ಸಭಾಪತಿ ಪೀಠದ ಮುಂದೆ ಪ್ರತಿಭಟನೆ

7
ವಾರಾಹಿ ನದಿಯಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ಯೋಜನೆ

ಸಭಾಪತಿ ಪೀಠದ ಮುಂದೆ ಪ್ರತಿಭಟನೆ

Published:
Updated:

ಬೆಂಗಳೂರು: ವಾರಾಹಿ ನದಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ₹122.50 ಕೋಟಿ ಯೋಜನೆಯ ಟೆಂಡರ್‌ ರದ್ದುಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ್‌ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಗುರುವಾರ ಸಭಾಪತಿ ಪೀಠದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ, ‘ಕೊಳವೆ ಮಾರ್ಗ ಹಾದು ಹೋಗುವ ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸದೆ ನೇರವಾಗಿ ಉಡುಪಿಗೆ ಕೊಂಡೊಯ್ದು ಶುದ್ಧೀಕರಿಸಿ ಒದಗಿಸುವ ಔಚಿತ್ಯವೇನು?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ಬೇಗ್‌, 'ಪೈಪ್‌ಲೈನ್‌ ಹಾದುಹೋಗುವ ಮಾರ್ಗ ಮಧ್ಯೆ ಬರುವ ಗ್ರಾಮಗಳಿಗೆ ಕಚ್ಚಾ ಕುಡಿಯುವ ನೀರು ನೀಡಲಾಗುವುದು’ ಎಂದರು.

ಇದನ್ನು ಆಕ್ಷೇಪಿಸಿದ ಪ್ರತಾಪಚಂದ್ರ ಶೆಟ್ಟಿ ಮತ್ತು ಮತ್ತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಟೆಂಡರ್‌ ರದ್ದುಪಡಿಸುವಂತೆ ಪಟ್ಟು ಹಿಡಿದು, ಸಭಾಪತಿ ಪೀಠದ ಮುಂದಿನ ಆವರಣಕ್ಕೆ ಹೋಗಿ ಪ್ರತಿಭಟಿಸಿದರು.

ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಪೈಪ್‌ಲೈನ್‌ ಹಾದುಹೋಗುವ ಮಾರ್ಗದ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸುವಂತೆ ಯೋಜನೆ ಮಾರ್ಪಡಿಸುವಂತೆ ಸಲಹೆ ನೀಡಿದರು. ಇದನ್ನು ಸ್ವಾಗತಿಸಿದ ಸಚಿವರು, ಇಲಾಖೆ ಅಧಿಕಾರಿಗಳ ಸಭೆ ಕರೆದು ತಕ್ಷಣ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ನಂತರ ಇಬ್ಬರು ಸದಸ್ಯರು ಪ್ರತಿಭಟನೆ ಕೈಬಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry