ಹೆತ್ತ ಕರುಳಿಗೆ ನೆಮ್ಮದಿ ಸಿಗಲಿ

7

ಹೆತ್ತ ಕರುಳಿಗೆ ನೆಮ್ಮದಿ ಸಿಗಲಿ

Published:
Updated:
ಹೆತ್ತ ಕರುಳಿಗೆ ನೆಮ್ಮದಿ ಸಿಗಲಿ

‘ಸದ್ಯಕ್ಕೆ ಮಕ್ಕಳು ಬೇಡ ಅಂದ್ಕೊಂಡಿದ್ದೀವಿ. ಆಮೇಲೆ ನೋಡೋಣ...’

ಮದುವೆಯಾಗಿ ಐದು ವರ್ಷವಾದರೂ ಮಕ್ಕಳ ಬಗ್ಗೆ ಯೋಚಿಸಲು ಭಯಪಡುತ್ತಿದ್ದಳು ಗೆಳತಿ. ‘ಯಾಕೆ ಹೀಗೆ, ಆಗೋ ಕಾಲಕ್ಕೆ ಎಲ್ಲವೂ ಆಗಿಬಿಡಬೇಕು. ಅಷ್ಟೇಕೆ ಹೆದರ್ತಾ ಇದ್ದೀ? ಈಗ ಹೆರಿಗೆ ರಜೆ ಕೂಡಾ ಜಾಸ್ತಿ ಮಾಡಿದ್ದಾರೆ’ ಎಂದು ಧೈರ್ಯ ತುಂಬಲು ಯತ್ನಿಸಿದೆ. ಆದರೆ ಅವಳು ಒಪ್ಪಲು ತಯಾರಿರಲಿಲ್ಲ.

‘ಮಗು ನೋಡಿಕೊಳ್ಳೋಕೆ ಕೆಲಸ ಬಿಡಬೇಕು ಅನ್ನೋ ಮಾತು ಅತ್ತೆ ಮನೆಯಿಂದ ಬರುತ್ತೆ. ಗಂಡ ಅನ್ನಿಸಿಕೊಂಡನೋ ಮನೆಕೆಲಸ ಮಾಡೋದು ಅಷ್ಟರಲ್ಲೇ ಇದೆ. ಮಗುಗೆ ಹುಷಾರಿಲ್ಲ ಅಂತ್ಲೋ, ಸ್ಕೂಲ್‌ ಡೇ ಅಂತ್ಲೋ ಆಫೀಸಿಗೆ ತಡವಾಗಿ ಹೋದರೆ ಎಲ್ಲರೂ ಮುಖ ಕಿವುಚುತ್ತಾರೆ. ಮೂರ್ನಾಲ್ಕು ವರ್ಷ ಅದನ್ನು ನಾನು ಎಲ್ಲಿಗೆ ಹೋದ್ರೂ ಹೊತ್ತುಕೊಂಡು ತಿರುಗಬೇಕು. ಈ ನಮ್ಮ ಜನ ಗೊತ್ತಲ್ಲ, ಸ್ವಲ್ಪವೂ ಸಹಕರಿಸಲ್ಲ. ಬೇಡಮ್ಮಾ, ಈಗಿರೋ ಬದುಕೇ ಸಾಕು. ನೆಮ್ಮದಿಯಾಗಿದ್ದೀನಿ. ಮಗು ಆದ್ರೆ ನನ್ನ ಸ್ವಾತಂತ್ರ್ಯ ನಾನೇ ಕಳೆದುಕೊಂಡಂತೆ’ ಕಾಫಿ ಲೋಟ ಮೇಜಿನ ಮೇಲಿಟ್ಟವಳು ಹೊರಡಲು ಅಣಿಯಾದಳು.

ಅವಳು ಹೊರಟ ನಂತರವೂ ಬಹುಕಾಲ ಅವಳ ಆಲೋಚನಾ ಲಹರಿಯ ಚುಂಗು ಹಿಡಿದೇ ನನ್ನ ಮನಸು ವಿಹರಿಸುತ್ತಿತ್ತು. ಈ ಕಾಲದ, ಬಹುಮಟ್ಟಿಗೆ ಮಾಡರ್ನ್ ಹುಡುಗಿಯ ಲಕ್ಷಣಗಳಿರುವ, ಮೂವತ್ತರ ಸಮೀಪದಲ್ಲಿರುವ ಈ ಗೆಳತಿ ಹೀಗ್ಯಾಕೆ ಯೋಚಿಸುತ್ತಿದ್ದಾಳೆ? ನನ್ನ ಸುತ್ತಮುತ್ತಲ ಅನುಭವದಲ್ಲಿ ಕಂಡುಕೊಂಡ ಉತ್ತರಗಳಿವು.

***

ವೇಗದ ಬದುಕು, ಒತ್ತಡದ ದಿನಚರಿ. ಅಕ್ಕಪಕ್ಕದವರ ಬಳಿ ಹರಟುವುದಿರಲಿ ಪರಿಚಯಿಸಿಕೊಳ್ಳುವುದಕ್ಕೂ ಸಾಲದ ಸಮಯ. ಮಗುವನ್ನು ಬೆಳೆಸುವುದು ಅನೇಕರಿಗೆ ದೊಡ್ಡ ಸವಾಲು. ನಮ್ಮ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗುವಂತಿಲ್ಲ, ಅವರ ಮಕ್ಕಳು ನಮ್ಮ ಮನೆಗೆ ಬರುವಂತಿಲ್ಲ. ಮಕ್ಕಳು ಗಲಾಟೆ ಮಾಡುತ್ತಾರೆ, ಸಿಕ್ಕಿಸಿಕ್ಕಿದ್ದನ್ನು ಆಡಿ ಹಾಳು ಮಾಡುತ್ತಾರೆ, ನಮ್ಮ ಮಕ್ಕಳು ಬೇರೆ ಮನೆಗೆ ಹೋಗಿ ಏನಾದರೂ ತಿಂದಾರು, ಆರೋಗ್ಯ ಕೆಟ್ಟರೆ ನೋಡುವವರು ಯಾರು, ಅವರ ಮನೆಯ ವಸ್ತು ಹಾಳು ಮಾಡಿದರೆ ಅದನ್ನು ತಂದು ಕೊಡುವ ಚಿಂತೆ ಬೇರೆ... ಹೀಗೆ ಪಟ್ಟಣ ನಗರದ ಯುವತಿಯರು ಮಕ್ಕಳ ಬಗ್ಗೆ ಹೆದರಲು ಕಾರಣಗಳು ಹಲವು.

ಎಲ್ಲರೂ ಹೀಗೆಯೇ ಇರುವುದಿಲ್ಲವಲ್ಲ. ನನ್ನ ಗೆಳೆತಿಯ ಭಯ ನಗರ ಬದುಕಿನ ಒಂದು ಮುಖ ಮಾತ್ರ. ಬೆಂಗಳೂರಿನ ಜನರಲ್ಲಿ ಮಾನವೀಯತೆಯ ಇನ್ನೊಂದು ಮುಖವೂ ಇದೆಯಲ್ಲವೇ?

ಸಾವಿರಾರು ಜನ ಬದುಕುವ, ನೂರಾರು ಸಂಸ್ಕೃತಿಗಳನ್ನು ಅನುಸರಿಸುವ ಅಪಾರ್ಟ್‌ಮೆಂಟ್‌ಗಳಲ್ಲಿ ಇಂದಿಗೂ ಬೇರೆ ಮಕ್ಕಳನ್ನು ತಮ್ಮ ಮಕ್ಕಳೇ ಎಂದುಕೊಂಡು ಪ್ರೀತಿಯಿಂದ ಮುದ್ದಿಸುವ ‘ತಾಯಿ ಹೃದಯ’ದವರ ಸಂಖ್ಯೆಯೂ ಬಹುದೊಡ್ಡದು. ಮನೆಯಲ್ಲೇ ಮುದ್ದು ಮಾಡುವ ಅಪ್ಪಅಮ್ಮನಿದ್ದರೂ ಐದು ವರ್ಷದ ಪುಟಾಣಿ ನಿತ್ಯಾಗೆ ಪಕ್ಕದ ಮನೆಯ ‘ವಾಕಿಂಗ್‌ ತಾತ’ನೇ ಅಚ್ಚುಮೆಚ್ಚು. ಅವರ ಹಳೇ ಸ್ಕೂಟಿಯಲ್ಲಿ ಬೀದಿ ಸುತ್ತಿ ಬಂದರೆ ಅವಳಿಗೆ ಸಮಾಧಾನ. ಮತ್ತೆಮತ್ತೆ ಕಾಡಿಸಿ, ಕಣ್ತುಂಬುವಂತೆ ಮಾಡಿದರೂ ಆ ಮನೆಯ ಅಣ್ಣ ರಾಜೇಶನೇ ಪೆನ್ಸಿಲ್‌ ಕೊಟ್ಟು ‘ಅ, ಆ’ ಬರೆಸಬೇಕು. ಅಮ್ಮ ಮಾಡಿದ ಸಾಂಬಾರ್‌ ಅವಳಿಗೆ ರುಚಿಸದು. ಆದರೆ ಪಕ್ಕದ ಮನೆಯ ಅಜ್ಜಿ ಮಾಡಿದ ತಿಳಿಸಾರು ಘಮ ತೇಲಿ ಬಂದರೆ ಹಸಿವಾಗಿ ಅವರ ಮನೆಗೆ ಓಡುತ್ತಾಳೆ.

‘ನೋಡ್ರೀ, ಇದು ಪಕ್ಕದ ಮನೆಯವರ ಮಗು. ಅವಳ ಅಪ್ಪಅಮ್ಮನಿಗಿಂತ ನಮ್ಮನ್ನೇ ಹಚ್ಚಿಕೊಂಡಿದ್ದಾನೆ’ ಎನ್ನುವಾಗ ಆ ಹಿರಿಯರ ಮೊಗದಲ್ಲಿಯೂ ಮಕ್ಕಳ ಮುಗ್ಧತೆ, ಸಂಭ್ರಮ ತುಳುಕುತ್ತದೆ.

ನಾಲ್ಕುವರ್ಷದ ಅವಳಿ ಜವಳಿ ಮಕ್ಕಳಿರುವ ತಾಯಿ ಸುಧಾ. ಬೆಳಿಗ್ಗೆ 8ಕ್ಕೆ ಕಚೇರಿಗೆ ಹೊರಟರೆ ವಾಪಸ್ಸಾಗುವುದು ಸಂಜೆ 6ಕ್ಕೇ. ಅವರ ಇಬ್ಬರೂ ಮಕ್ಕಳು ಶಾಲೆಯಿಂದ ಬಂದ ತಕ್ಷಣ ಓಡುವುದು ಮೂರನೇ ಮಹಡಿಯಲ್ಲಿ ಬಾಡಿಗೆಗೆ ಇರುವ ನಡುವಯಸ್ಸಿನ ಆಂಟಿಯ ಮನೆಗೆ. ಮಕ್ಕಳನ್ನು ಪ್ರೀತಿಸುವ ಆ ಮನೆಯನ್ನು ಮಕ್ಕಳು ತಮ್ಮದೇ ಮನೆ ಎಂದುಕೊಂಡಿವೆ.

ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಸುಮಾ ಒಮ್ಮೆ ಅವಸರದಲ್ಲಿ ಊರಿಗೆ ಹೋಗಬೇಕಾಯಿತು. ಮಗಳಿಗೆ ಪರೀಕ್ಷೆ ಇದ್ದ ಕಾರಣ ಅವಳನ್ನು ಊರಿಗೆ ಕರೆದೊಯ್ಯುವಂತಿರಲಿಲ್ಲ. ನೆರೆಮನೆಯ ಗೆಳತಿ, ತನ್ನ ಮನೆಯಲ್ಲಿಯೇ ಸುಮಾಳ ಮಗಳನ್ನು ಇರಿಸಿಕೊಂಡಳು. ಈ ಹಿಂದೆ ಸುಮಾ ಕೂಡ ತನ್ನ ಹಲವು ಗೆಳತಿಯರಿಗೆ ಹೀಗೆ ನೆರವಾಗಿದ್ದಳು.

ವಾರದ ಹಿಂದೆ ಸಿಕ್ಕಿದ್ದ ಲಲಿತಾ ತನ್ನ ಪ್ರಯಾಣದ ಕಥೆ ಹೇಳಿಕೊಂಡಿದ್ದಳು. ‘ಕೈಬೆರಳು ಹಿಡಿದುಕೊಂಡು ದೊಡ್ಡವನು, ಕಂಕುಳಲ್ಲಿ ಪುಟ್ಟವಳು. ಬೆನ್ನಿಗೆ ಇಳಿಬಿದ್ದ ಬ್ಯಾಕ್‌ಪ್ಯಾಕ್. ಹಾಗೂ ಹೀಗೂ ರೈಲು ನಿಲ್ದಾಣ ತಲುಪಿದೆ. ಅಲ್ಲಿ ಪರಿಚಯವಾದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ರೈಲು ಹತ್ತಲು ಸಹಾಯ ಮಾಡಿದ್ದಲ್ಲದೇ ದಾರಿಯುದ್ದಕ್ಕೂ ಮಕ್ಕಳನ್ನು ಸಂಭಾಳಿಸಲು ನೆರವಾದರು’ ಎಂದು ನೆನಪಿಸಿಕೊಂಡಳು.

ಸದಾ ಗಿಜಿಗುಡುವ ಬ್ಯಾಂಕ್ ಶಾಖೆಗಳಲ್ಲಿಯೂ ಕೆಲ ಅಧಿಕಾರಿಗಳು ತಮ್ಮೆಲ್ಲಾ ಟೆನ್ಷನ್‌ ಮಧ್ಯೆಯೂ ಮಕ್ಕಳನ್ನು ಹೊತ್ತು ಬಂದವರಿಗೆ ಆದ್ಯತೆ ಕೊಟ್ಟು ಕೆಲಸ ಮಾಡಿಕೊಡುತ್ತಾರೆ. ಮೆಟ್ರೊ, ಬಿಎಂಟಿಸಿಗಳಲ್ಲಿ ಅನೇಕರು ಸೀಟು ಬಿಟ್ಟುಕೊಡುತ್ತಾರೆ. ‘ಮಕ್ಕಳನ್ನು ಸಾಕುವುದು ಹೆತ್ತವರ ಹಣೆಬರಹ’ ಎಂದು ಹೆದರುವವರನ್ನು ಕಂಡಾಗಲೆಲ್ಲಾ ನನಗೆ ಈ ಸಂಗತಿಗಳು ನೆನಪಾಗುತ್ತವೆ.

***

ಮಕ್ಕಳನ್ನು ಯಾರೇ ಹೆತ್ತಿರಲಿ, ಅವುಗಳನ್ನು ಪೋಷಿಸುವ– ಸಂಸ್ಕಾರ ಕೊಡುವ ಹೊಣೆ ಸಮಾಜದ್ದು. ಮಗುವಿನ ಪೋಷಣೆ ಅಮ್ಮನ ಹೊಣೆ ಎಂಬ ಭಾವ ಬಲಿತರೆ, ಅದು ಅವಳಿಗೆ ಹೊರೆಯೇ ಆಗುತ್ತದೆ. ಮಗು ಎಂದಾಗ ಅವಳು ಸಂಭ್ರಮಿಸುವುದಿಲ್ಲ; ಹೆದರುತ್ತಾಳೆ. ಪತಿ, ಕುಟುಂಬ, ನೆರೆಹೊರೆಯವರು ಮತ್ತು ಇಡೀ ಸಮಾಜ ಮಗುವಿನ ಪರ ಯೋಚಿಸಿದಾಗ, ಸಹಕರಿಸಿದಾಗ ಮಾತ್ರ ಅಮ್ಮನ ಬದುಕು ಸರಳವಾದೀತು. ಅವಳೂ ತನ್ನ ಪ್ರತಿಭೆಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲು ಸಾಧ್ಯವಾದೀತು. ಮಗುವೂ ಸಹಕಾರ, ಸಹಬಾಳ್ವೆಯ ಪಾಠ ಕಲಿತೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry