ಶುಕ್ರವಾರ, ಡಿಸೆಂಬರ್ 13, 2019
27 °C

ಸಚಿವ ಖಾದರ್ ಕ್ಷೇತ್ರದಲ್ಲಿ ಚಕ್ರವ್ಯೂಹ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಸಚಿವ ಖಾದರ್ ಕ್ಷೇತ್ರದಲ್ಲಿ ಚಕ್ರವ್ಯೂಹ

ಮಂಗಳೂರು: ಸಚಿವ ಯು.ಟಿ. ಖಾದರ್‌ ಪ್ರತಿನಿಧಿಸುತ್ತಿರುವ ಮಂಗಳೂರು ಕ್ಷೇತ್ರ ಇದೀಗ ಪ್ರತಿಷ್ಠೆಯ ಕಣವಾಗಿ ಪರಿಣಮಿಸುತ್ತಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಶತಾಯಗತಾಯ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಪೈಪೋಟಿ ನಡೆಸುತ್ತಿದೆ. ಇದರ ಮಧ್ಯೆ ಸಚಿವ ಖಾದರ್‌ ಅವರಿಗೆ ಪ್ರಬಲ ಸ್ಪರ್ಧೆ ನೀಡುವುದಕ್ಕಾಗಿ ಪ್ರತಿಪಕ್ಷಗಳೆಲ್ಲ ಒಟ್ಟಾಗಿ ನಿಂತಿವೆ.

ಮುಸ್ಲಿಂ ಸಮುದಾಯದ ಮತಗಳೇ ಹೆಚ್ಚಾಗಿರುವ ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಸಚಿವ ಖಾದರ್‌ ಅವರ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ಯೋಜನೆಯೊಂದು ತೆರೆಮರೆಯಲ್ಲಿ ರೂಪುಗೊಳ್ಳುತ್ತಿದೆ. ಸಚಿವ ಖಾದರ್‌ ಪ್ರಬಲ ಮುಸ್ಲಿಂ ನಾಯಕರಾಗಿ ಬೆಳೆಯುತ್ತಿರುವುದು ಆಡಳಿತ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಪ್ರತಿಪಕ್ಷಗಳ ಸಿದ್ಧತೆಗೆ, ಆಡಳಿತ ಪಕ್ಷದ ಕೆಲ ನಾಯಕರೂ ಬೆಂಗಳೂರಿನಿಂದಲೇ ಬೆಂಬಲ ನೀಡುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಈ ಬಾರಿ ಖಾದರ್ ಅವರನ್ನು ಸೋಲಿಸುವ ಮೂಲಕ ರಾಜಕೀಯವಾಗಿ ಅವರಿಗೆ ಹಿನ್ನಡೆ ಉಂಟು ಮಾಡಲು ರಾಜ್ಯಮಟ್ಟದ ಕೆಲ ಕಾಂಗ್ರೆಸ್‌ ನಾಯಕರೂ ಯೋಜನೆ ರೂಪಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಪ್ರತಿಪಕ್ಷಗಳ ಜತೆಗೂ ಈ ನಾಯಕರು ಬೆಂಗಳೂರಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ. ಅಶ್ರಫ್‌ ಇದೀಗ ಸಚಿವ ಯು.ಟಿ. ಖಾದರ್ ಅವರ ವಿರುದ್ಧ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಮುಸ್ಲಿಂ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅಶ್ರಫ್‌ ಅವರು ಮುಸ್ಲಿಂ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ಸಾಧ್ಯತೆಗಳಿವೆ.

ಇದರ ಜತೆಗೆ ಬಿಜೆಪಿ ಕೂಡ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನೇ ಈ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಸ್ಪರ್ಧೆಗೆ ಸಿದ್ಧರಾಗುವಂತೆ ರಹಿಂ ಉಚ್ಚಿಲ್‌ ಅವರಿಗೆ ಈಗಾಗಲೇ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಎಸ್‌ಡಿಪಿಐ ಕೂಡ ಸ್ಪರ್ಧೆ ಮಾಡಲಿದ್ದು, ನಾಲ್ಕು ಪ್ರಮುಖ ಪಕ್ಷಗಳಿಂದಲೂ ಮುಸ್ಲಿಂ ಅಭ್ಯರ್ಥಿಗಳು ಅಖಾಡಕ್ಕೆ ಇಳಿಯುವುದು ಬಹುತೇಕ ನಿಶ್ಚಿತವಾಗಿದೆ.

ಕೆಂಗಣ್ಣಿಗೆ ಗುರಿಯಾದ ಖಾದರ್ ಬೆಳವಣಿಗೆ: ಯು.ಟಿ. ಖಾದರ್‌ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಪ್ರಬಲ ಮುಸ್ಲಿಂ ನಾಯಕರಾಗಿ ಹೊರಹೊಮ್ಮುತ್ತಿರುವುದು ಕಾಂಗ್ರೆಸ್‌ ಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ.

ಎಐಸಿಸಿ ಮಟ್ಟದಲ್ಲಿಯೂ ಖಾದರ್‌ ಅವರ ಪ್ರಭಾವ ಬೆಳೆಯುತ್ತಿದೆ. ಇದರಿಂದಾಗಿಯೇ ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಖಾದರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಇನ್ನೊಂದೆಡೆ ಆರೋಗ್ಯ, ಆಹಾರದಂತಹ ಪ್ರಮುಖ ಖಾತೆಗಳನ್ನೇ ಖಾದರ್‌ ನಿರ್ವಹಿ ಸುತ್ತಿದ್ದು, ಜನರ ಜತೆಗೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ಇದೆಲ್ಲವೂ ಸ್ವಪಕ್ಷೀ ಯರಲ್ಲಿಯೇ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಇನ್ನೊಂದೆಡೆ ಖಾದರ್‌ ಅವರಿಗೆ ಮುಸ್ಲಿಂ ಸಮುದಾಯದ ಹೊರತಾಗಿಯೂ ಬೇರೆ ಸಮುದಾಯದವರ ಬೆಂಬಲವಿದ್ದು, ವಿರೋಧಿಗಳ ಆತಂಕಕ್ಕೆ ಕಾರಣವಾಗಿದೆ. ಸ್ವತಃ ಖಾದರ್‌ ಕೂಡ ಎಲ್ಲ ಸಮುದಾಯದವರ ಜತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದು, ಆತ್ಮವಿಶ್ವಾಸವೂ ಸ್ವಲ್ಪ ಹೆಚ್ಚಾಗಿಯೇ ಇದೆ.

ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಖಾದರ್‌, ‘ನನ್ನ ಕ್ಷೇತ್ರದಲ್ಲಿ ಯಾರೇ ಸ್ಪರ್ಧಿಸಲಿ, ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು, ಸ್ಥಳೀಯ ಸಂಸ್ಥೆ ಗಳ ಜನಪ್ರತಿನಿಧಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಮತದಾರರೂ ನನಗೆ ಆಶೀರ್ವದಿಸುವ ವಿಶ್ವಾಸ ಇದೆ’ ಎನ್ನುತ್ತಾರೆ.

‘ಕೆ. ಅಶ್ರಫ್‌ ಅವರು ನನ್ನ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ, ಅವರನ್ನು ಸ್ವಾಗತಿಸುತ್ತೇನೆ. ನಾಮಪತ್ರದ ಜತೆಗೆ ಸಲ್ಲಿಸಬೇಕಾದ ಶುಲ್ಕವನ್ನೂ ನಮ್ಮ ಕಾರ್ಯಕರ್ತರೇ ಭರಿಸುತ್ತಾರೆ. ಅವರಿಗೆ ಹಳ್ಳಿಗಳ ಪರಿಚಯ ಇಲ್ಲದೇ ಇದ್ದರೆ, ನಮ್ಮ ಕಾರ್ಯಕರ್ತರೇ ಅವರನ್ನು ಕ್ಷೇತ್ರದ ಪ್ರವಾಸಕ್ಕೆ ಕರೆದೊಯ್ಯಲಿದ್ದಾರೆ’ ಎನ್ನುವ ಮೂಲಕ ಅಶ್ರಫ್‌ ಅವರ ಸ್ಪರ್ಧೆಯಿಂದ ಎದೆಗುಂದುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

* * 

ನಾನು ಅಭ್ಯರ್ಥಿಗಳನ್ನು ನೋಡಿ ಸ್ಪರ್ಧಿಸುವುದಿಲ್ಲ. ನಮ್ಮ ಮತದಾರರನ್ನು ನೋಡಿ ಸ್ಪರ್ಧೆ ಮಾಡುತ್ತೇನೆ. ನನ್ನ ವಿರುದ್ಧ ಯಾರು ಸ್ಪರ್ಧಿಸಿದರೂ ಸ್ವಾಗತ ಯು.ಟಿ. ಖಾದರ್‌ ಸಚಿವ

ಪ್ರತಿಕ್ರಿಯಿಸಿ (+)