ಬುಧವಾರ, ಡಿಸೆಂಬರ್ 11, 2019
26 °C
ಸೈಬರ್‌ ಕ್ಷೇತ್ರದಲ್ಲಿ ಮೂಲಭೂತವಾದ ಹರಡಲು ಯತ್ನ: ಪ್ರಧಾನಿ ಕಳವಳ

ಅಭಿವೃದ್ಧಿಗೆ ತಂತ್ರಜ್ಞಾನ ಬಳಸಿ: ನರೇಂದ್ರ ಮೋದಿ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಭಿವೃದ್ಧಿಗೆ ತಂತ್ರಜ್ಞಾನ ಬಳಸಿ: ನರೇಂದ್ರ ಮೋದಿ ಸಲಹೆ

ಅಬುಧಾಬಿ: ತಂತ್ರಜ್ಞಾನವನ್ನು ಮಾನವಕುಲದ ಅಭಿವೃದ್ಧಿಗೆ ಬಳಸಬೇಕೆ ಹೊರತು ವಿನಾಶಕ್ಕಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.

ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್‌ ಕ್ಷೇತ್ರದಲ್ಲಿ ಮೂಲಭೂತವಾದ ಹರಡಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ಸರ್ಕಾರ ನಿಗಾ ವಹಿಸದಿದ್ದರೆ ಅಭಿವೃದ್ಧಿ ಬದಲು ವಿನಾಶ ಹೊಂದಬೇಕಾಗುತ್ತದೆ. ಮುಂದೊಂದು ದಿನ ಇದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ನಡೆದ ಜಾಗತಿಕ ಸರ್ಕಾರಿ ಶೃಂಗಸಭೆಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆಯಲು ಇಡೀ ವಿಶ್ವವೇ ಒಂದಾಗಿ ಚಿಂತಿಸಬೇಕಿದೆ ಎಂದರು.

‘ದೊಡ್ಡ ಮರುಭೂಮಿಯಾಗಿದ್ದ ದುಬೈ ತಂತ್ರಜ್ಞಾನದ ನೆರವಿನಿಂದಾಗಿ ಭೂಮಿಯ ಮೇಲಿನ ಸ್ವರ್ಗದಂತೆ ಕಂಗೊಳಿಸುತ್ತಿದೆ. ನಿಜಕ್ಕೂ ಇದೊಂದು ಪವಾಡ. ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುವುದಕ್ಕೆಇಡೀ ವಿಶ್ವಕ್ಕೆ ಇದು ಮಾದರಿ’ ಎಂದರು.

ಮಂಗಳಯಾನದ ಬಗ್ಗೆ ಹೆಮ್ಮೆ: 'ಭಾರತದಲ್ಲಿ ಕ್ಯಾಬ್‌ನಲ್ಲಿ ಪ್ರಯಾಣಿಸಿದರೆ ಪ್ರತಿ ಕಿಲೊ ಮೀಟರ್‌ಗೆ ₹10 ಪಾವತಿಸಬೇಕಾಗುತ್ತದೆ. ಆದರೆ, ನಮ್ಮ ಮಂಗಳಯಾನ ಯೋಜನೆಗೆ ಪ್ರತಿ ಕಿಲೊ ಮೀಟರ್‌ಗೆ ಕೇವಲ ₹7 ವೆಚ್ಚವಾಗಿದೆ' ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

‘ತಂತ್ರಜ್ಞಾನ ನಮ್ಮ ಆಲೋಚನಾ ಕ್ರಮ ಮತ್ತು ವೇಗವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಂದು ತಂತ್ರಜ್ಞಾನ ಜಾಗತಿಕ ಬದಲಾವಣೆಯ ಪ್ರಮುಖ ಸಾಧನವಾಗಿದೆ. ಜನಸಾಮಾನ್ಯರು ಮತ್ತು ಶ್ರೀಮಂತರು ಎಂಬ ಭೇದಭಾವ ಇಲ್ಲದೆ ಎಲ್ಲರಿಗೂ ಸಮಾನ ಅವಕಾಶ ನಿರ್ಮಿಸಿದೆ’ ಎಂದದರು.

ಹಿಂದೂ ದೇವಸ್ಥಾನಕ್ಕೆ ಶಂಕುಸ್ಥಾಪನೆ: ಇದಕ್ಕೂ ಮೊದಲು ದುಬೈನ ಒಪೆರಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ, ಅಬುಧಾಬಿಯಲ್ಲಿ  ಬಿಎಪಿಎಸ್‌ ಸ್ವಾಮಿ ನಾರಾಯಣ ಮಂದಿರ ನಿರ್ಮಾಣಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಂದಿರ ಭಾರತೀಯ ಸಂಸ್ಕೃತಿ, ಮಾನವೀಯತೆ ಮತ್ತು ಸಾಮರಸ್ಯದ ಪ್ರತೀಕವಾಗಲಿ ಎಂದು ಆಶಿಸಿದರು.

ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಅಬುಧಾಬಿಯ ರಾಜಕುಮಾರ ಶೇಖ್‌ ಮೊಹಮ್ಮದ್‌ ಬಿನ್‌ ಝಯದ್‌ ಅಲ್‌ ನಹ್ಯಾನ್‌ ಅವರಿಗೆ ಮೋದಿ ಕೃತಜ್ಞತೆ ಸಲ್ಲಿಸಿದರು.

ಐದು ಒಪ್ಪಂದಕ್ಕೆ ಸಹಿ

ತೈಲಭಾವಿಗಳಲ್ಲಿ ಭಾರತೀಯ ತೈಲ ಕಂಪನಿಗಳ ಒಕ್ಕೂಟಕ್ಕೆ ಶೇ 10ರಷ್ಟು ಪಾಲು ನೀಡುವ ಮಹತ್ವದ ನಿರ್ಣಯ ಸೇರಿದಂತೆ ಐದು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಭಾನುವಾರ ಸಹಿ ಹಾಕಿವೆ.

ಇಂಧನ, ಮಾನವಶಕ್ತಿ, ರೈಲ್ವೆ, ಹಣಕಾಸು ಸೇವಾ ವಲಯಗಳಲ್ಲಿ ಪರಸ್ಪರ ಸಹಕಾರ ಒಪ್ಪಂದಗಳಿಗೆ ಪ್ರಧಾನಿ ಮೋದಿ ಮತ್ತು ಅಬುಧಾಬಿಯ ಯುವರಾಜ ಶೇಖ್‌ ಮೊಹಮ್ಮದ್‌ ಬಿನ್‌ ಝಯದ್‌ ಅಲ್‌ ನಹ್ಯಾನ್‌ ಸಹಿ ಹಾಕಿದರು.

ಯುಎಇ ಅಭಿವೃದ್ಧಿಗೆ ಭಾರತೀಯರು ನೀಡುತ್ತಿರುವ ಕೊಡುಗೆಯನ್ನು ರಾಜಕುಮಾರ ನಹ್ಯಾನ್‌ ಶ್ಲಾಘಿಸಿದರು.

* ಕ್ಷಿಪಣಿ, ಬಾಂಬ್‌ಗಳ ಮೇಲೆ ನಾವು ಕೋಟ್ಯಂತರ ರೂಪಾಯಿ ಸುರಿಯುತ್ತಿದ್ದೇವೆ. ತಾಂತ್ರಿಕವಾಗಿ ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದರೂ ಬಡತನ, ಅಪೌಷ್ಠಿಕತೆ, ನಿರುದ್ಯೋಗನಂತಹ ಸವಾಲುಗಳನ್ನು ನಿವಾರಿಸಲು ಇನ್ನೂ ನಮ್ಮಿಂದ ಸಾಧ್ಯವಾಗಿಲ್ಲ

–ನರೇಂದ್ರ ಮೋದಿ, ಪ್ರಧಾನಿ

ಮೊದಲ ಹಿಂದೂ ಮಂದಿರ

* ಅಬುಧಾಬಿ–ದುಬೈ ಹೆದ್ದಾರಿಯಲ್ಲಿ 55,000 ಚದರ ಮೀಟರ್‌ನಲ್ಲಿ ಮೊದಲ ಹಿಂದೂ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ

* ಭಾರತೀಯ ಶಿಲ್ಪಿಗಳು ಕಲ್ಲಿನಲ್ಲಿ ಕೆತ್ತಲಿರುವ ದೇವಾಲಯ ಅಬುಧಾಬಿ ಯಲ್ಲಿ ಜೋಡಣೆ

ಪ್ರತಿಕ್ರಿಯಿಸಿ (+)