ಬುಧವಾರ, ಡಿಸೆಂಬರ್ 11, 2019
26 °C

ಬಿಜೆಪಿ ಪರ ಶಿಕ್ಷಕರಿಗೆ ‘ವರ್ಗ ವರ’

ಪಿಟಿಐ Updated:

ಅಕ್ಷರ ಗಾತ್ರ : | |

ಬಿಜೆಪಿ ಪರ ಶಿಕ್ಷಕರಿಗೆ ‘ವರ್ಗ ವರ’

ಜೈಪುರ: ಬಿಜೆಪಿಗೆ ನಿಷ್ಠರಾಗಿರುವ ಶಿಕ್ಷಕರಿಗೆ ಅವರಿಗೆ ಬೇಕಿದ್ದಲ್ಲಿಗೆ ವರ್ಗಾವಣೆ ಮಾಡಲು ರಾಜಸ್ಥಾನದ ಬಿಜೆಪಿ ಸರ್ಕಾರ ನಿರ್ಧರಿಸಿದೆ.

ಬಿಜೆಪಿ ನಾಯಕರಿಗೆ ಮತ್ತು ಪಕ್ಷಕ್ಕೆ ಆಪ್ತರಾದ ಶಿಕ್ಷಕರನ್ನು ಅವರಿಗೆ ಬೇಕಾದ ಅನುಕೂಲಕರ ಸ್ಥಳಗಳಿಗೆ ವರ್ಗಾವಣೆ ಮಾಡುವುದಾಗಿ ಹೇಳಿ ಶಿಕ್ಷಣ ಸಚಿವಾಲಯವು ಪತ್ರ ಬರೆದಿದೆ.

‘ಬಿಜೆಪಿ ಕಾರ್ಯಕರ್ತರು ಅಥವಾ ಪಕ್ಷದ ನಾಯಕರ ಸಂಬಂಧಿಗಳು ಶಿಕ್ಷಕರಾಗಿದ್ದಲ್ಲಿ ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಿಕೊಡಲು ಕೋರಿ ಶಿಫಾರಸು ಪತ್ರ ಕಳಿಸಿ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಯ ರಾಜ್ಯ ಸಚಿವ ವಾಸುದೇವ್‌ ದೇವನಾನಿ ಕಚೇರಿಯಿಂದ ಬಿಜೆಪಿ ಮುಖಂಡರಿಗೆ ಪತ್ರ ಬರೆಯಲಾಗಿದೆ.

ಫೆಬ್ರುವರಿ 16ರಂದು ಬಿಜೆಪಿ ಶಾಸಕರು ಮತ್ತು ಪಕ್ಷದ ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರಕ್ಕೆ ರಾಜಸ್ಥಾನ ಆಡಳಿತ ಸೇವೆಯ (ಆರ್‌ಎಎಸ್‌) ಅಧಿಕಾರಿ ಭರತ್‌ ಕುಮಾರ್‌ ಶರ್ಮಾ ಸಹಿ ಹಾಕಿದ್ದಾರೆ.

ಪಕ್ಷದ ಶಾಸಕರು ಮತ್ತು ಪದಾಧಿಕಾರಿಗಳು ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಬೇಕಾಗದ ನಿಗದಿತ ಶಿಫಾರಸು ಪತ್ರದ ಮಾದರಿಯನ್ನೂ ಇದರೊಂದಿಗೆ ಲಗತ್ತಿಸಲಾಗಿದೆ.

ವಿವಿಧ ಮಾಹಿತಿ ಮತ್ತು ಹಲವು ಕಾಲಂಗಳಿರುವ ಶಿಫಾರಸು ಪತ್ರವನ್ನು ಶಾಸಕರು ಅಥವಾ ಬಿಜೆಪಿ ಜಿಲ್ಲಾ ಅಧ್ಯಕ್ಷರೇ ಭರ್ತಿ ಮಾಡಿ ಇ–ಮೇಲ್‌ ಮೂಲಕ ರವಾನಿಸುವಂತೆ ಮನವಿ ಮಾಡಲಾಗಿದೆ.

ಶಿಕ್ಷಣ ಇಲಾಖೆಯ ಉದ್ಯೋಗಿಯು ಸದ್ಯ ಕೆಲಸ ಮಾಡುತ್ತಿರುವ ಸ್ಥಳ, ವರ್ಗಾವಣೆ ಕೋರಿದ ಜಾಗ, ಪಕ್ಷ, ಶಾಸಕರು ಮತ್ತು ಪದಾಧಿಕಾರಿಗಳ ಜತೆಗಿರುವ ನಂಟು ಇತ್ಯಾದಿ ಮಾಹಿತಿಗಳನ್ನು ಅರ್ಜಿಯಲ್ಲಿ ಭರ್ತಿ ಮಾಡುವಂತೆ ಸೂಚಿಸಲಾಗಿದೆ.

ಉಪ ಚುನಾವಣೆ ಸೋಲಿನ ಪರಿಣಾಮ: ಬಿಜೆಪಿಯ ವಿರುದ್ಧದ ಅಸ್ತ್ರವನ್ನಾಗಿ ಈ ಪ್ರಕರಣವನ್ನು ಕಾಂಗ್ರೆಸ್‌ ಬಳಸಿಕೊಂಡಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಹೀನಾಯ ಸೋಲುಂಡಿರುವ ಬಿಜೆಪಿ ತನ್ನ ಕಾರ್ಯಕರ್ತರನ್ನು ಓಲೈಸಲು ಇಂತಹ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಟೀಕಿಸಿದ್ದಾರೆ.

ಇಂತಹ ಸಂವಿಧಾನಬಾಹಿರ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉಪ ಚುನಾವಣೆ ಸೋಲಿನ ನಂತರ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಕ್ಷದ ವರಿಷ್ಠರ ಆದೇಶಗಳನ್ನು ಪಾಲಿಸುತ್ತಿಲ್ಲ. ಅವರ ಸಿಟ್ಟನ್ನು ಶಮನಗೊಳಿಸುವ ಪ್ರಯತ್ನ ಇದಾಗಿದೆ ಎಂದು ಕಾಂಗ್ರೆಸ್‌ ವಕ್ತಾರೆ ಅರ್ಚನಾ ಶರ್ಮಾ ಆರೋಪಿಸಿದ್ದಾರೆ.

ಪಠ್ಯದಲ್ಲಿ ಇತಿಹಾಸ ಬದಲಿಸಲು ಮುಂದಾಗಿ ಸುದ್ದಿಯಲ್ಲಿದ್ದ ಸಚಿವ ವಾಸುದೇವ್‌ ದೇವನಾನಿ ಅವರು ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತರಾಗಿದ್ದಾರೆ.

ಪ್ರತಿಕ್ರಿಯಿಸಿ (+)