ಸೋಮವಾರ, ಡಿಸೆಂಬರ್ 9, 2019
21 °C

ವಿಶ್ವಕಪ್‌ ಹಾದಿಯಲ್ಲಿ...

Published:
Updated:
ವಿಶ್ವಕಪ್‌ ಹಾದಿಯಲ್ಲಿ...

2019ರಲ್ಲಿ ಆಂಗ್ಲರ ನಾಡಿನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ಸಾಗುತ್ತೇವೆ. ಈ ನಿಟ್ಟಿನಲ್ಲಿ ತಂಡವನ್ನು ಇನ್ನಷ್ಟು ಬಲಪಡಿಸಲು ಯೋಜನೆಗಳನ್ನೂ ರೂಪಿಸಿದ್ದೇವೆ’ ಹೋದ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಏಕದಿನ ಕ್ರಿಕೆಟ್‌ ಸರಣಿಯ ಪಂದ್ಯದ ಬಳಿಕ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದ ಮಾತಿದು.

43 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಇದುವರೆಗೂ 11 ಟೂರ್ನಿಗಳು ನಡೆದಿವೆ. ಈ ಪೈಕಿ ಭಾರತ ಎರಡು ಬಾರಿ ಚಾಂಪಿಯನ್‌ ಆಗಿದೆ. 1983ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕಪಿಲ್‌ ದೇವ್‌ ಸಾರಥ್ಯದ ತಂಡ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿತ್ತು. 2011ರಲ್ಲಿ ಮಹೇಂದ್ರ ಸಿಂಗ್‌ ದೋನಿ ‍ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಬಳಿಕ (2015) ಆಸ್ಟ್ರೇಲಿಯಾ ನೆಲದಲ್ಲಿ ಜರುಗಿದ್ದ ಟೂರ್ನಿಯಲ್ಲಿ ದೋನಿ ಪಡೆ ಸೆಮಿಫೈನಲ್‌ನಲ್ಲಿ ಸೋತು ಅಭಿಯಾನ ಮುಗಿಸಿತ್ತು. ಈಗ ಮತ್ತೆ ಭಾರತದ ಪಾಳಯದಲ್ಲಿ ಪ್ರಶಸ್ತಿಯ ಕನಸು ಚಿಗುರೊಡೆದಿದೆ.

ಜೂನ್‌ 2016ರಿಂದ  ಫೆಬ್ರುವರಿ 13, 2018ರ ಅವಧಿಯಲ್ಲಿ ನಡೆದ ಒಂಬತ್ತು ಏಕದಿನ ಸರಣಿಗಳಲ್ಲಿ ವಿರಾಟ್‌ ಪಡೆ ಸತತವಾಗಿ ಪ್ರಶಸ್ತಿ ಗೆದ್ದು ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿ ಸರಣಿ ಜಯಿಸಿದ ಸಾಧನೆಗೂ ಪಾತ್ರವಾಗಿದೆ. ತವರಿನಲ್ಲಿ ಮಾತ್ರವಲ್ಲದೆ, ವಿದೇಶಿ ನೆಲಗಳಲ್ಲೂ ಗೆಲುವಿನ ತೋರಣ ಕಟ್ಟುವ ಸಾಮರ್ಥ್ಯ ನಮ್ಮಲ್ಲಿದೆ ಎಂಬುದನ್ನು ಭಾರತದ ಆಟಗಾರರು ಜಗಜ್ಜಾಹೀರುಗೊಳಿಸಿದ್ದಾರೆ. ಈ ದಾಖಲೆಗಳು ಕೊಹ್ಲಿ ಬಳಗದ ವಿಶ್ವಕಪ್‌ ಕನಸಿಗೆ ಮತ್ತಷ್ಟು ಬಲ ತುಂಬಿವೆ. ಈ ಖುಷಿಯಲ್ಲಿ ತಂಡ ಮೈಮರೆಯುವಂತಿಲ್ಲ. ವಿಶ್ವಕಪ್‌ಗೂ ಮುನ್ನ ಏಷ್ಯಾಕಪ್‌ ಸೇರಿದಂತೆ ಹಲವು ಸರಣಿಗಳನ್ನು ಆಡಬೇಕಿದ್ದು ಇವುಗಳಲ್ಲೂ ಗುಣಮಟ್ಟದ ಆಟ ಆಡುವತ್ತ ಚಿತ್ತ ಹರಿಸಬೇಕಿದೆ.

ವೈಫಲ್ಯ ಮೆಟ್ಟಿನಿಲ್ಲಬೇಕು

ದ್ವಿಪಕ್ಷೀಯ ಸರಣಿಗಳಲ್ಲಿ ಹುಲಿಯಂತೆ ಗರ್ಜಿಸುವ ಭಾರತ ತಂಡ ಐಸಿಸಿ ಟೂರ್ನಿಗಳಲ್ಲಿ ಮಂಕಾಗಿಬಿಡುತ್ತದೆ. 2015ರ ಏಕದಿನ ವಿಶ್ವಕಪ್‌ ಮತ್ತು 2016ರ ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಸೆಮಿಫೈನಲ್‌ನಲ್ಲಿ ಸೋತಿರುವುದು ಹಾಗೂ 2014ರ ವಿಶ್ವ ಟ್ವೆಂಟಿ–20 ಮತ್ತು 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಮುಗ್ಗರಿಸಿದ್ದು ಇದಕ್ಕೆ ನಿದರ್ಶನ. ಕೊಹ್ಲಿ ಅವರನ್ನು ಬಿಟ್ಟು ಇತರ ಎಲ್ಲಾ ಪ್ರಮುಖ ಆಟಗಾರರು ಈ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿರುವುದನ್ನು ಕಾಣಬಹುದಾಗಿದೆ.

ಪ್ರತಿಭಾನ್ವಿತರಿಗೆ ಕೊರತೆ ಇಲ್ಲ

ಭಾರತದಲ್ಲಿ ಹಲವು ಮಂದಿ ಪ್ರತಿಭಾನ್ವಿತರಿದ್ದಾರೆ. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ವಿಶ್ವಕಪ್‌ಗೆ ಸಮರ್ಥ ತಂಡ ಕಟ್ಟುವ ಉದ್ದೇಶದಿಂದ ನಾಯಕ ಕೊಹ್ಲಿ ಮತ್ತು ಮುಖ್ಯ ಕೋಚ್‌ ರವಿಶಾಸ್ತ್ರಿ ಪ್ರತಿ ಸರಣಿಯಲ್ಲೂ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ರವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜ ಬೌಲಿಂಗ್‌ ಮೊನಚು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಇವರನ್ನು ತಂಡದಿಂದ ಹೊರಗಿಟ್ಟು ಮಣಿಕಟ್ಟಿನ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಅವರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಇವರು ಎಂತಹುದೇ ಪಿಚ್‌ನಲ್ಲಾದರೂ ವಿಕೆಟ್‌ ಉರುಳಿಸಬಲ್ಲೆವು ಎಂಬುದನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರೂಪಿಸಿದ್ದಾರೆ.

ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ಇನಿಂಗ್ಸ್‌ ಆರಂಭಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಆದರೆ ಆಟದಲ್ಲಿ ಸ್ಥಿರತೆ ಕಾಪಾಡಿಕೊಂಡು ಸಾಗಲು ಇವರಿಗೆ ಆಗುತ್ತಿಲ್ಲ. ವಿರಾಟ್‌ ಕೊಹ್ಲಿ ಪ್ರಶ್ನಾತೀತ ಆಟಗಾರನಾಗಿ ಬೆಳೆಯುತ್ತಿದ್ದಾರೆ. ನಾಯಕತ್ವದಲ್ಲೂ ಅವರು ಪರಿಪಕ್ಷತೆ ಗಳಿಸಿದ್ದಾರೆ.

ಆದರೆ ಮಧ್ಯಮ ಕ್ರಮಾಂಕದಲ್ಲಿ ತಂಡದ ಬಲ ಕುಗ್ಗಿದಂತೆ ಕಾಣುತ್ತಿದೆ. ಅಜಿಂಕ್ಯ ರಹಾನೆ ಮತ್ತು ಕೇದಾರ್‌ ಜಾಧವ್‌ ಮಂಕಾಗಿದ್ದಾರೆ. ಶ್ರೇಯಸ್‌ ಅಯ್ಯರ್‌ ಮತ್ತು ಹಾರ್ದಿಕ್‌ ಪಾಂಡ್ಯ ಕೂಡ ಅಬ್ಬರಿಸುತ್ತಿಲ್ಲ. ಕರ್ನಾಟಕದ ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ ಮತ್ತು ದಿನೇಶ್‌ ಕಾರ್ತಿಕ್‌ ‘ಬೆಂಚ್‌’ ಕಾಯುವಂತಾಗಿದೆ.

ವಿಶ್ವಕಪ್‌ ಹೀರೊಗಳಿಗೆ ಅವಕಾಶ?

ಈ ಬಾರಿಯ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದಲ್ಲಿ ಹಲವು ಪ್ರತಿಭಾನ್ವಿತ ಆಟಗಾರರಿದ್ದರು. ಇವರು ಈಗ ಸೀನಿಯರ್‌ ತಂಡದ ಬಾಗಿಲು ತಟ್ಟುತ್ತಿದ್ದಾರೆ. ನಾಯಕ ಪೃಥ್ವಿ ಶಾ, ಮಂಜೋತ್‌ ಕಾಲ್ರಾ, ಟೂರ್ನಿಯ ಶ್ರೇಷ್ಠ ಆಟಗಾರ ಶುಭಮನ್‌ ಗಿಲ್‌, ಸ್ಪಿನ್ನರ್‌ ಅನುಕೂಲ್‌ ರಾಯ್‌, ವೇಗದ ಬೌಲರ್‌ಗಳಾದ ಕಮಲೇಶ್‌ ನಾಗರಕೋಟಿ ಮತ್ತು ಇಶಾನ್‌ ಪೊರೆಲ್‌ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇವರ ಜೊತೆಗೆ ಕರ್ನಾಟಕದ ಮಯಂಕ್‌ ಅಗರವಾಲ್‌ ಕೂಡ ಆಯ್ಕೆ ಸಮಿತಿಯ ಗಮನ ಸೆಳೆಯುತ್ತಿದ್ದಾರೆ. ಮಯಂಕ್‌, ಈ ಬಾರಿಯ ರಣಜಿ ಮತ್ತು ವಿಜಯ್‌ ಹಜಾರೆ ಟ್ರೋಫಿಗಳಲ್ಲಿ ರನ್‌ ಮಳೆ ಸುರಿಸಿದ್ದಾರೆ.

ದೋನಿಗೆ ಸಿಗುತ್ತಾ ಅವಕಾಶ

ಅನುಭವಿ ಆಟಗಾರ ಮಹೇಂದ್ರ ಸಿಂಗ್‌ ದೋನಿ ಮುಂದಿನ ವಿಶ್ವಕಪ್‌ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ಇತ್ತೀಚಿನ ಸರಣಿಗಳಲ್ಲಿ ದೋನಿ ಬ್ಯಾಟಿಂಗ್‌ನಲ್ಲಿ ಮಿಂಚಿಲ್ಲ. ಆದರೆ ವಿಕೆಟ್‌ ಕೀಪಿಂಗ್‌ನಲ್ಲಿ ತಮಗೆ ಯಾರೂ ಸಾಟಿಯಾಗಲಾರರು ಎಂಬುದನ್ನು  ಸಾಬೀತು‍ ಪಡಿಸಿದ್ದಾರೆ. ಏಕದಿನ ಮಾದರಿಯಲ್ಲಿ 400ಕ್ಕೂ ಹೆಚ್ಚು ಔಟ್‌ ಮಾಡಿದ ವಿಶ್ವದ ನಾಲ್ಕನೇ ವಿಕೆಟ್‌ ಕೀಪರ್‌ ಎಂಬ ಹಿರಿಮೆ ಅವರದ್ದಾಗಿದೆ. ವಿಶ್ವಕಪ್‌, ವಿಶ್ವ ಟ್ವೆಂಟಿ–20 ಮತ್ತು ಚಾಂಪಿಯನ್ಸ್‌ ಟ್ರೋಫಿಗಳಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಏಕೈಕ ನಾಯಕ ದೋನಿ.

ನಾಯಕನಾಗಿ ಕೊಹ್ಲಿ ಯಶಸ್ವಿಯಾಗಿರುವುದರ ಹಿಂದೆ ದೋನಿ ಪಾತ್ರವೂ ಮಹತ್ವದ್ದು.  ಕ್ಷೇತ್ರರಕ್ಷಣೆ ವೇಳೆ ಯಾರನ್ನು ಎಲ್ಲಿ ನಿಲ್ಲಿಸಬೇಕು, ಯಾವ ಸಂದರ್ಭದಲ್ಲಿ ಯಾರನ್ನು ಬೌಲಿಂಗ್‌ ಅಥವಾ ಬ್ಯಾಟಿಂಗ್‌ಗೆ ಇಳಿಸಬೇಕು ಹೀಗೆ ಅನೇಕ ವಿಷಯಗಳಲ್ಲಿ ಅವರು ಕೊಹ್ಲಿಗೆ ಸಲಹೆ ನೀಡುತ್ತಾರೆ. ಈ ಕಾರಣದಿಂದಲೇ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಯೂ ಇದೆ.

ವಿಶ್ವಕಪ್‌ನಲ್ಲಿ ಭಾರತದ ಸಾಧನೆ

ವರ್ಷ,ಆತಿಥ್ಯ,ಸಾಧನೆ,ಪಂದ್ಯ,ಗೆಲುವು,ಸೋಲು,ಟೈ,ಫಲಿತಾಂಶವಿಲ್ಲ

1975,ಇಂಗ್ಲೆಂಡ್‌,ಮೊದಲ ಸುತ್ತು,3,1,2,–,–

1979,ಇಂಗ್ಲೆಂಡ್‌,ಮೊದಲ ಸುತ್ತು,3,–,3,–,–

1983,ಇಂಗ್ಲೆಂಡ್‌,ಚಾಂಪಿಯನ್‌,8,6,2,–,–

1987,ಭಾರತ/ಪಾಕಿಸ್ತಾನ,ಸೆಮಿಫೈನಲ್‌,7,5,2,–,–

1992,ಆಸ್ಟ್ರೇಲಿಯಾ/ನ್ಯೂಜಿಲೆಂಡ್‌,ಮೊದಲ ಸುತ್ತು,8,2,5,–,1

1996,ಭಾರತ/ಪಾಕಿಸ್ತಾನ/ಶ್ರೀಲಂಕಾ,ಸೆಮಿಫೈನಲ್‌,7,4,3,–,–

1999,ಇಂಗ್ಲೆಂಡ್‌,ಸೂಪರ್‌ ಸಿಕ್ಸ್‌,8,4,4,–,–

2003,ದಕ್ಷಿಣ ಆಫ್ರಿಕಾ/ಜಿಂಬಾಬ್ವೆ/ಕೆನ್ಯಾ,ರನ್ನರ್ಸ್‌ ಅಪ್‌,11,9,2,–,–

2007,ವೆಸ್ಟ್‌ ಇಂಡೀಸ್‌,ಮೊದಲ ಸುತ್ತು,3,1,2,–,–

2011,ಭಾರತ/ಶ್ರೀಲಂಕಾ/ಬಾಂಗ್ಲಾದೇಶ,ಚಾಂಪಿಯನ್ಸ್‌,9,7,1,1,–

2015,ಆಸ್ಟ್ರೇಲಿಯಾ/ನ್ಯೂಜಿಲೆಂಡ್‌,ಸೆಮಿಫೈನಲ್‌,8,7,1,–,–

*******

ಅಂಕಿ ಅಂಶ

75 ವಿಶ್ವಕಪ್‌ನಲ್ಲಿ ಆಡಿರುವ ಒಟ್ಟು ಪಂದ್ಯಗಳು

46  ಗೆದ್ದಿರುವ ಪಂದ್ಯಗಳು

27 ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ ಸೋತಿದೆ

2  ವಿಶ್ವಕಪ್‌ನಲ್ಲಿ ಗೆದ್ದಿರುವ ಪ್ರಶಸ್ತಿಗಳು

6 ಏಷ್ಯಾಕಪ್‌ನಲ್ಲಿ ಭಾರತ ಜಯಿಸಿರುವ ಟ್ರೋಫಿಗಳು

*******

ಭಾರತ ಆಡಿದ ಹಿಂದಿನ ಕೆಲ ಸರಣಿಗಳ ಫಲಿತಾಂಶ

ದಿನಾಂಕ,ಎದುರಾಳಿ,ಸ್ಥಳ,ಟೆಸ್ಟ್‌ ಸಾಧನೆ,ಏಕದಿನ ಸಾಧನೆ,ಟ್ವೆಂಟಿ–20 ಸಾಧನೆ

ನವೆಂಬರ್‌ 2016–ಫೆಬ್ರುವರಿ 2017,ಇಂಗ್ಲೆಂಡ್‌,ತವರಿನಲ್ಲಿ,4–0 (5),2–1(3),2–1(3)

ಫೆಬ್ರುವರಿ 2017,ಬಾಂಗ್ಲಾದೇಶ,ತವರಿನಲ್ಲಿ,1–0 (1),–,–

ಫೆಬ್ರುವರಿ–ಮಾರ್ಚ್‌ 2017,ಆಸ್ಟ್ರೇಲಿಯಾ,ತವರಿನಲ್ಲಿ,2–1 (4),–,–

ಜೂನ್‌–ಜುಲೈ 2017,ವೆಸ್ಟ್‌ ಇಂಡೀಸ್‌,ತವರಿನ ಹೊರಗೆ,–,3–1(5),0–1 (1)

ಜುಲೈ–ಸೆಪ್ಟೆಂಬರ್‌ 2017,ಶ್ರೀಲಂಕಾ,ತವರಿನ ಹೊರಗೆ,3–0 (3),5–0 (5),1–0 (1)

ಸೆಪ್ಟೆಂಬರ್‌–ಅಕ್ಟೋಬರ್‌ 2017,ಆಸ್ಟ್ರೇಲಿಯಾ,ತವರಿನಲ್ಲಿ,–,4–1 (5),1–1 (3)

ಅಕ್ಟೋಬರ್‌–ನವೆಂಬರ್‌ 2017,ನ್ಯೂಜಿಲೆಂಡ್‌,ತವರಿನಲ್ಲಿ,–,2–1 (3), 2–1 (3)

ನವೆಂಬರ್‌–ಡಿಸೆಂಬರ್‌ 2017,ಶ್ರೀಲಂಕಾ,ತವರಿನಲ್ಲಿ,1–0 (3),2–1(3),3–0 (3)

ಜನವರಿ–ಫೆಬ್ರುವರಿ 13, 2018,ದಕ್ಷಿಣ ಆಫ್ರಿಕಾ,1–2 (3),4–1 (6),1

********

ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ತಂಡದ ಸಾಧನೆ

ವರ್ಷ,ಸಾಧನೆ

1998,ಸೆಮಿಫೈನಲ್‌

2000,ರನ್ನರ್ಸ್‌ ಅಪ್‌

2002,ಜಂಟಿ ಚಾಂಪಿಯನ್ಸ್‌ (ಶ್ರೀಲಂಕಾ ಜೊತೆ)

2004,ಮೊದಲ ಸುತ್ತು

2006,ಮೊದಲ ಸುತ್ತು

2009,ಮೊದಲ ಸುತ್ತು

2013,ಚಾಂಪಿಯನ್ಸ್

2017,ರನ್ನರ್ಸ್‌ ಅಪ್‌

******

ಏಕದಿನ ಮಾದರಿಯಲ್ಲಿ ಭಾರತದ ಸಾಧನೆ

(13 ಜುಲೈ 1974ರಿಂದ 13 ಫೆಬ್ರುವರಿ 2018ರ ಅವಧಿಯಲ್ಲಿ)

ಆಡಿದ ಒಟ್ಟು ಪಂದ್ಯ: 938

ಗೆಲುವು: 482

ಸೋಲು: 409

ಟೈ:7

ಫಲಿತಾಂಶವಿಲ್ಲ: 40

********

ಏಕದಿನ ಮಾದರಿಯಲ್ಲಿ ದೋನಿ ವಿಕೆಟ್‌ ಕೀಪಿಂಗ್‌ ಸಾಧನೆ

ಅವಧಿ: 2004ರಿಂದ ಫೆಬ್ರುವರಿ 13, 2018

ಪಂದ್ಯ: 317

ವಿಕೆಟ್‌:403

ಕ್ಯಾಚ್‌: 296

ಸ್ಟಂಪಿಂಗ್‌: 107

ಪ್ರತಿಕ್ರಿಯಿಸಿ (+)