್‌ ಮತ್ತು ಶಬಾನಾ ಆಜ್ಮಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜಾವೇದ್‌ ಅಖ್ತರ್‌ಗೆ ಶಬಾನಾ ಎರಡನೇ ಪತ್ನಿ. ಆದರೆ ಯಶಸ್ವಿ ದಾಂಪತ್ಯಕ್ಕೆ ಅದೆಂದೂ ಅಡ್ಡಿಯಾಗಲಿಲ್ಲ. 1984ರಲ್ಲಿ ಮದುವೆಯಾದ ಜಾವೇದ್‌–ಶಬಾನಾ ದಾಂಪತ್ಯಕ್ಕೆ ಈಗ 34 ವರ್ಷಗಳು ತುಂಬುತ್ತಿವೆ.

***

ಸುನಿಲ್‌ ಶೆಟ್ಟಿ ಮತ್ತು ಮನಾ: ತಮ್ಮ ಒರಟು ನೋಟಗಳಿಂದ ಮತ್ತು ಕಟ್ಟುಮಸ್ತಾದ ದೇಹದಿಂದ ಹೆಣ್ಣು ಮಕ್ಕಳ ಮನ ಸೆಳೆದ ಸುನಿಲ್‌ ಶೆಟ್ಟಿ, ಮುಂಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ ಎಂದಿನಂತೆ ಕಾಲ ಕಳೆಯುತ್ತಿದ್ದಾಗ ಕಣ್ಣಿಗೆ ಬಿದ್ದವರು ಮನಾ. ಆಗ ಮನಾ 17ರ ಯುವತಿ. ಅವರ ಗಮನ ಸೆಳೆಯಲು ಸುನಿಲ್‌ ತಮ್ಮ ಸ್ನೇಹಿತರ ಮೂಲಕ ಬಗೆಬಗೆಯ ಮಾರ್ಗಗಳನ್ನು ಕಂಡುಕೊಂಡಿದ್ದರು. ಪಂಜಾಬ್‌ ಮೂಲದ ಮನಾ ತಂದೆ ಮತ್ತು ತಾಯಿ ಬೇರೆಬೇರೆ ಧರ್ಮದವರು. ಮನಾ ಮೂಲ ಹೆಸರು ಮೊನಿಷಾ ಕದ್ರಿ. ಇದೇ ಕಾರಣಕ್ಕೆ ಸುನಿಲ್‌ ಮನೆತನದಲ್ಲಿ ಯಾರೂ ಮನಾ ಸಂಬಂಧವನ್ನು ಒಪ್ಪಿರಲಿಲ್ಲ. ಒಂಬತ್ತು ವರ್ಷಗಳ ವಾದ ವಿವಾದಗಳ ನಂತರ, 1991ರಲ್ಲಿ ಇಬ್ಬರೂ ಮದುವೆಯಾದರು. ಬಾಲಿವುಡ್‌ನ ಅನ್ಯೋನ್ಯ ದಂಪತಿ ಎಂದೇ ಇವರನ್ನು ಗುರುತಿಸಲಾಗುತ್ತದೆ.

***

ಅನಿಲ್ ಕಪೂರ್‌ ಮತ್ತು ಸುನೀತಾ: 1977ರಿಂದಲೂ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿರುವ ಅನಿಲ್ ಕಪೂರ್‌ ಮತ್ತು ಸುನೀತಾ ಅವರ ವಿವಾಹ 1984ರ ಮೇ 19ರಂದು ನಡೆಯಿತು. ಆಕಸ್ಮಿಕವಾಗಿ ಭೇಟಿಯಾದ ಅನಿಲ್‌–ಸುನೀತಾ ಫೋನ್‌ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡರೂ ಪರಸ್ಪರರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕ್ರಮೇಣ ಇಬ್ಬರೂ ಚೆನ್ನಾಗಿ ಅರಿತುಕೊಂಡ ನಂತರ ಮದುವೆಯಾದರು. ಇವರ ದಾಂಪತ್ಯ ಜೀವನದ ಬಗ್ಗೆ ಅಪಸ್ವರ ಕೇಳಿಬಂದಿರುವುದು ಕಡಿಮೆ. ಎಲ್ಲಾ ಬಗೆಯ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿರುವ ಅನಿಲ್‌ ಕಪೂರ್‌, ‘ಕುಟುಂಬಕ್ಕೆಂದು ಸಮಯ ಮೀಸಲಿರಿಸಿ ಮೌಲ್ಯಯುತ ಸಮಯವನ್ನು ಕಳೆಯಬೇಕು. ನಮ್ಮ ದಾಂ‍ಪತ್ಯದ ಯಶಸ್ಸಿನ ಗುಟ್ಟುಗಳಲ್ಲಿ ಇದೂ ಒಂದು’ ಹೇಳುತ್ತಾರೆ.

ಶಾರುಕ್‌ ಖಾನ್‌– ಗೌರಿ: ಈ ಜೋಡಿ ಮದುವೆಯಾದದ್ದು 1991ರಲ್ಲಿ. ಚಿತ್ರರಂಗದಲ್ಲಿ ಎಷ್ಟೇ ಯಶಸ್ಸು ಗಳಿಸಿದ್ದರೂ ಮುಸ್ಲಿಂ ಹುಡುಗ ಎಂಬ ಕಾರಣಕ್ಕೆ ಗೌರಿ ಮನೆಯಲ್ಲಿ ಮದುವೆ ಒಪ್ಪಿಗೆ ಸಿಕ್ಕಿರಲಿಲ್ಲ. ಆರು ವರ್ಷ ಗೊಂದಲದಲ್ಲಿಯೇ ಕಳೆಯಬೇಕಾಗಿ ಬಂದರೂ ಪ್ರೀತಿ, ವಿಶ್ವಾಸ ಮತ್ತು ದೃಢ ನಿರ್ಧಾರದಿಂದ ಶಾರುಕ್‌– ಗೌರಿ ಹಿಂದೆ ಸರಿದಿರಲಿಲ್ಲ. ಈಗ, ಯಶಸ್ವಿ ದಾಂಪತ್ಯ ಮತ್ತು ಪರಸ್ಪರರನ್ನು ಗೌರವಿಸುವ, ಆರಾಧಿಸುವ ದಂಪತಿಯಾಗಿ ಇವರು ಗುರುತಿಸಿಕೊಳ್ಳುತ್ತಾರೆ.

***

ಧರ್ಮೇಂದ್ರ ಮತ್ತು ಹೇಮಾಮಾಲಿನಿ: 1963ರಲ್ಲಿ ತಮಿಳಿನ ‘ಇತು ಸತ್ಯಂ’ ಸಿನಿಮಾದಲ್ಲಿ ನರ್ತಕಿ ಹಾಗೂ ಪೋಷಕ ನಟಿಯಾಗಿ ಪ್ರವೇಶ ಪಡೆದ ಹೇಮಾಮಾಲಿನಿ ಇಂದಿಗೂ, ದಕ್ಷಿಣ ಭಾರತದ ಚಿರಯುವತಿ ಹಾಗೂ ಕನಸಿನ ಕನ್ಯೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ. ಹಿಂದಿಯ ‘ಸಪ್ನೋಂ ಕಾ ಸೌದಾಗರ್‌’ನಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡರು. ಧರ್ಮೇಂದ್ರ, ದೇವ್‌ ಆನಂದ್‌, ರಾಜೇಶ್‌ ಖನ್ನಾ ಅವರೊಂದಿಗೆ ನಾಯಕಿಯಾಗಿ ಹೆಚ್ಚಾಗಿ ಕಾಣಿಸಿಕೊಂಡರು. ಇದೇ ವೇಳೆ ಹೇಮಾ ಮತ್ತು ಧರ್ಮೇಂದ್ರ ಅವರ ನಡುವೆ ಪ್ರೇಮಾಂಕುರವಾಗಿ 1979ರಲ್ಲಿ ಮದುವೆಯಾದರು. ‘ಧರ್ಮೇಂದ್ರ ಅವರಿಗೆ ಅಡುಗೆ ಮಾಡಿ ಉಣಬಡಿಸುವುದು, ಅನಾರೋಗ್ಯವಾದಲ್ಲಿ ಆರೈಕೆ ಮಾಡುವುದು ನನಗೆ ಎಂದಿಗೂ ಬೇಸರ ತರಿಸಿಲ್ಲ’ ಎಂದು ಹೇಳುತ್ತಾರೆ ಹೇಮಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry