ಬುಧವಾರ, ಡಿಸೆಂಬರ್ 11, 2019
24 °C

ಶಾಲಾಮಕ್ಕಳ ಮೇಲೆ ಇರಲಿ ನಿಗಾ!

Published:
Updated:
ಶಾಲಾಮಕ್ಕಳ ಮೇಲೆ ಇರಲಿ ನಿಗಾ!

ರಜೆಯ ನಂತರ ಮಕ್ಕಳು ಶಾಲೆಗೆ ಹೋಗುವಾಗ ತಗಾದೆ ತಗೆಯುವುದು ಸಾಮಾನ್ಯ. ಆದರೆ ಕೆಲವೇ ಕೆಲವು ದಿನಗಳ ನಂತರ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡು, ವಾತಾವರಣದ ಖುಷಿ ಅನುಭವಿಸುತ್ತಾರೆ. ಮಕ್ಕಳ ಶಾಲೆಯ ನಿರಾಕರಣೆ (school refusal) ಪಾಲಕರು ಅನುಭವಿಸುವ ಬಹು ಸಾಮಾನ್ಯ ಸಮಸ್ಯೆ. ಇದು ಮಕ್ಕಳು ಪ್ರಥಮ ಬಾರಿಗೆ ಶಾಲೆಗೆ ಹೋಗುವಾಗ, ಶಾಲೆ ಬದಲಾದಾಗ, ರಜೆ ಕಳೆದು ಮರಳಿ ಶಾಲೆ ಆರಂಭವಾದಾಗ ಸಾಮಾನ್ಯವಾಗಿ ಕಂಡುಬರುತ್ತದೆ.

ಮಗು ‘ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ, ನನ್ನನ್ನು ಶಾಲೆಗೆ ಕಳಿಸಬೇಡಿ’ ಎಂದು ಅಂಗಲಾಚಬಹುದು. ಅಳುವುದು, ಪ್ರತಿಭಟಿಸುವುದು ಮಾಡಬಹುದು. ಕೆಲವೊಮ್ಮೆ ‘ಹೊಟ್ಟೆನೋವು, ತಲೆನೋವು’ ಎಂದು ಹೇಳಿ ಶಾಲೆ ತಪ್ಪಿಸುವುದು, ಶಾಲೆಯಲ್ಲಿ ಏನೋ ನೆಪ ಹೇಳಿ ಮನೆಗೆ ಮರಳುವುದು. ಹೀಗೆ ಅನೇಕ ದಿನಗಳವರೆಗೂ ನಡೆಯಬಹುದು. ಸಾಮಾನ್ಯವಾಗಿ ಮಕ್ಕಳ ಶಾಲಾ ನಿರಾಕರಣೆಯು 5ರಿಂದ 6 ಹಾಗೂ 10ರಿಂದ 11ನೇ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ.

ಮಕ್ಕಳು ಶಾಲೆ ಬಿಡುವುದು (Truancy) ಹಾಗೂ ಶಾಲೆಯ ನಿರಾಕರಣೆ ಎರಡಕ್ಕೂ ಒಂದೇ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ಶಾಲಾ ನಿರಾಕರಣೆ ಹಾಗೂ ಶಾಲೆ ಬಿಡುವುದು ಎರಡಕ್ಕೂ ವ್ಯತ್ಯಾಸವಿದೆ. ಶಾಲೆಗೆ ಹೋಗುವುದನ್ನು ನಿರಾಕರಿಸುವ ಮಕ್ಕಳು, ಶಾಲೆಗೆ ಸಂಬಂಧಿಸಿದ ಭಾವನಾತ್ಮಕ ಸಮಸ್ಯೆಗೆ ಒಳಪಟ್ಟಿರುತ್ತಾರೆ. ಆದರೆ ಶಾಲೆ ಬಿಡುವ ಮಕ್ಕಳು, ತಾವು ಗೈರಾಗುವುದನ್ನು ಪಾಲಕರಿಂದ ಮುಚ್ಚಿಡುತ್ತಾರೆ ಹಾಗೂ ಶಾಲೆ ಬಿಟ್ಟಿದ್ದಕ್ಕೆ ಅವರಿಗೆ ಯಾವುದೇ ರೀತಿಯ ಕೊರಗು ಅಥವಾ ಪಶ್ಚಾತ್ತಾಪವಿರುವುದಿಲ್ಲ. ಅಂತಹ ಮಕ್ಕಳು ತರಗತಿಯಿಂದ ಹೊರಗುಳಿದು ದುಶ್ಚಟಗಳನ್ನು ಕಲಿಯವುದು, ಅಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವುದು ಮಾಡುತ್ತಾರೆ. ಈ ಸಮಸ್ಯೆಯು ಸಾಮಾನ್ಯವಾಗಿ ಹದಿಹರೆಯದವರಲ್ಲಿ ಕಂಡುಬರುತ್ತದೆ.

ಕಾರಣಗಳು

ಪಾಲಕರಿಂದ ಬೇರ್ಪಡುವ ಆತಂಕ: ಮಕ್ಕಳು ಮೊದಲ ಬಾರಿಗೆ ಶಾಲೆಗೆ ಹೋಗಬೇಕಾದರೆ, ಸುರಕ್ಷಿತ ಪರಿಸರದಿಂದ ತಿಳಿಯದ ಪರಿಸರಕ್ಕೆ ಕಾಲಿಡುತ್ತವೆ. ಆಗ ಆತಂಕ ಸಹಜ. ಅಲ್ಲಿಯವರೆಗೆ, ಮನೆಯಲ್ಲಿ ದಿನವಿಡೀ ಪಾಲಕರ ಜೊತೆಗೆ ಇರುತ್ತಿದ್ದ ಮಕ್ಕಳು, ಶಾಲೆಯಲ್ಲಿ ದಿನದ ಕೆಲ ಗಂಟೆಗಳವರೆಗೂ ದೂರವಿರಬೇಕಾಗುತ್ತದೆ.  ಆಗ ಹೊಸ ಸ್ಥಳ ಹಾಗೂ ಜನರ ಜೊತೆ ಸಮಯ ಕಳೆಯುವ ಪ್ರಸಂಗ ಬಂದಾಗ ಮಕ್ಕಳು ಶಾಲೆಗೆ ಹೋಗುವುದನ್ನು ನಿರಾಕರಿಸಬಹುದು.

ಪಾಲಕರ ಗಮನ ಸೆಳೆಯಲು: ಮಕ್ಕಳಿಗೆ ಪಾಲಕರ ಗಮನ ತಮ್ಮ ಮೇಲೆ ಕಡಿಮೆಯಾಗಿದೆ ಎಂದೆನಿಸಿದರೆ ಶಾಲೆಗೆ ಹೋಗುವುದನ್ನು ನಿರಾಕರಿಸುವುದರ ಮೂಲಕ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಪಾಲಕರಲ್ಲಿ ಹೊಂದಾಣಿಕೆಯಿಲ್ಲದಾಗ ಅಥವಾ ದಾಂಪತ್ಯ ಕಲಹವಿರುವಾಗ ಮಕ್ಕಳ ಮೇಲೆ ಗಮನ ಕಡಿಮೆಯಾಗಬಹುದು. ಮತ್ತೊಂದು ಮಗು ಹುಟ್ಟಿದಾಗಲೂ, ಸಹಜವಾಗಿಯೇ ಕುಟುಂಬದ ಗಮನವು ಹೊಸ ಅತಿಥಿಯ ಮೇಲಿರುತ್ತದೆ. ಹೀಗಾಗಿ ಹಿರಿಯ ಮಗುವಿಗೆ ಗಮನ ಅಪೇಕ್ಷೆಪಟ್ಟಷ್ಟು ದೊರೆಯದಿದ್ದಾಗ ಹಾಗೂ ಹೊಸ ಸದಸ್ಯನ ಜೊತೆ ಹೊಂದಾಣಿಕೆಯಾಗುವವರೆಗೆ ಮಗುವಿನ ಮನಸ್ಸಿನಲ್ಲಿ ಆತಂಕ ಮನೆಮಾಡಬಹುದು. ಆಗಲೂ ಶಾಲೆ ನಿರಾಕರಣೆ ಮಾಡಬಹುದು.

ಖುಷಿ ಕೊಡದ ಶಾಲೆಯ ಪರಿಸರ: ಶಾಲೆಯ ಪರಿಸರ ಮಕ್ಕಳಿಗೆ ಖುಷಿ ನೀಡದಿದ್ದಲ್ಲಿ, ಶಾಲೆಗೆ ಹೋಗಲು ನಿರಾಕರಿಸುತ್ತಾರೆ. ಓದಿನಲ್ಲಿ ಅಸಫಲತೆ ಅಥವಾ ಅಪಮಾನ ಅನುಭವಿಸಿದರೆ, ಶಾಲೆಯಲ್ಲಿ ಸಹಪಾಠಿಗಳು ಅಥವಾ ಹಿರಿಯ ವಿದ್ಯಾರ್ಥಿಗಳು ಬೆದರಿಸುತ್ತಿದ್ದರೆ ಅಥವಾ ರ್‍ಯಾಗಿಂಗ್ ಇದ್ದರೆ ಶಾಲೆಗೆ ಹೋಗಲು ಇಷ್ಟ ಪಡುವುದಿಲ್ಲ. ಲೈಂಗಿಕ ಕಿರುಕುಳ ಅತಿಸೂಕ್ಷ್ಮ ವಿಚಾರವಾಗಿದ್ದು, ಏಳೆಯ ಮಕ್ಕಳಿಗೆ ಅದರ ಬಗ್ಗೆ ಕಲ್ಪನೆ ಇರುವುದಿಲ್ಲ. ಹೀಗಾದಾಗ, ಅವರು ಆ ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಶಾಲಾ ನಿರಾಕರಣೆಯೂ ಒಂದು ರೀತಿಯ ಪ್ರತಿಕ್ರಿಯೆಯಾಗಿರಬಹುದು. ಆದ್ದರಿಂದ, ಪಾಲಕರು ಮಕ್ಕಳ ಚಟುವಟಿಕೆ ಹಾಗೂ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು.

ಮಕ್ಕಳು ಹೊಟ್ಟೆನೋವು, ತಲೆನೋವು ಅಥವಾ ಇನ್ನಿತರ ಭೌತಿಕ ಸಮಸ್ಯೆಗಳ ನೆಪವೊಡ್ಡಬಹುದು. ವಿಪರೀತವಾಗಿ ಹಟ ಮಾಡುವುದು, ಅಳುವುದು, ಪೋಷಕರಿಗೆ ಯಾವಾಗಲೂ ಅಂಟಿಕೊಂಡಿರುವುದನ್ನು ಮಾಡಬಹುದು. ಕೆಲವರು ಕಾಲಕ್ರಮೇಣ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡು ನಿಯಮಿತವಾಗಿ ಶಾಲೆಗೆ ಹೋಗಲಾರಂಭಿಸಬಹುದು. ಆದರೆ ಇನ್ನೂ ಕೆಲವು ಮಕ್ಕಳಲ್ಲಿ ಈ ಸಮಸ್ಯೆಯು ಸತತವಾಗಿ ಮುಂದುವರಿಯಬಹುದು. ಅಥವಾ ಆಗೊಮ್ಮೆ ಈಗೊಮ್ಮೆ ಕಾಣಿಸಬಹುದು.

ಶಾಲೆಯ ನಿರಾಕರಣೆಗೆ ಖಿನ್ನತೆ, ಆತಂಕ, ಫೋಬಿಯದಂತಹ ಗಂಭೀರ ಸಮಸ್ಯೆಗಳೂ ಕಾರಣವಾಗಿರಬಹುದು. ಶಿಕ್ಷಕರು ಹಾಗೂ ಪಾಲಕರು ಮಗು ಶಾಲೆಗೆ ಹೋಗುವುದನ್ನು ನಿರಾಕರಿಸುತ್ತಿರುವುದಕ್ಕೆ, ಭಾವನಾತ್ಮಕವಾದ ಸಮಸ್ಯೆಯೆಂದಾದರೆ ಅದಕ್ಕೆ ತಕ್ಷಣವೇ ಸ್ಪಂದಿಸಬೇಕು.

ಶಾಲೆಗೆ ಮರಳಿ ಕಳುಹಿಸುವ ಕ್ರಮಗಳು: ಮಕ್ಕಳನ್ನು ಹಂತಹಂತವಾಗಿ ಶಾಲೆಗೆ ಕಳುಹಿಸುವುದು. ಮೊದಲನೇ ದಿನ, ಶಾಲೆಯ ಕಾಂಪೌಂಡ್‌ ಹತ್ತಿರ ಪಾಲಕರು ಮಕ್ಕಳನ್ನು ಕರೆದುಕೊಂಡು ಬರುವುದು. ಎರಡನೇ ದಿನ, ಶಾಲೆಯ ಆವರಣದೊಳಗೆ ಹೋಗುವುದು. ನಂತರ ಶಾಲೆಯ ವಿಶ್ರಾಂತಿ ಪಡೆಯುವ ಕೊಠಡಿಗೆ ಹೋಗುವುದು. ನಂತರ ತರಗತಿಗೆ ಹೋಗುವುದು. ಯಾವ ಶಿಕ್ಷಕರೊಂದಿಗೆ ಮಗು ಭಯವಿಲ್ಲದೇ ಇರುತ್ತದೆಯೋ, ಆ ಶಿಕ್ಷಕರು ಆ ಮಗುವಿನ ನಿಗಾ ವಹಿಸಬೇಕು.

ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿ ಶಾಲೆಯಲ್ಲಿಯೂ, ವಿದ್ಯಾರ್ಥಿ ಆಪ್ತಸಮಾಲೋಚಕರು ಅಥವಾ ವಿದ್ಯಾರ್ಥಿ ಮನಃಶಾಸ್ತ್ರಜ್ಞರು ಇರುತ್ತಾರೆ. ಅವರು ಪ್ರತಿಯೊಬ್ಬ ಮಗುವಿನ ಮಾನಸಿಕ ಅರೋಗ್ಯದ ಮೇಲೆ ನಿಗಾ ಇಟ್ಟಿರುತ್ತಾರೆ. ಏನಾದರೂ ಸಮಸ್ಯೆ ಕಂಡು ಬಂದರೆ ತಕ್ಷಣವೇ ಅದಕ್ಕೆ ಸ್ಪಂದಿಸುತ್ತಾರೆ. ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯಕ್ಕೆ ಕಳಂಕ ಹಾಗೂ ಉದಾಸೀನತೆ ಇದೆ.

ಅದರಲ್ಲೂ ಶಾಲಾ ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕಂತೂ ಸರ್ಕಾರದಿಂದಾಗಲಿ ಅಥವಾ ಸಮಾಜದಿಂದಾಗಲಿ ದೊರೆತ ಗಮನ ನಗಣ್ಯ. ಇತ್ತೀಚಿನ ಕೇಂದ್ರ ಬಜೆಟ್‍ನಲ್ಲಿ ಸರ್ಕಾರವು 130 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆಯ ಮಾನಸಿಕ ಆರೋಗ್ಯಕ್ಕೆ ಮೀಸಲಿಟ್ಟಿರುವ ಮೊತ್ತ ಕೇವಲ 50 ಕೋಟಿ!!

ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಯಲ್ಲಿ, ಶಿಕ್ಷಕರ ಪಾತ್ರ ಅತಿ ಮುಖ್ಯವಾಗುತ್ತದೆ. ಶಿಕ್ಷಕರು ತಮ್ಮ ತರಬೇತಿಯ ಸಮಯದಲ್ಲಿ ಮಕ್ಕಳ ಮನಃಶಾಸ್ತ್ರವನ್ನು ಓದಿರುತ್ತಾರೆ. ಆದರೆ, ಪ್ರತಿ ಶಾಲೆಯಲ್ಲೂ ಆಸಕ್ತಿಹೊಂದಿದ ಶಿಕ್ಷಕ/ಕಿಯನ್ನು ವಿದ್ಯಾರ್ಥಿ ಆಪ್ತಸಮಾಲೋಚಕರನ್ನಾಗಿ ನೇಮಿಸಬೇಕು ಹಾಗೂ ಅವರಿಗೆ ಕಾಲಕಾಲಕ್ಕೆ ತರಬೇತಿ ನೀಡುತ್ತಿರಬೇಕು. ಕೆಲವು ಖಾಸಗಿ ಶಾಲೆಗಳು ಈ ನಿಟ್ಟಿನಲ್ಲಿ ಕೆಲಸಮಾಡುತ್ತಿವೆ. ಆದರೆ ಈ ಕ್ರಮವನ್ನು ಸರಕಾರವು ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲೂ ಜಾರಿಗೆ ತರಬೇಕು. ಇಂದಿನ ಮಕ್ಕಳೇ ದೇಶದ ಭವಿಷ್ಯದ ಆಸ್ತಿ. ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು, ಅವರ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯವನ್ನು ಸದೃಢವನ್ನಾಗಿಸಬೇಕಿದೆ.

ಪರಿಹಾರವೇನು?

ಪಾಲಕರು ಹಾಗೂ ಶಿಕ್ಷಕರು ಒಟ್ಟಾಗಿ ಮಗುವಿನ ಸಮಸ್ಯೆಯ ಬಗ್ಗೆ ಚರ್ಚಿಸಿ, ಪರಿಣತ ಮನೋರೋಗತಜ್ಞ ಅಥವಾ ಮನಃಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ಮಾಡಬೇಕು. ಮಗುವಿನ ಸಮಸ್ಯೆಗನುಸಾರವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.

ಪಾಲಕರ ಪಾತ್ರ: ಪ್ರತಿದಿನ ನಿಮ್ಮ ಮಗುವಿನೊಡನೆ ಕಾಲ ಕಳೆಯಿರಿ. ಆ ಸಮಯದಲ್ಲಿ, ಮಗುವಿನ ಆ ದಿನದ ಆಗುಹೋಗುಗಳ ಬಗ್ಗೆ ಚರ್ಚಿಸಿ. ಶಾಲೆಯಲ್ಲಿ ಏನಾಗುತ್ತಿದೆ. ಶಿಕ್ಷಕರ ಕಾಳಜಿ, ಕಲಿಸುವಿಕೆಯ ಬಗ್ಗೆ ಮಗುವಿನ ಅಭಿಪ್ರಾಯ, ಮಗುವಿನ ಸಹಪಾಠಿಗಳ ಬಗ್ಗೆ ಮಾಹಿತಿಯ ಬಗ್ಗೆ ಮಾತನಾಡಿ. ಮಗುವಿನ ಮಾತುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸಬೇಡಿ. ಏಕೆಂದರೆ ಮಕ್ಕಳು ತಮ್ಮ ಭಾವನೆಗಳನ್ನು, ಅತಿ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ವ್ಯಕ್ತಪಡಿಸಬಹುದು.

ಇತರ ಕ್ರಮಗಳು

ಪಾಲಕರು ಮಗುವಿನ ದಿನಚರಿಯನ್ನು ಮಾಡಿ, ಮಗು ಅದನ್ನು ಪಾಲಿಸುತ್ತಿದೆ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಒಳ್ಳೆಯ ನಡುವಳಿಕೆಯನ್ನು ಪ್ರಶಂಸಿಸಬೇಕು ಹಾಗೂ ಋಣಾತ್ಮಕ ನಡವಳಿಕೆಗಳನ್ನು ಅಲಕ್ಷಿಸಬೇಕು. ಶಿಕ್ಷಕರು, ಪಾಲಕರ ಸಂಪರ್ಕದಲ್ಲಿದ್ದು ಮಗುವಿನ ಬೆಳವಣಿಗೆ, ವರ್ತನೆಯ ಬಗ್ಗೆ ಹೇಳುತ್ತಿರಬೇಕು. ಮಗುವಿನ ಹಾಜರಾತಿಯನ್ನು ಪರೀಶೀಲಿಸುತ್ತಿರಬೇಕು. ಸಂಪೂರ್ಣ ಹಾಜರಾತಿಗೆ ಬಹುಮಾನ, ಪ್ರಶಂಸೆ ದೊರೆಯುವಂತಿರಬೇಕು.

ಪ್ರತಿಕ್ರಿಯಿಸಿ (+)