ಮಂಗಳವಾರ, ಡಿಸೆಂಬರ್ 10, 2019
25 °C

ಬಾಹುಬಲಿ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಬಾಹುಬಲಿ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು

ಶ್ರವಣಬೆಳಗೊಳ: ಶ್ರೀ ಕ್ಷೇತ್ರದ ಜೈನ ಮಠ ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಜನಕಲ್ಯಾಣ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದೆ. ಮಸ್ತಕಾಭಿಷೇಕದ ಸಂದರ್ಭವನ್ನು ಬಳಸಿಕೊಂಡು ಆರೋಗ್ಯ ದಾಸೋಹದ ಕೈಂಕರ್ಯವನ್ನೂ ತೊಟ್ಟಿದೆ.

ಕಳಶ ಹರಾಜು ಪ್ರಕ್ರಿಯೆಯಿಂದ ಬರುವ ಹಣವನ್ನು ಜೈನ ಬಸದಿಗಳ ಜೀರ್ಣೋದ್ಧಾರ, ಶೈಕ್ಷಣಿಕ ಹಾಗೂ ಸಾಹಿತ್ಯಕ ಚಟುವಟಿಕೆ ಅಲ್ಲದೆ ಸಮಾಜ ಕಲ್ಯಾಣ ಕಾರ್ಯಗಳಿಗೆ ಬಳಸಲು ಜೈನ ಮಠ ಯೋಜನೆ ರೂಪಿಸಿದೆ. ಪಟ್ಟಣದ ಹೊರವಲಯದ ಹಿರೀಸಾವೆ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಬಾಹುಬಲಿ ಮಕ್ಕಳ ಆಸ್ಪತ್ರೆ ಮತ್ತು ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯೇ ಇದಕ್ಕೆ ಸಾಕ್ಷಿ.

2006ರ ಸಹಸ್ರಮಾನದ ಮೊದಲ ಮಹಾಮಸ್ತಕಾಭೀಷಕದಲ್ಲಿ ರಾಜಸ್ಥಾನದ ಆರ್.ಕೆ.ಮಾರ್ಬರ್ಲ್ಸ್‌ನ ಮಾಲೀಕ ಅಶೋಕ್‌ ಪಾಟ್ನಿ ₹ 1.08 ಕೋಟಿ ದೇಣಿಗೆ ನೀಡಿ ಪ್ರಥಮ ಕಳಶ ಖರೀದಿಸಿದ್ದರು. ಆ ಹಣದಲ್ಲಿ ಬಾಹುಬಲಿ ಮಕ್ಕಳ ಆಸ್ಪತ್ರೆ ನಿರ್ಮಿಸಿ, ಹೋಬಳಿಯ ಸುತ್ತಮುತ್ತಲ ಹಳ್ಳಿಗಳ ಮಕ್ಕಳಿಗೆ ಸೇವೆ ನೀಡಲಾಗುತ್ತಿದೆ.

ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೂ ಮುನ್ನ ನಾಲ್ಕು ವರ್ಷ ಗೊಮ್ಮಟೇಶ್ವರ ಸಂಚಾರಿ ಆಸ್ಪತ್ರೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧ ನೀಡಲಾಗುತ್ತಿತ್ತು.

ಪ್ರಸ್ತುತ ಮಕ್ಕಳ ಆಸ್ಪತ್ರೆಯ ಪಕ್ಕದಲ್ಲಿಯೇ ನವದೆಹಲಿಯ ಐನಾಕ್ಸ್‌ ಗ್ರೂಪ್‌ ಸಿಎಸ್‌ಆರ್‌ ಟ್ರಸ್ಟ್‌, ಸಿದ್ಧೊ ಮಾಲ್‌ ಚಾರಿಟೇಬಲ್‌ ಟ್ರಸ್ಟ್‌ ನೀಡಿದ ಅನುದಾನದಲ್ಲಿ ಅಂದಾಜು ₹ 3 ಕೋಟಿ ವೆಚ್ಚದಲ್ಲಿ ಜನರಲ್‌ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸುವರು.

50 ಹಾಸಿಗೆಗಳ ಎರಡು ಮಹಡಿ ಕಟ್ಟಡದಲ್ಲಿ ಪ್ರಯೋಗಾಲಯ, ಕ್ಷ ಕಿರಣ, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ವಿಭಾಗ, ನೇತ್ರಾ ತಪಾಸಣಾ, ದಂತ ಚಿಕಿತ್ಸಾ, ಮಕ್ಕಳ ವಿಭಾಗ ಆರಂಭಿಸಲಾಗಿದ್ದು. ಶಸ್ತ್ರಚಿಕಿತ್ಸಾ, ಹೃದ್ರೋಗ, ಅರಿವಳಿಕೆ, ಮಕ್ಕಳ ತಜ್ಞರು ಸೇರಿದಂತೆ ಹತ್ತು ತಜ್ಞ ವೈದ್ಯರು ಕಾರ್ಯ ನಿರ್ವಹಿಸುವರು. ತುರ್ತು ಸೇವೆಗೆ ಎರಡು ಆಂಬುಲೆನ್ಸ್‌, ಸಿಬ್ಬಂದಿಗೆ 4 ವಸತಿಗೃಹ ನಿರ್ಮಿಸಲಾಗಿದೆ.

ಬೆಳಗೊಳದ ಹೋಬಳಿಯ ಸುತ್ತಮುತ್ತಲ ಹಳಿಗಳಲ್ಲದೇ, ತುರವೇಕೆರೆ, ಚನ್ನರಾಯಪಟ್ಟಣ, ಹಿರೀಸಾವೆ, ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕಿನ ಜನರಿಗೂ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಬೆಂಗಳೂರು, ಮಂಡ್ಯ, ಹುಬ್ಬಳ್ಳಿ, ಇಂದೋರ್‌ನಿಂದ ದಾನಿಗಳು ಔಷಧಗಳನ್ನು ಪೂರೈಸಿದ್ದಾರೆ.

‘ 2006ರ ಮಹಾಮಸ್ತಕಾಭಿಷೇಕದಲ್ಲಿ ಕಳಶ ಹರಾಜಿನಿಂದ ಬಂದ ಹಣದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಿಸಿ ಸೇವೆ ನೀಡಲಾಗುತ್ತಿದೆ. 50 ಹಾಸಿಗೆಗಳ ಆಸ್ಪತ್ರೆ ನಿರ್ಮಾಣದಿಂದ ಬಡವರು, ಮಧ್ಯಮವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಧರ್ಮಶಾಲಾ ನಿರ್ಮಿಸುವ ಯೋಜನೆ ಇದೆ’ ಎಂದು ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಪಾರ್ಶ್ವನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹೋತ್ಸವದ ಅಂಗವಾಗಿ ಆರು ತಿಂಗಳಿನಿಂದ 17 ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಉಚಿತ ಕೃತಕ ಹಲ್ಲಿನ ಸೆಟ್‌ ವಿತರಣೆ, ಕೃತಕ ಕಾಲು ಜೋಡಣಾ ಶಿಬಿರ, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗಿದೆ. ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ಕ್ಯಾನ್ಸರ್‌ ಹಾಗೂ ಬೆಂಗಳೂರಿನ ದಂತ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ದಂತ ತಪಾಸಣಾ ಶಿಬಿರ ನಡೆಸಿ, ಉಚಿತವಾಗಿ ಸಲಕರಣೆ ನೀಡಲಾಗಿದೆ’ ಎಂದು ವಿವರಿಸಿದರು.

‘ಧಾರ್ಮಿಕ ಕಾರ್ಯಕ್ರಮದ ಜತೆಗೆ ಜನಕಲ್ಯಾಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಈ ಬಾರಿಯ ಕಳಶ ಹರಾಜಿನಿಂದ ಬಂದ ದೇಣಿಗೆಯಲ್ಲಿ 50 ಹಾಸಿಗೆಗಳ ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ನೀಡುವುದಾಗಿಯೂ ಪ್ರಥಮ ಕಳಶ ಪಡೆದ ಅಶೋಕ್ ಪಾಟ್ನಿ ಪರಿವಾರದವರು ಭರವಸೆ ಮಾಡಿದ್ದಾರೆ’ ಎಂದು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಮಕ್ಕಳಿಗೆ 200 ಎಂಎಲ್‌ ಉಚಿತ ಹಾಲು

2007ರಿಂದ ಕಾರ್ಯನಿರ್ವಹಿಸುತ್ತಿರುವ ಬಾಹುಬಲಿ ಮಕ್ಕಳ ಆಸ್ಪತ್ರೆಯಲ್ಲಿ ಈ ವರೆಗೆ 1.50 ಲಕ್ಷ ಮಕ್ಕಳಿಗೆ ಆರೋಗ್ಯ ಸೇವೆ ನೀಡಲಾಗಿದೆ. ಎರಡು ವರ್ಷಗಳಿಂದ 200 ಎಂಎಲ್‌ ಗುಡ್‌ಲೈಫ್‌ ನಂದಿನಿ ಹಾಲನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಪ್ರಯೋಗಾಲಯದ ವಿವಿಧ ಪರೀಕ್ಷೆಗಳಿಗೆ ಶೇ 50ರಷ್ಟು ರಿಯಾಯಿತಿ ಇದ್ದು, ಔಷಧಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದೆ.

ಮಸ್ತಕಾಭಿಷೇಕಕ್ಕೆ 3ನೇ ಪ್ರಧಾನಿ ಭೇಟಿ

ಬಾಹುಬಲಿ ಮಹಾಮಜ್ಜನೋತ್ಸವಕ್ಕೆ ಸಾಕ್ಷಿಯಾಗುತ್ತಿರುವ ಮೂರನೇ ಪ್ರಧಾನಿ ಎನಿಸಲಿದ್ದಾರೆ ನರೇಂದ್ರ ಮೋದಿ. 1981ರ ಫೆಬ್ರವರಿಯಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕರ್ನಾಟಕದ ಮುಖ್ಯಮಂತ್ರಿ ಆರ್‌.ಗುಂಡುರಾವ್‌ ಜತೆ ಆಗಮಿಸಿದ್ದರು. ಆಗ ಹೆಲಿಕಾಪ್ಟರ್‌ನಲ್ಲಿ ಬಾಹುಬಲಿಗೆ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು. ನಂತರ 1993ರ ಮಾರ್ಚ್‌ನಲ್ಲಿ ಪಿ.ವಿ.ನರಸಿಂಹರಾವ್‌ ಅವರು ಮಸ್ತಕಾಭಿಷೇಕಕ್ಕೆ ಆಗಮಿಸಿದ್ದರು. 1951ರಲ್ಲಿ ಜವಾಹರಲಾಲ್‌ ನೆಹರು ಅವರು ಬಾಹುಬಲಿ ದರ್ಶನಕ್ಕೆ ತಮ್ಮ ಪುತ್ರಿ ಪ್ರಿಯದರ್ಶಿನಿ ಇಂದಿರಾಗಾಂಧಿ ಜತೆ ಬಂದಿದ್ದರು. ಆದರೆ, ಆ ಸಂದರ್ಭದಲ್ಲಿ ಮಸ್ತಕಾಭಿಷೇಕ ಇರಲಿಲ್ಲ.

ಚಾವುಂಡರಾಯ ವೇದಿಕೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ₹ 42 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 630 ನೂತನ ಮೆಟ್ಟಿಲು, ವಿಂಧ್ಯಗಿರಿ ಸುತ್ತದ 5 ಕಿ.ಮೀ. ಬೇಲಿ ನಿರ್ಮಾಣ ಹಾಗೂ ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನೂ ಪ್ರಧಾನಿಯವರು ಸೋಮವಾರ ಉದ್ಘಾಟಿಸುವರು.

ಪ್ರತಿಕ್ರಿಯಿಸಿ (+)