ರಫೇಲ್‌ ಖರೀದಿಯಲ್ಲಿ ವಿವಾದವಿಲ್ಲ: ನಿರ್ಮಲಾ

7
ರಕ್ಷಣಾ ಇಲಾಖೆ ಕುರಿತು ನಿರ್ಮಲಾ ಸೀತಾರಾಮನ್‌ ಭಾಷಣ

ರಫೇಲ್‌ ಖರೀದಿಯಲ್ಲಿ ವಿವಾದವಿಲ್ಲ: ನಿರ್ಮಲಾ

Published:
Updated:
ರಫೇಲ್‌ ಖರೀದಿಯಲ್ಲಿ ವಿವಾದವಿಲ್ಲ: ನಿರ್ಮಲಾ

ಬೆಂಗಳೂರು: ‘ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದರು.

‘ಭಾರತ ಮತ್ತು ಫ್ರಾನ್ಸ್‌ ಸರ್ಕಾರಗಳ ನಡುವೆ ಆಗಿರುವ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಖಾಸಗಿ ಕಂಪನಿ ಹೆಸರು ‍ಪ್ರಸ್ತಾಪಿಸಲಾಗಿದೆ ಎಂಬುದಾಗಿ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು’ ಎಂದು ರಕ್ಷಣಾ ಸಚಿವರು ಕಿಡಿ ಕಾರಿದರು.

ದಿ ಹಿಂದು ಪತ್ರಿಕೆಯ ದಿ ಹಡಲ್‌– 2018ರಲ್ಲಿ ಭಾಗವಹಿಸಿ ಮಾತನಾಡಿದ ರಕ್ಷಣಾ ಸಚಿವರು ರಫೇಲ್‌ ವಿಮಾನಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಎದ್ದಿರುವ ಅನುಮಾನಗಳನ್ನು ಪರಿಹರಿಸುವ ಪ್ರಯತ್ನ ಮಾಡಿದರು. 

‘ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಅಥವಾ ಖಾಸಗಿ ಸ್ವಾಮ್ಯದ ಕಂಪನಿಗಳ ಹೆಸರನ್ನು ಹೇಳಿಲ್ಲ. ಅವರು ಹೆಸರು ಹೇಳಿದ್ದಾರೆ ಎಂದು ಮಾಡುತ್ತಿರುವ ಆರೋಪ ಅವಿವೇಕತನದ್ದು. ಎಚ್‌ಎಎಲ್‌ ಬಿಟ್ಟು ಖಾಸಗಿಯವರಿಗೆ ಮಣೆ ಹಾಕಲಾಗಿದೆ ಎಂಬ ಆರೋಪವೂ ಸುಳ್ಳು. ಯುಪಿಎ ಅವಧಿಯಲ್ಲೇ ಎಚ್‌ಎಎಲ್‌ ಮುಂದಿಟ್ಟಿದ್ದ ಪ್ರಸ್ತಾವವನ್ನು ಡಾಸೌ ತಿರಸ್ಕರಿಸಿತ್ತು’ ಎಂದೂ ಸಚಿವರು ನುಡಿದರು.

ಎರಡೂ ಸರ್ಕಾರಗಳ ನಡುವಿನ ಒಪ್ಪಂದದ ಅನ್ವಯ ಯಾವ ಕಂಪನಿ ಜೊತೆ ಪೂರಕ ಒಪ್ಪಂದ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಬಂದಾಗ, ಅಲ್ಲಿನ ಕಂಪನಿ ನಮ್ಮ ಸಲಹೆ ಕೇಳಬಹುದು. ಆ ಹಂತದಲ್ಲಿ ಯಾವ ಕಂಪನಿಗಳು ಆಸಕ್ತಿ ತಳೆದಿವೆ ಎಂಬ ವಿವರ ಪಡೆಯಲು ಸರ್ಕಾರ ದಾಖಲೆ ಕೇಳಬಹುದು ಎಂದು ಸಚಿವರು ವಿವರಿಸಿದರು.

ವಿಮಾನದ ಮೂಲ ಮಾದರಿ ಬೆಲೆ ಏಕರೂಪದ್ದಾಗಿರುತ್ತದೆ. ಅದನ್ನು ಯಾವ ಭೌಗೋಳಿಕ ಪ್ರದೇಶದಲ್ಲಿ ಯಾವ ವಾತಾವರಣದಲ್ಲಿ, ಯಾರ ವಿರುದ್ಧ ಬಳಸಲಾಗುತ್ತದೆ ಎಂಬ ಆಧಾರದ ಮೇಲೆ ಬೇಕಿರುವ ಸೌಲಭ್ಯ ಹೊಂದಲು ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಯುಪಿಎ ಅವಧಿಯಲ್ಲೇ ಯೂರೊ ಯುದ್ಧ ವಿಮಾನಗಳ ಜೊತೆ ರಫೇಲ್‌ ಅನ್ನು ಪರಿಗಣಿಸಲಾಗಿತ್ತು. 2011ರಿಂದ 14ರ ಆರಂಭದವರೆಗೂ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳು ಸಾರ್ವಜನಿಕರ ಮುಂದಿದ್ದು, ಆಗ ನಮೂದಿಸಿದ ದರವೇ ಶೇ 300ರಷ್ಟು ಅಧಿಕವಾಗಿತ್ತು ಎಂದೂ ಸಚಿವರು ತಿಳಿಸಿದರು.

ಹಿಂದಿನ ಸರ್ಕಾರದಲ್ಲೇ ರಫೇಲ್‌ ಖರೀದಿ ಒಪ್ಪಂದ ಬಹುತೇಕ ಅಂತಿಮಗೊಂಡಿತ್ತು. ಆದರೆ, ರಕ್ಷಣಾ ಸಚಿವರೇ ಅಡ್ಡಿಯಾದರು. ಇದರಲ್ಲಿ ಏನೋ ಲೋಪವಾಗಿದ್ದು, ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು. ವಾಸ್ತವದಲ್ಲಿ ಬಿಡ್‌ ತೆರೆದ ಬಳಿಕ ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಕ್ಷಣಾ ಸಚಿವರಿಗೆ ಇರುವುದಿಲ್ಲ ಎಂದರು.

‘ಆಗ ರಫೇಲ್‌ ವಿಮಾನ ಒಪ್ಪಂದ ಏರ್ಪಡದ್ದಕ್ಕೆ ಯುಪಿಎ ಸರ್ಕಾರವನ್ನಾಗಲೀ ಅಥವಾ ರಕ್ಷಣಾ ಸಚಿವರನ್ನಾಗಲೀ ಹೊಣೆಗಾರರನ್ನಾಗಿ ಮಾಡುವುದಿಲ್ಲ. ಆದರೆ, ನಮ್ಮ ಒಪ್ಪಂದ ಹಾಗಿತ್ತು, ನಿಮ್ಮ ಒಪ್ಪಂದ ಹೀಗಿದೆ ಎನ್ನುವ ವಾದದಲ್ಲಿ ಅರ್ಥವಿಲ್ಲ’ ಎಂದು ನಿರ್ಮಲಾ ತೀಕ್ಷ್ಣವಾಗಿ ಹೇಳಿದರು.

‘ನಮ್ಮ ಒಪ್ಪಂದದಲ್ಲಿ ತಂತ್ರಜ್ಞಾನ ವರ್ಗಾವಣೆ ಬಗ್ಗೆ ‍ಪ್ರಸ್ತಾಪವಾಗಿತ್ತು. ನಿಮ್ಮ ಒಪ್ಪಂದದಲ್ಲಿ ಅದಿಲ್ಲ ಎಂದು ಹೇಳಲಾಗುತ್ತಿದೆ. ಯಾವುದೇ ವ್ಯವಹಾರದಲ್ಲಿ ತಂತ್ರಜ್ಞಾನ ವರ್ಗಾವಣೆ ಇಡೀ ಒಪ್ಪಂದದ ಒಂದು ಭಾಗ ಅಷ್ಟೆ.  ತಂತ್ರಜ್ಞಾನ ವರ್ಗಾವಣೆ ಆಗಬೇಕೆಂದರೆ ಅಷ್ಟರಮಟ್ಟಿಗೆ ಹೆಚ್ಚಿನ ದರ ಪಾವತಿಸಬೇಕಾಗುತ್ತದೆ’ ಎಂದೂ ಸಚಿವರು ವಿವರಿಸಿದರು.

ದಿ ಹಿಂದು ಸಮೂಹದ ನಿರ್ದೇಶಕ ಎನ್‌. ರವಿ ಸಂವಾದ ನಡೆಸಿದರು.

ದೇಶೀಯವಾಗಿ ಉತ್ಪಾದನೆ

ರಕ್ಷಣಾ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸಲು ಒತ್ತು ನೀಡಲಾಗುತ್ತಿದೆ. ಇದುವರೆಗೆ ಶೇ 60ರಷ್ಟು ರಕ್ಷಣಾ ಉಪಕರಣಗಳನ್ನು ಆಮದು ಮಾಡಲಾಗುತ್ತಿದೆ. ಈಗ ಶೇ 35ರಷ್ಟು ಉತ್ಪನ್ನಗಳನ್ನು ತಯಾರಿಸಲು ಭಾರತದ ಕಂಪನಿಗಳಿಗೆ ಹೊರಗುತ್ತಿಗೆ ನೀಡಲಾಗಿದೆ ಎಂದು ರಕ್ಷಣಾ ಸಚಿವರು ವಿವರಿಸಿದರು.

ನಾಲ್ಕು ವರ್ಷಗಳಲ್ಲಿ 170 ಕಂಪನಿಗಳ ಜೊತೆ ರಕ್ಷಣಾ ಉತ್ಪನ್ನಗಳ ಪೂರೈಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ 120 ಭಾರತೀಯ ಕಂಪನಿಗಳು. ಇದರಿಂದ ಉದ್ಯಮಗಳು ಹಾಗೂ ರಕ್ಷಣಾ ಪಡೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಎರಡು ವರ್ಷಗಳಿಂದ ರಕ್ಷಣಾ ವಲಯದಕ್ಕೆ ಬಜೆಟ್‌ನಲ್ಲಿ ನಿಗದಿಮಾಡಿದ ಅನುದಾನವನ್ನು ಪೂರ್ಣ ಬಳಸಿಕೊಳ್ಳಲಾಗಿದೆ. ಈ ಕಾರಣಕ್ಕೆ ಈ ಸಲ ಶೇ 7ರಷ್ಟು ಹೆಚ್ಚು ಅನುದಾನ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

‘ಇದುವರೆಗೆ ಭಾರತವನ್ನು ನೆರೆಹೊರೆಯವರು ಗಮನಿಸುತ್ತಿದ್ದರು. ಈಗ ನೋಡುವ ದೃಷ್ಟಿ ಬದಲಾಗಿದೆ. ಜಾಗತಿಕವಾಗಿ ಮನ್ನಣೆ ನೀಡಲಾಗುತ್ತಿದೆ. ನಮ್ಮ ಗಡಿಗಳ ರಕ್ಷಣೆಗೆ ನಾವು ಕಟಿಬದ್ಧರಾಗಿದ್ದೇವೆ. ಈ ವಿಷಯದಲ್ಲಿ ರಾಜಿ ಇಲ್ಲ’ ಎಂದರು.

‘ಪಾಕಿಸ್ತಾನಕ್ಕೆ ಕಾಶ್ಮೀರ ಮುಗಿಯದ ವಿವಾದ. ಅದಕ್ಕಾಗಿಯೇ ತಂಟೆ ತೆಗೆಯುತ್ತಿದೆ. ಭಯೋತ್ಪಾದಕರನ್ನು ನುಸುಳಿಸುವ ಅದರ ಪ್ರಯತ್ನವನ್ನು ತಡೆದಿದ್ದೇವೆ. ಸುಮಾರು 200 ಭಯೋತ್ಪಾದಕರನ್ನು ನಾವು ಹತ್ಯೆ ಮಾಡಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry