ಮಂಗಳವಾರ, ಡಿಸೆಂಬರ್ 10, 2019
21 °C
ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಬಣ್ಣನೆ

‘ಎಂಎಸ್‌ಎಂಇ: ಚಾಲಕ ಶಕ್ತಿ’

Published:
Updated:
‘ಎಂಎಸ್‌ಎಂಇ: ಚಾಲಕ ಶಕ್ತಿ’

ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯವು ನವ ಭಾರತದ ಪ್ರಗತಿಯ ಚಾಲಕ ಶಕ್ತಿಯನ್ನಾಗಿ ಮಾಡಲು ಬಜೆಟ್‌ನಲ್ಲಿನ ತೆರಿಗೆ ಕಡಿತ ಪ್ರಸ್ತಾವಗಳೂ ಸೇರಿದಂತೆ ಕೇಂದ್ರ ಸರ್ಕಾರವು ಹಲವಾರು ಉತ್ತೇಜನಾ ಕ್ರಮಗಳನ್ನು ಕೈಗೊಂಡಿದೆ.

‘ಸರ್ಕಾರದ ನಿರ್ಧಾರದಿಂದಾಗಿ ವಾರ್ಷಿಕ ₹ 250 ಕೋಟಿಗಳಷ್ಟು ವಹಿವಾಟು ನಡೆಸುವ ಉದ್ದಿಮೆಗಳ ಮೇಲಿನ ತೆರಿಗೆ ಹೊರೆ ಮತ್ತು ಬಡ್ಡಿ ಭಾರ ತಗ್ಗಲಿದೆ. ಇದರಿಂದಾಗುವ ಉಳಿತಾಯವನ್ನು ಹೂಡಿಕೆ ಮತ್ತು ವಿಸ್ತರಣಾ ಉದ್ದೇಶಕ್ಕೆ ಬಳಸಬಹುದಾಗಿದೆ.

‘ಉತ್ಪಾದನೆ, ರಫ್ತು ಮತ್ತು ಉದ್ಯೋಗ ಅವಕಾಶ ಸೃಷ್ಟಿಯಲ್ಲಿ ದೇಶದ ಬೆನ್ನೆಲುಬು ಆಗಿರುವ ಈ ವಲಯವು ಇಂತಹ ಉತ್ತೇಜನಾ ಕ್ರಮಗಳ ನೆರವಿನಿಂದಾಗಿ ಪ್ರಗತಿಯ ಹಾದಿಯಲ್ಲಿ ದಾಪುಗಾಲು ಹಾಕಲಿದೆ’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಕೆಲಮಟ್ಟಿಗೆ ಸಂಕಷ್ಟಕ್ಕೆ ಸಿಲುಕಿರುವ ಈ ವಲಯಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಹಲವಾರು ಉತ್ತೇಜನಾ ಕ್ರಮಗಳನ್ನು ಪ್ರಕಟಿಸಿದೆ. ಬ್ಯಾಂಕ್‌ಗಳ ಬಾಕಿ ಪಾವತಿಗೆ ಹೆಚ್ಚುವರಿ ಸಮಯ ನೀಡಲಾಗಿದೆ.

ಸೇವಾ ವಲಯದ ಉದ್ದಿಮೆಗಳ ಮೇಲಿನ ಗರಿಷ್ಠ ಸಾಲದ ಮಿತಿ (₹ 5 ರಿಂದ ₹ 10 ಕೋಟಿ) ರದ್ದುಪಡಿಸಲಾಗಿದೆ. ಈ ಎಲ್ಲ ಕ್ರಮಗಳು 6.33 ಕೋಟಿಗಳಷ್ಟಿರುವ ‘ಎಂಎಸ್ಎಂಇ’ಗಳು ದೇಶಿ ಅರ್ಥ ವ್ಯವಸ್ಥೆಯ ಪ್ರಗತಿಯ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸಲು ನೆರವಾಗಲಿವೆ.

‘ಈ ವಲಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಬಹುಬಗೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಬ್ಯಾಂಕ್‌ಗಳ ಪುನರ್ಧನ ಯೋಜನೆಯಿಂದ ಅವುಗಳ ಸಾಲ ನೀಡಿಕೆ ಸಾಮರ್ಥ್ಯ ₹5 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದರಲ್ಲಿನ ಬಹುಭಾಗವನ್ನು ಈ ವಲಯಕ್ಕೆ ವಿತರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಘಟಕ ಸ್ಥಾಪನೆ ಮತ್ತು ಯಂತ್ರೋಪಕರಣಗಳ ಅಳವಡಿಕೆಗೆ ಮಾಡಿದ ಹೂಡಿಕೆ ಆಧರಿಸುವ ಬದಲಿಗೆ, ವಾರ್ಷಿಕ ವಹಿವಾಟು ಪರಿಗಣಿಸಿ ‘ಎಂಎಸ್‌ಎಂಇ’ಗಳನ್ನು ವರ್ಗೀಕರಿಸಲು ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವು ಸುಲಲಿತವಾಗಿ ಉದ್ದಿಮೆ ಸ್ಥಾಪಿಸಲೂ ನೆರವಾಗಲಿದೆ’ ಎಂದೂ ವಿಶ್ಲೇಷಿಸಿದ್ದಾರೆ.

ಪ್ರತಿಕ್ರಿಯಿಸಿ (+)