ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯುವ ಖುಷಿ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿಜ್ಞಾನದ ಕುರಿತು ಆಸಕ್ತಿ ಬೆಳೆಸುವಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ಕೊಡುವ ‘ಪ್ರಾಜೆಕ್ಟ್‌’ಗಳ ಪಾತ್ರ ದೊಡ್ಡದು. ಮಗುವಿನ ಪ್ರಾಜೆಕ್ಟ್ ಮಾಡಿಕೊಡಲು ಅಪ್ಪ, ಅಮ್ಮ, ಅಜ್ಜಿ, ತಾತ, ಅಕ್ಕ, ಅಣ್ಣ ಹೀಗೆ ಇಡೀ ಕುಟುಂಬ ಶ್ರಮಿಸುತ್ತದೆ. ಈ ಮೂಲಕ ಮಗುವಿನ ಜೊತೆಗೆ ದೊಡ್ಡವರೂ ವಿಜ್ಞಾನ ತಿಳಿದುಕೊಳ್ಳುತ್ತಾರೆ. ಶಾಲಾ ದಿನಗಳಲ್ಲಿ ಕಲಿತಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಕೆಲ ಪೋಷಕರು ‘ಇದೊಂದು ಇಲ್ಲದ ಉಸಾಬರಿ, ಮಕ್ಕಳಿಗೆ ಕಲಿಸಬೇಕಾದ್ದು ಮೇಷ್ಟ್ರುಗಳ ಕೆಲಸ. ಪ್ರಾಜೆಕ್ಟ್ ನೆಪದಲ್ಲಿ ಅದನ್ನು ನಮ್ಮ ತಲೆಗೆ ಕಟ್ಟುತ್ತಿದ್ದಾರೆ’ ಎಂದು ಗೊಣಗುತ್ತಾರೆ. ಆದರೆ ಶಿಕ್ಷಕರು ಈ ಮಾತು ಒಪ್ಪುವುದಿಲ್ಲ.

‘ಕಪ್ಪು ಬಣ್ಣ ಹೆಚ್ಚು ಶಾಖ ಹೀರಿಕೊಳ್ಳುತ್ತದೆ ಎಂದು ತರಗತಿಯಲ್ಲಿ ಪಾಠ ಮಾಡ್ತೀವಿ. ಅದನ್ನು ಮಕ್ಕಳಿಗೆ ಸುಲಭವಾಗಿ ತಿಳಿಸಲು ಬೇರೆಬೇರೆ ಬಣ್ಣದ ಏಳು ಹಲಗೆಗಳನ್ನು ಬಿಸಿಲಿನಲ್ಲಿ ಇಟ್ಟು, ಮಕ್ಕಳಿಂದ ಮುಟ್ಟಿಸ್ತೀವಿ. ಕಪ್ಪುಬಣ್ಣದ ಹಲಗೆ ಹೆಚ್ಚು ಬಿಸಿಯಾಗಿರುವುದು ಮಕ್ಕಳ ಅನುಭವಕ್ಕೆ ಬರುತ್ತದೆ. ಆಗ ಪಾಠವೂ ಮನದಟ್ಟಾಗುತ್ತದೆ. ಇದೇ ರೀತಿ ಕೇಂದ್ರದಿಂದ ದೂರಕ್ಕೆ ಚಿಮ್ಮುವ ಶಕ್ತಿ (ಸೆಂಟ್ರಿಫ್ಯುಗಲ್ ಫೋರ್ಸ್), ನ್ಯೂಟನ್‌ನ ಮೂರನೇ ನಿಯಮ, ಬಾರ್ಟನ್‌ನ ಪೆಂಡುಲಮ್ ನಿಯಮ, ಕ್ಯಾಮೆರಾ, ಗಡಿಯಾರದ ಹಿಂದಿನ ವಿಜ್ಞಾನ ವಿವರಿಸಲು ಮಾದರಿಗಳನ್ನು ಬಳಸಿಕೊಳ್ಳುತ್ತೇವೆ. ಹೋಂ ವರ್ಕ್‌ ಆಗಿ ಪ್ರಾಜೆಕ್ಟ್ ಮಾಡಿಕೊಂಡು ಬರಲು ಸೂಚಿಸುತ್ತೇವೆ’ ಎನ್ನುತ್ತಾರೆ ಈಜೀಪುರ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಎಂ.ವಿಮಲ.

ಶಾಲೆಗಳಲ್ಲಿ ಶಿಕ್ಷಕರು, ಮನೆಗಳಲ್ಲಿ ಪೋಷಕರ ನೆರವಿನಿಂದ ವಿಜ್ಞಾನ ಮಾದರಿಗಳನ್ನು ರೂಪಿಸಲಾಗುತ್ತಿದೆ. ಆದರೆ ಈಚೆಗೆ ಪ್ರಾಜೆಕ್ಟ್ ಮಾಡಿಕೊಡುವ ಕುಶಲಕರ್ಮಿಗಳು ಅಲ್ಲಲ್ಲಿ ಕಾಣಸಿಗುತ್ತಾರೆ. ‘ಮಕ್ಕಳಿಗೆ ವಿಜ್ಞಾನ ಪ್ರಾಜೆಕ್ಟ್ ಮಾಡಿಕೊಡಲಾಗುವುದು’ ಎಂಬ ಫಲಕಗಳೂ ಅಲ್ಲಲ್ಲಿ ಕಾಣಸಿಗುತ್ತವೆ.

‘ಗ್ರಹಗಳು, ಉಲ್ಕಾವೃಷ್ಟಿ, ಸರಳ ಯಂತ್ರಗಳು ಮತ್ತು ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳನ್ನು ನಾವೇ ಮಾಡಿಕೊಳ್ಳಬಹುದು. ಆದರೆ ನವೀಕರಿಬಹುದಾದ ಶಕ್ತಿಯ ಮೂಲಗಳು, ಮಾಲಿನ್ಯ ನಿಯಂತ್ರಣ, ಜೀವ ವೈವಿಧ್ಯ ಸಂರಕ್ಷಣೆ, ಉಪಗ್ರಹಗಳನ್ನು ಪ್ರದರ್ಶಿಸುವಾಗ ಮಾದರಿಗಳನ್ನು ತಯಾರಿಸಿಕೊಡುವ ವೃತ್ತಿಪರರ ಅವಲಂಬನೆ ಅನಿವಾರ್ಯವಾಗುತ್ತದೆ’ ಎನ್ನುತ್ತಾರೆ ಶಿಕ್ಷಕರಾದ ಅಸ್ಟಿನ್‌ಟೌನ್‌ ನಿವಾಸಿ ರಾಕೇಶ್.

ಕೆಲ ವಿಜ್ಞಾನ ಮಾದರಿಗಳನ್ನು ಮನೆಗಳಲ್ಲಿ ಸುಲಭವಾಗಿ ತಯಾರಿಸಲು ಸಾಧ್ಯವಾಗುವುದಿಲ್ಲ. ಅಗತ್ಯ ಕಚ್ಚಾವಸ್ತುಗಳು ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ವಿಜ್ಞಾನ ಉಪಕರಣಗಳ ತಯಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿರುವವರು ಪೋಷಕರ ನೆರವಿಗೆ ಬರುತ್ತಾರೆ. ಜೆ.ಪಿ.ನಗರ ಏಳನೇ ಹಂತದ ನಿವಾಸಿ ಭಕ್ತಿ ಅಗರವಾಲ್ ಅಂಥವರ ಪೈಕಿ ಒಬ್ಬರು.

‘ಶಾಲಾ ಹಂತದ ಮಕ್ಕಳಿಗೆ ಥರ್ಮಾಕೋಲ್, ಕಾಗದ ಬಳಸಿ ಮಾದರಿಗಳನ್ನು ತಯಾರಿಸಿ ಕೊಡಲಾಗುವುದು. ಶಾಲಾ ಶಿಕ್ಷಕರು, ‍ಪೋಷಕರು ತಮ್ಮ ಮಕ್ಕಳಿಗೆ ಬೇಕಾದ ವಿಜ್ಞಾನ ಮಾದರಿ ತಯಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಳ್ಳುತ್ತಾರೆ. ಆವೆನ್ಯೂ ರಸ್ತೆ, ಸಿಟಿ ಮಾರ್ಕೆಟ್‌ನ ಮಳಿಗೆಗಳನ್ನು ಹುಡುಕಾಡಿ ಅಗತ್ಯ ವಸ್ತುಗಳನ್ನು ತರುತ್ತೇನೆ. ಇದು; ತಾಳ್ಮೆ ಮತ್ತು ಸಮಯ ಬೇಡುವ ಕೆಲಸ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT