ಫೈನಲ್‌ಗೆ ವಿನೇಶ ಪೋಗಟ್‌

ಬುಧವಾರ, ಮಾರ್ಚ್ 20, 2019
23 °C

ಫೈನಲ್‌ಗೆ ವಿನೇಶ ಪೋಗಟ್‌

Published:
Updated:
ಫೈನಲ್‌ಗೆ ವಿನೇಶ ಪೋಗಟ್‌

ಬಿಷಕೆಕ್‌, ಕಿರ್ಗಿಸ್ತಾನ: ಭಾರತದ ವಿನೇಶ ಪೋಗಟ್‌, ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗ್ರಿಕೊ ರೋಮನ್‌ ವಿಭಾಗದ ಕುಸ್ತಿಪಟುಗಳಾದ ಹರಪ್ರೀತ್‌ ಸಿಂಗ್‌ ಮತ್ತು ರಾಜೇಂದ್ರ ಕುಮಾರ್‌ ಅವರು ಕಂಚಿಗೆ ಕೊರಳೊಡ್ಡಿದ್ದಾರೆ.

ಗುರುವಾರ ನಡೆದ ಮಹಿಳೆಯರ 50 ಕೆ.ಜಿ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ವಿನೇಶ, ಜಪಾನ್‌ನ ಯೂಕಿ ಇರಿಯೆ ಅವರನ್ನು ಸೋಲಿಸಿದರು.

2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿರುವ ವಿನೇಶ, ಬಲಿಷ್ಠ ಪಟ್ಟುಗಳ ಮೂಲಕ ಎದುರಾಳಿಯನ್ನು ನೆಲಕ್ಕೆ ಉರುಳಿಸಿ ಪಾಯಿಂಟ್ಸ್‌ ಕಲೆಹಾಕಿದರು. ಚಿನ್ನದ ಪದಕದ ಹೋರಾಟದಲ್ಲಿ ವಿನೇಶ, ಚೀನಾದ ಚುನ್‌ ಲೆಯಿ ವಿರುದ್ಧ ಆಡಲಿದ್ದಾರೆ.

ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿರುವ ಸಂಗೀತಾ, ಕ್ವಾರ್ಟರ್‌ ಫೈನಲ್‌ನಲ್ಲಿ 5–15ರಿಂದ ಉಜ್‌ಬೆಕಿಸ್ತಾನದ ನಬಿರಾ ಎಸೆನ್‌ಬಯೆವಾ ವಿರುದ್ಧ ಸೋತರು.

ಕಂಚಿನ ಪದಕದ ಹಣಾಹಣಿಯಲ್ಲಿ ಸಂಗೀತಾ, ಕೊರಿಯಾದ ಜಿಯೆವುನ್‌ ಯುಮ್‌ ವಿರುದ್ಧ ಆಡುವರು.

ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಲಲಿತ, ಕ್ವಾರ್ಟರ್ ‍ಫೈನಲ್‌ ಹೋರಾಟದಲ್ಲಿ 0–5ರಿಂದ ಮಂಗೋಲಿಯಾದ ದವಾಚಿಮೆಗ್‌ ಎಖೆಮಬೇಯರ್‌ ವಿರುದ್ಧ ನಿರಾಸೆ ಕಂಡರು.

ಹರಪ್ರೀತ್‌ಗೆ ಕಂಚು: ಗ್ರಿಕೊ ರೋಮನ್‌ ಕುಸ್ತಿಪಟು ಹರಪ್ರೀತ್‌ ಸಿಂಗ್‌, ಪುರುಷರ 82 ಕೆ.ಜಿ. ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದರು.

ಕಂಚಿನ ಪದಕದ ಹೋರಾಟದಲ್ಲಿ ಹರಪ್ರೀತ್‌ 11–3ರಿಂದ ಉಜ್‌ಬೆಕಿಸ್ತಾನದ ಖಾಶಿಮಬೆಕೊವ್‌ ಅವರನ್ನು ಸೋಲಿಸಿದರು.

55 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ರಾಜೇಂದ್ರ ಕುಮಾರ್‌ ಕೂಡ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ರಾಜೇಂದ್ರ, ಉಜ್‌ಬೆಕಿಸ್ತಾನದ ಮಿರಾಖಮೆಡೊವ್‌ ವಿರುದ್ಧ ಗೆದ್ದರು.

72 ಕೆ.ಜಿ. ವಿಭಾಗದಲ್ಲಿ ಭಾಗವ ಹಿಸಿದ್ದ ಕುಲದೀಪ್‌ ಮಲಿಕ್‌, ಕಂಚಿನ ಪದಕದ ಪೈಪೋಟಿಯಲ್ಲಿ 0–11ರಿಂದ ಜಪಾನ್‌ನ ಟೊಮೊಹಿರೊ ವಿರುದ್ಧ ಮಣಿದರು. ಇನ್ನೊಂದು ಪಂದ್ಯದಲ್ಲಿ ಮನೀಷ್‌ 4–6ರಿಂದ ಉಜ್‌ಬೆಕಿಸ್ತಾನದ ರಾಖಮ ಟೋವ್‌ ಮಿರ್ಜೊಬೆಕ್‌ ಎದುರು ಪರಾಭವಗೊಂಡರು.

130 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ನವೀನ್‌, ಕಂಚಿನ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ನವೀನ್‌ 1–3ರಲ್ಲಿ ಚೀನಾದ ಕ್ಸಿಯಾ ವೊಮಿಂಗ್‌ ನಿಯೆ ವಿರುದ್ಧ ಸೋತರು.

ಇದಕ್ಕೂ ಮುನ್ನ ನಡೆದಿದ್ದ ರಿಪೆಚೇಸ್‌ ಸುತ್ತಿನ ಹೋರಾಟದಲ್ಲಿ ನವೀನ್‌ 10–0ರಿಂದ ಜಪಾನ್‌ನ ಸೊನೊಡ ಅರಾಟ ಅವರನ್ನು ಮಣಿಸಿದ್ದರು.

63 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ವಿಕ್ರಂ ಕೃಷನಾಥ್‌, ಸುನೀಲ್‌ ಕುಮಾರ್‌ (87 ಕೆ.ಜಿ) ಮತ್ತು ಹರದೀಪ್‌ ಸಿಂಗ್‌ (97 ಕೆ.ಜಿ) ಅವರೂ ನಿರಾಸೆ ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry